ಬೀದರ್: ರಾಜ್ಯದಲ್ಲಿ ಒಂದು ಬಾರಿ ನನಗೆ ಸಿಎಂ ಆಗುವ ಅವಕಾಶ ಕೊಟ್ಟಿದ್ದೀರಿ. ನನ್ನ ರಾಜಕೀಯ ಜೀವನ ಮುಗಿಯುತ್ತಾ ಬಂದಿದೆ. ಇದು ನನ್ನ ಕೊನೆಯ ಚುನಾವಣೆ, ಆದರೆ, ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ. ನಿಮ್ಮೆಲ್ಲರ ಸಹಕಾರದಿಂದ ಪಕ್ಷಕ್ಕೆ ರಾಜಕೀಯ ಬೆಂಬಲ ಕೊಡುತ್ತೇನೆ ಎಂದು ಮತ್ತೊಮ್ಮೆ ಸಿಎಂ ಆಗಲು ಆಶೀರ್ವಾದ ಮಾಡುವಂತೆ ಪರೋಕ್ಷವಾಗಿ ಜನರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಹುಮನಾಬಾದ್ ಶನಿವಾರ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜಶೇಖರ ಪಾಟೀಲ್ ಸರ್ವ ಧರ್ಮದವರೊಂದಿಗೆ ಬೆರೆಯುತ್ತಾರೆ. ಅವರೊಬ್ಬ ಜಾತ್ಯತೀತ ವ್ಯಕ್ತಿಯಾಗಿದ್ದು, ಅವರ ರಾಜಕೀಯ ಜೀವನ ಇನ್ನು ಬಹಳ ಇದೆ. ನನ್ನ ರಾಜಕೀಯ ಜೀವನ ಮುಗಿಯುತ್ತಾ ಬಂದಿದೆ. ಇದು ನನ್ನ ಕೊನೆಯ ಚುನಾವಣೆಯಾಗಿದೆ. ಆದರೆ, ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ ಎಂದು ಹೇಳಿದರು.
ಶಾಸಕ ಜಮೀರ್ ಅಹ್ಮದ್ ಮಾತನಾಡಿ, ಶುಕ್ರವಾರದಿಂದ ಎರಡನೇ ಹಂತದ ಪ್ರಜಾಧ್ವನಿ ಯಾತ್ರೆ ಆರಂಭ ಮಾಡಿದ್ದೇವೆ. ಇಂದಿನ ಜನ ಸಾಗರ ನೋಡಿದರೆ ಹುಮನಾಬಾದ್‌ನಲ್ಲಿ ರಾಜಶೇಖರ್ ಪಾಟೀಲ್ ಗೆಲುವು ಖಚಿತ ಎನಿಸುತ್ತಿದೆ. ಹುಮನಾಬಾದ್‌ನಲ್ಲಿ ಅಲ್ಪಸಂಖ್ಯಾತ ಮತಗಳು ಹೆಚ್ಚಿವೆ. ಈ ಹಿಂದೆ ಜೆಡಿಎಸ್‌ನಿಂದ ಮಿರಾಜುದ್ದೀನ್ ಪಟೇಲ್ ಗೆದ್ದಿದ್ದು ಅಲ್ಪಸಂಖ್ಯಾತರ ಮತಗಳಿಂದ. ಜೆಡಿಎಸ್ ಮತಗಳಿಂದ ಅಲ್ಲ ಎಂದ ಹೇಳಿದರು.
ಇದನ್ನೂ ಓದಿ | JDS Politics: ನಿರೀಕ್ಷಿತ ಕೆಲಸ ಮಾಡದಿದ್ರೆ ಬದಲಾವಣೆ; ಜೆಡಿಎಸ್ ಅಭ್ಯರ್ಥಿಗಳಿಗೆ ಎಚ್‌ಡಿಕೆ ಖಡಕ್ ಎಚ್ಚರಿಕೆ
ಕಾಂಗ್ರೆಸ್ ಬಗ್ಗೆ ಮಾತನಾಡಲು ಸಿಎಂ ಇಬ್ರಾಹಿಂಗೆ ನಾಚಿಕೆ ಆಗಬೇಕು. ಕಾಂಗ್ರೆಸ್‌ನಲ್ಲಿದ್ದೇ ಇಷ್ಟು ವರ್ಷ ಈಗ ಜೆಡಿಎಸ್ ಹೋದ ಮೇಲೆ ಮಾತಾಡ್ತಿಯಾ? ಹುಮನಾಬಾದ್‌ನಲ್ಲಿ ಸಿಎಂ ಇಬ್ರಾಹಿಂ ಪುತ್ರನಿಗೆ ಮತ ಹಾಕಿದರೆ ಬಿಜೆಪಿಗೆ ಹಾಕಿದ ಹಾಗೆ. 60 ಕೋಟಿ ರೂಪಾಯಿಗೆ ನೀನು ಮಾರಾಟವಾಗಿದ್ದೀಯಾ ಎಂದ ಅವರು, ಕುಮಾರಸ್ವಾಮಿ ಬಗ್ಗೆ ನಿನಗೆ ಏನು ಗೊತ್ತು. ನಾನು ಬಹಳ ಹತ್ತಿರದಲ್ಲಿ ನೋಡಿದ್ದೇನೆ. ಕುಮಾರಸ್ವಾಮಿ ಹಾವು ಇದ್ದ ಹಾಗೆ, ಹಾವು ಯಾವಾಗ ಕಡಿಯುತ್ತದೆ ಗೊತ್ತಿಲ್ಲಾ, ಹಾವಿನ ಹಾಗೆ ಅವರು ಬುಸುಗುಟ್ಟುತ್ತಾರೆ ಎಂದು ಕಿಡಿಕಾರಿದರು.