Site icon Vistara News

ಸಿಎಂ ಕುರ್ಚಿಗಾಗಿ ಅಪ್ರಬುದ್ಧ ರಾಹುಲ್‌ಗೆ ಉಧೋ ಉಧೋ ಎನ್ನುವ ಸಿದ್ದರಾಮಯ್ಯ: ಪ್ರಲ್ಹಾದ್‌ ಜೋಶಿ

Siddaramaiah and Pralhad Joshi

ಬೆಂಗಳೂರು: ಸಿದ್ದರಾಮಯ್ಯ ಅವರೇ ಕರ್ನಾಟಕದಲ್ಲಿ ಗೆದ್ದ ಮಾತ್ರಕ್ಕೆ ಇಡೀ ದೇಶವನ್ನೇ ಗೆಲ್ಲುತ್ತೇವೆ ಎಂಬ ಭ್ರಮೆಯಿಂದ ಮೊದಲು ಹೊರ ಬನ್ನಿ. ಸುಳ್ಳೇ ನಿಮ್ಮ ಮನೆ ದೇವರಾಗಿದ್ದು, ಸುಳ್ಳಿನ ಮೇಲೆ ರಾಜಕಾರಣ ಮಾಡುವುದು ಕಾಂಗ್ರೆಸ್‌ನ ಇತಿಹಾಸವೇ ಆಗಿದೆ. ಸಿದ್ದರಾಮಯ್ಯನವರೇ (Siddaramaiah) ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲೆಂದು ರಾಹುಲ್ ಗಾಂಧಿಯಂತಹ ಅಪ್ರಬುದ್ಧ ನಾಯಕನಿಗೆ ಉಧೋ..ಉಧೋ ಎನ್ನುವ ನಿಮಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ? ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿರುಗೇಟು ನೀಡಿದ್ದಾರೆ.

ಮೋದಿ ನಿಜವಾದ ರಾಮ ಭಕ್ತರಾಗಿದ್ದರೆ ಅಯೋಧ್ಯೆ ರಾಮ ಮಂದಿರದಲ್ಲಿ ನಿಂತು ಪ್ರಮಾಣ ಮಾಡಲಿ ಎಂಬ ಸಿಎಂ ಸಿದ್ದರಾಮಯ್ಯ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಅವರು, ಗಾಜಿನ ಮನೆಯಲ್ಲಿ ಇದ್ದುಕೊಂಡು ಬೇರೆಯವರ ಮನೆಗೆ ಕಲ್ಲು ತೂರುವುದು ಕಾಂಗ್ರೆಸ್ ಹಳೆಯ ಚಾಳಿ. ಅದನ್ನೇ ನೀವೂ ಮುಂದುವರೆಸುತ್ತಿದ್ದೀರಿ. ಇದು ಶೋಭೆ ತರುವಂಥದ್ದಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ | Ram Mandir: ಪ್ರಧಾನಿ ಮೋದಿಯನ್ನು ರಾಮನಿಂದ ಚೀನಾವರೆಗೆ ಎಳೆದು ತಂದ ಸಿದ್ದರಾಮಯ್ಯ!

ಚುನಾವಣಾ ಪೂರ್ವ ನೀಡಿದ ಆಶ್ವಾಸನೆಗಳನ್ನು ಪೂರೈಸಲಾಗದ ನಿಮಗೆ ಪ್ರಧಾನಿಯವರನ್ನು ಟೀಕಿಸುವ ನೈತಿಕತೆ ಇಲ್ಲ ಎಂದಿರುವ ಪ್ರಲ್ಹಾದ್‌ ಜೋಶಿ ಅವರು, 1962ರ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ಸೈನಿಕರಿಗೆ ಸರಿಯಾದ ಶಸ್ತ್ರಾಸ್ತ್ರ, ಬೂಟುಗಳನ್ನೂ ಕೊಡದೇ ಸಾಯಲು ಬಿಟ್ಟಿದ್ದು ನಿಮ್ಮ ಕಾಂಗ್ರೆಸ್ ಪಕ್ಷವೇ ಎಂದು ಸಿಎಂಗೆ ತಿರುಗು ಬಾಣ ಬಿಟ್ಟಿದ್ದಾರೆ.

