Site icon Vistara News

ಕನ್ನಡಿಗ ಹುತಾತ್ಮ ಯೋಧನ ಶೌರ್ಯ ಪ್ರಶಸ್ತಿ ನೀಡಲು ಸ್ವತಃ ರಾಷ್ಟ್ರಪತಿ ವೇದಿಕೆ ಇಳಿದು ಬಂದರು

ವಿಜಯಪುರ : ಅಂದು 2021ರ ಜುಲೈ 1ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಸೇನೆಗೆ ಲಭ್ಯವಾಗಿತ್ತು. ಉಗ್ರರು ತಪ್ಪಿಸಿಕೊಂಡು ಹೋಗಬಾರದೆಂದು ಭಾರತೀಯ ಯೋಧರು ಉಗ್ರರು ಅಡಗಿದ್ದ ಸ್ಥಳವನ್ನು ಸುತ್ತುವರಿದು ನಿಂತಿದ್ದರು. ಇದು ಯಾವ ಸಿನಿಮಾ ಕಥೆಯಲ್ಲ. ಉಗ್ರರ ವಿರುದ್ಧ ಹೋರಾಡಿ ಪ್ರಾಣ ತ್ಯಾಗ ಮಾಡಿದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಹವಾಲ್ದಾರ ಕಾಶೀರಾಯ್ ಬೊಮ್ಮನಹಳ್ಳಿ ಅವರ ವೀರಗಾಥೆ. ಇದೀಗ ಕೇಂದ್ರ ಸರ್ಕಾರವು, ಕಾಶೀರಾಯ್ ಬಮ್ಮನಹಳ್ಳಿ ಅವರಿಗೆ ಮರಣೋತ್ತರವಾಗಿ ಶೌರ್ಯ ಪ್ರಶಸ್ತಿಯನ್ನು ಮಂಗಳವಾರ ಪ್ರದಾನ ಮಾಡಲಾಯಿತು. ರಾಷ್ಟ್ರಪತಿ ಭವನದಲ್ಲಿ ಯೋಧನ ಪತ್ನಿ ಹಾಗೂ ತಾಯಿಗೆ ಶೌರ್ಯ ಪ್ರಶಸ್ತಿ ಕೊಡುವಾಗ ಪ್ರಧಾನಿ, ರಾಷ್ಟ್ರಪತಿಯಿದ್ದ ಇಡೀ ಸಭಾಂಗಣ ಕೆಲಕಾಲ ಮೌನವಾಯಿತು.

44 ನೇ ಬಟಾಲಿಯನ್‌ನ ರಾಷ್ಟ್ರೀಯ ರೈಫಲ್ಸ್ ನಲ್ಲಿದ್ದ ವಿಜಯಪುರ ಜಿಲ್ಲೆ ಬಸನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಯೋಧ ಕಾಶೀರಾಯ ಬೊಮ್ಮನಹಳ್ಳಿ ಉಗ್ರರನ್ನು ಹಡೆಮುರಿ ಕಟ್ಟಿ ಸೆರೆ ಹಿಡಿಯೋ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದರು. ಯಾವಾಗ ಉಗ್ರರು ತಮ್ಮನ್ನು ಸುತ್ತುವರಿದರೆಂದು ಗೊತ್ತಾಯಿತೋ ಆಗ ಯೋಧರ ಮೇಲೆ ಉಗ್ರರು ಗುಂಡು ಹಾರಿಸಲು ಆರಂಭಿಸಿದರು. ಆಗ ನಡೆದ ಗುಂಡಿನ ಚಕಮಕಿಯಲ್ಲಿ ಯೋಧ ಕಾಶೀರಾಯ ಬೊಮ್ಮನಹಳ್ಳಿ ಮೂವರು ಉಗ್ರನನ್ನು ಹೊಡೆದುರುಳಿಸಿದ್ದರು.  ಈ ವೇಳೆ ಯೋಧ ಕಾಶೀರಾಯ ಬೊಮ್ಮನಳ್ಳಿಗೆ ಉಗ್ರರ ಗುಂಡುಗಳು ತಾಗಿದರೂ ಎದೆಗುಂದೇ ತನ್ನ ಜೊತೆಗದ್ದ ಯೋಧರ ಪ್ರಾಣ ರಕ್ಷಿಸುತ್ತಲೇ ದೇಶಕ್ಕಾಗಿ ಪ್ರಾಣ ನೀಡಿದ್ದರು.  

