ಬೆಂಗಳೂರು/ ಹಾಸನ: ಗುರುವಾರ ಮುಂಜಾನೆ ಜಿನೈಕ್ಯರಾಗಿರುವ ಶ್ರವಣಬೆಳಗೊಳ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ (Shravanabelagola Swameeji) ಮಹಾಸ್ವಾಮಿಗಳ ಅಂತ್ಯಕ್ರಿಯೆ ಗುರುವಾರ ಸಂಜೆಯೇ ನಡೆಯಲಿದೆ. ಇದನ್ನು ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗುರುವಾರ ಮುಂಜಾನೆ ಅಸ್ವಸ್ಥರಾದ 73 ವರ್ಷದ ಸ್ವಾಮೀಜಿಯವರನ್ನು ಕೂಡಲೇ ಬೆಳ್ಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಶ್ರೀಗಳು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಇದೀಗ ಪಾರ್ಥಿವ ಶರೀರವನ್ನು ಬೆಳ್ಳೂರು ಕ್ರಾಸ್ ನ ಆದಿಚುಂಚನಗಿರಿ ಆಸ್ಪತ್ರೆಯಿಂದ ಬೆಳ್ಳೂರು ಕ್ರಾಸ್ – ಹಿರೀಸಾವೆ ಮೂಲಕ ಶ್ರವಣಬೆಳಗೊಳಕ್ಕೆ ಕರೆದೊಯ್ಯಲಾಗುತ್ತದೆ. ಶ್ರವಣ ಬೆಳಗೊಳದ ಚಾವುಂಡರಾಯ ಮಂಟಪದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ರಾಜ್ಯ ಸೇರಿ ಹಲವು ಕಡೆಗಳಿಂದ ಆಗಮಿಸಲಿರುವ ವಿವಿಧ ಮಠದ ಸ್ವಾಮೀಜಿಗಳು ಆಗಮಿಸಲಿದ್ದು, ಬಳಿಕ ಅಂತ್ಯ ಸಂಸ್ಕಾರದ ಬಗ್ಗೆ ಅಂತಿಮ ತೀರ್ಮಾನ ನಡೆಯಲಿದೆ. ಏನಿದ್ದರೂ ಗುರುವಾರವೇ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮಠದ ಮೂಲಗಳು ತಿಳಿಸಿವೆ.
ಕಂಬನಿ ಮಿಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
“ಶ್ರೀಕ್ಷೇತ್ರ ಶ್ರವಣಬೆಳಗೊಳದ ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ನಮ್ಮನ್ನಗಲಿದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಪೂಜ್ಯರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದ್ದು, ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಅವರ ಅಪಾರ ಸಂಖ್ಯೆಯ ಭಕ್ತರಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ” ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದರು.
ಮಾಜಿ ಸಿಎಂ ಕುಮಾರಸ್ವಾಮಿ ಆಘಾತ
ಶ್ರವಣಬೆಳಗೊಳದ ಶ್ರೀ ಜೈನಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅವರು ಅಗಲಿದ ವಿಷಯ ಕೇಳಿ ನನಗೆ ತೀವ್ರ ಆಘಾತ ಉಂಟಾಗಿದೆ. ಶ್ರೀ ಭಗವಾನ್ ಬಾಹುಬಲಿ ಅವರ ಶಾಂತಿ, ಅಹಿಂಸೆ, ಸಹನೆ ತತ್ವಗಳನ್ನು ಪಸರಿಸುತ್ತಾ ಜನರಲ್ಲಿ ಅರಿವಿನ ಬೆಳಕು ಮೂಡಿಸಿದ್ದ ಪರಮಪೂಜ್ಯರು ನಾಡಿಗೆ ಅಪಾರ ಸೇವೆ ಸಲ್ಲಿಸಿದ್ದರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಮಠದ ಭಕ್ತರು, ನಾಡಿನ ಜನರಿಗೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಹಾಸನ