Site icon Vistara News

Karnataka CM: ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಲೀಡರ್‌, ರಾಜ್ಯಪಾಲರಿಗೆ ಸರ್ಕಾರ ರಚನೆಯ ಹಕ್ಕು ಮಂಡನೆ

Siddaramaiah

Siddaramaiah

ಬೆಂಗಳೂರು: ಪೂರ್ವನಿರ್ಧಾರ ಹಾಗೂ ನಿರೀಕ್ಷೆಯಂತೆಯೇ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವರನ್ನು ಅವಿರೋಧವಾಗಿ (Karnataka CM) ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿರುವ ಇಂದಿರಾ ಗಾಂಧಿ ಭವನದಲ್ಲಿ ನಡೆದ ಸಭೆಯಲ್ಲಿ ಅವಿರೋಧವಾಗಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ಶಾಸಕಾಂಗ ಪಕ್ಷದ ನಾಯಕನಾಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡುವ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ನಿರ್ಣಯ ಮಂಡಿಸಿದರು. ಡಿಕೆಶಿ ಮಂಡಿಸಿದ ನಿರ್ಣಯಕ್ಕೆ ಎಲ್ಲ ಶಾಸಕರು ಸರ್ವಾನುಮತದಿಂದ ಅನುಮೋದನೆ ನೀಡಿದರು. ಇದರೊಂದಿಗೆ ರಾಜ್ಯದಲ್ಲಿ ಕಳೆದ ನಾಲ್ಕೈದು ದಿನದಿಂದ ನಡೆಯುತ್ತಿದ್ದ ಸಿಎಂ ಆಯ್ಕೆಯ ಕಗ್ಗಂಟು ಅಧಿಕೃತವಾಗಿ ಬಗೆಹರಿದಂತಾಗಿದೆ.

ಸರ್ಕಾರ ರಚನೆಯ ಹಕ್ಕು ಮಂಡನೆ

ಶಾಸಕಾಂಗ ಪಕ್ಷದ ಸಭೆಯ ಬಳಿಕ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಿಯೋಜಿತ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನಿಯೋಗವು ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರನ್ನು ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಿದರು.

ಸಿದ್ದರಾಮಯ್ಯಗೆ ಬೊಮ್ಮಾಯಿ ಅಭಿನಂದನೆ

ಇದಕ್ಕೂ ಮುನ್ನ, ಶಾಸಕಾಂಗ ಪಕ್ಷದ ನಾಯಕನಾಗಿ ಸಿದ್ದರಾಮಯ್ಯ ಅವರ ಹೆಸರನ್ನು ಡಿ.ಕೆ.ಶಿವಕುಮಾರ್‌ ಅವರು ಪ್ರಸ್ತಾಪ ಮಾಡಿದರು. ಡಿಕೆಶಿ ಪ್ರಸ್ತಾವನೆಗೆ ಡಾ.ಜಿ. ಪರಮೇಶ್ವರ್, ಎಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್, ಆರ್.ವಿ. ದೇಶಪಾಂಡೆ, ಲಕ್ಷ್ಮೀ ಹೆಬ್ಬಾಳ್ಕರ್ , ತನ್ವೀರ್ ಸೇಠ್, ಕೆ.ಎಚ್. ಮುನಿಯಪ್ಪ ಅನುಮೋದನೆ ನೀಡಿದರು. ಹಾಗೆಯೇ, ವಿವಿಧ ಸಮುದಾಯಗಳ ನಾಯಕರಿಂದ ಅನುಮೋದನೆ ನೀಡಲಾಯಿತು. ಆ ಮೂಲಕ ಸಮುದಾಯಗಳ ಬೆಂಬಲದಿಂದ ಸಿಎಂ ಆಯ್ಕೆ ಎಂಬ ಸಂದೇಶ ರವಾನೆ ಮಾಡಲಾಯಿತು.

ಇದನ್ನೂ ಓದಿ: Karnataka CM: ಕನ್ನಡಿಗರ ಹಿತರಕ್ಷಣೆಗೆ ನಮ್ಮ ಕೈಗಳು ಒಂದಾಗಿರಲಿವೆ ಎಂದ ಸಿದ್ದರಾಮಯ್ಯ

ಸಭೆಯಲ್ಲಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಸುಶೀಲ್‌ಕುಮಾರ್ ಶಿಂಧೆ, ಬಿ.ಕೆ ಹರಿಪಸ್ರಾದ್ ಸೇರಿ ಹಲವು ನಾಯಕರು ಭಾಗವಹಿಸಿದ್ದರು. ಹಾಗೆಯೇ, ಕಾಂಗ್ರೆಸ್‌ ಶಾಸಕರು, ಸಂಸದರು, ವಿಧಾನಪರಿಷತ್‌ ಕೂಡ ಉಪಸ್ಥಿತರಿದ್ದರು.

Exit mobile version