Site icon Vistara News

Karnataka Elections | ನಾಯಿ ಹೇಳಿಕೆಗೆ ಸಮರ್ಥನೆ, ಇದರಿಂದ ಬೊಮ್ಮಾಯಿಗೇನು ಬೇಜಾರಾಗಿರಲ್ಲ, ಉಳಿದವರದ್ದೇ ಕಿತಾಪತಿ ಎಂದ ಸಿದ್ದು

siddaramaiah

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ನಾಯಿ ಮರಿ ತರ ಇರುತ್ತಾರೆ ಎಂಬ ತಮ್ಮ ಹೇಳಿಕೆಯನ್ನು ಬೇರೆ ಬೇರೆ ಉದಾಹರಣೆಗಳ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡಿದ್ದಾರೆ. ನಾಯಿ ಪದ ಬಳಕೆ ಸಮರ್ಥನೆ ಮಾಡಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು ನನ್ನ ಮತ್ತು ಬೊಮ್ಮಾಯಿ ಸ್ನೇಹ ಸಂಬಂಧ ಚೆನ್ನಾಗಿದೆ. ಅವರಿಗೆ ಇದರಿಂದೇನೂ ಬೇಜಾರೂ ಆಗಿರಲ್ಲ. ಅವರ ಅಕ್ಕಪಕ್ಕ ಇರೋರು ಇದನ್ನು ಬೆಳೆಸುತ್ತಿದ್ದಾರೆ. ಇವರ ವಿಚಾರದಲ್ಲಿ ಬೊಮ್ಮಾಯಿ ಅವರು ಎಚ್ಚರಿಕೆಯಿಂದ ಇದ್ರೆ ಒಳಿತು (Karnataka Elections) ಎಂದು ಹೇಳಿದ್ದಾರೆ ಸಿದ್ದರಾಮಯ್ಯ.

ಹಾಗಿದ್ದರೆ ನಾನು ಹೇಳಿದ್ದೇನು?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರೆದುರು ಮಾತನಾಡುವ ಧೈರ್ಯ ಇಲ್ಲ, ಬೇರೆಯವರ ಧಮ್, ತಾಕತ್ ಪ್ರಶ್ನಿಸುವ ಬೊಮ್ಮಾಯಿಯೇ ಸ್ವತಃ ಮೋದಿಯವರನ್ನು ಕಂಡ್ರೆ ಹೆದರುತ್ತಾರೆ ಎಂಬರ್ಥದಲ್ಲಿ ಮಾತನಾಡಿದ್ದೆ. ಇದನ್ನು ಅನವಶ್ಯಕವಾಗಿ ವಿವಾದ ಮಾಡಲಾಗಿದೆ- ಹೀಗೆಂದು ತಮ್ಮ ಹೇಳಿಕೆಯನ್ನು ಮರುವ್ಯಾಖ್ಯಾನಿಸಿದ್ದಾರೆ ಸಿದ್ದರಾಮಯ್ಯ.

ನಿಂದಿಸುವ ಉದ್ದೇಶ ಇರಲಿಲ್ಲ, ಇದು ಜನಪದ ಸಂಸ್ಕೃತಿ
ಪುಕ್ಕಲು ಸ್ವಭಾವದವರು, ಧೈರ್ಯ ಇಲ್ಲದವರು ಎನ್ನುವ ಅರ್ಥದಲ್ಲಿ ಹಳ್ಳಿ ಭಾಷೆಯಲ್ಲಿ ನಾಯಿ ಮರಿ ಎಂದಿದ್ದೇ ಹೊರತು ಕರ್ನಾಟಕದ ಮುಖ್ಯಮಂತ್ರಿಯನ್ನು ವ್ಯಕ್ತಿಗತವಾಗಿ ನಿಂದಿಸುವ ದುರುದ್ದೇಶ ಖಂಡಿತಾ ಇರಲಿಲ್ಲ. ಪ್ರಾಣಿ-ಪಕ್ಷಿ-ಹೂ-ಹಣ್ಣುಗಳನ್ನು ಅವುಗಳ ಸ್ವಭಾವಗಳ ಸಾಮ್ಯತೆಗೆ ಅನುಗುಣವಾಗಿ ಮನುಷ್ಯರಿಗೆ ಹೋಲಿಸುವುದು ಜನಪದ ಸಂಸ್ಕೃತಿ. ಯಾವ ಪ್ರಾಣಿ-ಪಕ್ಷಿಯೂ ಕೀಳೂ ಅಲ್ಲ, ಮೇಲೂ ಅಲ್ಲ ಎಂದು ಸಿದ್ದರಾಮಯ್ಯ ಟ್ವೀಟ್‌ ವಿವರಣೆ ನೀಡಿದ್ದಾರೆ.