ನುಡಿನಮನ :

2021 ರ ಜುಲೈ 2 ರಂದು ಯೋಧ ಕಾಶೀರಾಯ ಬೊಮ್ಮನಹಳ್ಳಿ  ಅಂತ್ಯಕ್ರಿಯೆಯನ್ನು ಸ್ವಗ್ರಾಮ ಉಕ್ಕಲಿ ಗ್ರಾಮದ ಬಸ್ ನಿಲ್ದಾಣದ ಬಳಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತ್ತು. ಅಂತ್ಯಕ್ರಿಯೆ ಮಾಡಿದ ಸ್ಥಳದಲ್ಲೇ ಯೋಧ ಕಾಶೀರಾಯನ ಕಂಚಿನ ಪುತ್ಥಳಿಯನ್ನು ನಿರ್ಮಾಣ ಮಾಡಲು ಗ್ರಾಮದ ಜನರು ನಿರ್ಧಾರ ಮಾಡಿದ್ದಾರೆ.

ಹುತಾತ್ಮ ಯೋಧ ಕಾಶೀರಾಯ ಬೊಮ್ಮನಹಳ್ಳಿಗೆ ಶೌರ್ಯ ಪ್ರಶಸ್ತಿ:

ಮೇ 10 ರಂದು ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಕಾಶೀರಾಯ್ ಗೆ ಕೇಂದ್ರ ಸರ್ಕಾರವು ಮರಣೋತ್ತರವಾಗಿ ಶೌರ್ಯ ಪ್ರಶಸ್ತಿ ಪ್ರದಾನ ಮಾಡಿದೆ. ಹೊಸದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ  ಕಾಶೀರಾಯ  ಪತ್ನಿ ಸಂಗೀತಾ ಹಾಗೂ ತಾಯಿ ಶಾಂತಾಬಾಯಿ  ಬೊಮ್ಮನಹಳ್ಳಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸಲು ಕಾಶೀರಾಯ ಅವರ ಹೆಸರನ್ನು ಘೋಷಿಸಲಾಯಿತು. ಈ ಸಂದರ್ಭದಲ್ಲಿ ಕಾಶೀರಾಯ ಅವರ ತಾಯಿ ಹಾಗೂ ಪತ್ನಿ ರಾಷ್ಟ್ರಪತಿಯವರ ಎದುರಿನ ಮಾರ್ಗದಲ್ಲಿ ಬಂದು ನಿಂತರು. ಕಾಶೀರಾಯ ಅವರ ಸಾಧನೆಗಳನ್ನು ವಿವರಿಸಲಾಗುತ್ತಿತ್ತು. ಈ ಸಮಯದಲ್ಲಿ ಪತ್ನಿ ಮೌನಕ್ಕೆ ಜಾರಿದರು. ಯೋಧನ ತಾಯಿಗೆ ದುಃಖವನ್ನು ತಡೆಯಲಾಗಲಿಲ್ಲ. ಕೆಲಹೊತ್ತು ನೋಡಿದ ರಾಷ್ಟ್ರಪತಿ ಭವನದ ಸಿಬ್ಬಂದಿ, ಮಹಿಳಾ ಸಿಬ್ಬಂದಿಯನ್ನು ಕರೆಯಿಸಿ ಸಂತೈಸಿದರು. ಇಷ್ಟೆಲ್ಲವನ್ನೂ ವೇದಿಕೆಯಿಂದ ನೋಡುತ್ತಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು, ಯೋಧನ ಪತ್ನಿ ಹಾಗೂ ತಾಯಿ ಇದ್ದಲ್ಲಿಗೇ ವೇದಿಕೆಯಿಂದ ಇಳಿದು ಬಂದರು. ಅಲ್ಲಿಯೇ ಪ್ರಶಸ್ತಿ ಪ್ರದಾನ ಮಾಡಿ ನಮಿಸಿದರು. ಸಭಾಂಗಣದಲ್ಲಿದ್ದ ಪ್ರಧಾನಿ ಮೋದಿ ಸೇರಿ ಎಲ್ಲರೂ ಈ ಹೊತ್ತು ಮೌನಕ್ಕೆ ಜಾರಿದರು. ಭಯೋತ್ಪಾದಕರ ವಿರುದ್ಧ ಹೋರಾಡಿ ಮಣ್ಣಲ್ಲಿ ರಕ್ತ ಹರಿಸಿದ ಭಾರತಾಂಬೆಯ ಮಡಿಲ ಪುತ್ರ ಕಾಶೀರಾಯ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಿರುವ ಕೇಂದ್ರ ಸರ್ಕಾರಕ್ಕೆ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.

