Site icon Vistara News

‌Karnataka Politics : ಆರೆಸ್ಸೆಸ್‌ ವಿಷಯಕ್ಕೆ ಕೈ ಹಾಕಿದರೆ ಸಿದ್ದರಾಮಯ್ಯ ರಾಜಕೀಯ ಅಂತ್ಯ ಎಂದ ನಳಿನ್‌

Nalin kumar Kateel and siddaramaiah

#image_title

ಮಂಗಳೂರು: ʻʻಜವಾಹರ ಲಾಲ್‌ ನೆಹರೂ, ಇಂದಿರಾ ಗಾಂಧಿ ಎಲ್ಲರೂ ನಿಷೇಧಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡಿದ್ದಾರೆ. ಬಜರಂಗ ದಳ, ಆರೆಸ್ಸೆಸ್‌ ವಿಷಯಕ್ಕೆ ಕೈ ಹಾಕಿದರೆ ಕಾಂಗ್ರೆಸ್ಸೇ ಇರಲ್ಲ. ಮಾತ್ರವಲ್ಲ ಸಿದ್ದರಾಮಯ್ಯ (Siddaramaiah) ಅವರ ರಾಜಕೀಯವೇ ಅಂತ್ಯವಾಗಲಿದೆʼʼ ಎಂದು ಹೇಳಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌.

ಬಜರಂಗ ದಳ ಮತ್ತು ಆರ್.ಎಸ್.ಎಸ್ ನಿಷೇಧದ (Bajarang dal and RSS Ban) ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಶುಕ್ರವಾರ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ʻʻಆರ್.ಎಸ್.ಎಸ್ ಈ ದೇಶದಲ್ಲಿ ರಾಷ್ಟ್ರ ಭಕ್ತಿ ಕಲಿಸಿದೆ. ಈ ದೇಶ ನಡೆಸುವ ಪ್ರಧಾನ ಮಂತ್ರಿ ಆರ್.ಎಸ್.ಎಸ್ ಸ್ವಯಂ ಸೇವಕ. ಕೇಂದ್ರದ ಮಂತ್ರಿಗಳು, ನಾವೆಲ್ಲರೂ ಆರ್.ಎಸ್.ಎಸ್ ಸ್ವಯಂ ಸೇವಕರುʼʼ ಎಂದು ಹೇಳಿದರು.

ʻʻಹಿಂದೆ ಜವಾಹರ ಲಾಲ್‌ ನೆಹರೂ, ಇಂದಿರಾ ಗಾಂಧಿ, ನರಸಿಂಹ ರಾವ್ ಅವಧಿಯಲ್ಲಿ ಆರೆಸ್ಸೆಸ್‌ ನಿಷೇಧಿಸುವ ಪ್ರಯತ್ನ ನಡೆದಿದೆ. ನಿಷೇಧದ ಪ್ರಯತ್ನ ಮಾಡಿದಾಗಲೆಲ್ಲಾ ದೇಶದಲ್ಲಿ ಕಾಂಗ್ರೆಸ್ ಸೋತಿದೆ. ಬಜರಂಗ ದಳ, ಆರ್.ಎಸ್.ಎಸ್ ನಿಷೇಧಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಇರಲ್ಲ, ಸಿದ್ದರಾಮಯ್ಯ ರಾಜಕೀಯ ಮುಗಿಯುತ್ತದೆʼʼ ಎಂದು ನಳಿನ್‌ ಕುಮಾರ್‌ ಹೇಳಿದರು.

ʻʻಸಿದ್ದರಾಮಯ್ಯ ಮತ್ತು ಪ್ರಿಯಾಂಕ್ ಖರ್ಗೆ ಅವರಿಗೆ ತಾಕತ್ತು ಇದ್ದರೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನು ಬಂಧಿಸಲಿ. ಕಾಂಗ್ರೆಸ್‌ನ ಮೆರವಣಿಗೆ, ವಿಜಯೋತ್ಸವ, ಸಭೆಗಳಲ್ಲೇ ಪಾಕಿಸ್ತಾನ ಪರ ಘೋಷಣೆ ಬಂದಿದೆ. ಅವರನ್ನು ಬಂಧಿಸಲಿ. ಅದು ಬಿಟ್ಟು ರಾಜ್ಯವನ್ನು ವಿಭಜನಾವಾದದ ಮೂಲಕ ಕಟ್ಟುವ ಪ್ರಯತ್ನ ಬೇಡʼʼ ಎಂದು ಹೇಳಿದ ನಳಿನ್‌ ಕುಮಾರ್‌ ಕಟೀಲ್‌, ಪ್ರಿಯಾಂಕ್ ಖರ್ಗೆ ಬಾಯಿಗೆ ಹಿಡಿತ ಇಟ್ಟುಕೊಂಡು, ನಾಲಿಗೆ ಹಿಡಿತದಲ್ಲಿ ಮಾತನಾಡಲಿ. ಭಜರಂಗದಳ, ಆರ್.ಎಸ್.ಎಸ್ ನಿಷೇಧ ಮಾಡಲು ನಿಮಗೆ ಹಕ್ಕಿಲ್ಲʼʼ ಎಂದು ಹೇಳಿದರು.

ʻʻʻಆರ್.ಎಸ್. ಎಸ್ ರಾಷ್ಟ್ರಭಕ್ತಿ ಸಂಕೇತ ಅಂತ ಕಾಂಗ್ರೆಸ್‌ನವರೇ ಹೇಳಿದ್ದಾರೆ. ವಿಧಾನಸೌಧದಲ್ಲಿ ಡಿಕೆಶಿಯವರೇ ಪ್ರಾರ್ಥನೆ ಹೇಳಿದ್ದಾರೆ, ಅದರಲ್ಲೇ ಇದೆ. ಆ ಪ್ರಾರ್ಥನೆಯಲ್ಲಿ ಏನಿದೆ ಅಂತ ಮಲ್ಲಿಕಾರ್ಜುನ ಖರ್ಗೆಯವರು ಡಿಕೆ ಶಿವಕುಮಾರ್‌ ಅವರ ಬಳಿ ಕೇಳಿ ತಿಳಿದುಕೊಳ್ಳಲಿʼʼ ಎಂದು ನಳಿನ್‌ ಕುಮಾರ್‌ ನುಡಿದರು.

ದ್ವೇಷ ರಾಜಕಾರಣ ನಡೆಸುತ್ತಿರುವ ಕಾಂಗ್ರೆಸ್‌

ʻʻರಾಜ್ಯವನ್ನು ದ್ವೇಷ, ವಿಭಜನೆ ಮೂಲಕ ಆಳ್ವಿಕೆ ಮಾಡಲು ಕಾಂಗ್ರೆಸ್‌ ಮುಂದಾಗಿದೆ. ಇವರ ಮಂತ್ರಿ ಮಂಡಲದ ಗಲಾಟೆಯಲ್ಲೇ ಕಾಂಗ್ರೆಸ್ ವಿಭಜನೆ ಆಗುತ್ತದೆ. ಇದರ ಭಯದಲ್ಲಿ ಆರ್.ಎಸ್‌ಎಸ್ ಹೆಸರಲ್ಲಿ ಕಾಂಗ್ರೆಸ್ ಗಟ್ಟಿ ಮಾಡುವ ಪ್ರಯತ್ನದಲ್ಲಿದೆ. ಇವರ ಜಗಳ ಹೊರ ಬಾರದಂತೆ ಮಾಡಲು ಇದು ಷಡ್ಯಂತ್ರʼʼ ಎಂದು ನಳಿನ್‌ ಹೇಳಿದರು.

ʻʻರಾಜ್ಯದಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣ ಪ್ರಾರಂಭ ಮಾಡಿದೆ. ಅಶ್ವಥ್ ನಾರಾಯಣ್ ಯಾವುದೋ ಸಂದರ್ಭದಲ್ಲಿ ಹೇಳಿದ್ದರು, ಅದಕ್ಕೆ ಕ್ಷಮೆ ಕೂಡ ಕೇಳಿದ್ದಾರೆ. ಈಗ ಅವರ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿಕೆ ಇಟ್ಟುಕೊಂಡು ಕೇಸ್ ಮಾಡಿದ್ದಾರೆ. ಬಂಟ್ವಾಳದ ಮಾಣಿಯಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರ ಬದಲು ಹಲ್ಲೆಗೆ ಒಳಗಾದವರ ಮೇಲೆ ಕೇಸ್ ಹಾಕಿದ್ದಾರೆ. ಕಾಂಗ್ರೆಸ್ ಗೂಂಡಾಗಿರಿ ಹಾಗೂ ದ್ವೇಷದ ರಾಜಕಾರಣದ ಮೂಲಕ ವಿರೋಧ ಪಕ್ಷವನ್ನು ಮೆಟ್ಟಿ ನಿಲ್ಲಬಹುದು ಅಂದುಕೊಂಡಿದೆ. ಸಿದ್ದರಾಮಯ್ಯರ ತಾತಾ ಮುತ್ತಾತನೂ ಈ ಕೆಲಸ ಮಾಡಿ ಯಶಸ್ವಿಯಾಗಿಲ್ಲʼʼ ಎಂದು ಹೇಳಿದರು.

