Site icon Vistara News

ಅಂತರ್ಜಾತಿ ವಿವಾಹಗಳು ಹೆಚ್ಚು ನಡೆಯಲಿ: ಮಾಜಿ ಸಿಎಂ ಸಿದ್ದರಾಯಯ್ಯ

ಸಿದ್ದರಾಮಯ್ಯ

ವಿಜಯಪುರ: 12ನೇ ಶತಮಾನದಲ್ಲೇ ಬಸವಣ್ಣ ವೈದಿಕ‌ ಧರ್ಮಕ್ಕೆ ಪರ್ಯಾಯವಾಗಿ ಇನ್ನೊಂದು ಧರ್ಮವನ್ನು ಹುಟ್ಟುಹಾಕಿದರು. ಆದರೆ ಸಮಾಜದಲ್ಲಿ ಇಂದಿಗೂ ಚಲನರಹಿತವಾಗಿರುವ ಜಾತಿ ವ್ಯವಸ್ಥೆ ಜೀವಂತವಾಗಿದೆ. ಇದು ಹೋಗಬೇಕೆನ್ನುವ ಕಾರಣದಿಂದ ಬಸವಾದಿ ಶರಣರು ಅನುಭವ ಮಂಟಪವನ್ನು ಹುಟ್ಟುಹಾಕಿದರು, ಆ ಕಾಲದಲ್ಲೇ ಅಂತರ್ಜಾತಿ ಮದುವೆಗಳು ನಡೆದಿದ್ದವು, ಹೀಗಾಗಿ ಸರ್ವಧರ್ಮ ಸಾಮೂಹಿಕ ವಿವಾಹಗಳು ಹೆಚ್ಚು ನಡೆಯಬೇಕು ಎಂದು ಮಾಜಿ ಸಿಎಂ ಸಿದ್ದರಾಯಯ್ಯ ಹೇಳಿದರು.

ಜಿಲ್ಲೆಯ ದೇವರ ಹಿಪ್ಪರಗಿ ಪಟ್ಟಣದಲ್ಲಿ ಮುತ್ತತ್ತಿ ಫೌಂಡೇಶನ್ ವತಿಯಿಂದ ಭಾನುವಾರ ಆಯೋಜಿಸಿದ್ದ 101 ಜೋಡಿಗಳ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಲ್ಲಿಯೂ ಪಠ್ಯಪುಸ್ತಕ ಪರಿಷ್ಕರಣೆಯ ವಿಷಯವನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, “ಸಚಿವ ನಾಗೇಶ್‌, ಆರ್‌ಎಸ್‌ಎಸ್ ನ ರೋಹಿತ್ ಚಕ್ರತೀರ್ಥನನ್ನು ಕರೆತಂದು ಬಸವಣ್ಣ ಅವರ ಚರಿತ್ರೆಯನ್ನೇ ತಿರುಚಿದ್ದಾರೆ. ಇದರಿಂದ ಬಸವಣ್ಣನ ನಾಡಿನವರಿಗೆ ಕೋಪ ಬರುವುದಿಲ್ಲವೇʼʼ ಎಂದು ಪ್ರಶ್ನಿಸಿದರು.

ನಮ್ಮ ಸಂವಿಧಾನದ ರಚಿಸಿದವರು ಬಾಬಾಸಾಹೇಬ ಅಂಬೇಡ್ಕರ್ ಎಂದು ಇಡೀ ಪ್ರಪಂಚಕ್ಕೆ ಗೊತ್ತು. ಆದರೆ ಅವರ ಪಠ್ಯದಲ್ಲೂ ಬದಲಾವಣೆ ಮಾಡಲಾಗಿದೆ. ಒಂದೇ ಧರ್ಮ, ಒಂದೇ ಕುಲ, ಒಂದೇ ಜಾತಿ ಎಂದ ನಾರಾಯಣಗುರು, ಕನಕದಾಸರು, ಕುವೆಂಪು, ಸಂಗೊಳ್ಳಿ ರಾಯಣ್ಣ, ಸಿದ್ಧಗಂಗಾ ಸ್ವಾಮೀಜಿ ಸೇರಿ ಮಹಾಮಹಿಮರ ಚರಿತ್ರೆ ಪರಿಷ್ಕರಣೆ ಮಾಡಿ, ನಾಡಿನ ಅಸ್ಮಿತೆಯನ್ನು ಕೊಲ್ಲಲಾಗಿದೆ. ಇದು ಆರೂವರೆ ಕೋಟಿ ಜನತೆಗೆ ಮಾಡಿರುವ ಅನ್ಯಾಯವಾಗಿದೆ. ಈ ಮೂಲಕ ಮಕ್ಕಳಿಗೆ ವಿಷವುಣಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಇಲ್ಲಿನ‌ ಬೂದಿಹಾಳ ಪೀರಾಪೂರ ನೀರಾವರಿ ಯೋಜನೆಯ‌ನ್ನು ಮಾಡಿದ್ದು, ಜಾರಿಗೆ ತಂದಿದ್ದು ನಮ್ಮ ಸರ್ಕಾರ. ಆದರೆ ಈಗಿನ‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನ್ನ ಕನಸಿನ ಕೂಸು ಎಂದು ಜನತೆಗೆ ಸುಳ್ಳು ಹೇಳುವ ಕೆಲಸ ಮಾಡಿದ್ದಾರೆ. ಬೆಲೆ ಹೆಚ್ಚಳ ಸೇರಿ ದೇಶದ ಜನತೆ ಹಾಗೂ ಯುವಕರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಇದೀಗ ಅಗ್ನಿಪಥ್‌ ಯೋಜನೆ ಶುರು ಮಾಡಿದ್ದಾರೆ. ಅದು ಬಕಾಸುರನ ಹೊಟ್ಟೆಗೆ ಅರೆಕಾಸಿನ‌ ಮಜ್ಜಿಗೆ ಇದ್ದಂತೆ ಎಂದು ಲೇವಡಿಯಾಡಿದರು.

