ದಾವಣಗೆರೆ: ಸಿದ್ದರಾಮಯ್ಯ ಬ್ರಾಹ್ಮಣ ವಿರೋಧಿ ಎಂದು ಹೇಳುತ್ತಾರೆ. ಆದರೆ, ಬಡ ಅರ್ಚಕರಿಗೆ ವೇತನ ಕೊಟ್ಟವರು, ಅನುದಾನ ನೀಡಿದವರು ಸಿದ್ದರಾಮಯ್ಯ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂ ರಾವ್ ನೆನಪಿಸಿಕೊಂಡರು.
ಸಮಾವೇಶದಲ್ಲಿ ಮಾತನಾಡಿದ ಅವರು, ಅರ್ಚಕರು ಕಷ್ಟದಲ್ಲಿದ್ದಾರೆಂದು ನಾನು ಸಿದ್ದರಾಮಯ್ಯ ಅವರಿಗೆ ಹೇಳಿದೆ. ಅವರು ಬಡ ಅರ್ಚಕರಿಗೆ ಅನುದಾನ ಕೊಡುವ ಯೋಜನೆ ಪ್ರಕಟಿಸಿದರು. ತನಗೆ ಜಾತಿ ಭೇದಭಾವವಿಲ್ಲವೆಂದು ಸ್ಪಷ್ಟಪಡಿಸಿದರು ಎಂದರು. ʻʻಈ ಸಮಾವೇಶ ಕರ್ನಾಟಕದ ರಾಜಕಾರಣ ದಿಕ್ಕು ಬದಲಿಸುವ ಕಾರ್ಯಕ್ರಮ. ರಾಜ್ಯದ ಜನತೆ ಸಿದ್ದರಾಮಯ್ಯಗೆ ಆಶೀರ್ವಾದ ಮಾಡಬೇಕು. ಸಿದ್ದರಾಮಯ್ಯ ನಾಯಕತ್ವದಲ್ಲೇ ಸರ್ಕಾರವನ್ನು ತರೋಣʼʼ ಎಂದು ಹೇಳುವ ಮೂಲಕ ʻಸಿಎಂ ಸಿದ್ದರಾಮಯ್ಯʼ ಅಭಿಯಾನಕ್ಕೆ ದನಿ ಎತ್ತಿದರು.
ʻʻಸಿದ್ದರಾಮಯ್ಯ ಸಿಎಂ ಆಗಿ, ಮಂತ್ರಿಯಾಗಿ, ಡಿಸಿಎಂ ಆಗಿ, ವಿರೋಧ ಪಕ್ಷದ ನಾಯಕರಾಗಿ ಸಿದ್ಧಾಂತದಂತೆ ನಡೆದುಕೊಂಡಿದ್ದಾರೆ. ಸಿಎಂ ಆದ ಒಂದೇ ಗಂಟೆಯಲ್ಲೇ ಅನ್ನಭಾಗ್ಯ ಯೋಜನೆ ಕೊಟ್ಟರು. ಆಗ ನಾನು ಆರೋಗ್ಯ ಸಚಿವನಾಗಿದ್ದೆ. ಇದನ್ನು ಜಾರಿ ಮಾಡುವುದು ಅಷ್ಟು ಸುಲಭವಲ್ಲ ಎಂದು ಹೇಳಿದ್ದೆ. ಅದಕ್ಕೆ ಅವರು ಯಾರೇನೇ ಅಂದರೂ ಹೇಗೇ ಅದರೂ ಇದು ಜಾರಿಯಾಗಲೇಬೇಕು ಎಂದು ಸೂಚನೆ ನೀಡಿದರುʼʼ ಎಂದು ನೆನಪು ಮಾಡಿಕೊಂಡರು.
ಶಕ್ತಿ ತುಂಬೋಣ ಎಂದ ಸತೀಶ್
ಸಮಾವೇಶದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ರಾಜ್ಯದ ಮಧ್ಯಭಾಗದಲ್ಲಿ ಧೀಮಂತ ನಾಯಕರ ಹುಟ್ಟುಹಬ್ಬ ಆಚರಣೆ ನಡೆಯುತ್ತಿದೆ. ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗಿದ್ದಾರೆ. ಇದಕ್ಕೆ ಕಾರಣ ಸಿದ್ದರಾಮಯ್ಯನವರ ಬದ್ಧತೆ, ಅವರು ಕೊಟ್ಟ ಯೋಜನೆ ಎಂದರು.
ʻʻಎಲ್ಲ ವರ್ಗಗಳ ಪರವಾಗಿ ಕೆಲಸ ಮಾಡಿದ ಏಕೈಕ ಸಿಎಂ ಸಿದ್ದರಾಮಯ್ಯ. ಸಿದ್ದರಾಮಯ್ಯಗೆ ಎಲ್ಲರೂ ಶಕ್ತಿ ತುಂಬುವ ಕೆಲಸ ಮಾಡಬೇಕು. ಈ ಶಕ್ತಿ ರಾಜಕೀಯವಾಗಿ ಬದಲಾವಣೆ ಆಗಬೇಕುʼʼ ಎಂದು ಹೇಳಿದರು.
ಸಿದ್ದರಾಮಯ್ಯ ಮಾದರಿ ಎಂದ ಖಾದರ್
ʻʻಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ, ಗಾಂಧೀಜಿ ಕಂಡ ಕನಸು ನನಸು ಎರಡನ್ನೂ ನನಸು ಮಾಡಿದ್ದು ಸಿದ್ದರಾಮಯ್ಯʼʼ ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷದ ಉಪನಾಯಕರಾಗಿರುವ ಯು.ಟಿ. ಖಾದರ್ ಹೇಳಿದರು. ಸಿದ್ದರಾಮಯ್ಯ ಅವರ ಜೀವನ, ವ್ಯಕ್ತಿತ್ವ ಎಲ್ಲರಿಗೂ ಮಾದರಿ. ಅವರು ಎಲ್ಲ ಸಮುದಾಯಗಳಿಗೆ ಕಾರ್ಯಕ್ರಮಗಳನ್ನು ನೀಡಿದ್ದಾರೆ ಎಂದರು.
ʻʻಅನ್ನಭಾಗ್ಯ ಕಾರ್ಯಕ್ರಮವನ್ನು ಹಲವರು ಟೀಕೆ ಮಾಡಿದ್ದರು. ಎಲ್ಲ ಟೀಕೆಗಳ ನಡುವೆ ಸಿದ್ದರಾಮಯ್ಯ ಯೋಜನೆ ಜಾರಿ ಮಾಡಿದರು. ಜನರು ಸೋಂಬೇರಿಗಳಾಗುತ್ತಾರೆಂದು ವಿಪಕ್ಷಗಳು ಟೀಕಿಸಿದವು. ಆಗ ಸಿದ್ದರಾಮಯ್ಯ ʻಹೌದು ಇಷ್ಟು ದಿನ ಅವರು ದುಡಿದರು, ಈಗ ನೀವು ದುಡಿಯಿರಿʼ ಎಂದು ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದರು ಎಂದು ನೆನಪು ಮಾಡಿಕೊಂಡರು.
ಇದನ್ನೂ ಓದಿ| ಮತ್ತೆ ವೈದ್ಯರಾದ MLA ಯತೀಂದ್ರ ಸಿದ್ದರಾಮಯ್ಯ: ಕುತ್ತಿಗೆಯಲ್ಲಿ ಸ್ಟೆಥೋಸ್ಕೋಪ್ ಧರಿಸಿ ಓಡಾಟ