Site icon Vistara News

ನೆಹರು ದೂರದೃಷ್ಟಿ ಬಗ್ಗೆ ಹಾಡಿ ಹೊಗಳಿದ ಸಿದ್ದರಾಮಯ್ಯ, ಡಿಕೆಶಿ

Jawaharlal nehru birthday

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ 134ನೇ ಜನ್ಮದಿನ (Jawaharlal nehru birthday) ಆಚರಣೆ ಮಾಡಲಾಯಿತು. ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌, ದೇಶದ ಅಭಿವೃದ್ಧಿಗೆ ನೆಹರು ಅವರ ದೂರದೃಷ್ಟಿಯ ನಾಯಕತ್ವ ಕಾರಣ ಎಂದು ಹಾಡಿ ಹೊಗಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ದೇಶದ ಮೊದಲ ಪ್ರಧಾನಿಯಾಗಿ ಆರ್ಥಿಕ, ಸಾಮಾಜಿಕ, ಪ್ರಜಾಪ್ರಭುತ್ವವಾದಿ ದೇಶವಾಗಿ ಭಾರತವನ್ನು ಕಟ್ಟಿ ನಿಲ್ಲಿಸಿದವರು ನೆಹರು. ಶಿಕ್ಷಣ ಸಂಸ್ಥೆಗಳು, ವಿಜ್ಞಾನ-ಸಂಶೋಧನಾ ಸಂಸ್ಥೆಗಳು, ತಂತ್ರಜ್ಞಾನ, ವಿಶ್ವವಿದ್ಯಾಲಯಗಳ ಸ್ಥಾಪನೆ ಮಾಡಿದ್ದು, ಕೃಷಿ ಅಭಿವೃದ್ಧಿ ನೆಹರು ಅವರ ದೂರದೃಷ್ಟಿಯ ಸಾಧನೆ ಎಂದು ತಿಳಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಇಲ್ಲಿ ಏನೇನೂ ಇರಲಿಲ್ಲ. ಶಿಕ್ಷಣ ಸಂಸ್ಥೆಗಳು ಇರಲಿಲ್ಲ. ನೀರಾವರಿ ವ್ಯವಸ್ಥೆ ಇರಲಿಲ್ಲ. ಆದರೆ, ದೇಶದ ಮೊದಲ ಪ್ರಧಾನಿಯಾಗಿ ಶಿಕ್ಷಣ ಸಂಸ್ಥೆಗಳು, ವಿಜ್ಞಾನ, ಸಂಶೋಧನಾ ಸಂಸ್ಥೆಗಳು, ತಾಂತ್ರಿಕ ಕಾಲೇಜುಗಳು, ವೈದ್ಯಕೀಯ ಅಧ್ಯಯನ ಸಂಸ್ಥೆಗಳು, ಅಣೆಕಟ್ಟುಗಳು, ಆಸ್ಪತ್ರೆಗಳು ಸೇರಿ ಆಧುನಿಕ ಭಾರತದ ನಿರ್ಮಾಣಕ್ಕೆ ಅಗತ್ಯವಾದ ಎಲ್ಲಾ ಕ್ಷೇತ್ರಗಳನ್ನೂ ವಿಶ್ವ ಮಟ್ಟದ ಗುಣಮಟ್ಟದಲ್ಲಿ ಆಗಿನ ಕಾಲಕ್ಕೇ ಸ್ಥಾಪಿಸಿದ್ದರು ಎಂದು ಸ್ಮರಿಸಿದರು.

ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದ ಫಲಾನುಭವಿಗಳು ಅಷ್ಟೆ. ಇವರ್ಯಾರೂ ದೇಶದ ಸ್ವಾತಂತ್ರ್ಯಕ್ಕಾಗಿ ಅಪ್ಪಿ ತಪ್ಪಿಯೂ ಹೋರಾಡಿದವರಲ್ಲ. ಒಬ್ಬೇ ಒಬ್ಬ ಬಿಜೆಪಿ ಪರಿವಾರದ ಸದಸ್ಯ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಜೈಲು ಸೇರಿಲ್ಲ ಎಂದು ವ್ಯಂಗ್ಯವಾಡಿದರು.

ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ ಎನ್ನುವ ಕೀಳರಿಮೆ ಮತ್ತು ಅಳುಕಿನಿಂದ ಸ್ವಾತಂತ್ರ್ಯ ಹೋರಾಟಗಾರರಾಗಿ 9 ವರ್ಷ ಜೈಲು ವಾಸ ಅನುಭವಿಸಿ 17 ವರ್ಷ ದೇಶದ ಪ್ರಧಾನಿ ಆಗಿದ್ದ ನೆಹರೂ ಅವರನ್ನು ಆಡಿಕೊಳ್ಳುವುದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ಸಿಡಬ್ಲ್ಯುಸಿ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹಮದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

ದೇಶದ ಸಾಮಾಜಿಕ, ಆರ್ಥಿಕ ಶಕ್ತಿಗೆ ನೆಹರು ಅಡಿಪಾಯ: ಡಿಕೆಶಿ

ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಾತನಾಡಿ, ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಸಾಮಾಜಿಕ, ಆರ್ಥಿಕ ಶಕ್ತಿಗೆ ಅಡಿಪಾಯ ಹಾಕಿದವರು. ಬೆಂಗಳೂರಿನಲ್ಲಿನ ಮಾನವ ಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೆಹರು ಅವರು ಆ ಕಾಲದಲ್ಲೇ ಎಚ್ಎಎಲ್, ಎಚ್ಎಂಟಿ, ಬಿಇಎಲ್, ಬಿಎಚ್ಇಎಲ್, ಇಸ್ರೋ ಸೇರಿ ಅನೇಕ ಸಂಸ್ಥೆಗಳನ್ನು ಇಲ್ಲಿ ಸ್ಥಾಪಿಸಿದರು ಎಂದು ತಿಳಿಸಿದರು.

ಈ ಸಂಸ್ಥೆಗಳಿಂದ ನಮ್ಮ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯಕ್ಕೆ ಶಕ್ತಿ ಬಂದಿದೆ. ಅವರ ಕಾಲದಲ್ಲಿನ ಪಂಚವಾರ್ಷಿಕ ಯೋಜನೆ, ಅಂಬೇಡ್ಕರ್ ಅವರಿಗೆ ಕೊಟ್ಟ ಜವಾಬ್ದಾರಿ ಮಹತ್ವದ್ದಾಗಿದೆ. ಅವರ ಪ್ರತಿಯೊಂದು ನಿಲುವು ನೀತಿಗಳು ದೇಶದ ಅಭಿವೃದ್ಧಿಗೆ ಭದ್ರ ಬುನಾದಿಯಾಗಿತ್ತು. ಅವರ ವಿದೇಶಾಂಗ ನೀತಿಯನ್ನು ವಿಶ್ವದ ಅನೇಕ ರಾಷ್ಟ್ರಗಳು ಅನುಸರಿಸಿದವು ಎಂದು ಹೇಳಿದರು.

