ಕೋಲಾರ: ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಸ್ತ್ರೀ ಶಕ್ತಿ ಸಂಘಗಳಿಗೆ ಈಗ ಕೊಡುತ್ತಿರುವ ಬಡ್ಡಿ ರಹಿತ ಸಾಲದ ಪ್ರಮಾಣವನ್ನು 50 ಸಾವಿರ ರೂ.ಗಳಿಂದ 1 ಲಕ್ಷ ರೂಪಾಯಿಗೆ ಹೆಚ್ಚಿಸಲಾಗುತ್ತದೆ. ಸಕಾಲದಲ್ಲಿ ಮರುಪಾವತಿಸಿದ ಸಂಘಗಳ ಉಳಿಕೆ ಕಂತು ರದ್ದು ಮಾಡಲಾಗುತ್ತದೆ. ರೈತರಿಗೆ 5 ಲಕ್ಷ ರೂಪಾಯಿಯ ಬಡ್ಡಿರಹಿತ ಸಾಲ ನೀಡಲಾಗುತ್ತದೆ. ಹಾಗೆಯೇ ರೈತರಿಗೆ ಶೇ. 3ರಷ್ಟು ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿವರೆಗೆ ಸಿಗುತ್ತಿರುವ ಸಾಲದ ಪ್ರಮಾಣವನ್ನು ಹಂತ ಹಂತವಾಗಿ 20 ಲಕ್ಷ ರೂಪಾಯಿಗೆ ಹೆಚ್ಚಿಸುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಭರವಸೆ ನೀಡಿದ್ದಾರೆ.
ತಾಲೂಕಿನ ವೇಮಗಲ್‌ನಲ್ಲಿ ಆಯೋಜಿಸಿದ್ದ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರವಿದ್ದಾಗ ಡಿಸಿಸಿ ಬ್ಯಾಂಕ್ ಮೂಲಕ ಮಹಿಳೆಯರಿಗೆ 50 ಸಾವಿರ ರೂಪಾಯಿ ಬಡ್ಡಿ ರಹಿತ ಸಾಲ ಸೌಲಭ್ಯ ನೀಡಲಾಯಿತು. ಇನ್ನೂ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲೆಯ ನಾಯಕರು ಮನವಿ ಮಾಡಿದ್ದಾರೆ. ಅವುಗಳನ್ನು ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆ ಸಮಿತಿ ಗಮನಕ್ಕೆ ತಂದು, ಎಲ್ಲ ಅಂಶಗಳನ್ನು ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡಿ, ಅನುಷ್ಠಾನ ಮಾಡುತ್ತೇವೆ ಎಂದರು.
ಸ್ತ್ರೀಶಕ್ತಿ ಸಂಘಗಳಿಗೆ ಈಗ ಕೊಡುತ್ತಿರುವ ಬಡ್ಡಿ ರಹಿತ ಸಾಲದ ಪ್ರಮಾಣವನ್ನು 50 ಸಾವಿರ ರೂ.ಗಳಿಂದ 1 ಲಕ್ಷ ರೂ.