ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೋಲಾರ ಈಗ ಕೇಂದ್ರ ಬಿಂದುವಾಗಿದೆ. ಎಲ್ಲರ ದೃಷ್ಟಿ ಬಂಗಾರದೂರಿನ ಮೇಲೆ ನೆಟ್ಟಿದೆ. ಯಾಕೆಂದರೆ, ತಾವು ಎಲ್ಲಿಂದ ಸ್ಪರ್ಧಿಸಬೇಕು ಎಂಬ ಲೆಕ್ಕಾಚಾರದಲ್ಲಿರುವ ಮಾಜಿ ಮುಖ್ಯಮಂತ್ರಿ, ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೋಲಾರದ ಮೇಲೆ ಕಣ್ಣಿಟ್ಟಿದ್ದಾರೆ. ಭಾನುವಾರ ಅವರು ತುಂತುರು ಮಳೆಯ ನಡುವೆಯೇ ಕೋಲಾರಕ್ಕೆ ಆಗಮಿಸಲಿದ್ದಾರೆ. ತನ್ನ ಸ್ಪರ್ಧೆಗೆ ಈ ಕ್ಷೇತ್ರ ಸೂಕ್ತವೇ ಎಂಬ ನಿಟ್ಟಿನಲ್ಲಿ ಹಲವು ರೀತಿಯ ಪರೀಕ್ಷೆಗಳನ್ನು ನಡೆಸಲಿದ್ದಾರೆ.
ಅವರು ಹೋಗುವುದು ಒಂದು ದಿನವೇ ಆದರೂ ತಮ್ಮ ಸೂಕ್ಷ್ಮ ತಂತ್ರಗಳಿಂದ ಕೋಲಾರದ ಮತದಾರರ ನಾಡಿಮಿಡಿತ ಅರಿಯಲು ಸಿದ್ದರಾಮಯ್ಯ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಒಂದು ದಿನದ ಭೇಟಿಯಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ ಧರ್ಮ, ದಲಿತ, ಕುರುಬ, ವಾಲ್ಮೀಕಿ ಸಮುದಾಯವನ್ನು ರೀಚ್ ಆಗಲು ಮಾಜಿ ಸಿಎಂ ರೂಪುರೇಷೆ ಸಿದ್ಧಪಡಿಸಿದ್ದಾರೆ.
ಈಗಾಗಲೇ ಖಾಸಗಿ ಸಂಸ್ಥೆಗಳಿಂದ ಸಮೀಕ್ಷೆಗಳನ್ನು ನಡೆಸಿರುವ ಸಿದ್ದರಾಮಯ್ಯ ಆಪ್ತರು ಈ ಕ್ಷೇತ್ರ ಶೇಕಡಾ ೬೦ರಷ್ಟು ಸೇಫ್ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಸಿದ್ದರಾಮಯ್ಯ ಅವರಿಗೆ ಮಾಜಿ ಕೇಂದ್ರ ಮಂತ್ರಿ ಕೆ.ಎಚ್. ಮುನಿಯಪ್ಪ ಅವರ ಬಣದ ಮುನಿಸು ಆತಂಕಕ್ಕೆ ಕಾರಣವಾಗಿಯೇ ಇದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ಟೀಮ್ ಸಿದ್ದು ಬೆಂಬಲಕ್ಕೆ ನಿಂತಿದೆ. ಎರಡೂ ಗುಂಪುಗಳನ್ನು ಸಿದ್ದರಾಮಯ್ಯ ಹೇಗೆ ಸಮದೂಗಿಸಿಕೊಂಡು ಹೋಗುತ್ತಾರೆ ಎನ್ನುವುದರ ಆಧಾರದ ಮೇಲೆ ಸೋಲು ಗೆಲುವಿನ ನಿರ್ಣಯವಾಗಲಿದೆ ಎನ್ನುತ್ತಾರೆ ರಾಜಕೀಯ ತಜ್ಞರು. ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧೆ ಮಾಡಿದರ ಪಕ್ಷದ ಅಲೆ ಜೊತೆ ಸಿದ್ದರಾಮಯ್ಯ ವರ್ಚಸ್ಸಿನ ಮೇಲೆ ಗೆಲ್ಲವಿನ ಲಾಭ ಆಗಬಹುದು ಎಂದು ಲೆಕ್ಕಾಚಾರದಲ್ಲಿ ರಮೇಶ್ ಕುಮಾರ್ ಆಂಡ್ ಟೀಮ್ ಬೆಂಬಲ ನೀಡುತ್ತಿದೆ ಎನ್ನಲಾಗಿದೆ. ಅದಕ್ಕೆ ಕೆ.ಎಚ್. ಮುನಿಯಪ್ಪ ಹೇಗೆ ಸ್ಪಂದಿಸ್ತಾರೆ ಅನ್ನುವುದರ ಮೇಲೆ ನಿಂತಿದೆ ಭವಿಷ್ಯ. ಭಾನುವಾರ ಕೋಲಾರದಲ್ಲಿ ಈ ಎರಡೂ ಬಣಗಳು ಹೇಗೆ ವರ್ತಿಸುತ್ತವೆ, ಒಂದಾಗಿ ನಿಲ್ಲುತ್ತವಾ? ಪರಸ್ಪರ ಪ್ರತ್ಯೇಕವಾಗಿಯೇ ಉಳಿಯುತ್ತವಾ ಎನ್ನುವುದೇ ಸಿದ್ದರಾಮಯ್ಯ ಅವರ ತೀರ್ಮಾನದ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶ.
ಇಂದು ಎಲ್ಲೆಲ್ಲಿ ಸಿದ್ದರಾಮಯ್ಯ ಭೇಟಿ?
-ಶ್ರೀ ಕೋಲಾರಮ್ಮ ದೇವಾಲಯಕ್ಕೆ ಭೇಟಿ
-ಮೆಥೋಡಿಸ್ಟ್ ಚರ್ಚ್‌ಗೆ ಭೇಟಿ
-ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ, ಕಾಲೇಜ್ ಸರ್ಕಲ್
-ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ, ಇಟಿಸಿಎಂ ವೃತ್ತ
-ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ
-ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾಲಾರ್ಪಣೆ, ಬಂಗಾರಪೇಟೆ ವೃತ್ತ
-ಕನಕ ಮಂದಿರಕ್ಕೆ ಭೇಟಿ
-ಯೋಗಿ ಶ್ರೀ ನಾರಾಯಣ ಯತೀಂದ್ರ ಪ್ರತಿಮೆಗೆ ಮಾಲಾರ್ಪಣೆ
-ದರ್ಗಾಕ್ಕೆ ಭೇಟಿ, ಕ್ಲಾಕ್ ಟವರ್
-ನರಸಾಪುರ ಕೆರೆ ವೀಕ್ಷಣೆ
-ಶ್ರೀ ಆಂಜನೇಯ ದೇವಾಲಯಕ್ಕೆ ಭೇಟಿ, ಕುರುಬರಹಳ್ಳಿ ಗೇಟ್, ವೇಮಗಲ್ ರಸ್ತೆ
-ಸೀತಿ ಬೆಟ್ಟದಲ್ಲಿ ಪೂಜಾ ಕಾರ್ಯಕ್ರಮ
-ದಿವಂಗತ ಬೈರೇಗೌಡ ಸಮಾಧಿ ಸ್ಥಳಕ್ಕೆ ಭೇಟಿ, ಗರುಡಾಪಾಳ್ಯ
-ಕಾಂಗ್ರೆಸ್ ಪಕ್ಷದ ಮುಖಂಡರು, ವಿವಿಧ ಸಂಘ ಸಂಸ್ಥೆಗಳ, ಪದಾಧಿಕಾರಿಗಳ ಚರ್ಚೆ
ಎಲ್ಲರ ಜತೆ ಮಾತಾಡಿದ್ದೀನಿ, ತೀರ್ಮಾನ ಹೈಕಮಾಂಡ್‌ಗೆ ಅಂದರು ಸಿದ್ದು