ಕಾರ್ಯಕರ್ತರು ನೆಹರು ಆಚಾರ ವಿಚಾರ ಓದಿ ತಿಳಿದುಕೊಳ್ಳಬೇಕು

ಪಕ್ಷದ ಅಧ್ಯಕ್ಷನಾಗಿ ನಾನು ಕಾರ್ಯಕರ್ತರಿಗೆ ಒಂದು ವಿಚಾರ ಹೇಳುತ್ತೇನೆ. ಅವರ ಚಿಂತನೆ, ಆಚಾರ, ವಿಚಾರ ಅರಿತರೆ ನಾವು ಮುಂದೆ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದು ಅರಿವಾಗುತ್ತದೆ. ಇಂದಿರಾ ಗಾಂಧಿ ಅವರು ಅಂಗನವಾಡಿ ಕಾರ್ಯಕ್ರಮ ಆರಂಭಿಸಿದ ಹಿಂದಿನ ದಿನ ಮಕ್ಕಳ ದಿನಚರಣೆಯಾಗಿತ್ತು. ಗ್ರಾಮೀಣ ಮಕ್ಕಳು ಪೌಷ್ಟಿಕ ಆಹಾರ ಸಿಗಲಿ ಎಂದು ದೇಶದಲ್ಲಿ ಅಂಗನವಾಡಿ ಕಾರ್ಯಕ್ರಮ ಆರಂಭಿಸಿದರು. ಅಂದಿನಿಂದ ಈ ಕಾರ್ಯಕ್ರಮ ದೊಡ್ಡದಾಗಿ ಬೆಳೆಯಿತು. ಅಂಗನವಾಡಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಮಕ್ಕಳ ವಿಚಾರದಲ್ಲಿ ನೆಹರು ಅವರ ದೂರದೃಷ್ಟಿ ಬಹಳ ದೊಡ್ಡದಾಗಿತ್ತು. ಮಕ್ಕಳನ್ನು ಸರಿಯಾಗಿ ಬೆಳೆಸಿದರೆ ಅವರೇ ದೇಶದ ಭವಿಷ್ಯದ ಆಸ್ತಿ ಎಂಬುದು ನೆಹರು ಅವರ ಚಿಂತನೆಯಾಗಿತ್ತು. ಇಂತಹ ಚಿಂತನೆ ನೆಹರು ಅವರಿಗೆ ಮಾತ್ರ ಸಾಧ್ಯ. ಅಲಹಬಾದ್‌ನಲ್ಲಿ ನೆಹರು ಅವರು ತಮ್ಮ ಆಸ್ತಿಯನ್ನು ದೇಶಕ್ಕೆ ದಾನ ಮಾಡಿದರು. ದೆಹಲಿಯಲ್ಲಿ ನೆಹರು ಅವರಿದ್ದ ಮನೆಯನ್ನು ಪ್ರಧಾನಮಂತ್ರಿ ವಸ್ತು ಸಂಗ್ರಹಾಲಯ ಮಾಡಿ ಅವರ ಹೆಸರು ಇರದಂತೆ ಮಾಡಿದ್ದಾರೆ. ನೆಹರು ಹಾಗೂ ಗಾಂಧಿ ಕುಟುಂಬದ ಹೆಸರನ್ನು ನಿರ್ಮೂಲನೆ ಮಾಡಲು ಅನೇಕ ಪ್ರಯತ್ನ ನಡೆಯುತ್ತಿವೆ. ಈ ದೇಶದ ಇತಿಹಾಸದಲ್ಲಿ ಗಾಂಧಿ ಕುಟುಂಬದ ಹೆಸರನ್ನು ನಿರ್ಮೂಲನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಪಠ್ಯಪುಸ್ತಕ ಪರಿಷ್ಕರಣೆಗೆ ನಮ್ಮ ಸರ್ಕಾರ ಬದ್ಧ

ಬಿಜೆಪಿ ಸರ್ಕಾರ ಮಕ್ಕಳ ಶಾಲಾ ಪಠ್ಯ ಪುಸ್ತಕದಲ್ಲಿ ಇತಿಹಾಸ ತಿರುಚುವ ಸಂಚು ಮಾಡಿದ್ದು, ನಮ್ಮ ಸರ್ಕಾರ ಇದನ್ನು ಸರಿಪಡಿಸುವ ಕೆಲಸ ಮಾಡಲಿದೆ. ಇದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಅವರು ನಮ್ಮ ಕರ್ನಾಟಕದ ಇತಿಹಾಸವನ್ನು ತಿರುಚಲು ಹೇಗಿದ್ದಾರೆ. ನಾವು ಈ ವಿಚಾರದಲ್ಲಿ ಕೊಟ್ಟ ಮಾತಿನಂತೆ ನಡೆಯುತ್ತೇವೆ.

ಗ್ಯಾರಂಟಿ ಯೋಜನೆ ಜಲರಿಗೆ ತಲುಪಲು ಸಹಕರಿಸಿ

ನಾವು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದು, ನಮ್ಮ ಕಾರ್ಯಕರ್ತರು ನಿಗದಿತ ಸಮಯದಲ್ಲಿ ಪ್ರತಿ ಮನೆಗೆ ನಮ್ಮ ಯೋಜನೆಗಳು ತಲುಪಿದೆಯಾ ಇಲ್ಲವೇ ಎಂದು ಪರಿಶೀಲನೆ ಮಾಡಿ ಅದನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಿ. ಶಕ್ತಿ ಯೋಜನೆಯಲ್ಲಿ 100 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ.

