Site icon Vistara News

Vishweshwar Bhat: ಪುಸ್ತಕ ಬಿಡುಗಡೆಗೆ ಬಾರದ ಸಿದ್ದರಾಮಯ್ಯ! ʼಅನಿವಾರ್ಯತೆʼ ಎಲ್ಲರಿಗೂ ಅರ್ಥವಾಗ್ತದೆ ಎಂದ ವಿಶ್ವೇಶ್ವರ ಭಟ್

Vishweshwar Bhat Book release Function

ಬೆಂಗಳೂರು: ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ (Vishweshwar Bhat) ನೇತೃತ್ವದ ವಿಶ್ವವಾಣಿ ಪುಸ್ತಕ (Vishwavani Pustaka) ಪ್ರಕಾಶನ ಸಂಸ್ಥೆಯ ಆರು ಪುಸ್ತಕಗಳ ಬಿಡುಗಡೆ ಸಮಾರಂಭಕ್ಕೆ (Book release function) ಸಿಎಂ ಸಿದ್ದರಾಮಯ್ಯ (CM Siddaramaiah) ಬರುತ್ತಾರಾ ಇಲ್ಲವಾ ಎಂಬ ಬಗ್ಗೆ ಭಾರಿ ಕುತೂಹಲ ಮೂಡಿತ್ತು. ಆದರೆ ಸಿದ್ದರಾಮಯ್ಯ ಅವರು ಕೊನೇ ಕ್ಷಣದಲ್ಲಿ “ಅನಿವಾರ್ಯತೆʼಯ ಕಾರಣ ಕೊಟ್ಟು ಗೈರು ಹಾಜರಾದರು.

ಬೆಂಗಳೂರಿನ ಪುರಭವನದಲ್ಲಿ (Bangalore Townhall) ಶನಿವಾರ ಆಯೋಜಿಸಿದ್ದ ಈ ಸಮಾರಂಭಕ್ಕೆ ಸಿದ್ದರಾಮಯ್ಯ ಅವರು ಯಾವ ಕಾರಣಕ್ಕೂ ಹೋಗಬಾರದು ಎಂದು ಹಲವಾರು ಎಡಪಂಥೀಯರು ಆಗ್ರಹಿಸಿದ್ದರು. ಖ್ಯಾತ ನಟ ಪ್ರಕಾಶ್‌ ರೈ (Actor Prakash raj) ಕೂಡ, ಈ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಹೋಗಬಾರದು ಎಂದು ಟ್ವೀಟ್‌ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಟೀಕೆ ಟಿಪ್ಪಣಿ ಕೇಳಿ ಬಂದಿತ್ತು. ವಿಶ್ವೇಶ್ವರ ಭಟ್‌ ಮತ್ತು ಪ್ರಕಾಶ್‌ ರೈ ನಡುವೆ ʼಟ್ವೀಟ್‌ ವಾರ್‌ʼ ನಡೆದಿತ್ತು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಶ್ವೇಶ್ವರ ಭಟ್‌ ಅವರು, ಅನಿವಾರ್ಯ ಕಾರಣಗಳಿಂದ ಈ ಕಾರ್ಯಕ್ರಮಕ್ಕೆ ಬರಲು ಆಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅವರ ʼಅನಿವಾರ್ಯತೆʼ ಏನು ಎನ್ನುವುದು ಇಲ್ಲಿರುವ ಎಲ್ಲರಿಗೂ ಅರ್ಥವಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ವಿಶ್ವೇಶ್ವರ ಭಟ್‌ ಅವರ ಸಂಪಾದಕರ ಸದ್ಯಶೋಧನೆ-1, ಸಂಪಾದಕರ ಸದ್ಯಶೋಧನೆ-2, ಸಂಪಾದಕರ ಸದ್ಯಶೋಧನೆ-3 ಪುಸ್ತಕ, ಕಿರಣ್ ಉಪಾಧ್ಯಾಯ ಅವರ ʼಹೊರದೇಶವಾಸಿʼ, ರೂಪಾ ಗುರುರಾಜ್‌ ಅವರ ʼಒಂದೊಳ್ಳೆ ಮಾತು-2ʼ, ಶಿಶಿರ್‌ ಹೆಗಡೆ ಅವರ ʼಶಿಶಿರ ಕಾಲʼ ಪುಸ್ತಕ ಬಿಡುಗಡೆ ಮಾಡಿದರು. ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಚಿಕ್ಕಬಳ್ಳಾಪುರ ಶಾಸಕ, ಪರಿಶ್ರಮ ನೀಟ್‌ ಅಕಾಡೆಮಿ ಸಂಸ್ಥಾಪಕ ಪ್ರದೀಪ್‌ ಈಶ್ವರ್‌ ಜತೆಗಿದ್ದರು.