ಇದನ್ನೂ ಓದಿ | ರಾಜ್ಯದಲ್ಲಿರೋದು ಆರ್‌ಎಸ್‌ಎಸ್ ಪ್ರಾಯೋಜಿತ ಸರ್ಕಾರ: ವಿಪಕ್ಷ ನಾಯಕ ಸಿದ್ದರಾಮಯ್ಯ

ಕ್ಷೇತ್ರದಲ್ಲಿ ನನಗೆ ಅದ್ದೂರಿ ಸ್ವಾಗತ ಮಾಡಿದ್ದಾರೆ. ಆದರೆ ಜಾತಿ ಕೋಮುವಾದ, ಸುಳ್ಳಿನ ಮಾತುಗಳಿಗೆ ಕಿವಿಗೊಡದೇ, ದೇವರ ಹಿಪ್ಪರಗಿಯಲ್ಲಿ ಬಿಜೆಪಿಯನ್ನು ಬೇರು ಸಮೇತ ಕಿತ್ತೊಗೆದು ಕಾಂಗ್ರೆಸ್ ಅಭ್ಯರ್ಥಿ ಯಾರೇ ಇರಲಿ ಅವರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಪ್ರಧಾನಿ ಮೈಸೂರಿಗೆ ಬರುವುದರಲ್ಲಿ ತಪ್ಪಿಲ್ಲ
ವಿಶ್ವ ಯೋಗ ದಿನಾಚರಣೆ ಹಿನ್ನೆಲೆ ಮೈಸೂರಿಗೆ ಪ್ರಧಾನಿ ಮೋದಿ ಆಗಮನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿದ್ದರಾಮಯ್ಯ ಅವರು, ಮೋದಿ ದೇಶದ ಪ್ರಧಾನಿ, ಮೈಸೂರಿಗೆ ಬರುವುದರಲ್ಲಿ ತಪ್ಪಿಲ್ಲ, ಬರಬೇಡ ಅಂತ ಹೇಳೋಕೆ ಆಗುತ್ತಾ ಎಂದು ಹೇಳಿದರು.

ದೇವರಹಿಪ್ಪರಗಿ ಪಟ್ಟಣದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಸಭೆ ಸಮಾರಂಭ ಮಾಡಿದರೆ ಕೊರೊನಾ ಬರುತ್ತದೆ ಎಂದು‌ ಬಿಜೆಪಿ ಸರ್ಕಾರ ಹೇಳುತ್ತದೆ. ಆದರೆ ಶನಿವಾರ ಜೆ.ಪಿ. ‌ನಡ್ಡಾ ತಾಲೂಕು ಪಂಚಾಯಿತಿ, ಜಿಲ್ಲಾ ಪಂ‌ಚಾಯಿತಿ ಚುನಾಯಿತ ಪ್ರತಿನಿಧಿಗಳ ಹೆಸರಲ್ಲಿ ಸಾರ್ವಜನಿಕ ಸಭೆ ಮಾಡಿದರು, ಅಲ್ಲಿಯೂ ಸಾಕಷ್ಟು‌ ಜನ ಸೇರಿದ್ದರು. ಈಗ ನರೇಂದ್ರ ಮೋದಿ‌ ಅವರು ನಾಳೆ ಬರ್ತಾರೆ, ಬೆಂಗಳೂರಿನಲ್ಲಿ ಸಭೆ ಮಾಡುತ್ತಾರೆ, ಮೈಸೂರಿನಲ್ಲಿ ಯೋಗಾ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಜನ ಸೇರುತ್ತಾರೆ, ಅಲ್ಲಿ ಕೊರೊನಾ ಹರಡುವುದಿಲ್ಲವೇ ಎಂದು ಪ್ರಶ್ನಿಸಿದರು.