ಯೋಧ ಕಾಶೀರಾಯ ಕುಟುಂಬ ಮಾಹಿತಿ :

ಹುತಾತ್ಮ ಯೋಧ ಕಾಶೀರಾಯ ಬೊಮ್ಮಹಳ್ಳಿ ಮೂಲತಃ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದವರಾಗಿದ್ದು, ಯೋಧನಿಗೆ ಪತ್ನಿ ಸಂಗೀತಾ, ಓರ್ವ ಪುತ್ರಿ ಹಾಗೂ ಓರ್ವ ಪುತ್ರನಿದ್ಧಾನೆ. 2013 ರಲ್ಲಿ ಕಾಶೀರಾಯನ ಮದುವೆಯಾಗಿತ್ತು. ತಂದೆ ತಾಯಿ ಇಬ್ಬರು ಸಹೋದರರು ಇದ್ದಾರೆ.  ಇರಲು ಒಂದು ಸ್ವಂತ ಮನೆ ಬಿಟ್ಟರೆ ಇವರಿಗೆ ಯಾವುದೇ ಆಸ್ತಿಗಳಿಲ್ಲ. ತಂದೆ ತಾಯಿ ಈಗಲೂ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ಇಬ್ಬರು ಸಹೋದರರ ಪೈಕಿ ಓರ್ವ ಸಹೋದರ ಕಿರಾಣಿ ಶಾಪ್ ನಲ್ಲಿ ಕೆಲಸಕ್ಕೆ ಹೋಗುತ್ತಾರೆ. ಮತ್ತೋರ್ವ ಸಹೋದರ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಾರೆ. ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಕಾಶೀರಾಯ ಅಗಲಿಕೆ ಇಡೀ ಕುಟುಂಬಕ್ಕೆ ಮರೆಯಲಾರದ ನೋವು ನೀಡಿದೆ.

ಮರಣೋತ್ತರವಾಗಿ ಶೌರ್ಯ ಪ್ರಶಸ್ತಿಯನ್ನು ಪ್ರಕಟಿಸಿರುವುದು ವಿಜಯಪುರ ಜಿಲ್ಲಾಡಳಿತ ಮತ್ತು ಜಿಲ್ಲೆಯ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ಬಿ ದಾನಮ್ಮನವರ  ಅಭಿಮಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಯೋಧ ದೇಶ ರಕ್ಷಣೆಯಲ್ಲಿ ಹುತಾತ್ಮನಾಗಿದ್ದ. ಕೇಂದ್ರ ಸರ್ಕಾರ ಹುತಾತ್ಮ ಯೋಧನಿಗೆ ಶೌರ್ಯ ಪ್ರಶಸ್ತಿ ನೀಡೋ ಮೂಲಕ ಗೌರವಿಸಿದೆ ಎಂದು ಡಿಸಿ ಹೇಳಿದ್ದಾರೆ.

Exit mobile version