Hariprakash Konemane and Vishweshwar Bhat

ಪುಸ್ತಕ ಮಳಿಗೆ 47, ಬಾರ್‌, ವೈನ್‌ ಶಾಪ್‌ 26000!

ಕನ್ನಡ ಪುಸ್ತಕೋದ್ಯಮ ಸಂಕಷ್ಟದಲ್ಲಿದೆ. ಇಡೀ ರಾಜ್ಯದಲ್ಲಿ ಕೇವಲ 47 ಪ್ರಮುಖ ಪುಸ್ತಕ ಮಳಿಗೆಗಳಿವೆ. ಆದರೆ, ರಾಜ್ಯಾದ್ಯಂತ 26 ಸಾವಿರ ಬಾರ್‌, ವೈನ್‌ ಶಾಪ್‌ಗಳಿವೆ. ಪುಸ್ತಕ ಮಳಿಗೆಗಳಿಂದ ಸರ್ಕಾರಕ್ಕೆ ಏನೂ ಗಿಟ್ಟುವುದಿಲ್ಲ. ಆದರೆ ಸರ್ಕಾರದ ಸ್ಕೀಮ್‌ ನಿಂತಿರುವುದೇ ಸಾರಾಯಿ ಅಂಗಡಿಗಳ ಮೇಲೆ! ಇದು ದುರ್ದೈವ ಮತ್ತು ನಾಚಿಕೆಗೇಡಿನ ಸಂಗತಿ. ಈ ವಿಪರ್ಯಾಸದ ಬಗ್ಗೆ ಹಾಲಿ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳಿಗೆ ಮನದಟ್ಟು ಮಾಡಲು ಸಿದ್ದರಾಮಯ್ಯ ಮತ್ತು ಬಸವರಾಜ ಬೊಮ್ಮಾಯಿ (Basavaraja Bommai) ಅವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆ ಎಂದು ವಿಶ್ವೇಶ್ವರ ಭಟ್‌ ಹೇಳಿದರು.
8 ಬಾರಿ ವಿಧಾನ ಪರಿಷತ್‌ ಸದಸ್ಯರಾಗಿ ಸುದೀರ್ಘ ಅವಧಿಯಲ್ಲಿ ರಾಜಕಾರಣದಲ್ಲಿದ್ದರೂ ಭ್ರಷ್ಟಾಚಾರ, ಹಗರಣಗಳಿಂದ ದೂರ ಇರುವ ಬಸವರಾಜ ಹೊರಟ್ಟಿ ಅವರ ರಾಜಕೀಯ ಜೀವನ ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ದೀಪ ಬೆಳಗಿ ಕಾರ್ಯಕ್ರಮದ ಉದ್ಘಾಟನೆ

