ರಾಯಚೂರು: ಎಸ್‌ಸಿ, ಎಸ್‌ಟಿ ಮೀಸಲಾತಿ(SCST reservation) ಹೆಚ್ಚಳ ಮಾಡಲು ರಾಜ್ಯ ಸರ್ಕಾರ, ಸುಗ್ರೀವಾಜ್ಞೆ ಬದಲಿಗೆ ವಿಶೇಷ ಅಧಿವೇಶನ ಕರೆದು ಮೀಸಲಾತಿ ತಿದ್ದುಪಡಿ ಮಸೂದೆ ತಿದ್ದುಪಡಿ ಮಂಡನೆ ಮಾಡಿ ಶಾಸಕಾಂಗದ ಒಪ್ಪಿಗೆ ಪಡೆಯಬೇಕು. ಇದಕ್ಕೆ ಕಾಂಗ್ರೆಸ್ ಬೆಂಬಲ ನೀಡಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಜಿಲ್ಲೆಯ ಗಿಲ್ಲೆಸುಗೂರಿನಲ್ಲಿ ಕಾಂಗ್ರೆಸ್‌ನ ಭಾರತ್ ಜೋಡೊ ಯಾತ್ರೆಯಲ್ಲಿ ಶುಕ್ರವಾರ ಮಾತನಾಡಿ, ಎಸ್‌ಸಿ ಎಸ್‌ಟಿ ಜನ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಇರಬೇಕು ಎಂಬ ಹೋರಾಟ ಹಳೆಯದು. ಸಮ್ಮಿಶ್ರ ಸರ್ಕಾರದಲ್ಲಿ ಪ್ರಿಯಾಂಕ್ ಖರ್ಗೆ ಸಚಿವರಾಗಿದ್ದಾಗ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚನೆಯಾಯಿತು. ಆದರೆ ಸಮಿತಿ ವರದಿ ನೀಡುವಾಗ ನಮ್ಮ ಸರ್ಕಾರ ಇರಲಿಲ್ಲ. ವರದಿ ಕೊಟ್ಟು ಎರಡು ವರ್ಷ ಮೂರು ತಿಂಗಳಿಗೂ ಹೆಚ್ಚು ಸಮಯವಾಗಿದೆ. ವರದಿ ಬಂದಾಗಿನಿಂದಾಗಲೂ ಎಸ್‌ಸಿ ಎಸ್‌ಟಿ ಶಾಸಕರು ಧ್ವನಿ ಎತ್ತಿದ್ದರು ಎಂದರು.
ಈ ಹಿಂದೆ ಅಧಿವೇಶನದಲ್ಲಿ ಶಾಸಕರು ಸದನದ ಬಾವಿಗಿಳಿದು ಹೋರಾಟ ಮಾಡಿದಾಗ ಸಿಎಂ ಸರ್ವ ಪಕ್ಷ ಶಾಸಕರ ಸಭೆ ಕರೆಯುತ್ತೇನೆ ಎಂದು ಹೇಳಿದ್ದರು. ಎಸ್‌ಟಿ ಮೀಸಲಾತಿ ಶೇ.3ರಿಂದ 7ಕ್ಕೆ ಹೆಚ್ಚಳ ಮಾಡಬೇಕು, ಎಸ್‌ಸಿ ಶೇ.15ರಿಂದ 17 ಆಗಬೇಕು, ಒಟ್ಟು ಶೇ.24 ಆಗಬೇಕು ಎಂದು ನಾಗಮೋಹನ್ ದಾಸ್ ಸಮಿತಿ ವರದಿಯಲ್ಲಿದೆ. ಮೀಸಲಾತಿ ಶೇ.50ಕ್ಕಿಂತ ಹೆಚ್ಚಾಗಬಾರದು ಎಂಬ ನಿಯಮ ಉಲ್ಲಂಘನೆಯಾಗುತ್ತದೆ. ಮೀಸಲಾತಿ ಹೆಚ್ಚಳವಾದರೆ ಒಟ್ಟು ಶೇ.56 ಆಗುತ್ತದೆ. ಇದಕ್ಕೆ ರಕ್ಷಣೆ ಸಿಗಬೇಕಾದರೆ ಸಂವಿಧಾನ ತಿದ್ದುಪಡಿ ಮಾಡಿ, ಸಂವಿಧಾನ 9ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ | ವಿಸ್ತಾರ ವಿಶ್ಲೇಷಣೆ | ಮೂರನೇ ಶಕ್ತಿಕೇಂದ್ರ ಆಗಲಿದ್ದಾರ ಮಲ್ಲಿಕಾರ್ಜುನ ಖರ್ಗೆ?: ಯಾವ ಬಣಕ್ಕೆ ಲಾಭ, ಯಾರಿಗೆ ನಷ್ಟ?