Site icon Vistara News

India vs Bharat row: ಚುನಾವಣೆ ಹತ್ತಿರ ಬಂದಿದ್ರಿಂದ ಬಿಜೆಪಿಯವರು ಭಾವನಾತ್ಮಕ ವಿಚಾರ ಕೆದಕುತ್ತಿದ್ದಾರೆ: ಸಿದ್ದರಾಮಯ್ಯ

CM Siddaramaiah

ತುಮಕೂರು: ದೇಶದ ಸಂವಿಧಾನವನ್ನು 1949ರ ನ.26ರಂದು ಅಂಗೀಕಾರ ಮಾಡಿದ್ದಾರೆ. ಅಂದಿನಿಂದ ಭಾರತವನ್ನು ಇಂಡಿಯಾ ಎಂದೇ ಕರೆಯಲಾಗಿದೆ. ಈಗ ಹೆಸರು (India vs Bharat row) ಬದಲಾವಣೆ ಮಾಡುವ ಅಗತ್ಯವೇನು. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಬಿಜೆಪಿಯವರು ಭಾವನಾತ್ಮಕ ವಿಚಾರಗಳನ್ನು ಕೆದಕುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಧುಗಿರಿಯಲ್ಲಿ ಇಂಡಿಯಾ-ಭಾರತ ವಿವಾದದ ಬಗ್ಗೆ ಪ್ರತಿಕ್ರಿಯಿಸಿ, ಸಂವಿಧಾನದ ಪೀಠಿಕೆಯಲ್ಲಿಯೂ ಭಾರತದ ಪ್ರಜೆಗಳಾದ ನಾವು ಎಂದೇ ಹೇಳಿದ್ದೇವೆ. ಈಗ ಭಾರತ ಎಂದು ಮರುನಾಮಕರಣ ಮಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಹಿಂದು ಧರ್ಮದ ಕುರಿತು ಡಾ. ಜಿ.ಪರಮೇಶ್ವರ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಯಾವುದೇ ಧರ್ಮದಲ್ಲಿ ತಾರತಮ್ಯ ಮಾಡುವುದಿಲ್ಲ. ಹಿಂದು, ಇಸ್ಲಾಂ, ಕ್ರೈಸ್ತ, ಸಿಖ್, ಬೌದ್ಧ ಧರ್ಮದಲ್ಲಿ ದಯವೇ ಧರ್ಮದ ಮೂಲವಯ್ಯ ಎಂದಿದ್ದಾರೆ ಹೇಳಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ | My Soil My Country: ಗರಿಷ್ಠ ದೇಶಪ್ರೇಮ ಇರುವ ದೇಶ ಅತಿಹೆಚ್ಚು ಅಭಿವೃದ್ಧಿ ಕಾಣುತ್ತದೆ: ಡಿ.ವಿ. ಸದಾನಂದ ಗೌಡ

ಕ್ಷೀರ ಭಾಗ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದೆ: ಸಿಎಂ ಸಿದ್ದರಾಮಯ್ಯ

