Site icon Vistara News

ಸಿದ್ದರಾಮಯ್ಯ, ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು : ಸಿ.ಟಿ.ರವಿ ಟೀಕೆ

ಸಿ.ಟಿ.ರವಿ

ಚಿಕ್ಕಮಗಳೂರು: ಸಿದ್ದರಾಮಯ್ಯ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು. ಹಾಗೆಯೇ ಸತ್ಯ ಮತ್ತು ಅವರು ಎಣ್ಣೆ-ಸಿಗೇಕಾಯಿ ಇದ್ದಂತೆ. ಸುಳ್ಳು ಹೇಳುವುದರಲ್ಲಿ ಅವರಂತಹ ನಿಷ್ಣಾತರು ಬೇರೆ ಯಾರೂ ಇಲ್ಲ, ಸುಳ್ಳಿಗೆ ಪ್ರಶಸ್ತಿ ನೀಡುವುದಾದರೆ ಸಿದ್ದರಾಮಯ್ಯ ಬಿಟ್ಟು ಬೇರೆ ಯಾರಿಗೂ ಸಿಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಪ್ರಧಾನಿ ಮೋದಿ ರಾಜ್ಯದಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ಬರಲಿಲ್ಲ, ಕೊರೊನಾ ಸಂದರ್ಭದಲ್ಲಿ ಆಕ್ಸಿಜನ್ ಪೂರೈಸಲಿಲ್ಲ, ಈಗ ಯೋಗ ಮಾಡಲು ಬಂದಿದ್ದಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ನಗರದಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ ರವಿ “”ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿದ್ದಾಗ ಆಕ್ಸಿಜನ್ ಪ್ಲಾಂಟ್ ಹಾಕಿದ್ದರಾ?, ರಾಜ್ಯದ ಮೈಸೂರು, ಸಿದ್ದರಾಮಯ್ಯ ಪ್ರತಿನಿಧಿಸುವ ಬದಾಮಿ ಕ್ಷೇತ್ರ ಸೇರಿ ವಿವಿಧ ಜಿಲ್ಲಾ ಹಾಗೂ ತಾಲೂಕು ಆಸ್ಪತೆಗಳಲ್ಲಿ ಪಿಎಂ ಕೇರ್ಸ್‍ ನಿಧಿಯಲ್ಲಿ ಆಕ್ಸಿಜನ್‌ ಪ್ಲಾಂಟ್‌ ನಿರ್ಮಿಸಲು ಪ್ರಧಾನಿ ತ್ವರಿತ ನಿರ್ಧಾರ ಕೈಗೊಂಡರು. ಇಲ್ಲವಾದರೆ ಸಾವಿನ ಪ್ರಮಾಣ 10 ಪಟ್ಟು ಹೆಚ್ಚಾಗುತ್ತಿತ್ತುʼʼ ಎಂದರು.

9 ತಿಂಗಳಲ್ಲಿ ಎಲ್ಲರಿಗೂ ಎರಡು ಡೋಸ್ ಲಸಿಕೆ ಸಿಕ್ಕಿದೆ. ಸಿದ್ದರಾಮಯ್ಯ ಏನು ಲಸಿಕೆ ಹಾಕಿಸಿಕೊಂಡಿಲ್ವಾ? ಅವರು ಎರಡು ಡೋಸ್‌ ಹಾಕಿಸಿಕೊಂಡಿದ್ದಾರೆ. ಲಸಿಕೆ ಸಿಗದಿದ್ದರೆ ಅವರ ಪರಿಸ್ಥಿತಿ ಏನಾಗುತ್ತಿತ್ತು ಎಂಬುವುದನ್ನು ಊಹಿಸಿಕೊಳ್ಳಲಿ ಎಂದು ಸಿ ಟಿ ರವಿ ಕಿಡಿ ಕಾರಿದ್ದಾರೆ.

ಮಹಾ ಮೈತ್ರಿ ಸರ್ಕಾರದ ಶಾಸಕರು ಭ್ರಮನಿರಸನರಾಗಿದ್ದಾರೆ

ಜನ ಮಾತ್ರವಲ್ಲ, ಮಹಾರಾಷ್ಟ್ರ ಮೈತ್ರಿ ಸರ್ಕಾರದ ಬಗ್ಗೆ 3 ಪಕ್ಷದ ಶಾಸಕರು ಭ್ರಮನಿರಸನರಾಗಿದ್ದಾರೆ. ಶಾಸಕರೇ ಹತಾಶರಾಗಿ ಸರ್ಕಾರ ತೊಲಗಲಿ ಎಂದು ಬಯಸಿದ್ದಾರೆ. ಇದು ಯಾವ ತಾಳಮೇಳವೂ ಇಲ್ಲದ ಅಪವಿತ್ರ ಮೈತ್ರಿ ಸರ್ಕಾರ, ಸೈದ್ಧಾಂತಿಕವಾಗಿಯೂ ಮಿಸ್ ಮ್ಯಾಚ್ ಡಿಎನ್‌ಎ ಸರ್ಕಾರ ಎಂದು ಮಹಾರಾಷ್ಟ್ರದಲ್ಲಿ ಆಡಳಿತ ಪಕ್ಷ ಶಿವಸೇನೆ ಶಾಸಕರೇ ಬಂಡಾಯವೆದ್ದಿರುವುದನ್ನು ಉಲ್ಲೇಖಿಸಿ ಸಿ.ಟಿ.ರವಿ ಹೇಳಿದರು.

ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಸಹಕರಿಸಿದ ಎಲ್ಲ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಸರ್ಕಾರ ಬರಬೇಕೆಂದು ಚುನಾವಣೆ ಸಂದರ್ಭದಲ್ಲೇ ಅಪೇಕ್ಷೆ ಇತ್ತು. 2019ರಲ್ಲಿ ಜನ ಮತ ಹಾಕಿದ್ದು ಮೋದಿ, ಫಡ್ನವಿಸ್ ನೇತೃತ್ವದ ಸರ್ಕಾರದ ಸಾಧನೆಗೆ. ಆದರೆ ಮಹಾರಾಷ್ಟ್ರದಲ್ಲಿ ತತ್ವಹೀನ ಸರ್ಕಾರಕ್ಕೆ ಸಿದ್ಧಾಂತ, ಅಭಿವೃದ್ಧಿ ಯೋಜನೆಗಳು ಇಲ್ಲವೇ ಇಲ್ಲ. ಈ ಸರ್ಕಾರ ಬೀಳಲಿ ಅಂತ ಜನ, ಶಾಸಕರು ಬಯಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಮಹಾರಾಷ್ಟ್ರದ ಪ್ರಭಾರರಾಗಿ ನಮ್ಮ ಪಕ್ಷದ ನಾಯಕರ ಜತೆ ಸಂಪರ್ಕದಲ್ಲಿದ್ದೇನೆ ಎಂದರು.

ಇದನ್ನೂ ಓದಿ | Modi in Karnataka | ಸಂಕಷ್ಟದಲ್ಲಿದ್ದಾಗ ಬಾರದ ಪ್ರಧಾನಿ ಯೋಗ ಮಾಡಲು ಬಂದಿದ್ದಾರೆ: ಸಿದ್ದರಾಮಯ್ಯ ಗೇಲಿ

Exit mobile version