ಬೆಂಗಳೂರು: ರಾಜ್ಯದ ಶ್ರಮಿಕ ವರ್ಗದ ಶ್ರೇಯೋಭಿವೃದ್ಧಿಗೆ ಹತ್ತು ಹಲವು ಮಹತ್ವಾಕಾಂಕ್ಷಿ ಯೋಜನೆಗಳ ಮೂಲಕ ಕರ್ನಾಟಕವನ್ನು ಕಾರ್ಮಿಕ ಸ್ನೇಹಿಯಾಗಿಸಿರುವ ಕಾರ್ಮಿಕ ಇಲಾಖೆ, ದೇಶದಲ್ಲೇ ಮೊಟ್ಟ ಮೊದಲು ಎನ್ನುವಂತಹ ಮತ್ತೊಂದು (Shramik Niwas) ಮಹತ್ವಾಕಾಂಕ್ಷಿ ಯೋಜನೆ ಜಾರಿ ಮಾಡುತ್ತಿದೆ.
ಕಾರ್ಮಿಕರ ವಿವಿಧ ಸಹಾಯಧನಗಳಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆ ಮಾಡಿರುವ ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಶ್ರಮಿಕರ ಖಾತೆಗೆ ಸಹಾಯಧನವನ್ನು ನೇರವಾಗಿ ವರ್ಗಾವಣೆ ಮಾಡುವ ವ್ಯವಸ್ಥೆ ಜಾರಿ ಮಾಡಿರುವ ರಾಜ್ಯ ಕಾರ್ಮಿಕ ಇಲಾಖೆ, ಕಾರ್ಮಿಕರ ಕುಟುಂಬ ವರ್ಗದವರಿಗೂ ಭರಪೂರ ಯೋಜನೆಗಳನ್ನು ನೀಡಿದೆ. ಶ್ರಮಿಕ ಮಕ್ಕಳಿಗೆ ಶಿಶುಪಾಲನಾ ಕೇಂದ್ರದಿಂದ ಆರಂಭಗೊಂಡು ಉನ್ನತ ಶಿಕ್ಷಣ ತರಬೇತಿವರೆಗೆ ಪ್ರತಿ ಹಂತದಲ್ಲಿ ಶ್ರಮಿಕ ವರ್ಗಕ್ಕೆ ಇಲಾಖೆ ಬೆನ್ನೆಲುಬಾಗಿ ನಿಂತಿದ್ದು, ಇದೀಗ ‘ಶ್ರಮಿಕ್ ನಿವಾಸ್’ ಯೋಜನೆ ಶೀಘ್ರವೇ ಜಾರಿ ಆಗಲಿದೆ.
ಏನಿದು ಶ್ರಮಿಕ್ ನಿವಾಸ್ ಯೋಜನೆ?
ರಾಜ್ಯದಲ್ಲಿನ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಯಲ್ಲಿ ಶ್ರಮಿಕ ವರ್ಗದ ಪಾತ್ರ ಮಹತ್ವದ್ದಾಗಿದೆ. ಹೀಗೆ ವಿವಿಧೆಡೆ ಕಾರ್ಯನಿರ್ವಹಿಸಲು ಆಗಮಿಸುವ ಕಾರ್ಮಿಕ ವರ್ಗ ರಸ್ತೆ ಬದಿ ಮತ್ತು ನೈರ್ಮಲ್ಯಯುತ ಪ್ರದೇಶಗಳಲ್ಲಿ ಗುಡಿಸಲು ಹಾಕಿಕೊಂಡು ಕಾರ್ಯನಿರ್ವಹಿಸುವ ಪರಿಸ್ಥಿತಿ ಸರ್ವೇಸಾಮಾನ್ಯ. ಇಂತಹ ಸ್ಥಳಗಳಲ್ಲಿ ಕಾರ್ಮಿಕರು ಮತ್ತು ಅವರ ಕುಟುಂಬ ಬದುಕು ಸಾಗಿಸುವುದರಿಂದ ಅವರಿಗೆ ಮೂಲಭೂತ ಸೌಕರ್ಯದ ಕೊರತೆ ಜತೆಗೆ ಅನಾರೋಗ್ಯ ಸಮಸ್ಯೆ ಕೂಡ ಕಾಡುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ಮನಗಂಡ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ಶ್ರಮಿಕ ವರ್ಗಕ್ಕೆ ವಸತಿ ಸೌಲಭ್ಯ ಒದಗಿಸುವ ಸಂಕಲ್ಪದೊಂದಿಗೆ ಶ್ರಮಿಕ್ ನಿವಾಸ್ ಯೋಜನೆ ಜಾರಿಗೆ ಸಜ್ಜಾಗಿದೆ.