ಮಾಜಿ ಸಿಎಂ ಸಿದ್ದರಾಮಯ್ಯ ಮುಂಬರುವ ೨೦೨೩ರ ವಿಧಾನ ಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲಿ ಎಂದು ಜನರು ಒತ್ತಾಯ ಮಾಡಿದ್ದರ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಗಳನ್ನು ಆಯೋಜಿಸಲಾಗಿದೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಅವರು ಬರುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ ಮಾಜಿ ಸಚಿವ ಕೃಷ್ಣಬೈರೇಗೌಡ. ಎಲ್ಲಿಂದ ಸ್ಪರ್ಧೆ ಮಾಡಬೇಕು ಎನ್ನುವುದು ಸಿದ್ದರಾಮಯ್ಯ ಮತ್ತು ಹೈಕಮಾಂಡ್‌ಗೆ ಬಿಟ್ಟಿದ್ದು ಎಂದೂ ಅವರು ಹೇಳಿದ್ದಾರೆ.
ಕೋಲಾರ ಭೇಟಿಗೆ ಮುನ್ನ ಸಿದ್ದರಾಮಯ್ಯ ಅವರು ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿಯಾಗಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪರಿಶಿಷ್ಟ ಮತಗಳಿರುವುದು, ಅಲ್ಲೊಂದು ಎಸ್ಸಿ-ಎಸ್ಟಿ ಸಮಾವೇಶ ನಡೆಸಬೇಕು ಎನ್ನುವ ಚಿಂತನೆ ಇರುವುದು ಈ ಭೇಟಿಯ ಮುಖ್ಯ ಉದ್ದೇಶ. ನವೆಂಬರ್ ೨೦ರಂದು ಈ ಬಗ್ಗೆ ಪೂರ್ವಭಾವಿ ಸಭೆಗಳನ್ನು ಕರೆಯಲಾಗಿದೆ ಎಂದು ಸಿದ್ದರಾಮಯ್ಯ ಅವರ ಜತೆ ಮಾತುಕತೆ ಆಡಿದ ಬಳಿಕ ಪರಮೇಶ್ವರ್ ತಿಳಿಸಿದ್ದಾರೆ.
ಎಲ್ಲರ ಜತೆ ಮಾತನಾಡಿದ್ದೇನೆ. ಕೆ.ಎಚ್. ಮುನಿಯಪ್ಪ, ರಮೇಶ್ ಕುಮಾರ್ ಅವರು ಜತೆಯಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಕೋಲಾರಕ್ಕೆ ಭೇಟಿ ನೀಡಿದ ಬಳಿಕ ಮೂರ್ನಾಲ್ಕು ಕ್ಷೇತ್ರಗಳ ಹೆಸರನ್ನು ಹೈಕಮಾಂಡ್‌ಗೆ ಕೊಡುತ್ತೇನೆ. ಎಲ್ಲಿಂದ ಸ್ಪರ್ಧೆ ಮಾಡಿ ಅಂತಾರೋ ಅಲ್ಲಿಂದ ಮಾಡುತ್ತೇನೆ ಎನ್ನುವುದು ಸಿದ್ದರಾಮಯ್ಯ ಆಡುತ್ತಿರುವ ಮಾತು.
ಇದನ್ನೂ ಓದಿ | Modi in Bengaluru| ಕೆಂಪೇಗೌಡರ ನೈಜ ಅನುಯಾಯಿ ಕಾಂಗ್ರೆಸ್, ಬಿಜೆಪಿ ಅಲ್ಲ ಎಂದ ಸಿದ್ದರಾಮಯ್ಯ