ಶಿರಸಿ: ಹಸಿರು ಸ್ವಾಮೀಜಿ ಎಂದೇ ಪ್ರಸಿದ್ಧರಾಗಿರುವ ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಆಷಾಢ ಪೂರ್ಣಿಮೆ ದಿನದಂದು ಬುಧವಾರ (ಜುಲೈ ೧೩) ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ತಮ್ಮ 32ನೇ ಚಾತುರ್ಮಾಸ್ಯ ವ್ರತದ ಸಂಕಲ್ಪವನ್ನು ಕೈಗೊಳ್ಳಲಿದ್ದಾರೆ. ಅದೇ ದಿನ ಚಾತುರ್ಮಾಸ್ಯದುದ್ದಕ್ಕೂ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ಮುಂಜಾನೆ 10ಕ್ಕೆ ಶ್ರೀಗಳು ವ್ಯಾಸಪೂಜೆ ನೆರವೇರಿಸಿ ಚಾತುರ್ಮಾಸ್ಯ ವ್ರತದ ಸಂಕಲ್ಪವನ್ನು ತೆಗೆದುಕೊಳ್ಳಲಿದ್ದಾರೆ. ನಂತರ ಸಮಸ್ತ ಶಿಷ್ಯ-ಭಕ್ತರ ಪರವಾಗಿ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ದೇವರಿಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆಯಾದ ನಂತರ ಅನ್ನಪ್ರಸಾದ ಭೋಜನ ನೆರವೇರಲಿದೆ.
ಮಧ್ಯಾಹ್ನ 3:30ಕ್ಕೆ ಸುಧರ್ಮಾ ಸಭಾಭವನದಲ್ಲಿ ವ್ಯಾಸಪೂರ್ಣಿಮೆ ಹಾಗೂ ಚಾತುರ್ಮಾಸ್ಯ ವ್ರತ ಸಂಕಲ್ಪದ ನಿಮಿತ್ತ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀಗಳು ದಿವ್ಯಸಾನ್ನಿಧ್ಯ ನೀಡಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಸಹಕಾರ ರತ್ನ ರಾಜ್ಯಪ್ರಶಸ್ತಿ ಪುರಸ್ಕೃತರಾದ ಶಂಭುಲಿಂಗ ಹೆಗಡೆ ನಡಗೋಡು ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಕೃಷ್ಣ ಪ್ರಸಾದ ಉಡುಪಿ ಅವರನ್ನು ಶ್ರೀಗಳವರು ಸನ್ಮಾನಿಸಲಿದ್ದಾರೆ. ಭಗವತ್ಪಾದ ಪ್ರಕಾಶನದಿಂದ ಪ್ರಕಟಿತವಾದ ಗ್ರಂಥಗಳು ಲೋಕಾರ್ಪಣಗೊಳ್ಳಲಿದೆ.
ಜುಲೈ 13ರಂದು ವ್ಯಾಸಪೂರ್ಣಿಮೆಯಾಗಿದ್ದು, ಶ್ರೀಮಠದಲ್ಲಿ ವಿರಾಜಮಾನವಾದ ವೇದವ್ಯಾಸರ ಅಧಿಷ್ಠಾನಕ್ಕೆ ಶ್ರೀಗಳು ಮಹಾಪೂಜೆಯನ್ನು ನೆರವೇರಿಸುವರು. ಜುಲೈ 9ರಿಂದಲೇ ಈ ನಿಮಿತ್ತವಾಗಿ ಚತುರ್ವೇದ ಪಾರಾಯಣ, ಅಷ್ಟಾದಶ ಪುರಾಣ ಪಾರಾಯಣ ಮಹಾಭಾರತ ಪಾರಾಯಣ ಆರಂಭವಾಗಿದ್ದು, ಅದರ ಮಂಗಲೋತ್ಸವ ಜರುಗಲಿದೆ.
ಚಾತುರ್ಮಾಸ್ಯವು ಜುಲೈ 13ರಿಂದ ಸೆಪ್ಟೆಂಬರ್ 10ವರೆಗೆ ನಡೆಯಲಿದ್ದು, ಆ ದಿನಗಳಲ್ಲಿ ಪ್ರತಿದಿನ ಶ್ರೀಗಳಿಂದ ಪ್ರವಚನ ನಡೆಯಲಿದೆ. ಪ್ರತಿ ದಿನ ಸಾಯಂಕಾಲ ಮಹಾಭಾರತ ಪುರಾಣ ಪ್ರವಚನ ಸಂಯೋಜಿಸಲಾಗಿದೆ. ದಿನವೂ ಶಿಷ್ಯ-ಭಕ್ತರಿಂದ ಶ್ರೀಗಳ ಭಿಕ್ಷೆ-ಪಾದಪೂಜೆ, ಮಾತೆಯರಿಂದ ಕುಂಕುಮಾರ್ಚನೆ, ಗಾಯತ್ರಿಜಪ ಮುಂತಾದ ದಾರ್ಮಿಕ ಅನುಷ್ಠಾನಗಳು ಜರುಗಲಿವೆ.
ಇದನ್ನೂ ಓದಿ: ಶಿಕಾರಿಪುರದಲ್ಲಿ ಜೂ.15ರಿಂದ 21ರವರೆಗೆ ಯೋಗ ಸಪ್ತಾಹ