ಕೊಪ್ಪಳ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಕಾಂಗ್ರೆಸ್‌ನ ಜೋಡೆತ್ತುಗಳು ಅಂತಾರೆ. ಅದರೆ, ಅವರ ಪರಿಸ್ಥಿತಿ ಈಗ ಒಂದು ರೀತಿ ಕಿತ್ತಾಡುವ ಚಿರತೆಗಳಂತಾಗಿವೆ. ಮುಖ್ಯಮಂತ್ರಿ ಹುದ್ದೆಯನ್ನು ತೆಗೆದುಕೊಳ್ಳಲು ಆ ಜೋಡೆತ್ತುಗಳು ಭಾರಿ ಲೆಕ್ಕಾಚಾರದಲ್ಲಿವೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ಸಿಎಂ ಕುರ್ಚಿಗಾಗಿ ಆ ಜೋಡೆತ್ತುಗಳು ಪೈಪೋಟಿ ನಡೆಸಿವೆ. ಆದರೆ ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದರು. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿಯೇ 2023ರ ಚುನಾವಣೆ ನಡೆಸುತ್ತೇವೆ ಎಂದು ನಮ್ಮ ಪಕ್ಷದ ನಾಯಕರು ಹೇಳಿದ್ದಾರೆ. 2018ರಲ್ಲಿ 104 ಸ್ಥಾನಗಳಲ್ಲಿ ನಾವು ಗೆದ್ದಿದ್ದೆವು. ಆ ಸಂದರ್ಭದಲ್ಲಿ ಹಿಂಬಾಗಿಲ ಮೂಲಕ ಕಾಂಗ್ರೆಸ್ ನವರು ಅಧಿಕಾರ ಹಿಡಿದು, ಅವರೇ ತಮ್ಮ ಸರ್ಕಾರ ಬೀಳಿಸಿಕೊಂಡು ನಮಗೆ ಅಧಿಕಾರ ಹಸ್ತಾಂತರ ಮಾಡಿದರು. 2023ರಲ್ಲಿ 150 ಸ್ಥಾನ ಗೆಲ್ಲುತ್ತೇವೆ. ಬೊಮ್ಮಾಯಿಯೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದರು.
ʻʻನಮ್ಮ ಪಕ್ಷ ಯಾವುದೇ ಸಮುದಾಯಗಳನ್ನು ತಿರಸ್ಕಾರ ಮಾಡುವುದಿಲ್ಲ. ದೇಶದಲ್ಲಿ ಕಾಂಗ್ರೆಸ್‌ನ್ನು ತಿರಸ್ಕರಿಸಿದಂತೆಯೇ ರಾಜ್ಯದಲ್ಲಿಯೂ ದೂರ ಇಡುತ್ತಾರೆ ಎಂಬ ವಿಶ್ವಾಸವಿದೆ. ಕರ್ನಾಟಕದಲ್ಲಿ ನಮ್ಮ ಸರ್ಕಾರವೇ ಬರುತ್ತದೆ ಎಂದು ಕಾಂಗ್ರೆಸ್‌ನ ಜೋಡೆತ್ತುಗಳು ಪೈಪೋಟಿ ಮಾಡುತ್ತಿವೆ. ನಾವು ಅಭಿವೃದ್ಧಿಯನ್ನಿಟ್ಟುಕೊಂಡು ಚುನಾವಣೆಗೆ ಹೋಗುತ್ತೇವೆ. ಕಾಂಗ್ರೆಸ್ ನವರು ಸಮುದಾಯದ ರಾಜಕಾರಣ ಮಾಡುತ್ತಾರೆʼʼ ಎಂದರು.
