Site icon Vistara News

Rahul disqualification : ರಾಹುಲ್‌ ಅನರ್ಹತೆ ವಿರುದ್ಧ ಪ್ರತಿಭಟನೆಗೆ ಕಾಂಗ್ರೆಸ್‌ ಕರೆ, ಹೃದಯದಿಂದ ಕಿತ್ತು ಹಾಕಲಾರಿರಿ ಎಂದ ಡಿಕೆಶಿ

rahul gandhi

ಬೆಂಗಳೂರು: ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಬೆನ್ನಿಗೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಸಂಸತ್‌ ಸದಸ್ಯನ ಸ್ಥಾನದಿಂದ ಅನರ್ಹಗೊಳಿಸಿದ್ದನ್ನು (Rahul disqualification) ಮಾಜಿ ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ ಮತ್ತು ಇದರ ಇವರ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ್ದಾರೆ.

ʻʻರಾಹುಲ್ ಗಾಂಧಿಯವರು ಹೇಳುವ ಸತ್ಯವನ್ನು ಎದುರಿಸಲಾಗದ ನರೇಂದ್ರ ಮೋದಿ ಸರ್ಕಾರ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ತನ್ನ ಹೇಡಿತನವನ್ನು ಜಾಹೀರುಗೊಳಿಸಿದೆ. ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇದೊಂದು ಕರಾಳ ದಿನʼʼ ಎಂದು ಸಿದ್ದರಾಮಯ್ಯ ವ್ಯಾಖ್ಯಾನಿಸಿದ್ದಾರೆ.

ʻʻಭಾರತೀಯ ಜನತಾ ಪಕ್ಷದ ಪಾಪದ ಕೊಡ ತುಂಬಿದೆ. ತನ್ನ ನಾಶದ ಶವದಪೆಟ್ಟಿಗೆಗೆ ತಾನೇ ಕೊನೆಯ ಮೊಳೆ ಬಡಿದಿದೆ. ಈ ಫ್ಯಾಸಿಸ್ಟ್ ನಡವಳಿಕೆಗೆ ಹೆದರುವ, ಹಿಂಜರಿಯುವ ಪ್ರಶ್ನೆಯೇ ಇಲ್ಲ. ಈ ಅನ್ಯಾಯದ ವಿರುದ್ದ ನ್ಯಾಯಾಲಯ ಮತ್ತು ಬೀದಿಗಳಲ್ಲಿ ಹೋರಾಟ ಮಾಡುತ್ತೇವೆʼʼ ಎಂದು ಸಿದ್ದರಾಮಯ್ಯ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ʻʻಭಾರತದಲ್ಲಿ ಇಂದು ಅನಧಿಕೃತವಾಗಿ ತುರ್ತುಪರಿಸ್ಥಿತಿ ಘೋಷಿಸಲಾಗಿದೆ. ನರೇಂದ್ರ ಮೋದಿ, ಬಿಜೆಪಿ ಮತ್ತು ಎನ್ ಡಿ ಎ ಸರ್ಕಾರದ ವಿರುದ್ದ ಮಾತನಾಡುವವರಿಗೆಲ್ಲರಿಗೂ ಎಚ್ಚರಿಕೆಯ ರೂಪದಲ್ಲಿ ರಾಹುಲ್ ಗಾಂಧಿಯವರ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ. ಇದು ಕೇವಲ ಕಾಂಗ್ರೆಸ್ ಪಕ್ಷ ಇಲ್ಲವೇ ರಾಹುಲ್ ಗಾಂಧಿಯವರಿಗೆ ನೀಡಿರುವ ಬೆದರಿಕೆ ಅಲ್ಲ, ಅನ್ಯಾಯ-ಅಕ್ರಮದ ವಿರುದ್ದ ದನಿ ಎತ್ತುವ ಎಲ್ಲ ಪ್ರಜಾಪ್ರಭುತ್ವ ಪ್ರೇಮಿಗಳಿಗೆ ಒಡ್ಡಿರುವ ಬೆದರಿಕೆ. ಪಕ್ಷ,ಪಂಥ ಮರೆತು ಎಲ್ಲರೂ ಒಟ್ಟಾಗಿ ಇದರ ವಿರುದ್ದ ಪ್ರತಿಭಟನೆ ನಡೆಸಬೇಕಾಗಿದೆʼʼ ಎಂದು ಹೇಳಿರುವ ಸಿದ್ದರಾಮಯ್ಯ, ʻʻರಾಹುಲ್ ಗಾಂಧಿಯವರ ವಿರುದ್ದ ಕೈಗೊಳ್ಳಲಾದ ಕ್ರಮದಿಂದ ಕಾಂಗ್ರೆಸ್ ಪಕ್ಷದ ಲಕ್ಷಾಂತರ ಕಾರ್ಯಕರ್ತರ ಮನಸ್ಸಿಗೆ ನೋವಾಗಿರುವುದು ನಿಜವಾದರೂ ಈ ಸಂದರ್ಭದಲ್ಲಿ ಸಂಯಮದಿಂದ ವರ್ತಿಸುವುದು ಅಗತ್ಯ. ಯಾರೂ ಕೂಡಾ ಸಿಟ್ಟು-ಆಕ್ರೋಶದ ಕೈಗೆ ಬುದ್ಧಿ ಕೊಡದೆ ಶಾಂತಿಯುತ ಪ್ರತಿಭಟನೆ ನಡೆಸಬೇಕುʼʼ ಎಂದಿದ್ದಾರೆ.

