ಗದಗ: ಪೊಲೀಸ್ ಸ್ಟೇಷನ್, ಕೃಷಿ ಇಲಾಖೆಗೆ ಸೇರಿ ಎಲ್ಲಿಗೆ ಹೋದರೂ ಲಂಚ ಕೇಳುತ್ತಾರೆ. ಒಟ್ಟಾರೆ ಈ ಸರ್ಕಾರ ಲಂಚ ಲಂಚ ಅಂತಿದೆ. ಹೋಟೆಲ್ ಮೆನುವಿನಲ್ಲಿ ಇದ್ದಂತೆ ಇವರು ಲಂಚ ಕೇಳುತ್ತಾರೆ. ವಿಧಾನಸೌಧದೊಳಗೆ ಎಲ್ಲ ಮಂತ್ರಿಗಳು ಲಂಚದ ಬೋರ್ಡ್ ಹಾಕಿಕೊಂಡಿದ್ದು, ಗೋಡೆಗಳಿಗೆ ಕಿವಿಕೊಟ್ಟರೆ ಅವು ಕೂಡ ಲಂಚ ಲಂಚ ಎಂದು ಪಿಸುಗುಡುತ್ತಿವೆ. ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಸರ್ಕಾರ ನೋಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜಿಲ್ಲೆಯ ರೋಣದಲ್ಲಿ ಮಂಗಳವಾರ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ (Prajadwani Yatra) ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗ ವಿಧಾನಸೌಧಕ್ಕೆ ಹೋಗಿ ಐದು ಭರವಸೆಗಳನ್ನು ಜಾರಿಗೊಳಿಸಿದೆ. ಬಡವರ ಸಾಲ ಮನ್ನಾ, ಅನ್ನ ಭಾಗ್ಯ, ಕ್ಷೀರ ಭಾಗ್ಯ ಯೋಜನೆಗಳನ್ನು ಜಾರಿ ಮಾಡಿದೆ. ಕರ್ನಾಟಕ ಹಸಿವು ಮುಕ್ತ ರಾಜ್ಯವಾಗಬೇಕು ಎಂದು ಅನ್ನಭಾಗ್ಯ ಯೋಜನೆಯಲ್ಲಿ 7 ಕೆ.ಜಿ. ಅಕ್ಕಿ ನೀಡಲು ತೀರ್ಮಾನ ಮಾಡಿದೆ. ಶಾಲಾ ಮಕ್ಕಳಿಗೆ ಉಚಿತವಾಗಿ ಹಾಲು ಕೊಡುವ ಘೋಷಣೆ ಮಾಡಿದೆ ಎಂದು ಹೇಳಿದರು.
ಹಾಲಿಗೆ 5 ರೂಪಾಯಿ ಪ್ರೋತ್ಸಾಹಧನ ಕೊಡುವ ತೀರ್ಮಾನ ಮಾಡಿದೆ. ಖುಷ್ಕಿ ಜಮೀನಿನಲ್ಲಿ ಕೆಲಸ ಮಾಡುವಂತಹ ರೈತರಿಗೆ ಕೃಷಿ ಭಾಗ್ಯ ಕಾರ್ಯಕ್ರಮ ಜಾರಿ ಮಾಡಿ ಐದು ಸಾವಿರ ಕೃಷಿ ಹೊಂಡ ನಿರ್ಮಾಣ ಮಾಡಿಸಿದ್ದೆ ಎಂದ ಅವರು, ಬಿಜೆಪಿಯವರು ಬಹಳ ಮಾತನಾಡುತ್ತಾರೆ. ಆದರೆ, ಎರಡು ವರ್ಷದಿಂದ ಕೃಷಿ ಭಾಗ್ಯ ಯೋಜನೆ ನಿಲ್ಲಿಸಿದ್ದಾರೆ. ಮೋದಿಯವರು ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದಿದ್ದರು. ಆದರೆ, ರೈತರ ಬದಲು ಅಂಬಾನಿ, ಅದಾನಿ ಆದಾಯವನ್ನು ದುಪ್ಪಟ್ಟು ಮಾಡಿದರು ಎಂದು ಹೇಳಿದರು.
ಇದನ್ನೂ ಓದಿ | Congress Politics: ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ಮುಹೂರ್ತ ನಿಗದಿ; ಆಕಾಂಕ್ಷಿಗಳಲ್ಲಿ ಢವಢವ
ಮನಮೋಹನ್ ಸಿಂಗ್ ಸರ್ಕಾರ ರೈತರ ಸಾಲ ಮನ್ನಾ ಮಾಡಿತ್ತು. ಆದರೆ, ಮೋದಿಯವರು ರೈತರ ಸಾಲ ಮನ್ನಾ ಮಾಡಲಿಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ನಾವೇನು ನೋಟ್ ಪ್ರಿಂಟ್ ಮಾಡುವ ಮಷಿನ್ ಇಟ್ಟಿಲ್ಲ, ರೈತರ ಸಾಲ ಮನ್ನಾ ಮಾಡಕ್ಕಾಗಲ್ಲ ಎಂದಿದ್ದರು. ಹಾಗಾದರೆ ನಮ್ಮ ಹತ್ತಿರ ನೋಟ್ ಪ್ರಿಂಟ್ ಮಾಡು ಮಷಿನ್ ಇತ್ತಾ ಎಂದು ಪ್ರಶ್ನಿಸಿರುವ ಅವರು, ಬೇರೆ ಬೇರೆ ನಿಗಮದಿಂದ ತೆಗೆದುಕೊಂಡಿದ್ದ ಸಾಲ ಮನ್ನಾ ಮಾಡಿದ್ದೇವೆ. ನಾವು ಸಾಲ ಮನ್ನಾ ಭರವಸೆ ಕೊಟ್ಟಿರಲಿಲ್ಲ, ಆದರೂ ಬಡವರು ಕಷ್ಟದಲ್ಲಿ ಇದ್ದಾರೆ ಅಂತ ಸಾಲ ಮನ್ನಾ ಮಾಡಿದ್ದೆವು ಎಂದು ಹೇಳಿದರು.