ಗ್ಯಾರಂಟಿ ಯೋಜನೆ ಕೂಡಲೇ ಜಾರಿ ಮಾಡಿ

ʻʻರಾಜ್ಯದಲ್ಲಿ ಕಾಂಗ್ರೆಸ್ ಬಹುಮತದ ಸರ್ಕಾರ ಬಂದಿದೆ. ಚುನಾವಣೆ ಪೂರ್ವದಲ್ಲಿ ಐದು ಉಚಿತ ಭರವಸೆ ಮೂಲಕ ಸರ್ಕಾರ ಬಂದಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಸರ್ಕಾರ ಬಂದು 24 ಗಂಟೆಯಲ್ಲಿ ಕೊಡ್ತೀವಿ ಅಂದಿದ್ರು. 20 ದಿನ ಕಳೆದರೂ ಯಾವುದೇ ಯೋಜನೆ ಬಗ್ಗೆ ಮಾತುಗಳಿಲ್ಲ. ಆದೇಶ ಮಾಡಿದ್ದರೂ ಈವರೆಗೆ ಯಾವಾಗಿಂದ ಬರ್ತದೆ ಅಂತ ಉಲ್ಲೇಖ ಇಲ್ಲ. ಸುಳ್ಳು ಆಶ್ವಾಸನೆ ಕೊಟ್ಟು ಸಿದ್ದರಾಮಯ್ಯ ಸರ್ಕಾರ ಬಂದಿದೆʼʼ ಎಂದು ನಳಿನ್‌ ಕುಮಾರ್‌ ಕಟೀಲ್‌ ಆರೋಪಿಸಿದರು.

ಯಾರೂ ಬಿಲ್‌ ಕಟ್ಟಬಾರದು ಎಂದ ನಳಿನ್‌

ʻʻಸಿದ್ದರಾಮಯ್ಯ ತನ್ನನ್ನೂ ಸೇರಿಸಿ ಎಲ್ಲರಿಗೂ ಉಚಿತ ಕರೆಂಟ್ ಅಂತ ಹೇಳಿದರು. ಮಹಿಳೆಯರಿಗೆ ಎಲ್ಲರಿಗೂ ಹಣ ಬರುತ್ತೆ ಅಂತ ಹೇಳಿದ್ರು. ಯಾವುದೇ ಮಾನದಂಡ ಇಲ್ಲದೇ ಭಾಗ್ಯಗಳು ಸಿಗುತ್ತೆ ಅಂತ ಸಿದ್ದರಾಮಯ್ಯ ಹೇಳಿದ್ದರು. ಬಸ್ ನಲ್ಲೂ ಎಲ್ಲಿಗೆ ಬೇಕಾದರೂ ಉಚಿತವಾಗಿ ಮಹಿಳೆಯರು ಹೋಗಬಹುದು ಅಂದಿದ್ದರು. ಆದರೆ ಇದೀಗ ಇವುಗಳನ್ನ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆʼʼ ಎಂದು ಹೇಳಿದ ನಳಿನ್‌, ʻʻಆಶ್ವಾಸನೆ ನಂಬಿ ಮತ ಹಾಕಿದ ಮತದಾರ ಆಕ್ರೋಶದಲ್ಲಿ ಇದ್ದಾನೆ. ಕರೆಂಟ್ ಬಿಲ್ ಕಲೆಕ್ಷನ್‌ಗೆ ಬಂದ ಸಿಬ್ಬಂದಿ ಮೇಲೆ ಹಲ್ಲೆಗಳಾಗುತ್ತಿವೆ. ಜನ ಮಾಡುತ್ತಿರುವುದು ಸರಿಯಾಗಿದೆ. ಹಾಗಾಗಿ ಬಿಲ್ ಕಟ್ಟಬಾರದು ಅಂತಾನೇ ನಾನು ಕರೆ ಕೊಡ್ತೀನಿʼʼ ಎಂದು ಹೇಳಿದರು.

ಇದನ್ನೂ ಓದಿ : Congress Guarantee: ಬಿಪಿಎಲ್ ಕಾರ್ಡ್‌ಗೆ ಮುಗಿಬಿದ್ದ ಜನ; ಇಂಡಕ್ಷನ್‌ ಸ್ಟವ್‌ಗೆ ಹೆಚ್ಚಿದ ಬೇಡಿಕೆ

Exit mobile version