ಗಳಿಗೆ ಹೆಚ್ಚಿಸುವ ಒತ್ತಾಯವಿದೆ. ಜತೆಗೆ ಸಕಾಲಕ್ಕೆ ಸಾಲ ಮರುಪಾವತಿ ಮಾಡಿದವರಿಗೆ ಉಳಿಕೆ ಕಂತುಗಳನ್ನು ಮನ್ನಾ ಮಾಡಲಾಗುತ್ತದೆ. ರೈತರಿಗೆ 3 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತಿತ್ತು. ಅದನ್ನು 5 ಲಕ್ಷ ರೂಪಾಯಿಗೆ ಹೆಚ್ಚಿಸಲಾಗುತ್ತದೆ. ಹಾಗೆಯೇ ಶೇ.3ರಷ್ಟು ಬಡ್ಡಿದರದಲ್ಲಿ 10 ಲಕ್ಷ ರೂಪಾಯಿವರೆಗೆ ಸಾಲ ನೀಡಲಾಗುತ್ತಿತ್ತು. ಅದನ್ನು 20 ಲಕ್ಷ ರೂಪಾಯಿಗೆ ಹೆಚ್ಚಿಸುತ್ತೇವೆ. ಈ ಅಂಶಗಗಳನ್ನು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಮಿತಿಯೊಂದಿಗೆ ಚರ್ಚಿಸಿ, ನಮ್ಮ ಸರ್ಕಾರ ಬಂದಮೇಲೆ ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ | Aero India 2023: ಕರ್ನಾಟಕದ ಯುವಕರೇ ನಿಮ್ಮ ತಾಂತ್ರಿಕ ಕೌಶಲವನ್ನು ರಕ್ಷಣಾ ಕ್ಷೇತ್ರದಲ್ಲಿ ತೊಡಗಿಸಿ: ಪ್ರಧಾನಿ ನರೇಂದ್ರ ಮೋದಿ ಕರೆ
ಹೈನುಗಾರಿಕೆಗೆ ಸಾಲ ತೆಗೆದುಕೊಂಡರೆ ಲೆಕ್ಕ ಹಾಕಿ ಸಹಾಯ ಮಾಡುವ ಕೆಲಸ ಮಾಡುತ್ತೇವೆ. ಎಪಿಎಂಸಿಗೆ ನೂರು ಎಕರೆ ಮಂಜೂರು ಮಾಡುತ್ತೇವೆ. ಕೋಲಾರ ಜಿಲ್ಲೆಗೆ ಟೊಮ್ಯಾಟೊ, ಮಾವು ಸಂಸ್ಕರಣಾ ಘಟಕಗಳನ್ನು ಮಾಡುತ್ತೇವೆ. ಹಾಲಿಗೆ ಪ್ರೋತ್ಸಾಹ ಧನ 5 ರೂಪಾಯಿ ನೀಡುತ್ತಾರೆ, ಅದನ್ನು 6 ರೂಪಾಯಿಗೆ ಏರಿಸುತ್ತೇವೆ. ನಮ್ಮ ಸರ್ಕಾರ ಬಂದ ತಕ್ಷಣ ಎಪಿಎಂಪಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುತ್ತೇವೆ ಎಂದು ತಿಳಿಸಿದರು.
ಜಿಲ್ಲೆಯ ನಾಯಕರಿಂದ ಕೆಸಿ ವ್ಯಾಲಿ ಯೋಜನೆ ಮಾಡುವ ಬೇಡಿಕೆ ಬಂದಾಗ 1400 ಕೋಟಿ ರೂಪಾಯಿ ಖರ್ಚು ಮಾಡಿ ಕೆರೆಗಳನ್ನು ತುಂಬಿಸುವ ಕೆಲಸ ಮಾಡಲಾಯಿತು. ಕೊಳಚೆ ನೀರನ್ನು ಕೆರೆಗಳಿಗೆ ತುಂಬಿಸಬಾರದು ಎಂದು ಯೋಜನೆಗೆ ಜೆಡಿಎಸ್ ವಿರೋಧ ಮಾಡಿತು. ಈಗ ಕೆ.ಎಚ್. ಮುನಿಯಪ್ಪ 3ನೇ ಹಂತದ ಶುದ್ಧೀಕರಣಕ್ಕೆ ಒತ್ತಾಯಿಸಿದ್ದಾರೆ. ಅದನ್ನು ಕೂಡ ಮಾಡುತ್ತೇವೆ. ಇನ್ನು ಎತ್ತಿನ ಹೊಳೆ ಯೋಜನೆ ಕೂಡ ಸಂಪೂರ್ಣ ಮಾಡಿ ಕುಡಿಯುವ ನೀರನ್ನು ಕೊಡುತ್ತೇವೆ ಎಂದು ಹೇಳಿದರು.