ಇನ್ನು ಹೊಸಬರಿಗೆ ಅವಕಾಶ ಎಂಬ ಬಿ.ಎಲ್. ಸಂತೋಷ್ ಹೇಳಿಕೆಗೆ ಪ್ರಕ್ರಿಯಿಸಿದ ರಾಮುಲು, ʻʻನಮ್ಮ ಪಕ್ಷದಲ್ಲಿ ಹಿರಿಯರು ಸಮೀಕ್ಷೆ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿಯೂ ಈ ಪ್ರಯೋಗ ಮಾಡಲಾಗುತ್ತಿದೆ. ಬಿ.ಎಲ್. ಸಂತೋಷ್ ಅವರು ಹೇಳಿರುವ ಮಾತಿಗೆ ನಾನು ಬೆಂಬಲ ಸೂಚಿಸುತ್ತೇನೆ. ಹೊಸಬರು ಬಂದರೆ ಹೊಸಬರಿಗೆ ಅವಕಾಶ ಕೊಡುತ್ತೇವೆ. ಸಮೀಕ್ಷೆ ಆಧಾರದ ಮೇಲೆ ಹೊಸವರಿಗೂ ಅವಕಾಶ ಮಾಡಿಕೊಡುತ್ತೇವೆʼʼ ಎಂದರು.
ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿಲ್ಲ
ʻʻಬಳ್ಳಾರಿ ಸಮಾವೇಶದಲ್ಲಿ ನಾನು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿಲ್ಲ. ಕಾಂಗ್ರೆಸ್ ಪಾರ್ಟಿಗೆ ಸವಾಲು ಹಾಕಿರುವೆ. ಭಾರತ ಜೋಡೋ ಯಾತ್ರೆಯಲ್ಲಿ ಸಿದ್ದರಾಮಯ್ಯ ಅವರು ನನ್ನನ್ನು ಪೆದ್ದ ಅಂದರು. ಸಿದ್ದರಾಮಯ್ಯ ಅವರನ್ನು ಯಾವತ್ತಿಗೂ ನಾನು ನೋಡಿಕೊಳ್ತೇನೆ ಎಂಬ ಶಬ್ದ ಬಳಸಿಲ್ಲ. ಆಕಸ್ಮಾತ್ ಬಳಸಿದ್ದರೆ ಆ ಮಾತನ್ನು ವಾಪಾಸ್ ಪಡೆಯುತ್ತೇನೆʼʼ ಎಂದರು.
ʻʻಜನಾರ್ದನ ರೆಡ್ಡಿ ಗಂಗಾವತಿಗೆ ಬರುತ್ತಾರೆ ಎಂಬುದರ ಕುರಿತು ನನಗೆ ಮಾಹಿತಿ ಇಲ್ಲ. ಜನಾರ್ದನ ರೆಡ್ಡಿ ಅವರು ನಮ್ಮ ಪಕ್ಷದ ಈ ಭಾಗದ ಹಿರಿಯ ನಾಯಕರು. ಜನಾರ್ದನ ರೆಡ್ಡಿ ಅವರಿಗೆ ಆಗಿರುವ ನೋವನ್ನು ಪಕ್ಷದ ಹಿರಿಯರ ಮುಂದೆ ಹೇಳಿದ್ದೇನೆ. ಇದನ್ನು ಹೊರತುಪಡಿಸಿ ಬೇರೆ ಏನಾಗುತ್ತಿದೆ ಎಂದು ನನಗೆ ಗೊತ್ತಿಲ್ಲ. ನಮ್ಮ ಪಕ್ಷದಲ್ಲಿ ಜನಾರ್ದ ರೆಡ್ಡಿ ಅವರು ಇದ್ದರೆ ಚೆನ್ನಾಗಿರುತ್ತದೆ. ಪಾರ್ಟಿ ಹಿರಿಯರೊಂದಿಗೆ ಮಾತನಾಡಿದ್ದೇನೆ. ಇದನ್ನು ಹೊರತುಪಡಿಸಿ ಉಳಿದಂತೆ ನನಗೆ ಏನೂ ಮಾಹಿತಿ ಇಲ್ಲʼʼ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.
ಇದನ್ನೂ ಓದಿ | ನವಶಕ್ತಿ ಸಮಾವೇಶ | ವೇದಿಕೆಗೆ ಮಗ ಧನುಷ್‌ನನ್ನು ಕರೆತಂದು, ಜೆ.ಪಿ ನಡ್ಡಾಗೆ ಪರಿಚಯಿಸಿದ ಶ್ರೀರಾಮುಲು