ಹಾಸನ: ಈಗ ಮೊಬೈಲ್ ಇಲ್ಲದೆ ಜೀವನವೇ ಇಲ್ಲ ಅಂತೀವಿ, ಎಲ್ಲದಕ್ಕೂ ಫೋನ್ ಬೇಕೇಬೇಕು ಎನ್ನುವ ಕಾಲ ಇದು. ಆದರೆ, ಮನಸು ಮಾಡಿದರೆ ಅದೆಲ್ಲದರಿಂದ ದೂರವಿದ್ದೂ ಸಾಮಾಜಿಕವಾದ, ಧಾರ್ಮಿಕವಾದ ಕಾರ್ಯಗಳನ್ನು ಮಾಡಬಹುದು, ಜಗತ್ತಿಗೇ ಮಾರ್ಗದರ್ಶನ ಮಾಡಬಹುದು ಎಂದು ತೋರಿಸಿದವರು ಶ್ರವಣಬೆಳಗೊಳ ದಿಗಂಬರ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು (Shravanabelagola Swameeji).
ಮಾರ್ಚ್ 23ರಂದು (ಗುರುವಾರ) ಮುಂಜಾನೆ ಜಿನೈಕ್ಯರಾದ ಶ್ರೀಗಳು 2006ರಿಂದಲೂ ಮೊಬೈಲ್ ಬಳಸುತ್ತಿಲ್ಲ ಮತ್ತು ದೂರವಾಣಿಯಲ್ಲೂ ಮಾತನಾಡುತ್ತಿರಲಿಲ್ಲ ಎಂದರೆ ನೀವು ನಂಬಲೇಬೇಕು. ಹಾಗಂತ ಅವರ ಸಾಮಾಜಿಕ ಸಂವಹನವಾಗಲೀ, ಜಾಗತಿಕ ನಂಟುಗಳಾಗಲೀ ಯಾವುದೂ ಕಡಿಮೆಯಾಗಿರಲಿಲ್ಲ. ಅವರಲ್ಲಿ ಮಾತನಾಡಬೇಕು ಎಂದರೆ ನೇರವಾಗಿ ಹೋಗಿಯೇ ಮಾತನಾಡುವಷ್ಟು ತೆರೆದ ಮನಸನ್ನೂ ಅವರು ಹೊಂದಿದ್ದರು. ಹೀಗೆ ಫೋನೂ ಇಲ್ಲದೆ ಹೇಗೆ ಬದುಕಿನಲ್ಲಿ ಜಯಿಸಬಹುದು ಎನ್ನುವುದಕ್ಕೆ ಶ್ರೀಗಳು ಒಂದು ದೊಡ್ಡ ಮೇಲ್ಪಂಕ್ತಿಯನ್ನು ಹಾಕಿದ್ದರು.
ಸ್ವಾಮೀಜಿಗಳು 2001ರಲ್ಲಿ ಚಾತುರ್ಮಾಸ್ಯಕ್ಕೆ ವಿಜಾಪುರಕ್ಕೆ ತೆರಳಿದ್ದರು. ಅಲ್ಲಿಂದ ಮರಳಿಬಂದವರು ಧವಲಾ, ಜಯಧವಲಾ, ಮಹಾಧವಲಾ ಗ್ರಂಥಗಳ 42 ಸಂಪುಟಗಳ ಕನ್ನಡ ಅನುವಾದ ಮಾಡಿಸಿ, ಅವುಗಳನ್ನು ಪ್ರಕಟಿಸಿದರು. ಇದು ಸುಮಾರು 12 ವರ್ಷಗಳ ಮಹಾಯಜ್ಞವಾಗಿತ್ತು. ಆಗ ಆ ಹನ್ನೆರಡು ವರ್ಷಗಳ ಕಾಲ ವಾಹನವನ್ನೇ ಹತ್ತಿರಲಿಲ್ಲ. ಅವರು ಗ್ರಂಥ ಸಂಪಾದನೆಗೆ ಕೊಟ್ಟಿದ್ದ ಮಹತ್ವ ಆ ಮಟ್ಟದ್ದಾಗಿತ್ತು.