ಈಗಾಗಲೇ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಕುಟುಂಬದ ಮಹಿಳೆಗೆ 2000 ರೂಪಾಯಿ ನೀಡುತ್ತೇವೆ ಎಂದು ಘೋಷಿಸಿದ್ದೇವೆ. ಈ ಎರಡು ಕಾರ್ಯಕ್ರಮಗಳಿಂದ 40 ಸಾವಿರ ಕೋಟಿ ರೂಪಾಯಿ ಹೊರೆಯಾಗುತ್ತದೆ. ನಮ್ಮ ಸರ್ಕಾರವಿದ್ದಾಗ 7 ಕೆಜಿ ಅಕ್ಕಿ ನೀಡಲಾಗುತ್ತಿತ್ತು. ಈಗ ಬಿಜೆಪಿ ಸರ್ಕಾರ ಅದನ್ನು 5 ಕೆಜಿಗೆ ಇಳಿಸಿದೆ. ಹೀಗಾಗಿ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಇಲ್ಲದಿದ್ದರೆ ರಾಜಕೀಯದಲ್ಲಿ ಇರುವುದಿಲ್ಲ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಅವರು ಕೆಲದಿನಗಳ ಹಿಂದೆ ನನ್ನ ಬಳಿ ಆಗಮಿಸಿ, ನಾವು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯೆಯರ ಸಮಾವೇಶ ಮಾಡುತ್ತಿದ್ದೇವೆ. ತಾವು ಆಗಮಿಸಬೇಕು ಎಂದು ಆಹ್ವಾನ ಕೊಟ್ಟಿದ್ದರು. ಹೀಗಾಗಿ ಕಾರ್ಯಕ್ರಮಕ್ಕೆ ಬಂದಿದ್ದು, ಇದು ಕೋಲಾರ ಕ್ಷೇತ್ರಕ್ಕೆ ಸೀಮಿತವಾದ ಸಮಾವೇಶವಾಗಿದೆ ಎಂದ ಅವರು, ನೀವೆಲ್ಲಾ ಆಶೀರ್ವಾದ ಮಾಡುತ್ತೇನೆ ಎಂದರೆ ನಾನು ಕೋಲಾರ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ | Assembly Session: ಕಾಂಗ್ರೆಸ್ ಕಡೆ ಹೊರಟಿರುವ ಶಿವಲಿಂಗೇಗೌಡರಿಗೆ ಬಿಜೆಪಿ ಆಹ್ವಾನ !: ಸದನದಲ್ಲಿ ಸಿ.ಟಿ. ರವಿ ಸ್ವಾರಸ್ಯಕರ ಮಾತು
ಪುರುಷರು ಮತ್ತು ಮಹಿಳೆಯರ ನಡುವೆ ತಾರತಮ್ಯ ಇದ್ದರೆ ಅಂತಹ ಸಮಾಜದಲ್ಲಿ ಶೋಷಣೆಯಾಗುತ್ತದೆ. ಸಂವಿಧಾನದಲ್ಲಿ ಪುರುಷರಿಗೆ ಎಷ್ಟು ಹಕ್ಕುಗಳು ಇವೆಯೋ ಅಷ್ಟೇ ಹಕ್ಕುಗಳನ್ನು ಮಹಿಳೆಯರಿಗೂ ನೀಡಲಾಗಿದೆ. ಲಿಂಗ ತಾರತಮ್ಯ ನಿರ್ಮೂಲನೆ ಮಾಡಲು ಕಾಂಗ್ರೆಸ್ ಹಲವು ಕಾನೂನುಗಳನ್ನು ಜಾರಿ ಮಾಡಿದೆ. ಸಮಾನ ವೇತನ, ವಿದವಾ ವಿವಾಹ ಕಾಯ್ದೆ, ಮಹಿಳೆಯರಿಗೆ ಆಸ್ತಿಯ ಹಕ್ಕು, ಉದ್ಯೋಗ, ರಾಜಕೀಯದಲ್ಲಿ ಮೀಸಲಾತಿ ಜಾರಿ ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂದರು.
ಬಿಜೆಪಿಯವರು ಯಾವತ್ತೂ ಮಹಿಳೆಯರಿಗೆ ನ್ಯಾಯಯುತ ಹಕ್ಕುಗಳನ್ನು ಕೊಡುವ ಕೆಲಸ ಮಾಡಿಲ್ಲ. ಆದರೆ, ಕಾಂಗ್ರೆಸ್ ಸಂವಿಧಾನದಲ್ಲಿ ನಂಬಿಕೆ ಇಟ್ಟುಕೊಂಡು ಬದ್ಧತೆಯಿಂದ ಕೆಲಸ ಮಾಡುತ್ತಿದೆ. ದೇಶದಲ್ಲಿ ತಾರತಮ್ಯ ಹೋಗಬೇಕೆಂದರೆ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ಮಹಿಳೆಯರು, ಶೂದ್ರರು, ದಲಿತರು, ಅಲ್ಪಸಂಖ್ಯಾತರು ಹಾಗೂ ರೈತರಿಗೆ ಸಾಮಾಜಿಕ ನ್ಯಾಯ ನೀಡಿದಾಗ ಮಾತ್ರ ತಾರತಮ್ಯ ಹೋಗಲು ಸಾಧ್ಯ ಎಂದರು.