ದಾವಣಗೆರೆ: ದಾವಣಗೆರೆ ಸಮಾವೇಶದ ಆರಂಭದಲ್ಲೇ ಸಿದ್ದರಾಮಯ್ಯ ಸಿಎಂ ಧ್ವನಿ ಕೇಳಲು ಆರಂಭವಾಗಿದೆ. ಸಮಾವೇಶದಲ್ಲಿ ಮಾತನಾಡಿ ಮಾಜಿ ಶಾಸಕ ಕೆ.ಎನ್ ರಾಜಣ್ಣ ಅವರು ಪರೋಕ್ಷ ಉಲ್ಲೇಖದ ಮೂಲಕ ಈ ಚರ್ಚೆಗೆ ಚಾಲನೆ ನೀಡಿದ್ದಾರೆ. ಈ ಅದ್ದೂರಿ ಸಮಾವೇಶ ನಡೆಸುತ್ತಿರುವುದೇ ೨೦೨೩ರ ಚುನಾವಣೆಯ ಬಳಿಕ ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಬೇಕು ಎಂಬುದನ್ನು ದೃಢಪಡಿಸಿಕೊಳ್ಳುವುದಕ್ಕಾಗಿ ಎಂಬ ಮಾತಿಗೆ ಪುಷ್ಟಿ ಸಿಕ್ಕಿದಂತಾಗಿದೆ.
ಸಮಾವೇಶದಲ್ಲಿ ಮಾತನಾಡಿದ ರಾಜಣ್ಣ ಅವರು, ಸಿದ್ದರಾಮಯ್ಯ ಅವರು ಯಾರೂ ಹಸಿವಿನಿಂದ ಬಳಲಬಾರದೆಂದು ಅನ್ನ ಭಾಗ್ಯ ಕಾರ್ಯಕ್ರಮ ಕೊಟ್ಟರು. ಇದೇ ಕಾರಣಕ್ಕೆ ಸಿದ್ದರಾಮಯ್ಯರನ್ನು ಜನ ಅನ್ನರಾಮಯ್ಯ ಅಂತಾರೆ. ಸಿದ್ದರಾಮಯ್ಯ ಅನ್ನರಾಮಯ್ಯನೂ ಹೌದು, ಜನರಾಮಯ್ಯನೂ ಹೌದು. ಈ ಜನಸಾಗರವನ್ನು ನೋಡಿದ್ರೆ ಜನರಾಮಯ್ಯ ಅನಿಸ್ತಿದೆʼʼ ಎಂದರು.
ಜನಾಶೀರ್ವಾದಿಂದಾಗಿ ಸಿದ್ದರಾಮಯ್ಯ ಅವರ ಎಲ್ಲ ವಿಘ್ನಗಳು ನಿವಾರಣೆಯಾಗುತ್ತವೆ ಎಂದು ಹೇಳಿದ ರಾಜಣ್ಣ,
2023ರ ಚುನಾವಣೆಯಲ್ಲಿ ನಿಮ್ಮ ಆಶಯಕ್ಕೆ ಹೈಕಮಾಂಡ್ ಸ್ಪಂದಿಸುತ್ತದೆ ಎಂದು ಹೇಳಿದರು. ಈ ಮೂಲಕ ಎಂದ ಪರೋಕ್ಷವಾಗಿ ಸಿದ್ದರಾಮಯ್ಯ ಸಿಎಂ ಅಭ್ಯರ್ಥಿ ಎಂದ ಸೂಚಿಸಿದರು.
2023ರ ಚುನಾವಣೆ ದೇಶಕ್ಕೆ ದಿಕ್ಸೂಚಿಯಾಗುತ್ತೆ ಎಂದ ರಾಜಣ್ಣ, ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಮನವಿ ಮಾಡಿದರು.