ಬೆಂಗಳೂರು: ನಾವು ಭ್ರಷ್ಟಾಚಾರ ಆರೋಪ ಮಾಡಿದರೆ ದಾಖಲಾತಿ ಕೊಡಿ ಎಂದು ಕೇಳುತ್ತೀರಿ. ಹಿಂದಿನ ಸರ್ಕಾರ ಭ್ರಷ್ಟಾಚಾರ ಹೆಚ್ಚು ಮಾಡಿದೆ ಎಂದು ಹೇಳುವ ಮೂಲಕ ಡಿಫೆನ್ಸ್ ಮಾಡಿಕೊಳ್ಳುತ್ತಿದ್ದಿರಿ. ಪಿಎಸ್ಐ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಎಡಿಜಿಪಿ ಜೈಲಿಗೆ ಹೋಗಿದ್ದಾರೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ. ಆತನ ಹೆಂಡತಿ, ಮಕ್ಕಳು ನೇರವಾಗಿ ಆಗಿನ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಮೇಲೆ ಆರೋಪ ಮಾಡಿದರು. ವರ್ಗಾವಣೆ, ನೇಮಕಾತಿ ಹೀಗೆ ಎಲ್ಲದರಲ್ಲೂ ಲಂಚ, ಲಂಚ. ಈಗ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಲೋಕಾಯುಕ್ತ ಬಲೆಗೆ (Lokayukta raid) ಬಿದ್ದಿದ್ದಾನೆ. ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಪ್ರತಿ ಹಗರಣದಲ್ಲೂ ನಮಗೆ ಸಾಕ್ಷಿ ಬೇಕು, ಸಾಕ್ಷಿ ಬೇಕು ಎಂದು ಕೇಳುತ್ತೀರಲ್ಲವೇ? ನಿಮಗೆ ಇನ್ನೂ ಎಷ್ಟು ಸಾಕ್ಷಿ ಬೇಕು? ಕೂಡಲೇ ಶಾಸಕ ವಿರೂಪಾಕ್ಷಪ್ಪ ಅವರನ್ನು ಬಂಧಿಸಿ. ನಿಮಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಟ್ಟು ಹೊರಡಿ. ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಲಂಚಾವತಾರ ಬಯಲಾಗಿರುವ ಬೆನ್ನಲ್ಲೇ ಬೀದಿಗಿಳಿದಿರುವ ಕಾಂಗ್ರೆಸ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಸಿಎಂ ಮನೆಗೆ ಮುತ್ತಿಗೆ ಹಾಕಲು ಯತ್ನ ಮಾಡಿತು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಈ ಪ್ರಕರಣಕ್ಕೂ ಎವಿಡೆನ್ಸ್ ಬೇಕು ಎಂದು ಕೇಳಿದರೆ ನಗೆಪಾಟಲು ಅಲ್ವಾ? ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: Antibiotics Use: ಜ್ವರ-ಕೆಮ್ಮು ಬಂದಾಕ್ಷಣ ಆ್ಯಂಟಿಬಯೋಟಿಕ್ ಸೇವಿಸಬೇಡಿ ಎಂದ ಐಎಂಎ; ವೈದ್ಯರಿಗೂ ಸೂಚನೆ
ಮಾನ, ಮರ್ಯಾದೆ ಇದೆಯಾ?
ಸಿಂಗಲ್ ಲಾಟರಿ ಪ್ರಕರಣದಲ್ಲಿ ದೇವೇಗೌಡರು ಆರೋಪ ಮಾಡಿದ ತಕ್ಷಣ ನಾನು ಆ ಪ್ರಕರಣವನ್ನು ಸಿಬಿಐಗೆ ವಹಿಸಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಹಿಂದು ಕಾರ್ಯಕರ್ತ ಪರೇಶ್ ಮೇಸ್ತಾ ಸಾವಿನ ಪ್ರಕರಣವನ್ನು ಕೊಲೆ ಎಂದು ಬಿಂಬಿಸಲಾಯಿತು. ಈ ಬಗ್ಗೆ ಕೂಗು ಹೆಚ್ಚಾದಾಗ ಕೂಡಲೇ ನಾನು ಆ ಪ್ರಕರಣವನ್ನು ಸಿಬಿಐಗೆ ವಹಿಸಿದೆ. ಬೊಮ್ಮಾಯಿ ಅವರೇ ನಿಮಗೆ ಮಾನ, ಮರ್ಯಾದೆ ಇದೆಯಾ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರದವರು ಸಚಿವರಿಗೆ ದುಡ್ಡು ವಸೂಲಿ ಮಾಡಲು ಟಾರ್ಗೆಟ್ ಕೊಟ್ಟಿದ್ದಾರೆ. ಬಿಜೆಪಿಯವರು ಒಂದು ವಿಧಾನಸಭಾ ಕ್ಷೇತ್ರಕ್ಕೆ ನೂರು ಕೋಟಿ ಖರ್ಚು ಮಾಡಿದರೂ ಅಚ್ಚರಿ ಇಲ್ಲ. ಜನರು ಇವರಿಗೆ ಪಾಠ ಕಲಿಸಬೇಕು. ಬೊಮ್ಮಾಯಿ ನಿಮಗೆ ಮಾನ, ಮರ್ಯಾದೆ ಇದ್ದರೆ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಕೂಡಲೇ ಬಂಧಿಸಿ. ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡರೆ ಅದು ದಾಖಲಾತಿ ಅಲ್ಲವೇ? ನೈತಿಕತೆ ಮೇಲೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಭಷ್ಟ, ಸುಳ್ಳು ಸರ್ಕಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ ವಿಡಿಯೊ ಇಲ್ಲಿದೆ
ಗಡಿಪಾರು ಆಗಿದ್ದ ಶಾರಿಂದ ನಾವು ಕಲಿಯಬೇಕಾ?