ಕರ್ಮಯೋಗಿ ಬಿರುದು ಕೊಟ್ಟಿದ್ದು ಇಂದಿರಾ ಗಾಂಧಿ
ಶ್ರೀಗಳು ಪಟ್ಟಾಭಿಷಿಕ್ತರಾಗಿದ್ದು 1970ರಲ್ಲಿ. 1981, 1993, 2006 ಮತ್ತು 2018ರಲ್ಲಿ ನಡೆದ ಮಹಾ ಮಸ್ತಕಾಭಿಷೇಕಗಳನ್ನು ಅತ್ಯಂತ ಯಶಸ್ವಿಯಾಗಿ ಮುಂದೆ ನಿಂತು ಮಾಡಿಸಿದವರು ಇವರು. 1981ರಲ್ಲಿ ಸಹಸ್ರಾಬ್ದಿ ಮಹಾ ಮಸ್ತಕಾಭಿಷೇಕವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟ ಅವರ ಸಾಧನೆಗೆ ಮೆಚ್ಚಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಕರ್ಮಯೋಗಿ ಎಂಬ ಬಿರುದನ್ನು ನೀಡಿ ಗೌರವಿಸಿದ್ದರು. ಶ್ರೀಗಳು ಸುಮಾರು 40ಕ್ಕೂ ಹೆಚ್ಚು ಜಿನಾಲಯಗಳ ಜೀರ್ಣೋದ್ಧಾರಗೊಳಿಸಿ ನಿತ್ಯಪೂಜೆ ನೆರವೇರುವಂತೆ ಮಾಡಿದ್ದಾರೆ.
ಶ್ರವಣಬೆಳಗೊಳ ಸುತ್ತಮುತ್ತಲಿನ ಪರಿಸರದಲ್ಲಿ ಹತ್ತಕ್ಕೂ ಹೆಚ್ಚು ಗ್ರಾಮಗಳನ್ನು ದತ್ತು ಸ್ವೀಕರಿಸಿ, ಅಲ್ಲಿ ಪ್ರಾಥಮಿಕ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ.
ಆರೋಗ್ಯ ಮತ್ತು ಶಿಕ್ಷಣಕ್ಕೆ ಮಹತ್ವ ನೀಡುತ್ತಿದ್ದ ಸ್ವಾಮೀಜಿ ಅವರು, ಶಾಲೆ, ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಕಾಲೇಜ್, ನರ್ಸಿಂಗ್ ಕಾಲೇಜ್, ಗೋಮಟೇಶ ವಿದ್ಯಾಪೀಠ, ಪ್ರಾಕೃತ ಭಾಷೆಯ ಅಭಿವೃದ್ಧಿಗಾಗಿ ಬೆಂಗಳೂರಲ್ಲಿ ಪ್ರಾಕೃತ ಜ್ಞಾನಭಾರತಿ ಟ್ರಸ್ಟ್ ನಿರ್ಮಿಸಿದ್ದಾರೆ.
ಶ್ರವಣಬೆಳಗೊಳದಲ್ಲಿ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಸಂಶೋಧನಾ ಸಂಸ್ಥೆಯಲ್ಲಿ ತಾಳೆಗರಿಗಳನ್ನು ಸಂರಕ್ಷಿಸುವ ಪ್ರಾಕೃತ ಗ್ರಂಥಗಳ ಕನ್ನಡ ಅನುವಾದ ಕಾರ್ಯ ನಡೆಸಿದ್ದಾರೆ. ಆಯುರ್ವೇದ ಆಸ್ಪತ್ರೆ, ಸಂಚಾರಿ ಆಸ್ಪತ್ರೆ, ಕ್ಲಿನಿಕಲ್ ಲ್ಯಾಬ್‌ಗಳನ್ನೂ ಸ್ಥಾಪಿಸಿದ್ದಾರೆ.
ಜೈನ ಧರ್ಮೀಯರು ಮಾತ್ರವಲ್ಲದೆ ಎಲ್ಲರ ಕಲ್ಯಾಣಕ್ಕಾಗಿ ದುಡಿದವರು ಶ್ರೀಗಳು. ಸತ್ಯ, ಅಹಿಂಸೆಯ ತತ್ವಗಳನ್ನು ಸಾರುತ್ತಲೇ ಈಗ ಜಿನೈಕ್ಯರಾಗಿದ್ದಾರೆ. ಜೈನ ಮಠ ಪರಂಪರೆಯ ಅತ್ಯಂತ ಶಕ್ತಿಶಾಲಿ ಸ್ವಾಮೀಜಿಯೊಬ್ಬರು ನಿರ್ಗಮಿಸಿದಂತಾಗಿದೆ.
ಇದನ್ನೂ ಓದಿ : Shravanabelagola swameeji No more : ನಾಲ್ಕು ಮಹಾಮಸ್ತಕಾಭಿಷೇಕಗಳ ರೂವಾರಿ, ಶ್ರವಣಬೆಳಗೊಳದ ಮಹಾಬೆಳಕು