Site icon Vistara News

Prajadwani Yatra: ಬಿಜೆಪಿಯವರು ಹೇಡಿಗಳು, ಸೈದ್ಧಾಂತಿಕ, ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆ: ಸಿದ್ದರಾಮಯ್ಯ

Prajadwani Yatra

#image_title

ಬಾಗಲಕೋಟೆ: ನನ್ನ ಜೀವ ಇರುವವರೆಗೂ ದಲಿತರು, ಹಿಂದುಳಿದವರು, ಮಹಿಳೆಯರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತೇನೆ. ಎಲ್ಲಿಯವರೆಗೂ ಜನರ ಬೆಂಬಲ ಇರುತ್ತೋ, ಅಲ್ಲಿವರೆಗೂ ನನ್ನ ಮುಗಿಸಲು ಯಾರಿಂದಲೂ ಆಗಲ್ಲ. ಬಿಜೆಪಿಯವರು ಹೇಡಿಗಳು. ಸೈದ್ಧಾಂತಿಕ, ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆ. ಒಬ್ಬ ಸಿದ್ದರಾಮಯ್ಯನನ್ನು ಮುಗಿಸಿದರೆ ಈ ದೇಶದಲ್ಲಿ ಹಲವಾರು ಸಿದ್ದರಾಮಯ್ಯ (Prajadwani Yatra) ಬರುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ಬುಧವಾರ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಸುಳ್ಳಿನ ಕಾರ್ಖಾನೆ. ಅವರಿಗೆ ಮಾನಮರ್ಯಾದೆ ಇಲ್ಲ. ಪ್ರಚೋದನಕಾರಿ ಭಾಷಣ ಮಾಡಿ,…ಧರ್ಮ, ಹಿಂದುತ್ವ ಎಂದು ಹೇಳುತ್ತಾರೆ. ಇವು ಯಾವುವೂ ಜನರಿಗೆ ಪ್ರಸ್ತುತ ಅಲ್ಲ. ಜನರಿಗೆ ಉದ್ಯೋಗ, ಊಟ ಬೇಕು. ಇದೆಲ್ಲ ಬಿಟ್ಟು ಸಿದ್ದರಾಮಯ್ಯನನ್ನು ಟಿಪ್ಪು ರೀತಿಯಲ್ಲಿ ಮುಗಿಸುತ್ತೇವೆ ಎಂದು ಒಬ್ಬ ಬಿಜೆಪಿ ಮಂತ್ರಿ ಹೇಳಿದ್ದಾನೆ. ನನ್ನ ಮುಗಿಸಲು ನೀವು ಬಿಡುತ್ತೀರಾ ಎಂದು ಜನರಿಗೆ ಪ್ರಶ್ನಿಸಿ, ಅವರು ಮಂತ್ರಿಯಾಗಲು ನಾಲಾಯಕ್ ಎಂದು ಕಿಡಿಕಾರಿದರು.

ಅಮಿತ್ ಶಾ ದೊಡ್ಡ ನಾಯಕ. ಅವರು ಚುನಾವಣೆ ಬಂದಾಗ ಟಿಪ್ಪು‌ ಸುಲ್ತಾನ್, ಸಾವರ್ಕರ್ ಎಂದು ಭಾಷಣ ಮಾಡುತ್ತಾರೆ. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅಭಿವೃದ್ಧಿ ಬಗ್ಗೆ ಬೇಡ, ಲವ್ ಜಿಹಾದ್ ಬಗ್ಗೆ ಮಾತಾಡಿ ಎನ್ನುತ್ತಾರೆ. ಇದರಿಂದ ಹೊಟ್ಟೆ ತುಂಬುತ್ತಾ? ರೈತರ ಸಮಸ್ಯೆ ಬಗೆಹರಿಯುತ್ತಾ? ಎಂದು ಕಿಡಿಕಾರಿದರು.

ಇದನ್ನೂ ಓದಿ | 2024ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ, 100 ಮೋದಿ, ಶಾ ಬಂದರೂ ತಪ್ಪಿಸಲು ಸಾಧ್ಯವಿಲ್ಲ: ಖರ್ಗೆ ಭರವಸೆ

