ಚಿಕ್ಕಬಳ್ಳಾಪುರ: ಪ್ರವಾಹ ಬಂದಾಗ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದಿಲ್ಲ, ಕೊರೊನಾ ಬಂದಾಗ ಬಂದಿದ್ದರೇ? ಇವಾಗ ಯಾಕೆ ಇಷ್ಟು ಬಾರಿ ರಾಜ್ಯಕ್ಕೆ ಬರುತ್ತಿದ್ದಾರೆ, ಕೇವಲ ವೋಟಿಗಾಗಿ ಅವರು ಬರುತ್ತಿದ್ದಾರೆ. ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು. ಮೋದಿ 10 ಬಾರಿ ರಾಜ್ಯಕ್ಕೆ ಬಂದರೂ ಏನೂ ಆಗಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದರು.
ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಗೌರಿಬಿದನೂರಿನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಮಹಿಳಾ ಸಮಾವೇಶದಲ್ಲಿ ಮಾತನಾಡಿ, ಬೊಮ್ಮಾಯಿ ಸರ್ಕಾರ ಲೂಟಿಕೋರರ ಸರ್ಕಾರ, ಉದ್ಯೋಗ ಸೃಷ್ಟಿಸುತ್ತೇವೆ ಎಂದು ಮೋದಿ ಸುಳ್ಳು ಹೇಳಿದರು. ಆದರೆ, ನಾವು ಅಧಿಕಾರಕ್ಕೆ ಬಂದರೆ ಗೌರಿಬಿದನೂರಿನ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನ ಮಾಡುತ್ತೇವೆ. ಗ್ಯಾರಂಟಿ ಕಾರ್ಡ್‌ಗೆ ನಾನು, ಡಿ.ಕೆ. ಶಿವಕುಮಾರ್ ಸಹಿ ಹಾಕಿದ್ದೇವೆ. ನಾವು ಕೊಟ್ಟ ಭರವಸೆ ಈಡೇರಿಸದೆ ಹೋದರೆ ಒಂದು ಕ್ಷಣ ಅಧಿಕಾರದಲ್ಲಿ ಇರಲ್ಲ ತಿಳಿಸಿದರು.
ಇದನ್ನೂ ಓದಿ | Modi in Karnataka: ನಾನು ಅತಿಥಿ ಅಲ್ಲ; ಇದೇ ಮಣ್ಣಿನ ಮಗ: ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ ಪ್ರಧಾನಿ ಮೋದಿ
ಧಾರ್ಮಿಕ ಅಲ್ಪಸಂಖ್ಯಾತರಿಗೆ 2ಬಿ ಮೀಸಲಾತಿ ರದ್ದು ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಅಲ್ಪ ಸಂಖ್ಯಾತರಿಗೆ ಮಾಡಿರುವ ಮಹಾ ಮೋಸವಾಗಿದೆ. ಮೀಸಲಾತಿ ತೆಗೆದುಹಾಕಿ ಎಂದು ಅಲ್ಪಸಂಖ್ಯಾತರು ಹೇಳಿದ್ದರೇ? ಸರ್ಕಾರಕ್ಕೆ ಕೋರ್ಟ್ ಏನಾದರೂ ಸೂಚಿಸಿದೆಯಾ? ಬೇಕಂತಲೇ ಅಲ್ಪಸಂಖ್ಯಾತರಿಗೆ ತೊಂದರೆ ಕೊಡಲು ಬಿಜೆಪಿ ಸರ್ಕಾರ ಹೊರಟಿದೆ. ಈ ನಿರ್ಧಾರ ಮುಸ್ಲಿಂ ಅಲ್ಪಸಂಖ್ಯಾತರಿಗೆ ಮಾಡಿರುವ ದ್ರೋಹ ಎಂದು ಕಿಡಿ ಕಾರಿದರು.
ʻʻಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರಿಗೆ ರಕ್ಷಣೆ ಕೊಡುತ್ತದೆ. ಅವರು ನಮಗೆ ಮತ ಹಾಕುತ್ತಾರೆ ಎಂಬುದು ಬೇರೆ ವಿಚಾರ. ಆ ಸಮುದಾಯಕ್ಕೆ 1995ರಿಂದಲೂ ಮೀಸಲಾತಿ ಇದೆ. ಈಗ ಏಕಾಏಕಿ ರದ್ದು ಮಾಡಿರುವುದು ಸರಿಯಲ್ಲʼ ಎಂದು ಆಕ್ರೋಶ ವ್ಯಕ್ತಪಡಿಸಿದರು.