ತುಮಕೂರು: ನಾಡಿನ ಮಕ್ಕಳ ಮಾನಸಿಕ ಮತ್ತು ದೈಹಿಕ ಸದೃಢತೆಗಾಗಿ ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಿಂದ ಪ್ರತಿ ದಿನ 54 ಲಕ್ಷಕ್ಕೂ ಅಧಿಕ ಮಕ್ಕಳು ಪೌಷ್ಟಿಕ ಆಹಾರ ಸೇವಿಸಲು ನೆರವಾಗಿದ್ದು, ಈ ಯೋಜನೆ (Ksheera Bhagya) ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಮೆಚ್ಚುಗೆ ಗಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ಮತ್ತು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಮಧುಗಿರಿಯಲ್ಲಿ ಆಯೋಜಿಸಿದ್ದ ಕ್ಷೀರ ಭಾಗ್ಯ ಯೋಜನೆಯ ದಶಮಾನೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳು‌ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿದ್ದರೆ ಮಾತ್ರ ಆರೋಗ್ಯವಂತರಾಗಿ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ. ಎಲ್ಲಾ ಜಾತಿಯ ಎಲ್ಲಾ ಧರ್ಮದ ಬಡವರು ಮತ್ತು ಮಧ್ಯಮ ವರ್ಗದವರ ಮಕ್ಕಳ ಹಿತವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆವು. ಹತ್ತು ವರ್ಷಗಳಿಂದ ಪ್ರತೀ ದಿನ ಲಕ್ಷಾಂತರ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುವಂತೆ ಮಾಡಿದ್ದೇವೆ. ಹೀಗಾಗಿ ನಮ್ಮ ಹೆಮ್ಮೆಯ ಈ ಯೋಜನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದೆ ಎಂದು ವಿವರಿಸಿದರು.

ಇದನ್ನೂ ಓದಿ | DK Shivakumar : ಸ್ವಂತಕ್ಕೆ ಸತ್ರೆ ರೈತರ ಆತ್ಮಹತ್ಯೆ ಹೇಗಾಗ್ತದೆ?; ಶಿವಾನಂದ ಪಾಟೀಲ್‌ಗೆ ದನಿಗೂಡಿಸಿದ ಡಿ.ಕೆ. ಶಿವಕುಮಾರ್

ಮಧುಗಿರಿಯನ್ನು ಪ್ರತ್ಯೇಕ ಜಿಲ್ಲೆ ಮಾಡುವ ಬಗ್ಗೆ ಪರಶೀಲನೆ

ಮಧುಗಿರಿಯನ್ನು ಪ್ರತ್ಯೇಕ ಜಿಲ್ಲೆ ಮಾಡುವ ಕೆ.ಎನ್.ರಾಜಣ್ಣ ಅವರ ಬೇಡಿಕೆಯನ್ನು ನಾನು ಖಂಡಿತ ಪರಿಶೀಲಿಸುತ್ತೇನೆ. ಮಧುಗಿರಿಯಲ್ಲಿರುವ ಏಷ್ಯಾ ಖಂಡದಲ್ಲೇ ಪ್ರಸಿದ್ಧವಾಗಿರುವ ಏಕಶಿಲೆ ಬೆಟ್ಟಕ್ಕೆ ರೋಪ್ ವೇ ಹಾಕಿಸುತ್ತೇವೆ ಎಂದ ಅವರು, ಕೆ.ಎನ್.ರಾಜಣ್ಣ ಅವರನ್ನು ರಾಜಕೀಯವಾಗಿ ಕಳೆದುಕೊಂಡರೆ ಅದು ಮಧುಗಿರಿಯ ಜನತೆಗೆ ಬಹಳ ದೊಡ್ಡ ಲಾಸ್ ಆಗುತ್ತದೆ. ರಾಜಣ್ಣ ಬಡವರ ಪರವಾಗಿ ಸಿಕ್ಕಾಪಟ್ಟೆ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಪಶು ಪಾಲಕರಿಗೆ, ರೈತರಿಗೆ ಅನುಕೂಲ ಆಗಲಿ ಎನ್ನುವ ಕಾರಣದಿಂದ ಪ್ರತಿ ಲೀಟರ್ ಹಾಲಿನ ದರವನ್ನು 3 ರೂ ಹೆಚ್ಚಳ ಮಾಡಲಾಯಿತು. ಹೈಸ್ಕೂಲಿಗೆ ಹೋಗುವವರೆಗೂ ನನ್ನ ಕಾಲಲ್ಲಿ ಚಪ್ಪಲಿ ಇರಲಿಲ್ಲ. ನನ್ನ ಪರಿಸ್ಥಿತಿ ಉಳಿದ ಮಕ್ಕಳಿಗೆ ಬರಬಾರದು ಎನ್ನುವ ಕಾರಣದಿಂದ ಶೂ ಭಾಗ್ಯ ಜಾರಿಗೊಳಿಸಿದೆ. ಶಾಲಾ ಮಕ್ಕಳಿಗೆ ಶೂ ಭಾಗ್ಯ ಕಾರ್ಯಕ್ರಮ ಘೋಷಣೆ ಮಾಡಿದ್ದು ಮಧುಗಿರಿಯಲ್ಲೇ ಎಂದು ಹೇಳಿದರು.

