ವಿಜಯಪುರ: ʻʻನಾನು 2004ರಲ್ಲಿ ಅಧ್ಯಕ್ಷನಾಗಿದ್ದಾಗಲೇ ಜೆಡಿಎಸ್‌ಗೆ ಸಿಕ್ಕಿದ್ದು 59 ಸೀಟು. 2008ರಲ್ಲಿ 28 ಮಂದಿ ಗೆದ್ದರು. 2013ರಲ್ಲಿ 40 ಸ್ಥಾನ ಬಂದರೆ, ಕಳೆದ ಬಾರಿ 3೭ ಕ್ಷೇತ್ರ ಗೆದ್ದರು. ಈಗ ಒಮ್ಮೆಗೇ 123 ಸ್ಥಾನಗಳಲ್ಲಿ ಗೆಲ್ಲುತ್ತಾರಾ? ಅವರು ಎಂದಾದರೂ ೧೨೩ ಸೀಟು ಗೆದ್ದಿದ್ದಾರಾʼʼ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಸೀಟು ಬರುತ್ತೆ, ಬರುತ್ತೆ ಅಂತಾರೆ, ಎಲ್ಲಿಂದ ಬರುತ್ತೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಜೆಡಿಎಸ್ 123 ಕ್ಷೇತ್ರದಲ್ಲಿ ಗೆಲ್ಲುತ್ತದೆ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಬಗ್ಗೆ ಸಿಂದಗಿ ಪ್ರಜಾಧ್ವನಿ ಯಾತ್ರೆಯಲ್ಲಿ (Prajadwani Yatra) ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ಗೆ ಕನಿಷ್ಠ 130 ಸೀಟ್ ಬರುತ್ತದೆ. 130 ರಿಂದ 150ರ ಒಳಗೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ತಿಂಗಳ ಕೊನೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡುತ್ತೇವೆ. ಹೊಸಬರು ಹಾಗೂ ಹಳಬರಿಗೆ ಟಿಕೆಟ್ ಕೊಡುತ್ತೇವೆ. ಬರೀ ಹೊಸಬರಿಗೆ ಟಿಕೆಟ್ ಕೊಡಲ್ಲ, ಗೆಲ್ಲುವವರಿಗೆ ಟಿಕೆಟ್ ನೀಡುತ್ತೇವೆ. ಮೂರು ಬಾರಿ ಸಮೀಕ್ಷೆ ಮಾಡಿದ್ದು, ಯಾರು ಗೆಲ್ಲುವ ಸಾಧ್ಯತೆ ಇದೆ ಅದನ್ನು ನೋಡಿಕೊಂಡು ಟಿಕೆಟ್ ಘೋಷಿಸುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯಕ್ಕೆ ಯಾವುದೇ ಲೋಪವಾಗಲ್ಲ. ಅಲ್ಪಸಂಖ್ಯಾತರು ಎಲ್ಲಿ ಗೆಲ್ಲುತ್ತಾರೆ ಅಲ್ಲಿ ಅವರಿಗೆ ಟಿಕೆಟ್ ನೀಡುತ್ತೇವೆ. ಹಿಂದುಳಿದವರು ಗೆಲ್ಲುವ ಕಡೆಗೆ ಅವರಿಗೆ ಕೊಡುತ್ತೇವೆ. ಎಸ್‌ಸಿ,ಎಸ್‌ಟಿ 51 ಸೀಟ್ ಇದೆ. ಒಟ್ಟಿನಲ್ಲಿ ಗೆಲ್ಲುವವರಿಗೆ ಟಿಕೆಟ್ ನೀಡುತ್ತೇವೆ. ಯುವಕರಿಗೆ ಆದ್ಯತೆ ಕೊಡುತ್ತೇವೆ. ಹಾಗಂತ ಬರೀ ಯುವಕರಿಗೆ ಕೊಡುತ್ತೇವೆ, ವಯಸ್ಸಾದವರನ್ನು ಬಿಡುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಬರುವವರಿದ್ದಾರೆ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿಎಂ ಇಬ್ರಾಹಿಂ ಮಾತಿಗೆ ಒಂದು ಪರ್ಸೆಂಟ್ ಕಿಮ್ಮತ್ತು ಕೊಡಬೇಡಿ. ಇಬ್ರಾಹಿಂ ಬರಿ ಸುಳ್ಳು ಹೇಳುತ್ತಾರೆ ಎಂದರು. ಇನ್ನು ಹೆಚ್ಡಿಕೆ ಸಿಎಂ ಆಗದೆ ಹೋದರೆ ನಿವೃತ್ತಿ ವಿಚಾರಕ್ಕೆ ಸ್ಪಂದಿಸಿ, ಪಾಪ ವಯಸ್ಸಾಗಿದೆ ನಿವೃತ್ತಿಯಾಗಲಿ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ | R. Ashok: ಮಂಡ್ಯ ಜನರಿಗೆ ಸಾಷ್ಟಾಂಗ ನಮಸ್ಕಾರ: ಅಡ್ಜಸ್ಟ್‌ಮೆಂಟ್ ಆರೋಪಕ್ಕೆ ಉಸ್ತುವಾರಿಯಿಂದ ಹಿಂದೆ ಸರಿದ ಆರ್. ಅಶೋಕ್
ಕನ್ನಡಪರ ಹೋರಾಟಗಾರರ ವಿರುದ್ಧ ರೌಡಿಶೀಟರ್ ತೆರೆದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕನ್ನಡ ಹೋರಾಟಗಾರರ ವಿರುದ್ಧ ಕೇಸ್ ಹಾಕಬಾರದು. ಕೇಸ್ ಹಾಕಿದ್ದರೇ ತಕ್ಷಣವೇ ವಾಪಸ್ ಪಡೆಯಬೇಕು. ಕನ್ನಡ ಭಾಷೆ, ಜಲ, ನೆಲಕ್ಕಾಗಿ ಹೋರಾಟ ಮಾಡಿದರೆ ಅವರ ಮೇಲೆ ಕೇಸ್ ಹಾಕಬಾರದು. ನಮ್ಮ ಭಾಷೆ, ನೆಲ, ಜಲಕ್ಕಾಗಿ ಹೋರಾಟ ಮಾಡುವುದು ನಮ್ಮ ಹಕ್ಕು. ಅದನ್ನು ಉಳಿಸಬೇಕಾದದ್ದು ನಮ್ಮ ಸಾಂವಿಧಾನಿಕ ಹಕ್ಕು, ಒಕ್ಕೂಟ ವ್ಯವಸ್ಥೆ ಇರುವುದಾದರೂ ಯಾಕೆ ಎಂದು ಪ್ರಶ್ನಿಸಿದರು.
ಮಹಾರಾಷ್ಟ್ರದವರೂ ಭಾರತೀಯರೆ, ಹಾಗಂತ ಏನು ಮಾಡಿದರೂ ನಡೆಯಲ್ಲ. ಕಾಲು ಕೆರೆದು ಜಗಳಕ್ಕೆ ಬರುತ್ತಾರೆ. ಗಡಿ ವಿವಾದದ ಬಗ್ಗೆ ಮಹಾಜನ್ ಆಯೋಗದ ವರದಿಯಲ್ಲಿ ತೀರ್ಮಾನ ಆಗಿಲ್ಲವೇ? ಮತ್ತೆ ಯಾಕೆ ಕಾಲು ಕೆರೆದುಕೊಂಡು ಅವರು ಜಗಳಕ್ಕೆ ಬರುತ್ತಾರೆ ಎಂದು ಕಿಡಿಕಾರಿದರು.