ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಹೊರಗಿಟ್ಟು ಕೈ ನಾಯಕರು ಔತನಕೂಟದಲ್ಲಿ ಚರ್ಚೆ ನಡೆಸಿದ್ದಾರೆ. ಡಿಕೆಶಿ ಮನೆ ಪಕ್ಕದಲ್ಲಿಯೇ ಇದ್ದರೂ ಅವರಿಗೆ ಆಹ್ವಾನ ನೀಡದೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವರು ಸಭೆ (Karnataka Politics) ನಡೆಸಿರುವುದು ಕುತೂಹಲ ಮೂಡಿಸಿದೆ. ಈ ಮೂಲಕ ಅಧಿಕಾರ ಹಂಚಿಕೆಯ 50-50 ಫಾರ್ಮುಲಾ ಬಗ್ಗೆ ಮಾತನಾಡುತ್ತಿರುವ ಡಿ.ಕೆ. ಶಿವಕುಮಾರ್ ಆಪ್ತ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ ಎನ್ನಲಾಗುತ್ತಿದೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಸದಾಶಿವನಗರದ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವರ ಚರ್ಚೆ ನಡೆದಿದೆ. ಸಿಎಂ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ ಅವರಿಗೆ ರಾತ್ರಿ ಭೋಜನಕ್ಕೆ ಪರಮೇಶ್ವರ್ ಆಹ್ವಾನ ನೀಡಿದ್ದರು. ಈ ವೇಳೆ ಪ್ರಸ್ತುತ ರಾಜಕಾರಣ, ಪಕ್ಷದೊಳಗಿನ ಭಿನ್ನಾಭಿಪ್ರಾಯ, ನಿಗಮ ಮಂಡಳಿ ಅಧ್ಯಕ್ಷರ ನೇಮಕ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
ಇದನ್ನೂ ಓದಿ | Namma Metro: ನಮ್ಮ ಮೆಟ್ರೋಗೆ ಬಸವೇಶ್ವರರ ಹೆಸರಿಡಲು ಸಿಎಂ ಜತೆ ಚರ್ಚೆ: ಎಂ.ಬಿ. ಪಾಟೀಲ್
ಇನ್ನು ಬೆಳಗಾವಿ ರಾಜಕೀಯಕ್ಕೆ ಕೈ ಹಾಕಿದ್ದಕ್ಕೆ ಡಿಕೆಶಿ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಮುನಿಸಿಕೊಂಡಿದ್ದಾರೆ. ಹೀಗಾಗಿ ಅವರನ್ನು ಸಮಾಧಾನಪಡಿಸಲು ಔತನಕೂಟ ಏರ್ಪಡಿಸಲಾಗಿತ್ತು ಎನ್ನಲಾಗುತ್ತಿದೆ. ಮತ್ತೊಂದೆಡೆ 50-50 ಫಾರ್ಮುಲಾ ಎನ್ನುತ್ತಿರುವ ಡಿಕೆಶಿ ಆಪ್ತ ಶಾಸಕರ ಹೇಳಿಕೆಗಳಿಗೆ ಸಭೆ ಮೂಲಕ ಸಿಎಂ ಚೆಕ್‌ಮೇಟ್ ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಸಚಿವರ ಗುಪ್ತ ಮೀಟಿಂಗ್ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.