ನರೇಂದ್ರ ಮೋದಿಯವರು ಈಗ ವಾರಕ್ಕೊಮ್ಮೆ ಕರ್ನಾಟಕಕ್ಕೆ ಬರುವುದಕ್ಕೆ ಶುರು ಮಾಡಿದ್ದಾರೆ. ಪ್ರವಾಹ, ಕೋವಿಡ್ ಸಮಯದಲ್ಲಿ ಬಂದು ಜನರ ಕಷ್ಟ ಕೇಳಲಿಲ್ಲ. ಕೋವಿಡ್ ಸಮಯದಲ್ಲಿ ಇಲ್ಲಿನ ಆಕ್ಸಿಜನ್ ಸಿಲಿಂಡರ್‌ಗಳನ್ನು ಬೇರೆ ರಾಜ್ಯಕ್ಕೆ ಕೊಡುವುದಕ್ಕೆ ಹೊರಟಿದ್ದರು. ಸುಪ್ರೀಂ ಕೋರ್ಟ್ ಆ ನಿರ್ಧಾರ ಹಿಂಪಡೆದರು ಎಂದ ಅವರು, ಮನಮೋಹನ್ ಸಿಂಗ್ ಕಾಲದಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿ ತಂದರು. ಅನ್ನ ಭಾಗ್ಯ ಯೋಜನೆ ಇಲ್ಲದಿದ್ದರೆ ಕೋವಿಡ್ ಸಮಯದಲ್ಲಿ ಸಾವಿರಾರು ಜನ ಸಾಯುತ್ತಿದ್ದರು ಎಂದು ಹೇಳಿದರು.
ಇದನ್ನೂ ಓದಿ | Prajadwani Yatra: ಕಾಂಗ್ರೆಸ್ ಸರ್ಕಾರ ಬಂದರೆ 7ನೇ ವೇತನ ಆಯೋಗದ ವರದಿ ಜಾರಿ ಮಾಡುತ್ತೇವೆ: ಡಿ.ಕೆ.ಶಿವಕುಮಾರ್
ಮಹದಾಯಿ ಬಗ್ಗೆ ಮಾತನಾಡದಿದ್ರೆ ಇಲ್ಲಿಗೆ ಯಾಕೆ ಬರುತ್ತೀರಿ?
ಪ್ರಧಾನಿ ಮೋದಿ ಬೆಳಗಾವಿಗೆ ಬಂದು ಮಹದಾಯಿ ಬಗ್ಗೆ ಮಾತನಾಡಿದರಾ? ಯಾವ ಸಮಸ್ಯೆ ಬಗ್ಗೆಯೂ ಮಾತನಾಡದಿದ್ದರೆ ಇಲ್ಲಿಗೆ ಯಾಕೆ ಬರುತ್ತಾರೆ ಎಂದ ಸಿದ್ದರಾಮಯ್ಯ, ಮೋದಿಯವರು ಕೊಟ್ಟ ಮಾತನ್ನು ಅಲ್ಲೇ ಮರೆಯುತ್ತಾರೆ. ವಚನ ಭ್ರಷ್ಟ ಪ್ರಧಾನಿ ಮೋದಿಯವರು ಅಚ್ಛೇ ದಿನ ಎಂದಿದ್ದರು. ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆ ಜನರನ್ನು ಕಾಡುತ್ತಿದೆ. ರೈತರ ಆದಾಯ ದುಪ್ಪಟ್ಟು ಆಗಲಿಲ್ಲ, ಸಾಲ ಮಾತ್ರ ಮೂರ್ನಾಲ್ಕು ಪಟ್ಟು ಹೆಚ್ಚಾಗಿದೆ. ಮೋದಿಯವರು ಬೆಲೆ ಏರಿಕೆ, ನಿರುದ್ಯೋಗದ ಬಗ್ಗೆ ಮಾತನಾಡಲಿಲ್ಲ, ತೆರಿಗೆ ಇಲ್ಲದ ವಸ್ತುಗಳ ಮೇಲೆಯೂ ಜಿಎಸ್.ಟಿ ಹಾಕಿದ್ದಾರೆ. ಮುಂದೆ ಶೌಚಾಲಯದ ಮೇಲೆಯೂ ಜಿಎಸ್‌ಟಿ ಹಾಕುತ್ತಾರೆ ಎಂದು ವಾಗ್ದಾಳಿ ನಡೆಸಿದರು.