ಬೆಂಗಳೂರು: ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಪಶ್ಚಾತ್ತಾಪವಾಗಿದೆ ಎಂದು ನಾನು ಹೇಳಿಲ್ಲ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ. ಸಮಗ್ರ ವಿದ್ಯಮಾನದ ಬಗ್ಗೆ ಸ್ವಾಮೀಜಿಗೆ ವಿವರಣೆ ಕೊಟ್ಟೆ. ಧರ್ಮ ಒಡೆಯುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ ಎಂದು ಸಿದ್ದರಾಮಯ್ಯ ಶನಿವಾರ ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಶುಕ್ರವಾರ ಚಿಕ್ಕಮಗಳೂರಿನಲ್ಲಿ ಅತಿವೃಷ್ಟಿಪೀಡಿತ ಪ್ರದೇಶಗಳಲ್ಲಿ ಆಗಿರುವ ಹಾನಿಯ ಸಮೀಕ್ಷೆಗಾಗಿ ಹೋಗಿದ್ದರು. ಆವೇಳೆ ಅವರು ಬಾಳೆಹೊನ್ನೂರು ಶ್ರೀ ರಂಭಾಪುರಿ ಮಠಕ್ಕೂ ಭೇಟಿ ನೀಡಿದ್ದರು. ಭೇಟಿಯ ಬಳಿಕ ಮಾಧ್ಯಮದ ಜತೆ ಮಾತನಾಡಿದ ಸ್ವಾಮೀಜಿ ಅವರು, ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ತಮ್ಮ ಜತೆಗಿದ್ದವರು ದಾರಿ ತಪ್ಪಿಸಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪಶ್ಚಾತ್ತಾಪ ಪಟ್ಟಿದ್ದಾರೆ. ಈ ಮಾತುಗಳನ್ನು ಸಿದ್ದರಾಮಯ್ಯ ಹೇಳಿದ್ದಾರೆ ಎಂದಿದ್ದರು.
ಇದು ರಾಜಕೀಯವಾಗಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಸಿದ್ದರಾಮಯ್ಯ ಅವರು ಲಿಂಗಾಯತ ಮತಗಳನ್ನು ಸೆಳೆಯುವುದಕ್ಕಾಗಿ ಈ ಮಾತುಗಳನ್ನು ಆಡಿದ್ದಾರೆ. ಮನಸ್ಸಿನಿಂದ ಹೇಳಿದ್ದಲ್ಲ ಎಂದಿದ್ದರು. ಜತೆಗೆ ಕೆಲವರು ನಿಜಕ್ಕೂ ಸಿದ್ದರಾಮಯ್ಯ ಈ ರೀತಿ ಹೇಳಿದ್ದಾರಾ? ಅವರೇ ಹೇಳಿದ್ದರೆ ಒಪ್ಪಿಕೊಳ್ಳಬಹುದಿತ್ತು. ಸ್ವಾಮೀಜಿ ಅವರು ಹೇಳಿರುವುದರಿಂದ ಪೂರ್ತಿಯಾಗಿ ಒಪ್ಪುವುದು ಕಷ್ಟ. ಸಿದ್ದರಾಮಯ್ಯ ಇದಕ್ಕೆ ಏನು ಪ್ರತಿಕ್ರಿಯೆ ಕೊಡುತ್ತಾರೆ ಎಂದು ಕಾದುನೋಡೋಣ ಎಂಬ ಅಭಿಪ್ರಾಯವೂ ಇತ್ತು. ಇದರ ನಡುವೆ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ʻತಂದೆಯವರು ಈ ಮಾತು ಹೇಳಿದ್ದಾರಾ ಎನ್ನುವುದರ ಬಗ್ಗೆ ನನಗೆ ಸ್ಪಷ್ಟತೆ ಇಲ್ಲʼ ಎಂದಿದ್ದರು. ಈಗ ಸ್ವತಃ ಸಿದ್ದರಾಮಯ್ಯ ಅವರೇ ಸ್ಪಷ್ಟೀಕರಣ ನೀಡಿದ್ದಾರೆ.
ಸಿದ್ದರಾಮಯ್ಯ ಹೇಳಿದ್ದೇನು?
ಧರ್ಮ ಸಂಘರ್ಷದ ವಿಚಾರದಲ್ಲಿ ಪಶ್ಚಾತ್ತಾಪ ಆಗಿದೆ ಎಂದು ಹೇಳಿಲ್ಲ. ಸ್ವಾಮೀಜಿ ಅವರಿಗೆ ಏನೇನು ನಡೆಯಿತು ಅಂತ ವಿವರಣೆ ಕೊಟ್ಟಿದ್ದೇನೆ. ಧರ್ಮ ಒಡೆಯುವ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ಲಿಂಗಾಯತ ಧರ್ಮದ ಮೀಸಲಾತಿ ವಿಚಾರ ಪ್ರಮುಖವಾಗಿ ಚರ್ಚೆಗೆ ಬರಲು ಕಾರಣವಾಗಿದ್ದು, ಶಾಮನೂರು ಶಿವಶಂಕರಪ್ಪ ಅವರ ಪತ್ರ ಮತ್ತು ಮಾತೆ ಮಹಾದೇವಿ ಅವರು ಕೊಟ್ಟಿರುವ ಲೆಟರ್. ಅದರ ಜತೆಗೆ ಜಸ್ಟಿಸ್ ನಾಗಮೋಹನ್ ದಾಸ್ ಸಮಿತಿ ನೀಡಿರುವ ವರದಿಯನ್ನು ಆಧರಿಸಿ ಮುಂದೆ ಹೆಜ್ಜೆ ಇಡಲಾಗಿತ್ತು ಎಂದು ಅವರಿಗೆ ವಿವರಣೆ ಕೊಟ್ಟೆ ಅಷ್ಟೆ.
ರಂಭಾಪುರಿ ಶ್ರೀಗಳು ನಾನು ಪಶ್ಚಾತ್ತಾಪ ವ್ಯಕ್ತಪಡಿಸಿದ್ದೇನೆ ಎಂದು ಹೇಳಿದ್ದರೆ ಆ ವಿಚಾರ ನನಗೆ ಗೊತ್ತಿಲ್ಲ. ನಾನು ವಿವರಣೆಯನ್ನಷ್ಟೇ ನೀಡಿದ್ದೇನೆ. ಪಶ್ಚಾತ್ತಾಪ ಆಗಿದೆ ಎಂದು ಹೇಳಿಲ್ಲ ಎಂದಿದ್ದಾರೆ ಸಿದ್ದರಾಮಯ್ಯ.
ಈ ನಡುವೆ ಸಿದ್ದರಾಮಯ್ಯ ಪಶ್ಚಾತ್ತಾಪದ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ಈ ವಿಚಾರದಲ್ಲಿ ನಾನು ಹಿಂದೆಯೇ ಕ್ಷಮೆ ಕೇಳಿದ್ದೆ ಎಂದಿದ್ದಾರೆ.
ಇದನ್ನೂ ಓದಿ| ಧರ್ಮ ಒಡೆಯುವ ಪ್ರಯತ್ನಕ್ಕೆ ಸಿದ್ದರಾಮಯ್ಯ ಪಶ್ಚಾತ್ತಾಪ: ಜತೆಗಿದ್ದವರು ದಾರಿ ತಪ್ಪಿಸಿದರು ಎಂದ ಮಾಜಿ ಸಿಎಂ?