ಚುನಾವಣೆ ಸೋಲಿನಿಂದ ಬೊಮ್ಮಾಯಿ ಅವರನ್ನು ವಿಮರ್ಶಿಸಲಾಗದು

ಮದುವೆ ಮನೆಯಲ್ಲಿ ವರ ಓಡಿ ಹೋದಾಗ ತರಾತುರಿಯಲ್ಲಿ ಮತ್ತೊಬ್ಬನನ್ನು ತಂದು ಮದುವೆ ಮಾಡಿಸುವಂತೆ, ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಆ ಮಿತಿಯಲ್ಲಿ ಅವರು ಸಮರ್ಥವಾಗಿಯೇ ಆಡಳಿತ ನಡೆಸಿದ್ದಾರೆ. ಒಂದು ಸೋಲಿನಿಂದ ಯಾವುದೇ ರಾಜಕಾರಣಿಯ ಸಾಮರ್ಥ್ಯವನ್ನು ಅಳೆಯಲಾಗದು. 1945ರಲ್ಲಿ ವಿನ್ಸೆಂಟ್‌ ಚರ್ಚಿಲ್‌ ಅವರು ಬ್ರಿಟನ್‌ ಪ್ರಧಾನಿಯಾಗಿದ್ದರು. ಎರಡನೇ ಮಹಾಯುದ್ಧದಲ್ಲಿ ಅವರು ಬ್ರಿಟನ್‌ಗೆ ಜಯ ತಂದುಕೊಟ್ಟರು. ಯುದ್ಧ ಕಾಲದ ಬಲಿಷ್ಠ ನಾಯಕ ಎಂದು ಅವರನ್ನು ಎಲ್ಲರೂ ಹೊಗಳಿದರು. ಆದರೆ ಮುಂದಿನ ಚುನಾವಣೆಯಲ್ಲಿ ಅವರು ಸೋತು ಹೋದರು. ಮುಂದೆ ಅವರು ಸಾಹಿತ್ಯದತ್ತ ಹೊರಳಿ ನೊಬೆಲ್‌ ಪ್ರಶಸ್ತಿಗೂ ಪಾತ್ರರಾದರು. ಆ ಬಳಿಕ ಮತ್ತೆ ಬ್ರಿಟನ್‌ ಪ್ರಧಾನಿಯೂ ಆದರು. ಹಾಗಾಗಿ ಒಂದು ಸೋಲಿನಿಂದ ಒಬ್ಬರನ್ನು ವಿಮರ್ಶೆ ಮಾಡಲಾಗದು. ರಾಮಕೃಷ್ಣ ಹೆಗಡೆ ಮತ್ತು ಎಸ್‌ ಎಂ ಕೃಷ್ಣ ಅವರ ಆಡಳಿತವನ್ನು ಈಗ ದಶಕಗಳ ಬಳಿಕ ಪಾಸಿಟಿವ್‌ ಆಗಿ ವಿಮರ್ಶೆ ಮಾಡಲಾಗುತ್ತಿದೆ ಎಂದು ವಿಶ್ಲೇಷಿಸಿದರು.

ಪುಸ್ತಕಗಳಿಗೆ ಸರ್ಕಾರದ ಪ್ರೋತ್ಸಾಹ ಹೆಚ್ಚಾದರೆ ಕಳಪೆ ಸಾಹಿತ್ಯ ಹೆಚ್ಚಾಗುತ್ತದೆ : ಬೊಮ್ಮಾಯಿ

ಪುಸ್ತಕಗಳಿಗೆ ಸರ್ಕಾರದ ಪ್ರೋತ್ಸಾಹ ಹೆಚ್ಚಾದರೆ ಸಾಹಿತ್ಯದ ಮೌಲ್ಯ ಕಡಿಮೆಯಾಗುತ್ತದೆ. ಕಳಪೆ ಸಾಹಿತ್ಯ ಹೆಚ್ಚಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಆರು ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಪುಸ್ತಕ ಉದ್ಯಮ ಯಾವಾಗಲೂ ಸಂಕಷ್ಟದಲ್ಲಿ ಇರುತ್ತದೆ. ಓದುಗರು ಸಾಹಿತ್ಯವನ್ನು ಖರೀದಿ ಮಾಡಿ ಅದರ ಆದಾಯ ಲೇಖಕನಿಗೆ ಸಿಗುವವರೆಗೂ ಪುಸ್ತಕೋದ್ಯಮ ಸಂಕಷ್ಟದಲ್ಲಿಯೇ ಇರುತ್ತದೆ. ಆದರೆ, ಸರ್ಕಾರದಿಂದ ಸೂಕ್ತ ಪ್ರೋತ್ಸಾಹವೂ ಸಿಗಬೇಕು ಎಂದರು.

ʻʻವಿಶ್ವೇಶ್ವರ ಭಟ್ಟರು ಪ್ರತಿದಿನ ಹೊಸದನ್ನು ಹುಡುಕಿ ಜನರಿಗೆ ತಿಳಿಸುತ್ತಾರೆ. ಜನರಿಗೆ ಏನಾದರೂ ಹೇಳುವುದು ಬಹಳ ಕಷ್ಟ. ಅವರಲ್ಲಿ ಇರುವ ಚಿಂತನಾ ಶಕ್ತಿ ಸದಾ ಜೀವಂತ ಇರುವುದನ್ನು ನಾನು ಕಂಡಿದ್ದೇನೆ. ಅವರು ಒಬ್ಬ ಕೇವಲ ಪತ್ರಕರ್ತನಾಗಿ ಬೆಳೆದಿಲ್ಲ. ಒಬ್ಬ ಪತ್ರಕರ್ತ ಎಲ್ಲ ರಂಗದವರೊಂದಿಗೆ ಸಂಪರ್ಕ ಹೊಂದಿರದಿದ್ದರೆ, ಅವರು ಜನರ ಮನಸಿನಿಂದ ದೂರವಾಗುತ್ತಾನೆʼʼ ಎಂದರು.