ಕಳೆದ ವರ್ಷ ನಾವು ಭಾರತ ಜೋಡೋ ಯಾತ್ರೆ ಮಾಡಿ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದೆವು. ಈ ಬಾರಿ ಆಕೆ ದಸರಾ ಹಬ್ಬದಲ್ಲಿ ಪುಷ್ಪಾರ್ಚನೆ ಮಾಡುವ ಭಾಗ್ಯವನ್ನು ನಮಗೆ ಕರುಣಿಸಿದ್ದಾಳೆ. ದಸರಾದಲ್ಲಿ ಮಹಿಳೆಯರೇ ಹೆಚ್ಚಾಗಿದ್ದರು. ಅವರ ಬಸ್ ಪ್ರಯಾಣದ ಖರ್ಚು ಉಳಿದಿರಬಹುದು. ಆದರೆ ಅಲ್ಲಿ ಅವರು ಹೊಟೇಲ್ ಗಳಲ್ಲಿ ಊಟ ಮಾಡಿದ್ದು, ಅಲ್ಲಿನ ಮಳಿಗೆಗಳಲ್ಲಿ ವಸ್ತುಗಳನ್ನು ಖರೀದಿ ಮಾಡಿದ್ದು, ವ್ಯಾಪಾರ ವಹಿವಾಟು ಹೆಚ್ಚಾಗಿ ಆರ್ಥಿಕತೆಗೆ ಉತ್ತೇಜನ ನೀಡಿದೆ. ಈ ರೀತಿ ನಮ್ಮ ಯೋಜನೆಗಳು ಆರ್ಥಿಕತೆಗೆ ಶಕ್ತಿ ತುಂಬಿವೆ. ಇದು ಕಾಂಗ್ರೆಸ್ ಪಕ್ಷದ ಚಿಂತನೆ.

ಗೃಹಲಕ್ಷ್ಮಿ ಯೋಜನೆಗೆ 1.08 ಲಕ್ಷ ಜನ ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 1.04 ಲಕ್ಷ ಜನಕ್ಕೆ ಹಣ ಸಂದಾಯವಾಗುತ್ತಿದೆ. ಉಳಿದ ನಾಲ್ಕು ಲಕ್ಷ ಜನರ ಅರ್ಜಿಯಲ್ಲಿ ತಾಂತ್ರಿಕ ದೋಷಗಳಿಂದ ಹಣ ತಲುಪಿಲ್ಲ. ಈ ದೋಷಗಳನ್ನು ಕಾರ್ಯಕರ್ತರು ಪತ್ತೆಹಚ್ಚಿ ಸರಿಪಡಿಸುವ ಕೆಲಸ ಮಾಡಬೇಕು.

ಇದನ್ನೂ ಓದಿ | BY Vijayendra : ಕುರುಡುಮಲೆ ಗಣೇಶನ ದರ್ಶನ ಪಡೆದ ಬಿ.ವೈ. ವಿಜಯೇಂದ್ರ; ಸಿಕ್ಕಿತು ಹೂಮಳೆಯ ಸ್ವಾಗತ

ನಮ್ಮ ಗ್ಯಾರಂಟಿ ಟೀಕಿಸಿದವರೇ ಉಚಿತ ಯೋಜನೆ ಘೋಷಣೆ ಮಾಡುತ್ತಿದ್ದಾರೆ

ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ನಮ್ಮ ರಾಜ್ಯವನ್ನು ನೋಡಿ ತೆಲಂಗಾಣ, ಮಧ್ಯಪ್ರದೇಶದಲ್ಲೂ ಆರಂಭವಾಗಿದೆ. ನಮ್ಮ ಯೋಜನೆಗಳಿಂದ ದೇಶ ದಿವಾಳಿಯಾಗುತ್ತದೆ ಎಂದು ಹೇಳುತ್ತಿದ್ದರು. ಈಗ ಮಧ್ಯ ಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನಮಗಿಂತ ಮುಂಚೆ ಉಚಿತ ಯೋಜನೆಗಳ ಬೋರ್ಡ್ ಹಾಕಿಕೊಂಡು ಕೂತಿದ್ದಾರೆ. ಅದನ್ನು ಯಾವ ಮಾಡೆಲ್ ಎಂದು ಕರೆಯಬೇಕು?

Exit mobile version