ಇದನ್ನೂ ಓದಿ | PM Modi: ಮಾ.12ರಂದು ಮಂಡ್ಯದಲ್ಲಿ ಮೋದಿ ರೋಡ್ ಶೋ ಫಿಕ್ಸ್; 1.5 ಕಿ.ಮೀ. ಸಂಚರಿಸಲಿರುವ ಪ್ರಧಾನಿ
ಕೈಗಾರಿಕಾ ಪ್ರದೇಶಗಳು ಸೇರಿದಂತೆ ಬೃಹತ್ ನಿರ್ಮಾಣ ವಲಯಗಳ ಆಸುಪಾಸಿನಲ್ಲಿ ಶ್ರಮಿಕ್ ನಿವಾಸ್ ಯೋಜನೆಯಡಿ ಶ್ರಮಿಕ ವರ್ಗಕ್ಕೆ ವಸತಿ ನೀಡುವ ಸಲುವಾಗಿ ವಸತಿ ಸಮುಚ್ಚಯ ಮತ್ತು ಬಿಡಿ ಮನೆಗಳ ನಿರ್ಮಾಣಕ್ಕೆ ಮುಂದಾಗಿದ್ದು, ಈ ಯೋಜನೆಯ ಮೊದಲ ಹಂತವಾಗಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ʼಶ್ರಮಿಕ್ ನಿವಾಸ್- ಬೃಹತ್ ವಸತಿ ಸಮುಚ್ಚಯ’ ಉದ್ಘಾಟನೆಗೆ ಸಜ್ಜಾಗುತ್ತಿದೆ.
ದೊಡ್ಡಬಳ್ಳಾಪುರ ತಾಲೂಕಿನ ಕೈಗಾರಿಕಾ ವಲಯದ ಬದನಹಳ್ಳಿಯಲ್ಲಿ ಬೃಹತ್ ಏಕ ವಸತಿ ಮತ್ತು ಕುಟುಂಬ ವಸತಿಯ ಸಮುಚ್ಚಯ ನಿರ್ಮಾಣವಾಗಿದೆ. ಸುಮಾರು 19 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ವಸತಿ ವ್ಯವಸ್ಥೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಏಕ ವ್ಯಕ್ತಿ ಸಮುಚ್ಚಯದಲ್ಲಿ ಸಾಮೂಹಿಕ ವಸತಿಗೆ ಅವಕಾಶವಿದ್ದು, ಏಕ ಹಾಸಿಗೆ ವ್ಯವಸ್ಥೆಯಡಿ 96 ಕಾರ್ಮಿಕರು ಮತ್ತು ದ್ವಿ ಹಾಸಿಗೆ ವ್ಯವಸ್ಥೆಯಡಿ 196 ಕಾರ್ಮಿಕರಿಗೆ ವಸತಿ ಅನುಕೂಲ ಲಭಿಸಲಿದ್ದು, ಇನ್ನು ಕುಟುಂಬದೊಂದಿಗೆ ಉಳಿದುಕೊಳ್ಳ ಬಯಸುವ ಕಾರ್ಮಿಕರಿಗೆ ಪ್ರತ್ಯೇಕ ಮನೆಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ಒಂದು ಕುಟುಂಬದಲ್ಲಿ ನಾಲ್ಕು ಮಂದಿ ಎಂಬಂತೆ 48 ಕಾರ್ಮಿಕ ಕುಟುಂಬಗಳಿಗೆ ಮೊದಲ ಹಂತದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ಇಲಾಖೆ ಮುಂದಡಿ ಇರಿಸಿದೆ.