ನೀವು ಹೃದಯದಿಂದ ಕಿತ್ತು ಹಾಕಲಾರಿರಿ ಎಂದ ಡಿಕೆಶಿ

ಸಂಸತ್ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿರುವ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ʻʻನೀವು ರಾಹುಲ್ ಗಾಂಧಿ ಅವರನ್ನು ಸಂಸತ್ ಸ್ಥಾನದಿಂದ ತೆಗೆದುಹಾಕಬಹುದು. ಆದರೆ ಕೋಟ್ಯಂತರ ಭಾರತೀಯರು ಹೃದಯದಲ್ಲಿ ನೀಡಿರುವ ಸ್ಥಾನದಿಂದ ತೆಗೆದುಹಾಕುವುದು ಅಸಾಧ್ಯ. ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ಧೋರಣೆಗೆ ನನ್ನ ಧಿಕ್ಕಾರʼʼ ಎಂದು ಟ್ವೀಟ್ ಮೂಲಕ ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ಚುನಾವಣೆ ವಿಷಯವಾಗಲಿದೆ ಎಂದ ದಿನೇಶ್‌ ಗುಂಡೂ ರಾವ್‌

ʻʻದೇಶದಲ್ಲಿ ಜನತಂತ್ರ ವ್ಯವಸ್ಥೆ ಅಪಾಯಕಾರಿಯಲ್ಲಿದೆ. ಬಿಜೆಪಿ ಸರ್ಕಾರ ವಿರೋಧ ಪಕ್ಷಗಳನ್ನ ಮಟ್ಟ ಹಾಕುತ್ತಿದೆ. ದೇಶದ ಎಲ್ಲಾ ಸಂಸ್ಥೆಗಳನ್ನು ಬಳಸಿಕೊಂಡು ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಸತ್ಯವನ್ನೇ ಹೇಳಿದ್ದಾರೆ. ಬ್ರಿಟನ್‌ಗೆ ಹೋಗಿದ್ದಾಗಲುಇ ಸತ್ಯವನ್ನೇ ಹೇಳಿದ್ದರುʼʼ ಎಂದು ರಾಹುಲ್‌ ಅನರ್ಹತೆ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಮಾಜಿ ಅಧ್ಯಕ್ಷ, ಶಾಸಕ ದಿನೇಶ್‌ ಗುಂಡೂರಾವ್‌ ಪ್ರತಿಕ್ರಿಯೆ ನೀಡಿದ್ದಾರೆ.