ಸಿದ್ದರಾಮಯ್ಯ ಸರ್ಕಾರವು ಕಾಂಗ್ರೆಸ್ ಹೈಕಮಾಂಡ್‌ನ ಎಟಿಎಂ ಆಗಿತ್ತು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಮಿಸ್ಟರ್ ಶಾ ಈಗ ಏನು ಹೇಳ್ತೀರಿ? ಎಷ್ಟು ಸುಳ್ಳು ಹೇಳ್ತೀರಿ ನೀವು? ಗಡಿಪಾರು ಆದವರಿಂದ ನಾವು ಪಾಠ ಕಲಿಯಬೇಕಾ? ನನ್ನನ್ನು ಮುಗಿಸಲು ಕಾಂಗ್ರೆಸ್‌ನವರು ರೆಡಿ ಆಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ನ ಯಾವ ನಾಯಕರೂ ಏನೂ ಹೇಳಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಎಷ್ಟು ಗೌರವ ಕೊಡಬೇಕು ಅನ್ನೋದು ನನಗೆ ಗೊತ್ತಿದೆ. ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ. ಆಡ್ವಾಣಿ, ಕೇಶುಬಾಯಿ ಪಟೇಲ್, ಬೆಂಗಳೂರಿನಲ್ಲಿ ತೇಜಸ್ವಿನಿ ಅನಂತಕುಮಾರ್‌ಗೆ ಅವಮಾನ ಮಾಡಿದ್ದು ಯಾರು? ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿದ್ದು ಯಾಕೆ? ಈಗ ಯಡಿಯೂರಪ್ಪ ಬಾಯಲ್ಲಿ ತ್ಯಾಗ ಮಾಡಿದೆ ಎಂದು ಹೇಳಿಸುತ್ತಿದ್ದಾರೆ. ಮತಕ್ಕಾಗಿ ಯಡಿಯೂರಪ್ಪ ಅವರನ್ನು ಹೊಗಳುತ್ತಿದ್ದಾರೆ. ಜಾರಿ ನಿರ್ದೇಶನಾಲಯ, ಸಿಬಿಐನಿಂದ ಯಡಿಯೂರಪ್ಪ ಅವರನ್ನು ಹೆದರಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಇದನ್ನೂ ಓದಿ: Lokayukta raid : ರಾಜೀನಾಮೆ ಆಗ್ರಹ; ಸಿಎಂ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ನಾಯಕರ ಬಂಧನ
ಒಂದು ಕ್ಷೇತ್ರಕ್ಕೆ ಬಿಜೆಪಿಯಿಂದ 100 ಕೋಟಿ ರೂ. ಖರ್ಚು- ಸಿದ್ದರಾಮಯ್ಯ ಅವರ ಇನ್ನಷ್ಟು ಮಾತುಗಳ ವಿಡಿಯೊ ಇಲ್ಲಿದೆ
ಎಲೆಕ್ಷನ್ ಸಮೀಪಕ್ಕೆ ಬರುತ್ತಿರುವುದರಿಂದ ಗುತ್ತಿಗೆ ಕೊಟ್ಟು ಹಣ ಪಡೆಯುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಆರು ತಿಂಗಳ ಹಿಂದೆ ಕೊಟ್ಟ ಎಲ್ಲ ಟೆಂಡರ್ ಅನ್ನು ಕ್ಯಾನ್ಸಲ್ ಮಾಡುತ್ತೇವೆ. ಈಗ ಶೇ. 40 ಅಲ್ಲ 53 ಪರ್ಸೆಂಟ್ ಕೊಡಬೇಕೆಂಬ ದೂರಿದೆ. ಈ ದೇಶ ಉಳಿಸಬೇಕು ಅಂದರೆ ಮೊದಲು ಬಿಜೆಪಿಯನ್ನು ಕಿತ್ತು ಹಾಕಬೇಕು. ಸಚಿವ ಅಶ್ವತ್ಥನಾರಾಯಣ ನಾಲಾಯಕ್ ಮಂತ್ರಿ. ಕೊಲೆಗಡುಕರು ಇವರು. ಆ ಮೋದಿ ಇವರಿಗೆ ಬುದ್ಧಿ ಹೇಳಬೇಕಾ ಬೇಡವಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.