ಎತ್ತಿನಹೊಳೆ ಯೋಜನೆಗೆ ಸಮರ್ಪಕವಾಗಿ ಹಣ ಕೊಡದೆ ಬಿಜೆಪಿ ಜಿಲ್ಲೆಯ ಜನರನ್ನು ವಂಚಿಸಿತು. ತುಂಗಾ ಮೇಲ್ದಂಡೆ ಯೋಜನೆಗೆ ಹಿಂದಿನ ಬಿಜೆಪಿ ಸರ್ಕಾರ ನೆರವು ನೀಡಲಿಲ್ಲ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು ಎನ್ನುವ ನಮ್ಮ ಬೇಡಿಕೆಗೆ ಕೇಂದ್ರ ಸರ್ಕಾರ ಒಪ್ಪುತ್ತಿಲ್ಲ ಎಂದರು.

ಬಡವರ ಪರ ಕಾರ್ಯಕ್ರಮದಿಂದ ರಾಜ್ಯ ದಿವಾಳಿಯಾಗಲ್ಲ

ಬಡವರು, ಮಧ್ಯಮ ವರ್ಗದವರ ಬದುಕಿಗೆ ಅನುಕೂಲ ಆಗುವ ಕಾರ್ಯಕ್ರಮವನ್ನು ನಾವು ರೂಪಿಸಿದರೆ ಬಿಜೆಪಿ ಯವರು ಅಡ್ಡಗಾಲು ಹಾಕಿ ಕಾರ್ಯಕ್ರಮ‌ ವಿಫಲಗೊಳಿಸಲು ಯತ್ನಿಸಿದರು. ಸ್ವತಃ ಪ್ರಧಾನಿ ಮೋದಿಯವರು ಬಡವರ ಪರ ಕಾರ್ಯಕ್ರಮ ನೀಡಿದ್ದರಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಅಪ್ಪಟ ಸುಳ್ಳು ಹೇಳಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.

ಅಂಬಾನಿ, ಅದಾನಿಗೆ ದುಡ್ಡು ಕೊಟ್ಟರೆ ದೇಶದ ಆರ್ಥಿಕತೆಗೆ ನಷ್ಟ ಆಗುವುದಿಲ್ಲವೇ? ಪ್ರಧಾನಿ ಮೋದಿಯವರೇ ಎಂದು ಖಾರವಾಗಿ ಪ್ರಶ್ನಿಸಿದ ಮುಖ್ಯಮಂತ್ರಿಗಳು, ಬಡವರು ಮಧ್ಯಮ ವರ್ಗದವರು ಸಮಾಧಾನದಿಂದ ಎರಡು ಹೊತ್ತು ಊಟ ಮಾಡಿದರೆ ವಿರೋಧಿಸಬೇಡಿ ಎಂದರು.

ಇದನ್ನೂ ಓದಿ | Gauri Lankesh: ಗಾಂಧಿ ಕೊಂದ ಮನಸ್ಥಿತಿಯೇ ಗೌರಿ, ಎಂ.ಎಂ. ಕಲ್ಬುರ್ಗಿಯವರನ್ನೂ ಕೊಂದಿದೆ: ಸಿಎಂ ಸಿದ್ದರಾಮಯ್ಯ

ಗೃಹ ಸಚಿವ ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ , ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ , ಶಾಸಕರುಗಳಾದ ರಂಗನಾಥ್, ಷಡಾಕ್ಷರಿ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Exit mobile version