ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ 2ನೇ ಬಾರಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಸಿದ್ದರಾಮಯ್ಯ ಅವರು ಎರಡು ಮಹತ್ವದ ತೀರ್ಮಾನಗಳನ್ನು ಪ್ರಕಟಿಸುವ ಮೂಲಕ ಜನರ ಗಮನ ಸೆಳೆದಿದ್ದಾರೆ. ಮೊದಲಿಗೆ ಓಡಾಟದ ವೇಳೆ ತಮಗೆ ನೀಡಲಾಗುವ ಜೀರೋ ಟ್ರಾಫಿಕ್ ವ್ಯವಸ್ಥೆ ಬೇಡ ಎಂದಿದ್ದ ಸಿದ್ದರಾಮಯ್ಯ, ನಂತರ ಗೌರವ ಹಾಗೂ ಸನ್ಮಾನದ ರೂಪದಲ್ಲಿ ಹಾರ ತುರಾಯಿ ಸ್ವೀಕರಿಸದಿರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳ ಸರಳತೆ ಬಗ್ಗೆ ಸಾರ್ವಜನಿಕರಿಂದ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಾಳೆಯಿಂದ ಸಾರ್ವಜನಿಕರಿಂದ ಗೌರವ-ಸನ್ಮಾನದ ರೂಪದಲ್ಲಿ ಹಾರ-ತುರಾಯಿ, ಶಾಲು-ಶಲ್ಯಗಳನ್ನು ಸ್ವೀಕರಿಸದೆ ಇರಲು ನಿರ್ಧರಿಸಿದ್ದೇನೆ. ಇದು ನನ್ನ ಮನೆ-ಕಚೇರಿ ಮತ್ತು ಸಾರ್ವಜನಿಕ ಸಮಾರಂಭಗಳಿಗೂ ಅನ್ವಯ. ಪ್ರೀತಿ-ಗೌರವವನ್ನು ಕಾಣಿಕೆಗಳ ಮೂಲಕವೇ ಸಲ್ಲಿಸಬೇಕೆನ್ನುವವರು ಪುಸ್ತಕಗಳನ್ನು ನೀಡಬಹುದು. ನಿಮ್ಮೆಲ್ಲರ ಪ್ರೀತಿ-ಅಭಿಮಾನ ಸದಾ ನನ್ನ ಮೇಲಿರಲಿ ಎಂದು ಕೋರಿದ್ದಾರೆ. ಸಿಎಂ ಟ್ವೀಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನೆಟ್ಟಿಗರು, ಇದು ಒಳ್ಳೆಯ ತೀರ್ಮಾನ, ಸರಳತೆಯೇ ನಿಮ್ಮ ವಿಶೇಷತೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ವಿ.ಸುನೀಲ್ ಕುಮಾರ್ ಅವರು ಕೂಡ ಹೀಗೆಯೇ ಹಾರ ತುರಾಯಿ ಬದಲಿಗೆ ಪುಸ್ತಕಗಳನ್ನು ನೀಡಿ ಎಂದು ಹೇಳಿದ್ದರು. ವೈಯಕ್ತಿಕವಾಗಿ ಯಾರೂ ಹಾರ ತುರಾಯಿಗಳನ್ನು ತರಬಾರದು, ಒಂದು ವೇಳೆ ಏನಾದರೂ ನೀಡಲೇಬೇಕು ಎಂದಿದ್ದರೆ ಕನ್ನಡ ಪುಸ್ತಕವನ್ನು ಕೊಂಡು ತನ್ನಿ ಎಂದು ಸುನೀಲ್ ಕುಮಾರ್ ಮನವಿ ಮಾಡಿದ್ದರು.
ಇದನ್ನೂ ಓದಿ | DK Shivakumar: ನನ್ನ, ಸಿದ್ದರಾಮಯ್ಯ ಮನೆ ಸುತ್ತೋದು, ಚಾಡಿ ಹೇಳೋದು ಬಿಡಿ; ಡಿಕೆಶಿ ಖಡಕ್ ವಾರ್ನಿಂಗ್
ಸಿದ್ದರಾಮಯ್ಯ ಅವರ ಟ್ವೀಟ್
ನಂಗೆ ಜೀರೋ ಟ್ರಾಫಿಕ್ ಬೇಡ ಎಂದ ಸಿದ್ದರಾಮಯ್ಯ, ಮಂತ್ರಿಗಳೂ ಪಾಲಿಸಲಿ ಎಂದ ನೆಟ್ಟಿಗರು
ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ (Karnataka CM) ಅಧಿಕಾರ ಸ್ವೀಕರಿಸಿದ ಮರುದಿನವೇ ಸಿದ್ದರಾಮಯ್ಯ (siddaramaiah) ಅವರು ಮಹತ್ವದ ತೀರ್ಮಾನವೊಂದನ್ನು ಪ್ರಕಟಿಸಿದ್ದಾರೆ . ಅವರು ತಮ್ಮ ಓಡಾಟದ ವೇಳೆ ನೀಡಲಾಗುವ ಜೀರೋ ಟ್ರಾಫಿಕ್ (Zero traffic) ಸೌಲಭ್ಯ ಬೇಡ ಎಂದು ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.
ʻʻನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ. ಜೀರೊ ಟ್ರಾಪಿಕ್‌ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆʼʼ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಪೊಲೀಸ್ ನಿಯಮಗಳ ಪ್ರಕಾರ, ರಾಜ್ಯದ ಮುಖ್ಯಮಂತ್ರಿಗಳು, ಗೃಹ ಸಚಿವರು ಮತ್ತು ಇತರ ಪ್ರಮುಖ ಹುದ್ದೆಯಲ್ಲಿರುವವರು ಅಗತ್ಯ ಕೆಲಸಗಳಿಗಾಗಿ ಸಂಚರಿಸುವಾಗ ಆ ದಾರಿಯಲ್ಲಿ ಎಲ್ಲಾ ವಾಹನಗಳನ್ನು ತಡೆದು ಜೀರೋ ಟ್ರಾಫಿಕ್ ವ್ಯವಸ್ಥೆಯನ್ನು ಮಾಡುತ್ತಾರೆ. ಕೆಲವೊಮ್ಮೆ ಅವರು ಸಂಚರಿಸುವ ಮಾರ್ಗವನ್ನು ಪೂರ್ಣವಾಗಿ ಮುಚ್ಚಿದರೆ ಇನ್ನು ಕೆಲವು ಸಂದರ್ಭದಲ್ಲಿ ಹಂತ ಹಂತವಾಗಿ ರಸ್ತೆಗಳನ್ನು ಮುಚ್ಚಲಾಗುತ್ತದೆ.
ರಾಜಕಾರಣಿಗಳ ಜೀರೋ ಟ್ರಾಫಿಕ್ ವ್ಯವಸ್ಥೆಯಿಂದಾಗಿ ಸಾರ್ವಜನಿಕರು ಭಾರಿ ತೊಂದರೆಗೆ ಒಳಗಾಗುವುದನ್ನು ಗಮನಿಸಿ ಸಿದ್ದರಾಮಯ್ಯ ಅವರು ಈ ರೀತಿಯ ನಿರ್ಧಾರಕ್ಕೆ ಬಂದಿದ್ದಾರೆ. ಈ ಹಿಂದೆ ಜಿ. ಪರಮೇಶ್ವರ್ ಅವರು ಗೃಹ ಮಂತ್ರಿಯಾಗಿದ್ದಾಗ ತನಗೆ ಜೀರೋ ಟ್ರಾಫಿಕ್ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದರು. ಅವರಿಗಿಂತ ಹಿಂದೆ ಗೃಹ ಸಚಿವರಾಗಿದ್ದವರು ಜೀರೊ ಟ್ರಾಫಿಕ್ ನಿರಾಕರಿಸಿದ್ದರು. ಆದರೆ, ಪರಮೇಶ್ವರ್ ಬಿಡಲು ಸಿದ್ಧರಿರಲಿಲ್ಲ.
ಇದನ್ನೂ ಓದಿ | Watch gift to CM: ಸಿಎಂ ಆದ ಖುಷಿಗೆ ಹೆಂಡ್ತಿಯಿಂದ ವಾಚ್ ಗಿಫ್ಟ್; ಸಿದ್ದರಾಮಯ್ಯ ಫುಲ್ ಖುಷ್
ಮಂತ್ರಿಗಳಿಗೂ ಅದೇ ಸೂಚನೆ ನೀಡಿ ಎಂದ ನೆಟ್ಟಿಗರು
ಜೀರೋ ಟ್ರಾಫಿಕ್ ನಿರಾಕರಿಸುವ ಸಿದ್ಧರಾಮಯ್ಯ ಅವರ ನಡುವೆಯನ್ನು ನೆಟ್ಟಿಗರು ಪ್ರಶಂಸಿಸಿದ್ದಾರೆ. ಜತೆಗೇ ನಿಮ್ಮ ಆದರ್ಶವನ್ನು ಸಂಪುಟದ ಇತರ ಸಚಿವರು ಕೂಡಾ ಪಾಲಿಸುವಂತೆ ಸಲಹೆ ನೀಡಿ, ಬೇಕಿದ್ದರೆ ಯಾರೂ ತೆಗೆದುಕೊಳ್ಳಬಾರದು ಎಂಬ ಸಲಹೆ ನೀಡಿ ಎಂದು ಹೇಳಿದ್ದಾರೆ.