ಶಿಕ್ಷಣ ಸಚಿವ ರಾಜೀನಾಮೆ ನೀಡಲಿ
ಟಿಪ್ಪು ಸುಲ್ತಾನ್‌ ಮೇಲೆ ಸಿದ್ದರಾಮಯ್ಯಗೆ ಪ್ರೀತಿ ಎಂಬ ಸಿ.ಟ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಕಿತ್ತೂರು ರಾಣಿ ಚೆನ್ನಮ್ಮ, ಕೆಂಪೇಗೌಡ ಜಯಂತಿ ಮಾಡಿದ್ದು ನಾನು, ಅವರ ಮೇಲೆ ಪ್ರೀತಿ ಇಲ್ವಾ. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣ ಅವರ ಫೋಟೋ ಹಾಕಿದ್ದೇವೆ ಹಾಗಾದರೆ ಪ್ರೀತಿ ಇಲ್ಲವಾ, ಇದನ್ನೆಲ್ಲ ಇವರು ಮಾಡಿದ್ದಾ ಎಂದು ಪ್ರಶ್ನೆ ಸಹ ಮಾಡಿದರು.

ವಿಜಯಪುರದ ಮಹಿಳಾ ವಿವಿಗೆ ಅಕ್ಕಮಹಾದೇವಿ ಹೆಸರು ಇಟ್ಟಿದ್ದು ಯಾರು? ಅಕ್ಕಮಹಾದೇವಿ ಅವರ ಮೇಲಿನ ಗೌರವದಿಂದ ಅಲ್ಲವೇ? ಅವರ ಹೆಸರಿಟ್ಟಿದ್ದು ಸರ್ಕಾರಿ ಕಚೇರಿಯಲ್ಲಿ ಬಸವಣ್ಣ ಅವರ ಫೋಟೋ ಇಟ್ಟಿದ್ದು ಕೂಡ ಗೌರವದಿಂದಾನೆ. ಹಿಂದೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಇವರು ಮಾಡಿದ್ರಾ ಎಂದು ಬಿಜೆಪಿಯನ್ನು ಪ್ರಶ್ನೆ ಮಾಡಿದರು.

ಜನರ ಮಧ್ಯೆ ವಿಷಬೀಜವನ್ನು ಬಿತ್ತುವ ಕೆಲಸವನ್ನು ಆರ್‌ಎಸ್‌ಎಸ್‌ ಮಾಡುತ್ತಿದೆ. ಪಠ್ಯ ಪುಸ್ತಕ ಪರಿಷ್ಕರಣಾ ಸಮೀತಿ ವಿಸರ್ಜನೆ ಬದಲು ಪರಿಷ್ಕೃತ ಪಠ್ಯವನ್ನು ವಿಸರ್ಜನೆ ಮಾಡಬೇಕು. ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿದ ಪಠ್ಯವನ್ನೇ ಮುಂದುವರಿಸಬೇಕು. ಶಿಕ್ಷಣ ಕೇಸರಿಕರಣ ಮಾಡಲು ರೋಹಿತ್ ಚಕ್ರತೀರ್ಥಗೆ ಪಠ್ಯಪರಿಷ್ಕರಣೆ ಹೊಣೆ ನೀಡಲಾಗಿತ್ತು. ಬಿಜೆಪಿಯವರು ಚರಿತ್ರೆ ತಿರುಚೋ ಕೆಲಸ ಮಾಡಿದ್ದಾರೆ. ಹೀಗಾಗಿ ಶಿಕ್ಷಣ ಸಚಿವ ನಾಗೇಶ್ ರಾಜೀನಾಮೆ‌ ನೀಡಲಿ ಎಂದು ಒತ್ತಾಯಿಸಿದರು.

ಇದನ್ನೂ ಓದಿ | ಅಗ್ನಿಪಥ ಯೋಜನೆ ಸ್ಥಗಿತಗೊಳಿಸಿ, ಚರ್ಚೆ ನಡೆಸಿ ಎಂದ ಸಿದ್ದರಾಮಯ್ಯ

Exit mobile version