ಹುಲಿಗೆ ಹೋಲಿಸುವುದು, ಟಗರು ಅನ್ನೋದು ಅಪಮಾನವೇ?
ಹುಲಿ ಮನುಷ್ಯರನ್ನು ಕೊಂದು ತಿನ್ನುವ ಪ್ರಾಣಿ. ಬಿಜೆಪಿ ನಾಯಕರೇ ಬಿ.ಎಸ್‌. ಯಡಿಯೂರಪ್ಪ ಅವರನ್ನು ʻರಾಜಾ ಹುಲಿʼ ಎಂದು ಬಣ್ಣಿಸುತ್ತಾರೆ. ಇದನ್ನೂ ಅವಮಾನ ಎಂದು ತಿಳಿದುಕೊಳ್ಳಬಹುದಲ್ಲಾ? ಟಿವಿ ಚಾನೆಲ್‌ನವರು ಪ್ರತಿದಿನ ನನ್ನನ್ನು ‘ಟಗರು’ ‘ಟಗರು’ ಎಂದು ಹಾಡು ಕಟ್ಟಿ ತೋರಿಸುತ್ತಾರೆ. ಟಗರು ಗುಮ್ಮುತ್ತೆ, ನಾನು ಯಾರಿಗೆ ಗುಮ್ಮಿದ್ದೇನೆ? ನಾನೂ ಅವಮಾನ ಮಾಡಿದ್ದಾರೆ ಎಂದು ಕೋಪ ಮಾಡಿಕೊಳ್ಳಬಹುದಲ್ಲಾ?- ಎಂದು ಪ್ರಶ್ನಿಸಿದ್ದಾರೆ ಸಿದ್ದರಾಮಯ್ಯ.

ಆವತ್ತು ಪ್ರಧಾನಿ ಮೋದಿ ಹೇಳಿರಲಿಲ್ಲವೇ?
ಸಾವಿರಾರು ಮಂದಿ ಹತ್ಯೆಗೀಡಾದ ಗುಜರಾತ್ ಗಲಭೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ “ಕಾರಿಗೆ ಅಡ್ಡಬಂದು ನಾಯಿಮರಿ ಸತ್ತರೆ ಏನು ಮಾಡೋಣ?” ಎಂದು ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದರು. ಇದೂ ವಿವಾದವಾಗಿತ್ತಲ್ಲವೇ? ಎಂದು ನೆನಪಿಸಿಕೊಂಡಿದ್ದಾರೆ ಸಿದ್ದರಾಮಯ್ಯ.

ಪುಕ್ಕಲು ಆಗಬೇಡಿ ಎನ್ನುವುದಷ್ಟೇ ನನ್ನ ಕೋರಿಕೆ
ನಾಯಿ ಸ್ವಾಮಿ ನಿಷ್ಠೆಗೆ ಹೆಸರಾದರೆ, ನಾಯಿ‌ಮರಿ ಪುಕ್ಕಲು ಸ್ವಭಾವಕ್ಕೆ ಕುಖ್ಯಾತಿ‌ ಪಡೆದಿದೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರ ಎದುರು ತುಟಿ ಬಿಚ್ಚಲಾಗದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹುಲಿ-ಸಿಂಹಕ್ಕೆ ಹೋಲಿಸಲಾಗುತ್ತಾ? ನಾಯಿ ಮರಿ, ಬೆಕ್ಕಿನ ಮರಿಗಳಿಗೆ ಹೋಲಿಸಬೇಕಲ್ಲಾ?- ಎಂದಿದ್ದಾರೆ ಸಿದ್ದರಾಮಯ್ಯ