34000 ಚದರ ಕಿಲೋಮೀಟರ್ ಭಾರತದ ಅಕ್ಸಾಯ್ ಚಿನ್ ಅನ್ನು ಚೀನಾ ತೆಕ್ಕೆಗೆ ಹಾಕಿದ್ದು ಜವಹಾರ್ ಲಾಲ್ ನೆಹರು ಅವರು ಪ್ರಧಾನಿಯಾಗಿದ್ದಾಗ ಎಂಬುದನ್ನು ಮರೆಯಬೇಡಿ. ಅಂದು ಟಿಬೆಟ್ ಪ್ರಾಂತ್ಯ ಚೀನಾದ ಕೈವಶವಾಗುವಂತೆ ಮಾಡಿದ್ದು, ಇಂದು ಚೀನಾವನ್ನು ನಮ್ಮ ನೆರೆ ರಾಷ್ಟ್ರವನ್ನಾಗಿ ಮಾಡಿದ್ದು ನಿಮ್ಮ ಕಾಂಗ್ರೆಸ್ ಘನ ಸರ್ಕಾರವೇ ಅಲ್ಲವೇ? ಎಂದು ಜೋಶಿ ಪ್ರಶ್ನಿಸಿದ್ದಾರೆ.

ಸೈನಿಕರಿಗೆ, ದೇಶಕ್ಕೆ ಅಗೌರವ ತೋರುವುದು ನಿಮ್ಮಗಳ ಅನುವಂಶಿಕ ಗುಣ ಮತ್ತು ನಮ್ಮ ದೌರ್ಭಾಗ್ಯವಾಗಿದೆ. ಸರ್ಜಿಕಲ್ ಸ್ಟ್ರೈಕ್ ಆದಾಗಲೂ ಸಾಕ್ಷಿ ಕೇಳಿದ ಮಹಾತ್ಮರು ನೀವು. ಇನ್ನು ಚೀನಾ ವಿಚಾರವಾಗಿ ಮೋದಿ ಸರ್ಕಾರದ ದಿಟ್ಟ ನಿಲುವುಗಳನ್ನು ನಿಮ್ಮಂಥ ಮೂಢರಿಂದ ಒಪ್ಪಲು ಸಾಧ್ಯವೇ? ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ | Ram Mandir: ಅಲ್ಲಾ ಹು ಅಕ್ಬರ್‌ ಎಂದು ಕೂಗಿದ ಮಹಿಳೆಯನ್ನು ಬಂಧಿಸಿ: ಕೆ.ಎಸ್.‌ ಈಶ್ವರಪ್ಪ ಆಗ್ರಹ

ಇನ್ನು ಸಹಕಾರಿ ತತ್ವಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಹಲವಾರು ಬದಲಾವಣೆ ಮಾಡಿ ನೀತಿ ಆಯೋಗದ ಮೂಲಕ ಜಾರಿಗೊಳಿಸಿದೆ. ಬರ ಪರಿಹಾರ ನಿಧಿ ಹಂಚಿಕೆಯಲ್ಲೂ ಕೇಂದ್ರ ಸರ್ಕಾರ ಯಾವುದೇ ತಾರತಮ್ಯ ತೋರಿಲ್ಲ. ಅದು ನಿಮಗೂ ತಿಳಿದಿರುವ ವಿಚಾರವೇ. ಆದರೆ ಸ್ವಾರ್ಥಕ್ಕೆ ಕಂತೆ ಕಂತೆ ಸುಳ್ಳುಗಳನ್ನು ಹೇಳುತ್ತಿದ್ದೀರಿ ಎಂದು ಜೋಶಿ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Exit mobile version