Site icon Vistara News

CM Siddaramaiah: ಕೇಂದ್ರ ಸರ್ಕಾರದಿಂದ ಸಂವಿಧಾನ ವಿರೋಧಿ ನಡೆ: ಸಿದ್ದರಾಮಯ್ಯ ಕಿಡಿ

Siddaramaiah

ಅಹಮದ್ ನಗರ್ (ಸಂಗಮನೇರ್): ಸಹಕಾರ ಕ್ಷೇತ್ರ ರಾಜ್ಯ ವ್ಯಾಪ್ತಿಗೆ ಬರುತ್ತದೆ. ಆದರೆ, ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರದಲ್ಲಿಯೂ ಹಿಡಿತವನ್ನು ಸಾಧಿಸಲು ಹೊರಟಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ. ಸಹಕಾರಿ ಕ್ಷೇತ್ರದಲ್ಲಿ ರಾಜ್ಯ ಸರ್ಕಾರಗಳ ಮೇಲೆ ಕೇಂದ್ರ ಸವಾರಿ ಮಾಡಲು ಹೊರಟಿರುವುದು ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ಮಹಾರಾಷ್ಟ್ರದ ಸಹಕಾರಿ ಮಹರ್ಷಿ ಭಾವು ಸಾಹೇಬ್ ಥೋರಟ್ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಡಾ. ಅಣ್ಣಾ ಸಾಹೇಬ್ ಶಿಂಧೆ ಅವರ ಜನ್ಮ ಶತಮಾನೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಂವಿಧಾನದಲ್ಲಿ ನಾವು ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಹಕಾರ ಸಚಿವರಾಗಿದ್ದಾರೆ. ಇಲ್ಲಿಯವರೆಗೆ ರಾಜ್ಯಗಳ ಅಧಿಕಾರವನ್ನು ಒತ್ತುವರಿ ಮಾಡಿಕೊಳ್ಳುವ ಕೆಲಸ ಯಾರಿಂದಲೂ ಆಗಿರಲಿಲ್ಲ. ಇದರ ಅರ್ಥ ಕೇಂದ್ರ ಸರ್ಕಾರ ಸಹಕಾರಿ ತತ್ವ ಹಾಗೂ ಅಧಿಕಾರ ವಿಕೇಂದ್ರೀಕರಣಕ್ಕೆ ವಿರುದ್ಧವಾಗಿದೆ ಎಂದು ಅರ್ಥಮಾಡಿಕೊಳ್ಳಬೇಕು. ಇದನ್ನು ನಾವೆಲ್ಲರೂ ಒಕ್ಕೊರಲಿನಿಂದ ವಿರೋಧಿಸುವುದು ಅಗತ್ಯ ಮತ್ತು ಅನಿವಾರ್ಯ ಎಂದರು.

ರಾಜ್ಯ ಸರ್ಕಾರದ ಹಿತಕ್ಕೆ ವಿರುದ್ಧ

ಕೇಂದ್ರ ಸರ್ಕಾರದ ಎಪಿಎಂಸಿ ಕಾಯ್ದೆ ತಿದ್ದುಪಡಿ ಹಾಗೂ ಕೃಷಿ ಕಾಯ್ದೆ ತಿದ್ದುಪಡಿ ಮಾಡಿದರು. ದೇಶದ ರೈತರು ಇದನ್ನು ವಿರೋಧ ಮಾಡಿದ ಮೇಲೆ ಕೇಂದ್ರ ಸರ್ಕಾರ ಮಣಿದು ಕಾಯ್ದೆ ವಾಪಸ್ಸು ಪಡೆಯುವ ತೀರ್ಮಾನ ಮಾಡಿದರು. ಕೇಂದ್ರ ಸರ್ಕಾರದ ಅನೇಕ ತೀರ್ಮಾನಗಳು ರಾಜ್ಯ ಸರ್ಕಾರದ ಹಿತಕ್ಕೆ ವಿರುದ್ಧವಾಗಿವೆ. ಸಹಕಾರ ತತ್ವವಾದ ‘ಒಬ್ಬರಿಗೆ ಎಲ್ಲರೂ, ಎಲ್ಲರಿಗೆ ಒಬ್ಬರು’ ಎಂಬ ಉದಾತ್ತ ಧ್ಯೇಯವನ್ನು ನಾಶ ಮಾಡಲು ಕೇಂದ್ರ ಸರ್ಕಾರ ಹೊರಟಿದೆ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ | HD Kumaraswamy: ನಾನು ಕೇಂದ್ರ ಮಂತ್ರಿ ಆಗಲ್ಲ, ನನ್ನ ಗುರಿಯೇ ಬೇರೆ: ಎಚ್.ಡಿ. ಕುಮಾರಸ್ವಾಮಿ