ಕಾಂಗ್ರೆಸ್‌ ಸರ್ಕಾರದ ಅನೇಕ ಭಾಗ್ಯಗಳು, ಯೋಜನೆಗಳನ್ನು ಬಿಜೆಪಿ ಸರ್ಕಾರ ನಿಲ್ಲಿಸಿದೆ. ಸಾಂಕೇತಿಕವಾಗಿ ಮಹಿಳೆಯರಿಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಿದ್ದೇವೆ. ನಮ್ಮ ಸರ್ಕಾರ ಬಂದ ಮೇಲೆ ಮನೆಯ ಒಡತಿಗೆ ಮಾಸಿಕ 2 ಸಾವಿರ ರೂ.ಗಳಂತೆ ವಾರ್ಷಿಕ 24 ಸಾವಿರ ರೂಪಾಯಿ ಹಾಕುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಬಸವ ಜಯಂತಿ ದಿನದಂದು ನಾನು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದೆ. ವಿಪಕ್ಷದಲ್ಲಿ ಇದ್ದಾಗ ಹೊಸಪೇಟೆಯಿಂದ ಕೂಡಲಸಂಗಮದವರೆಗೂ ಪಾದಯಾತ್ರೆ ಮಾಡಿದ್ದೆವು. ಅಧಿಕಾರಕ್ಕೆ ಬಂದ ಮೇಲೆ ಐದು ವರ್ಷದಲ್ಲಿ 56 ಸಾವಿರ ಕೋಟಿ ರೂ. ಅನುದಾನ ಕೊಟ್ಟಿದ್ದೆವು. ಆದರೆ, ಬಿಜೆಪಿಯವರು ಐದು ವರ್ಷದಲ್ಲಿ 1.5 ಒಂದೂವರೆ ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದಿದ್ದರು. ಆದರೆ, ವೆಚ್ಚ ಮಾಡಿದ್ದು 40 ರಿಂದ 45 ಸಾವಿರ ಕೋಟಿ ರೂಪಾಯಿ ಮಾತ್ರ. 600 ಭರವಸೆ ಕೊಟ್ಟಿದ್ದರು, ಅದರಲ್ಲಿ 50-60 ಮಾತ್ರ ಮಾಡಿದ್ದಾರೆ. ಬಿಜೆಪಿಯವರು ನುಡಿದಂತೆ ನಡೆದರಾ? ಬಸವಾದಿ ಶರಣರು ಹೇಳಿದಂತೆ ನಡೆದರಾ ಎಂದು ಪ್ರಶ್ನಿಸಿದರು.

ನಾವು ಈಗ ಕೊಟ್ಟ ಭರವಸೆಯನ್ನು ಅಧಿಕಾರಕ್ಕೆ ಬಂದ ಮೇಲೆ ಈಡೇರಿಸುತ್ತೇವೆ. ನಾವು ಅಧಿಕಾರಕ್ಕೆ ಬಂದ ಮೇಲೆ ಈ ಕ್ಷೇತ್ರದ ನಂದವಾಡಗಿ ಯೋಜನೆ ಮಾಡುತ್ತೇವೆ. ಐದು ವರ್ಷದಲ್ಲಿ 2 ಲಕ್ಷ ಕೋಟಿ ರೂಪಾಯಿ ನೀರಾವರಿಗೆ ಖರ್ಚು ಮಾಡಿ ಕೊಟ್ಟ ಮಾತಿನಂತೆ ನಡೆಯುತ್ತೇವೆ ಎಂದು ಭರವಸೆ ನೀಡಿದರು.

ನಮ್ಮ ಸರ್ಕಾರದಲ್ಲಿ ಹುನಗುಂದ ಕ್ಷೇತ್ರಕ್ಕೆ 4,500 ಕೋಟಿ ರೂಪಾಯಿ ಅನುದಾನ ಕೊಟ್ಟಿದ್ದೆ. ಈ ಕ್ಷೇತ್ರದ ಕೂಡಲಸಂಗಮವನ್ನು ಅಕ್ಷರಧಾಮ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿ 130 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದೆ ಎಂದು ತಿಳಿಸಿದರು.

ಇದನ್ನೂ ಓದಿ | B.S. Yediyurappa: ಬಾದಾಮಿಯಲ್ಲಿ ಸ್ಪರ್ಧೆ ಮಾಡದೇ ಇರುವುದು ಜನರಿಗೆ ಮಾಡುವ ದ್ರೋಹ; ಅಲ್ಲೇ ಸ್ಪರ್ಧಿಸಿ: ಸಿದ್ದರಾಮಯ್ಯಗೆ ಬಿ.ಎಸ್‌. ಯಡಿಯೂರಪ್ಪ ಸಲಹೆ

ವಿಜಯಾನಂದ ಕಾಶಪ್ಪನವರ್‌ ಹುನಗುಂದ ಕ್ಷೇತ್ರದ ಅಭ್ಯರ್ಥಿ

ವಿಜಯಾನಂದ ಕಾಶಪ್ಪನವರ್‌ ಅವರಿಗೆ ಜನರು ಬೆಂಬಲ ನೀಡಬೇಕು ಎಂದು ಹೇಳುವ ಮೂಲಕ ಅವರೇ ಹುನಗುಂದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂದು ಸಿದ್ದರಾಮಯ್ಯ ಘೋಷಿಸಿದರು. ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ವಿಜಯಾನಂದ ಕಾಶಪ್ಪನವರ್ ಗೆಲ್ಲುವುದು ಅಷ್ಟೇ ಸತ್ಯ. ಹೀಗಾಗಿ ವಿಜಯಾನಂದ ಕಾಶಪ್ಪನವರ್‌ ಅವರಿಗೆ ಬೆಂಬಲ ನೀಡಬೇಕು ಎಂದು ಸಿದ್ದರಾಮಯ್ಯ ಜನರಲ್ಲಿ ಮನವಿ ಮಾಡಿದರು. ಹುನಗುಂದ ಕ್ಷೇತ್ರದಲ್ಲಿ ಕೈ ಟಿಕೆಟ್‌ಗೆ ಮೂವರು ಆಕಾಂಕ್ಷಿಗಳು ಇದ್ದಾರೆ. ಅದೇ ರೀತಿ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಮೊದಲೇ ಮಾಜಿ ಸಿಎಂ ಸಿದ್ದರಾಮಯ್ಯ ಅಭ್ಯರ್ಥಿಯನ್ನು ಘೋಷಿಸಿದ್ದಾರೆ.

Exit mobile version