Site icon Vistara News

Siddaganga sri award | ಡಾ. ಸಿ.ಎನ್‌. ಮಂಜುನಾಥ್‌, ಪ್ರಭು ಚನ್ನಬಸವ ಸ್ವಾಮಿಗಳಿಗೆ ಸಿದ್ದಗಂಗಾ ಶ್ರೀ ಪ್ರಶಸ್ತಿ ಘೋಷಣೆ

sidaganga sri award

ತುಮಕೂರು: ಶ್ರೀ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ವತಿಯಿಂದ ನೀಡಲಾಗುವ 2021 ಮತ್ತು 2022ನೇ ಸಾಲಿನ ‘ಸಿದ್ಧಗಂಗಾಶ್ರೀ’ ಪ್ರಶಸ್ತಿ (Siddaganga sri award) ಯನ್ನು ಘೋಷಿಸಲಾಗಿದೆ.

ಸಾಹಿತ್ಯಕ, ಧಾರ್ಮಿಕ, ಸಾಮಾಜಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅನನ್ಯ ಕೊಡುಗೆ ಸಲ್ಲಿಸುತ್ತಿರುವ ಬೆಳಗಾವಿಯ ಅಥಣಿ ಮೋಟಗಿ ಮಠದ ಅಧ್ಯಕ್ಷರಾದ ಶ್ರೀ ಪ್ರಭು ಚನ್ನಬಸವಸ್ವಾಮಿಗಳು ಮತ್ತು ಖ್ಯಾತ ಹೃದಯ ತಜ್ಞರು, ಜಯದೇವ ಹೃದ್ರೋಗ ಸಂಸ್ಥೆಯ ಮುಖ್ಯಸ್ಥರಾದ ಡಾ. ಸಿ.ಎನ್. ಮಂಜುನಾಥ್ ಅವರನ್ನು ಪ್ರಶಸ್ತಿ ಆಯ್ಕೆ ಮಾಡಲಾಗಿದೆ. ಈ ಇಬ್ಬರು ಸಾಧಕರ ಜೀವಮಾನದ ಸಾಧನೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಸಂಘದ ಕಾರ್ಯದರ್ಶಿ ಕೆ.ಎಚ್. ಶಿವರುದ್ರಯ್ಯನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿಸೆಂಬರ್‌ ೧೮ರಂದು ಪ್ರದಾನ
ಶ್ರೀ ಸಿದ್ಧಗಂಗಾ ಮಠದಲ್ಲಿ ಡಿಸೆಂಬರ್‌ 18ರಂದು ಬೆಳಗ್ಗೆ 10.00 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಲಿಂಗೈಕ್ಯ ಡಾ. ಶ್ರೀ ಶಿವಕುಮಾರಮಹಾಸ್ವಾಮಿಗಳವರ ಆಶೀರ್ವಾದದೊಂದಿಗೆ ಹಾಗೂ ಶ್ರೀಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯುವ ಸಂಘದ 66ನೇ ಸರ್ವ ಸದಸ್ಯರ ವಾರ್ಷಿಕ ಮಹಾಧಿವೇಶನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಿವರುದ್ರಯ್ಯ ತಿಳಿಸಿದರು. ಪ್ರಶಸ್ತಿಯು 1 ಲಕ್ಷ ರೂ. ನಗದು, ಆಭಿನಂದನಾ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.

ನಾಲ್ವರಿಗೆ ಸಿದ್ದಗಂಗಾ ಶಿವಕುಮಾರ ಶ್ರೀ ಪ್ರಶಸ್ತಿ
ಇದೇ ಸಂದರ್ಭದಲ್ಲಿ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಹೆಸರಿನ ‘ಸಿದ್ಧಗಂಗಾ ಶಿವಕುಮಾರಶ್ರೀ’ ಪ್ರಶಸ್ತಿಯನ್ನು ಸಾಹಿತ್ಯ, ಸಾಮಾಜಿಕ, ಶೈಕ್ಷಣಿಕ, ಕೃಷಿ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ನಾಲ್ವರಿಗೆ ನೀಡಲಾಗುತ್ತಿದೆ.

ಕಲಬುರಗಿಯ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಚಂದ್ರಶೇಖರ ಬಿಲಗುಂದಿ, ಸಾಹಿತಿಗಳಾದ ಮೈಸೂರಿನ ಪ್ರೊ. ಎಸ್. ಮಲೆಯೂರು ಗುರುಸ್ವಾಮಿ, ವಿಜ್ಞಾನ ಮತ್ತು ತಂತ್ರಜ್ಞಾನ ತಜ್ಞರಾದ ಡಾ. ವೈ.ಸಿ. ಕಮಲ ಹಾಗೂ ರಾಯಚೂರು ಮೂಲದ ಕೃಷಿ ತಜ್ಞರಾದ ಕವಿತಾ ಮಿಶ್ರಾ ಅವರನ್ನು ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು 15,000 ರೂ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ಕಾಯಕ ಯೋಗಿ, ಸಂಘಸಿರಿ ಪ್ರಶಸ್ತಿ
ಈ ವರ್ಷದ ‘ಕಾಯಕಯೋಗಿ’ ಪ್ರಶಸ್ತಿಗೆ ಸಾಹಿತಿ, ಪತ್ರಕರ್ತರಾದ ಧಾರವಾಡದ ರಂಜಾನ್‌ ದರ್ಗಾ ಅವರನ್ನು ಆಯ್ಕೆ ಮಾಡಲಾಗಿದೆ. ನಾನಾ ಕ್ಷೇತ್ರಗಳ ನೀಡಲಾಗುವ ‘ಸಂಘಸಿರಿ’ ಪ್ರಶಸ್ತಿಗೆ ತುಮಕೂರಿನ ಎಚ್.ಜಿ. ಈಶ್ವರಯ್ಯ, ಬೆಂಗಳೂರಿನ ತುಳಸೀರಾಮಯ್ಯ, ಲಕ್ಷ್ಮಯ್ಯ, ಆರ್.ಎಸ್. ಹುಚ್ಚಾಚಾರಿ, ಬಳ್ಳಾರಿಯ ಚನ್ನನಗೌಡ, ಬೀದರ್‌ನ ದೇವೆಂದ್ರ ಕಾರಂಜಿ, ಹಾಗೂ ರಾಯಚೂರಿನ ಮಹೇಶ್‌ ಶಾಸ್ತ್ರಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ |RRR MOVIE | ಪ್ರತಿಷ್ಠಿತ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಯ ಎರಡು ವಿಭಾಗಗಳಿಗೆ ಆರ್‌ಆರ್‌ಆರ್‌ ನಾಮನಿರ್ದೇಶನ

Exit mobile version