ʻʻತುಂಬಾ ತರಾತುರಿಯಿಂದ ತೀರ್ಪು ಕೊಟ್ಟಿದ್ದಾರೆ. ರಾಹುಲ್‌ ಗಾಂಧಿ ಅವರು ಮಾನನಷ್ಟವಾಗುವಂತಹ ಯಾವುದೇ ಹೇಳಿಕೆ ಕೊಟ್ಟಿರಲಿಲ್ಲ. ಕೇವಲ ಒಂದು ಭಾಷಣಕ್ಕಾಗಿ ಅನರ್ಹಗೊಳಿಸುತ್ತಾರೆ ಅಂದ್ರೆ ಏನು ಹೇಳಬೇಕು? ಎಷ್ಟು ಜನ ಬಿಜೆಪಿ ನಾಯಕರು ಪ್ರಚೋದನಾತ್ಮಕವಾಗಿ ಮಾತನ್ನಾಡಿಲ್ಲ? ಮಹಾತ್ಮಾ ಗಾಂಧಿ ಬಗ್ಗೆ ಏನೆಲ್ಲಾ ಮಾತನಾಡಿದ್ದಾರೆ?ʼʼ ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರು ಏನು ಬೇಕಾದರೂ ಮಾಡಬಹುದು ಎಂಬ ಮನಸ್ಥಿತಿಯಲ್ಲಿ ಇದ್ದಾರೆ. ಇವರದ್ದು ಸರ್ವಾಧಿಕಾರಿ ಧೋರಣೆಯನ್ನೂ ಮೀರಿದ ಮನಸ್ಥಿತಿʼʼ ಎಂದರು.

ʻʻರಾಜ್ಯದಲ್ಲಿ ಎಷ್ಟು‌ ಲೂಟಿಯಾಗಿದೆ? ಇಂಥ ಪ್ರಕರಣದಲ್ಲಿ ಎರಡು ವರ್ಷ ಶಿಕ್ಷೆಯಾ? ಈ ರೀತಿ ತೀರ್ಪು ಕೊಡುವ ನ್ಯಾಯಾಧೀಶರ ಹಿನ್ನೆಲೆ ಗೊತ್ತಿರಬೇಕಲ್ಲವಾ? ಕೇವಲ ಭಾಷಣಕ್ಕೆ ಎರಡು ವರ್ಷ ಜೈಲು ಶಿಕ್ಷೆ ಎಂದರೆ? ಆರು ತಿಂಗಳು, ಮೂರು ತಿಂಗಳು ಶಿಕ್ಷೆ ಕೊಡಬಹುದಾಗಿತ್ತಲ್ವಾ ? ಯಾಕೆ ಎರಡು ವರ್ಷ ಶಿಕ್ಷೆ ಕೊಟ್ಟರು? ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲು ಹೀಗೆ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡಿದ್ದಾರೆʼʼ ಎಂದು ಹೇಳಿದರು ದಿನೇಶ್‌ ಗುಂಡೂರಾವ್‌.

ʻʻಬಿಜೆಪಿಯವರು ಏನೆಲ್ಲಾ ಭಾಷಣ ಮಾಡಿಲ್ಲ? ನಾವಾದರೂ ಸಂಯಮದಿಂದ ಇರುತ್ತೇವೆ. ಅವರು ನಮಗಿಂತಲೂ ಪ್ರಚೋದನಾತ್ಮಕವಾಗಿ ಮಾತನ್ನಾಡಿದ್ದಾರೆ. ಅವರು ಏನೆಲ್ಲಾ ಭ್ರಷ್ಟಾಚಾರ ನಡೆಸಿಲ್ಲ? ಯಾಕೆ ಇವರ ವಿರುದ್ಧ ಯಾವುದೇ ಕ್ರಮ ಇಲ್ಲ?ʼʼ ಎಂದು ಪ್ರಶ್ನಿಸಿದ ಅವರು, ʻʻಇದು ಕರ್ನಾಟಕದ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಈ ಚುನಾವಣೆಯಲ್ಲಿ ತಕ್ಕ ಪಾಠವನ್ನ ಜನರು ಕಲಿಸುತ್ತಾರೆʼʼ ಎಂದು ಹೇಳಿದರು.

ಇದನ್ನೂ ಓದಿ : Rahul Gandhi Disqualified: ರಾಹುಲ್‌ ಗಾಂಧಿ ರೀತಿ ಮತ್ಯಾವ ನಾಯಕರು ಅನರ್ಹ?

Exit mobile version