ಕೊಪ್ಪಳ: ತಾಲೂಕಿನ ವನಬಳ್ಳಾರಿ ಗ್ರಾಮದ ಮದುವೆಯೊಂದರಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ನೋಡಲು ಸಾರ್ವಜನಿಕರು, ಅಭಿಮಾನಿಗಳು (Siddaramaiah Fans) ಮುಗಿಬಿದ್ದಿದ್ದು, ಲಘು ಲಾಠಿ ಪ್ರಹಾರ ನಡೆದಿದೆ.
ಮಧ್ಯಾಹ್ನ 1 ಗಂಟೆಗೆ ಆಗಮಿಸಬೇಕಿದ್ದ ಸಿದ್ದರಾಮಯ್ಯ ಅವರು ಸುಮಾರು 2.45ರ ವೇಳೆಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದರು. ಈ ವೇಳೆ ಅವರನ್ನು ನೋಡಲು ಹೆಲಿಪ್ಯಾಡ್ ಸುತ್ತ ಸಾವಿರಾರು ಜನರು ಸೇರಿದ್ದರು. ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದಂತೆ ಜನರು ಹೆಲಿಪ್ಯಾಡ್‌ಗೆ ನುಗ್ಗಿದರು.
ಲಘು ಲಾಠಿ ಪ್ರಹಾರ
ಜನರು ಹೀಗೆ ಏಕಾಏಕಿ ನುಗ್ಗುತ್ತಾರೆಂಬ ಕಲ್ಪನೆಯಲ್ಲಿಯೇ ಇರದ ಪೊಲೀಸರು ಕ್ಷಣ ಕಾಲ ಗಾಬರಿಗೊಂಡರಾದರೂ ನಿಯಂತ್ರಣ ಮಾಡಲು ಮುಂದಾದರು. ಆದರೆ, ಈ ವೇಳೆ ನೂಕುನುಗ್ಗಲು ಉಂಟಾಯಿತು. ಒಂದು ಹಂತದಲ್ಲಿ ರೋಸಿಹೋದ ಪೊಲೀಸರು, ಪರಿಸ್ಥಿತಿಯನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದರು. ಆದರೆ, ಇದಕ್ಕೂ ಕ್ಯಾರೆ ಎನ್ನದ ಜನ ಸಿದ್ದರಾಮಯ್ಯ ಅವರ ಬಳಿ ನುಗ್ಗಿದರು.
ಈ ವೇಳೆ ಸಿದ್ದರಾಮಯ್ಯ ಅವರು ಕಾರಿನ ಬಳಿ ಹೋಗಲು ಸಮಸ್ಯೆಯಾಯಿತು. ಜನರ ಮಧ್ಯೆಯೇ ಪೊಲೀಸರು ಅವರನ್ನು ಕಾರಿನ ಬಳಿಗೆ ಕರೆದೊಯ್ದರು. ಈ ವೇಳೆ ಸಿದ್ದರಾಮಯ್ಯ ಪರ ಘೋಷಣೆಗಳು ಕೇಳಿಬಂದವು. ಬಳಿಕ ಮದುವೆ ಮಂಟಪಕ್ಕೆ ಕಾರಿನ ಮೂಲಕ ಸಿದ್ದರಾಮಯ್ಯ ತೆರಳಲು ಅನುವಾದರು. ಆಗಲೂ ಕಾರಿಗೆ ಅಡ್ಡಲಾಗಿ ನಿಂತಿದ್ದ ಜನ ಕಾರನ್ನು ಮುಂದಕ್ಕೆ ಬಿಡದ ರೀತಿಯಲ್ಲಿ ಜಮಾಯಿಸಿದ್ದರು. ಕಾರಿನಲ್ಲಿ ಜನರತ್ತ ಕೈಬೀಸಿ ಸಿದ್ದರಾಮಯ್ಯ ಅಲ್ಲಿಂದ ತೆರಳಿದರು.
ಇದನ್ನೂ ಓದಿ | Mangalore blast | ಮಂಗಳೂರು ಸ್ಫೋಟ ಗುಪ್ತಚರ ವೈಫಲ್ಯದ ಫಲ: ಸಿದ್ದರಾಮಯ್ಯ ಆರೋಪ