ಎಲ್ಲಾ ಜತೆಗೆ ಇರುವವರ ಕಿತಾಪತಿ
ʻʻಬಸವರಾಜ ಬೊಮ್ಮಾಯಿ ಅವರು ನಮ್ಮ ಒಡನಾಟದವರು, ಅವರೇನು ಬೇಸರ ಮಾಡಿಕೊಂಡಿರಲಾರರು. ಸುತ್ತಲಿನ ವಂದಿ-ಮಾಗದರು ಅವರನ್ನು ಓಲೈಸಲಿಕ್ಕಾಗಿ ಖಂಡಿಸಿ, ಮಂಡಿಸಿ ವಿವಾದ ಮಾಡುತ್ತಿದ್ದಾರೆ. ಇಂತಹವರ ಬಗ್ಗೆ ಬೊಮ್ಮಾಯಿ ಅವರು ಜಾಗರೂಕರಾಗಿರುವುದು ಒಳ್ಳೆಯದುʼʼ ಎನ್ನುವುದು ಬೊಮ್ಮಾಯಿ ಕಿವಿಮಾತು.

ಅನುದಾನ ತರುವ ವಿಚಾರದಲ್ಲಿ ಗಟ್ಟಿ ಧ್ವನಿ ಇರಲಿ
ನಮಗೆ ನಾಡಿನ ಹಿತ ಮುಖ್ಯ. 15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಶಿಫಾರಸು ಮಾಡಿದ್ದ 5,495 ಕೋಟಿ ವಿಶೇಷ ಅನುದಾನವನ್ನು ನೀಡಲು ನಿರ್ಮಾಲ ಸೀತಾರಾಮನ್‌ ಅವರು ನಿರಾಕರಿಸಿದರು, ಅವರೊಂದಿಗೆ ಮಾತನಾಡಿ ಈ ಅನುದಾನ ತರಲು ಬೊಮ್ಮಾಯಿ ಅವರಿಂದ ಸಾಧ್ಯವಾಗಿಲ್ಲ. ಇದರಿಂದ ನಷ್ಟವಾಗಿದ್ದು ರಾಜ್ಯಕ್ಕಲ್ಲವೇ? ರಾಜ್ಯಕ್ಕೆ ಸಿಗಬೇಕಾದ ಅನುದಾನ ಸರಿಯಾದ ಪ್ರಮಾಣದಲ್ಲಿ ಸಿಕ್ಕಿಲ್ಲ, ಪೂರ್ಣಪ್ರಮಾಣದ ಜಿಎಸ್‌ಟಿ ಪರಿಹಾರ ಬಂದಿಲ್ಲ, ಬರ, ನೆರೆ ಪರಿಹಾರದ ಹಣ ಬಂದಿಲ್ಲ. ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿರೋರು ಇದನ್ನೆಲ್ಲ ಗಟ್ಟಿ ಧ್ವನಿಯಲ್ಲಿ ಕೇಳದೆ ಹೆದರಿ ಸುಮ್ಮನಿದ್ರೆ ನಾಡಿಗೆ ಅನ್ಯಾಯವಾಗಲ್ವ?- ಎಂದು ಪ್ರಶ್ನಿಸಿದ್ದಾರೆ ಸಿದ್ದರಾಮಯ್ಯ.

ಇದನ್ನೂ ಓದಿ | Karnataka Elections | ನಾಯಿಮರಿ ಅಸಾಂವಿಧಾನಿಕ ಪದವಾ? ಬಿಎಸ್‌ವೈಗೆ ರಾಜಾ ಹುಲಿ ಅನ್ನಲ್ವಾ?: ಸಿದ್ದರಾಮಯ್ಯ ಪ್ರಶ್ನೆ

Exit mobile version