Site icon Vistara News

Shravanabelagola Swameeji : ಶ್ರೀಗಳ ನಿಧನಕ್ಕೆ ಹೃದಯಾಘಾತ ಕಾರಣವಲ್ಲ, ನಿಜವಾದ ಕಾರಣ ಹೇಳಿದ ಜಿಲ್ಲಾಧಿಕಾರಿ

Shravana Belagola

#image_title

ಹಾಸನ: ಶ್ರವಣಬೆಳಗೊಳ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ (Shravanabelagola Swameeji) ಅವರ ನಿಧನಕ್ಕೆ ಹೃದಯಾಘಾತ ಕಾರಣ ಎಂದು ಮೊದಲ ಹೇಳಲಾಗಿತ್ತು. ಆದರೆ, ಹಾಸನ ಜಿಲ್ಲಾಧಿಕಾರಿ ಎಂ.ಎಸ್‌. ಅರ್ಚನಾ ಅವರು ಸಾವಿನ ನಿಜವಾದ ಕಾರಣವನ್ನು ಹೇಳಿದ್ದಾರೆ. ಶ್ರೀಗಳು ಕಾಲು ಜಾರಿ ಬಿದ್ದು ಈ ಸಾವು ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.

ʻʻಸ್ವಾಮೀಜಿಯವರು ಬೆಳಗ್ಗೆ ನಿತ್ಯ ಕರ್ಮಕ್ಕೆ ಎದ್ದಾಗ ಕಾಲುಜಾರಿ ಬಿದ್ದು ಶ್ರೀಗಳ ಸಾವು ಸಂಭವಿಸಿದೆ. ಕಾಲು ನೋವಿನಿಂದ ಬಳಲುತ್ತಿದ್ದ ಶ್ರೀಗಳು ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಅನಾಹುತವಾಗಿದೆ. ಬಿದ್ದಾಗ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದೆ. ತೀವ್ರ ಗಾಯಗೊಂಡ ಶ್ರೀಗಳನ್ನು ಮಠದ ಸಿಬ್ಬಂದಿ ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ತಲೆಗೆ ಗಂಭೀರವಾಗಿ ಗಾಯವಾದ್ದರಿಂದ ಚಿಕಿತ್ಸೆ ಫಲಿಸದೆ ಶ್ರೀಗಳು ಮೃತಪಟ್ಟಿದ್ದಾರೆʼʼ ಎಂದು ಜಿಲ್ಲಾಧಿಕಾರಿ ಅರ್ಚನಾ ಅವರು ಶ್ರವಣಬೆಳಗೊಳದಲ್ಲಿ ತಿಳಿಸಿದರು.

ಅಂತ್ಯಸಂಸ್ಕಾರದ ಮೇಲ್ವಿಚಾರಣೆ ವಹಿಸಿಕೊಂಡಿರುವ ಅವರು, ಸಂಜೆ ಆರು ಗಂಟೆಯೊಳಗೆ ಅಂತ್ಯ ಸಂಸ್ಕಾರ ನಡೆಸಲು ಸಿದ್ಧತೆ ನಡೆಯುತ್ತಿದೆ. ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟದ ತಪ್ಪಲಿನಲ್ಲಿ ಅಂತಿಮ ಕ್ರಿಯಾವಿಧಿಗಳು ನಡೆಯಲಿವೆʼʼ ಎಂದು ತಿಳಿಸಿದರು.

ಮಠದ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳ ಅಂತಿಮ ದರ್ಶನಕ್ಕೆ ಮಠದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಚಾವುಂಡರಾಯ ಸಭಾಂಗಣದಲ್ಲಿ ಮೃತದೇಹವನ್ನು ಇಡಲಾಗುತ್ತಿದ್ದು, ಶ್ರೀಗಳ ಅಂತಿಮ ದರ್ಶನಕ್ಕೆ ಈಗಾಗಲೇ ಸಾವಿರಾರು ಭಕ್ತರು ಆಗಮಿಸಿದ್ದಾರೆ.

ಡಿಸಿ ಅರ್ಚನಾ ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿ ವ್ಯವಸ್ಥೆಗಳನ್ನು ಮಾಡಿಸುತ್ತಿದ್ದರೆ, ಹಾಸನ ಎಸ್ಪಿ ಹರಿರಾಂ ಶಂಕರ್‌ ಅವರು ಸೂಕ್ತ ಪೊಲೀಸ್ ಬಂದೋಬಸ್ತ್‌ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ.

ಸಂಜೆ 4.30ರ ನಂತರ ಬಾಹುಬಲಿ ಮೂರ್ತಿ ಹಿಂಭಾಗದ ಚಿಕ್ಕಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಶ್ರವಣಬೆಳಗೊಳ ಸ್ವಯಂ ಪ್ರೇರಿತ ಬಂದ್

ಶ್ರೀಗಳ ಗೌರವಾರ್ಥ ಶ್ರವಣಬೆಳಗೊಳದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸ್ವಯಂಪ್ರೇರಿತ ಬಂದ್‌ ಆಚರಿಸಲಾಗುತ್ತಿದೆ. ಊರಿನ ಜನರು ಅಂಗಡಿ ಮುಂಗಟ್ಟು ಮುಚ್ಚಿ ಕರ್ಮಯೋಗಿಗೆ ಗೌರವ ಸಮರ್ಪಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ : Shravanabelagola Swameeji : ಅವರು 2006ರಿಂದಲೂ ಮೊಬೈಲ್‌ ಮುಟ್ಟಿಲ್ಲ, ಫೋನಲ್ಲೂ ಮಾತನಾಡಿಲ್ಲ; 12 ವರ್ಷ ವಾಹನ ಹತ್ತಿಲ್ಲ!

Exit mobile version