ಇದನ್ನೂ ಓದಿ | BJP Karnataka: ದೇಶದ ಅಭಿವೃದ್ಧಿಯ ಪಯಣದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು: ಬಿ.ವೈ. ವಿಜಯೇಂದ್ರ
ಮೂಲಸೌಕರ್ಯಕ್ಕೂ ಆದ್ಯತೆ
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಜಾರಿ ಮಾಡಲಾಗುತ್ತಿರುವ “ಶ್ರಮಿಕ್ ನಿವಾಸ್” ಯೋಜನೆಯಡಿ ನಿರ್ಮಿಸಲಾಗಿರುವ ವಸತಿ ಸಮುಚ್ಚಯಗಳಲ್ಲಿ ಕಾರ್ಮಿಕರು ಮತ್ತು ಅವರ ಕುಟುಂಬ ವರ್ಗಕ್ಕೆ ನೀರು, ವಿದ್ಯುತ್ ಸೇರಿ ಅಗತ್ಯ ಮೂಲ ಸೌಕರ್ಯಕ್ಕೂ ಆದ್ಯತೆ ನೀಡಲಾಗಿದ್ದು, ಈ ವಸತಿ ಸಮುಚ್ಚಯಗಳನ್ನು ಇಲಾಖೆಯೇ ನಿರ್ವಹಿಸಲಿದ್ದು, ಕಾರ್ಮಿಕ ಮಂಡಳಿ ಗುರುತಿನ ಚೀಟಿ ಹೊಂದಿರುವ ಕಾರ್ಮಿಕರಿಗೆ ಈ ವಸತಿ ಸೌಲಭ್ಯ ದೊರಕಲಿದೆ.
ಕಾರ್ಮಿಕ ವರ್ಗದ, ಅದರಲ್ಲೂ ವಲಸೆ ಕಾರ್ಮಿಕರಿಗೆ ವಸತಿ ಬಹುದೊಡ್ಡ ಸಮಸ್ಯೆಯಾಗಿತ್ತು. ಕೊಳೆಗೇರಿಯಲ್ಲಿ ನೆಲೆಯೂರುವ ಅನಿವಾರ್ಯತೆಯಿಂದ ಶ್ರಮಿಕವರ್ಗ ಮಾನಸಿಕವಾಗಿ ಹಿಂದುಳಿಯುವಂತೆ ಆಗಿತ್ತು. ಕಾರ್ಮಿಕರಿಗೂ ಮೂಲಭೂತ ಸೌಕರ್ಯ ಒದಗಿಸಬೇಕೆಂಬ ಆಶಯದೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ದೇಶನದಂತೆ ರಾಜ್ಯದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಶ್ರಮಿಕ ವರ್ಗಕ್ಕೆ ಮೂಲಸೌಕರ್ಯದ ಜತೆಗೆ ಗತ್ತಿನಿಂದ ಬದುಕು ಸಾಗಿಸುವ ಸಲುವಾಗಿ ವಸತಿ ವ್ಯವಸ್ಥೆಗಾಗಿ “ಶ್ರಮಿಕ್ ನಿವಾಸ್” ಜಾರಿ ಮಾಡಲಾಗುತ್ತಿದೆ.
| ಶಿವರಾಂ ಹೆಬ್ಬಾರ್, ಕಾರ್ಮಿಕ ಸಚಿವರು ಮತ್ತು ಅಧ್ಯಕ್ಷರು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