ಹಸಿರುಕ್ರಾಂತಿಗೆ ಡಾ. ಅಣ್ಣಾಸಾಹೇಬ್ ಶಿಂಧೆ ಕೊಡುಗೆ ಅಪಾರ

ಡಾ. ಅಣ್ಣಾಸಾಹೇಬ್ ಶಿಂಧೆ ಅವರು ದೇಶದ ಆಹಾರದ ಸ್ವಾವಲಂಬನೆಗೆ ಕಾರಣರಾದವರು. ಜವಾಹರ್ ಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ, ಅಣ್ಣಾಸಾಹೇಬ್ ಶಿಂಧೆಯವರು ಹಸಿರು ಕ್ರಾಂತಿಗೆ ಕಾರಣೀಭೂತರು. ಕೃಷಿ ತಜ್ಞ ಡಾ.ಸ್ವಾಮಿನಾಥನ್ ತಮ್ಮ ಲೇಖನದಲ್ಲಿ ಅಣ್ಣಾ ಸಾಹೇಬ್ ಶಿಂಧೆ ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ. ದೇಶದಲ್ಲಿ 140 ಕೋಟಿ ಜನರಿಗೆ ಆಹಾರದಲ್ಲಿ ಸ್ವಾವಲಂಬನೆ ಹೊಂದಲು ಕಾಂಗ್ರೆಸ್ ಪಕ್ಷ ಕಾರಣ. ಭಾವು ಸಾಹೇಬ್ ಥೋರಟ್ ಹಾಗೂ ಡಾ. ಅಣ್ಣಾಸಾಹೇಬ್ ಶಿಂಧೆ ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವ ಮೂಲಕ ಅವರಿಗೆ ಗೌರವವನ್ನು ಸಲ್ಲಿಸಬೇಕಾಗಿದೆ ಎಂದರು.

ಇದನ್ನೂ ಓದಿ | Ram Janmabhoomi: ರಾಮಮಂದಿರ ಉದ್ಘಾಟನೆಗೆ ಆಹ್ವಾನ ಬಂದಿಲ್ಲ; ಹೃದಯದಲ್ಲೇ ದೇವರಿದ್ದಾನೆಂದ ಡಿಕೆಶಿ

ಜನಪರ ಕೆಲಸ

ಅಣ್ಣಾ ಸಾಹೇಬ್ ಶಿಂಧೆ ಅವರು ರಾಷ್ಟ್ರ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಭಾವು ಸಾಹೇಬ್ ಥೋರಟ್ ಅವರು ತಮ್ಮ ಜೀವನದುದ್ದಕ್ಕೂ ಸಮಾಜಮುಖಿ ಯಾಗಿ ಜನಪರವಾಗಿ ಕೆಲಸ ಮಾಡಿದ್ದರು. ಸಹಕಾರ ಕ್ಷೇತ್ರದಲ್ಲಿ ಭಾವು ಸಾಹೇಬ್ ಅವರು ಮಾಡಿರುವ ಕಾರ್ಯಕ್ಕೆ ಅವರು ಸಹಕಾರಿ ಮಹರ್ಷಿ ಎಂದು ಕರೆಯಲ್ಪಟ್ಟರು. ಸಂಗಮನೇರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೇಕ ಸಹಕಾರ ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದರು. ಸಹಕಾರ ಕ್ಷೇತ್ರ ನಮ್ಮ ದೇಶದಲ್ಲಿ ನೂರು ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿದೆ. ಭಾವು ಸಾಹೇಬ್ ಥೋರಟ್ ಮಹಾತ್ಮ ಗಾಂಧಿಯವರಿಂದ ಸ್ವಾತಂತ್ರ್ಯ ಹೋರಾಟದ ಪ್ರೇರಣೆ ಪಡೆದು ಜೈಲುವಾಸವನ್ನೂ ಅನುಭವಿಸಿದ್ದರು. ಕೃಷಿ, ಸಣ್ಣ ಕೈಗಾರಿಕೆಗಳು, ಮಾರುಕಟ್ಟೆ, ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರದಲ್ಲಿ ಸಹಕಾರಿ ಸಂಘಗಳನ್ನು ಸ್ಥಾಪಿಸಿದ್ದರು. ಒಮ್ಮೆ ಶಾಸಕರಾಗಿದ್ದರು. ಶಾಸಕರಾಗಿದ್ದರೂ ರೈತರ ಸಮಸ್ಯೆಗಳು ಎದುರಾದಾಗ ಸರ್ಕಾರದ ವಿರುದ್ಧವೇ ಮಾತನಾಡಲು ಹಿಂಜರಿಯುತ್ತಿರಲಿಲ್ಲ. ಅಷ್ಟರಮಟ್ಟಿಗೆ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಯಾಗಿದ್ದರು ಎಂದು ಸಿಎಂ ಸ್ಮರಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version