ಬೆಂಗಳೂರು: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ಸಿಕ್ಕಿರುವ ಸ್ವಾತಂತ್ರ್ಯ ಸಾಮಾಜಿಕ, ಆರ್ಥಿಕ ತಳಹದಿಯ ಮೇಲೆ ರೂಪುಗೊಳ್ಳದಿದ್ದರೆ ಅದರ ಉದ್ದೇಶ ಈಡೇರುವುದಿಲ್ಲ ಎಂದಿದ್ದರು. ಹೀಗಾಗಿ ಸ್ವಾತಂತ್ರ್ಯದ ಉದ್ದೇಶ ಈಡೇರಬೇಕಾದರೆ ಸಮಾಜದಲ್ಲಿ ಅವಕಾಶ ಮತ್ತು ಸಂಪತ್ತು ಸಮಾನ ಹಂಚಿಕೆ ಆಗಿ ಸಮ ಸಮಾಜ ನಿರ್ಮಾಣ ಆಗಬೇಕು ಎಂದು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಆಶಯ ವ್ಯಕ್ತಪಡಿಸಿದರು.
ಕಮಲಾ ಹಂಪನಾ ಸಾಹಿತ್ಯ ವೇದಿಕೆಯಿಂದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ‘ಬೆಳಕು ಬಿತ್ತಿದವರು’, ‘ಪ್ರಾಕೃತಾ ಕಥಾ ಸಾಹಿತ್ಯ’ ಮತ್ತು ‘the journey of life’ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ದೇಶದ ಆಸ್ತಿ ಮತ್ತು ಉತ್ಪಾದನೆ ಕೆಲವೇ ವ್ಯಕ್ತಿಗಳ ಕೈಯಲ್ಲಿ ಸಂಗ್ರಹ ಆಗುತ್ತಿರುವುದರಿಂದ ಸಾಮಾಜಿಕ, ಆರ್ಥಿಕ ಅಸಮಾನತೆ ಮುಂದುವರಿಯುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ | Karnataka Politics : ಸೆ. 16ರಿಂದ ರಾಜ್ಯಾದ್ಯಂತ ಹೋರಾಟ; ಸರ್ಕಾರ ತೊಲಗುವವರೆಗೂ ಅಭಿಯಾನ ಬಿಎಸ್‌ವೈ ಗುಡುಗು
ಅಂತರ್ಜಾತಿ ವಿವಾಹ ಜಾತಿ ವಿನಾಶದ ಪ್ರಥಮ ಹೆಜ್ಜೆ
ಜಾತಿ ನಾಶವಾಗದೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಅಂತರ್ಜಾತಿ ವಿವಾಹ ಜಾತಿ ವಿನಾಶದ ಪ್ರಥಮ ಹೆಜ್ಜೆ. ನಮ್ಮ ಸಂವಿಧಾನ ಕೂಡ ನಮ್ಮದು ಜಾತ್ಯತೀತ ಸಮಾಜ ಎಂದು ಹೇಳಿದೆ. ಆ ಕಾಲದಲ್ಲೇ ಅಂತರ್ಜಾತಿ ವಿವಾಹವಾಗಿ ತಮ್ಮ ಮೂವರೂ ಮಕ್ಕಳನ್ನು ಅಂತರ್ಜಾತಿ ವಿವಾಹ ಮಾಡಿರುವ ಹಂಪ ನಾಗರಾಜಯ್ಯ ಮತ್ತು ಕಮಲಾ ಹಂಪನಾ ಅವರು ನಿಜಕ್ಕೂ ಆದರ್ಶ ದಂಪತಿ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
ಜಾತಿ ಯಾವುದಿದ್ದರೂ ನಾವು ಅಂತಿಮವಾಗಿ ಮನುಷ್ಯರಾಗಬೇಕು. ಮನುಷ್ಯ ಮನುಷ್ಯ ಪ್ರೀತಿಸುವುದೇ ಧರ್ಮ. ದ್ವೇಷಿಸುವುದು ಅಧರ್ಮ. ಆದರೆ ಇಂದು ದ್ವೇಷವನ್ನು ಆರಾಧಿಸುವ ಸಮಾಜವನ್ನು ನಿರ್ಮಿಸುವ ಅಪಾಯಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಇದಕ್ಕೆ ಪ್ರಜ್ಞಾವಂತರಾದ ನಾವೆಲ್ಲರೂ ತಡೆ ಹಾಕಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ | DK Shivakumar : ನಮ್ಮದು ಆಪರೇಷನ್ ಅಲ್ಲ, ಕೋ-ಆಪರೇಷನ್; ಬೇರೆ ಪಕ್ಷದವರನ್ನು ಸೆಳೆಯೋ ತಂತ್ರಕ್ಕೆ ಡಿಕೆಶಿ ಹೊಸ ಹೆಸರು!
ಹಂಪಾ ನಾಗರಜಯ್ಯ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಕೃತಿಗಳ ಕುರಿತು ಮಾತನಾಡಿದರು. ಲೇಖಕ ಜಿ.ಎನ್.ಮೋಹನ್ ಮತ್ತು ಕಮಲಾ ಹಂಪನಾ ವೇದಿಕೆಯಲ್ಲಿದ್ದರು.