ನಮ್ಮ ಭವಿಷ್ಯ ಹೇಗಾದರೂ ರೂಪಿಸಬಹುದು, ಡಾಕ್ಟರ್, ಎಂಜನೀಯರ್, ಲಾಯರ್ ಆದರೂ ಮಾನವೀಯ ಗುಣಗಳು ಕಡೆಯಾಗುತ್ತಿವೆ. ಹೆಣ್ಣು ಮಕ್ಕಳ ಮೇಲೆ ಗೌರವ ಇಲ್ಲ‌. ಮಕ್ಕಳ‌ ಮೇಲೆ‌ ಕರುಣೆ ಇಲ್ಲ. ಎಲ್ಲೆಡೆ ದೌರ್ಜನ್ಯ ಅನ್ಯಾಯ ಹೆಚ್ಚಾಗುತ್ತಿದೆ. ನಾನು ಯಾವಾಗ ವಿಚಲಿತನಾಗುತ್ತೇನೊ ಆಗ ಭಗವದ್ಗೀತೆ ಓದುತ್ತೇನೆ.‌ ಅದರಿಂದ ನನ್ನ ಮನಸಿಗೆ ಶಾಂತಿ ದೊರೆಯುತ್ತದೆ. ಭಗವದ್ಗೀತೆ ಎಲ್ಲ ಕಾಲಕ್ಕೂ ಪರಿಹಾರ ಒದಗಿಸುವ ಕೃತಿಯಾಗಿದೆ. ಮನುಷ್ಯ ಎಲ್ಲ ಪ್ರಾಣಿಗಳಿಗಿಂತ ಶ್ರೇಷ್ಠ ಅಂತ ಹೇಳುತ್ತೇವೆ. ಅದಕ್ಕೆ ಕಾರಣ ಎಲ್ಲ ಪರಿಸ್ಥಿತಿಗೂ ಹೊಂದಿಕೊಳ್ಳುವ ಮನಸ್ಥಿತಿ ಮನುಷ್ಯನಿಗೆ ಇದೆ ಎಂದು ನುಡಿದರು.

ಹರಿಪ್ರಕಾಶ್‌ ಕೋಣೆಮನೆ ಅವರಿಗೆ ಅರ್ಪಣೆಯ ಗೌರವ

ವಿಶ್ವೇಶ್ವರ ಭಟ್‌ ಅವರು ಹರಿಪ್ರಕಾಶ್‌ ಕೋಣೆಮನೆ ಅವರನ್ನು ಆಲಿಂಗಿಸಿ ಆತ್ಮೀಯತೆ ತೋರಿದರು.

ವಿಸ್ತಾರ ನ್ಯೂಸ್‌ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಅವರನ್ನು ಈ ಸಂದರ್ಭದಲ್ಲಿ ವಿಶ್ವೇಶ್ವರ ಭಟ್‌ ಅವರು ವೇದಿಕೆಯ ಮೇಲೆ ಕರೆದು ಪುಸ್ತಕ ನೀಡಿ ಗೌರವಿಸಿದರು. ʼಸಂಪಾದಕರ ಸದ್ಯ ಶೋಧನೆʼ ಪುಸ್ತಕವನ್ನು ಅವರು ಹರಿಪ್ರಕಾಶ್‌ ಕೋಣೆಮನೆ ಅವರಿಗೆ ಅರ್ಪಿಸಿದ್ದಾರೆ.

ವಿಶ್ವವಾಣಿ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕ ರಾಧಾಕೃಷ್ಣ ಭಡ್ತಿ ಅವರು ಬಿಡುಗಡೆಯಾದ ಪುಸ್ತಕಗಳ ಕುರಿತು ಮಾತನಾಡಿದರು. ಪುಸ್ತಕಗಳ ಲೇಖಕರಾದ ಕಿರಣ್ ಉಪಾಧ್ಯಾಯ, ಶಿಶಿರ್‌ ಹೆಗಡೆ ಮತ್ತು ರೂಪಾ ಗುರುರಾಜ್‌ ಹಾಜರಿದ್ದರು.

ಇದನ್ನೂ ಓದಿ : Karnataka live news: ವಿಶ್ವೇಶ್ವರ ಭಟ್‌ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಗೈರು

Exit mobile version