ಚಿಕ್ಕಬಳ್ಳಾಪುರ: ಬಿಜೆಪಿಯವರು ಟಿಪ್ಪು ಸುಲ್ತಾನನನ್ನು ಬಹಳ ವಿರೋಧ ಮಾಡುತ್ತಾರಲ್ಲವೇ, ಆದರೆ ಮಾಜಿ ಸಿಎಂ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಟಿಪ್ಪು ಸುಲ್ತಾನ್ ಬಗ್ಗೆ ಏನು ಹೇಳಿದ್ದಾರೆ ಎಂದು ತೋರಿಸಲೆ? ಆಗ ಯಾಕೆ ಬಿಜೆಪಿಯವರು ಪ್ರತಿಭಟನೆ ಮಾಡಲಿಲ್ಲ? ಈ ಬಿಜೆಪೆಯವರೆಲ್ಲ ಡೋಂಗಿಗಳು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ನಗರದ ಕೆ.ವಿ ಕ್ಯಾಂಪಸ್ ಮುಂಭಾಗದಲ್ಲಿ ದಲಿತ ಸಂಘರ್ಷ ಸಮಿತಿಯಿಂದ 131ನೇ ಅಂಬೆಂಡ್ಕರ್ ಜಯಂತಿ ಪ್ರಯುಕ್ತ ಭಾನುವಾರ ಏರ್ಪಡಿಸಿದ್ದ ಮಂತ್ರ ಮಾಂಗಲ್ಯದ ಮೂಲಕ 101 ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಮಾಂಸಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿರುವ ಬಗ್ಗೆ ಸುದ್ದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಗರಂ ಆದ ಅವರು, ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದರೆ ತಪ್ಪೇನು? ಒಂದು ದಿನದ ಮುಂಚೆ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದರೆ ತಪ್ಪಾಗಲ್ಲವೇ? ಮಾಂಸಾಹಾರಿಗಳು ಮಾಂಸ ತಿನ್ನುತ್ತಾರೆ, ಸಸ್ಯಾಹಾರಿಗಳು ಸಸ್ಯಾಹಾರ ತಿನ್ನುತ್ತಾರೆ. ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಬೇಡ ಎಂದು ಕೇಳಲು ನೀನು ಯಾರು ಎಂದು ಈ ಬಗ್ಗೆ ಪ್ರಶ್ನಿಸಿದ ಪತ್ರಕರ್ತರನ್ನೇ ಪ್ರಶ್ನಿಸಿದ್ದಾರೆ.
ಈಶ್ವರಪ್ಪ ಎಂಬ ಪೆದ್ದ ಇದ್ದಾನೆ, ಆತ ಮಂತ್ರಿಯಾಗಿ ಕೆಂಪು ಕೋಟೆಯ ಮೇಲೆ ರಾಷ್ಟ್ರ ಧ್ವಜ ಬದಲು ಭಗವಾನ್ ಧ್ವಜ ಹಾರಿಸುತ್ತೇವೆ ಎಂದು ಹೇಳುತ್ತಾನೆ. 57 ವರ್ಷ ಆರ್‌ಎಸ್ಎಸ್ ಕಚೇರಿ ಮೇಲೆ ಧ್ವಜವನ್ನು ಹಾರಿಸಿರಲಿಲ್ಲ ಎಂದ ಅವರು, ಕೊಡಗಿನಲ್ಲಿ ಕಾರಿನ ಮೇಲೆ ಮೊಟ್ಟೆ ಎಸೆದವನು ಬಿಜೆಪಿ ಕಾರ್ಯಕರ್ತ. ಈ ಬಗ್ಗೆ ಹಲವು ಸಾಕ್ಷ್ಯ ಇವೆ, ಆದರೆ ಬಿಜೆಪಿಯವರು ಅವರ ಕೈಯಲ್ಲಿ ಸುಳ್ಳು ಹೇಳಿಸಿದ್ದಾರೆ ಎಂದು ಕಿಡಿ ಕಾರಿದರು.
ಇದನ್ನೂ ಓದಿ | ಬಿಡುಗಡೆಗಾಗಿ ಸಾವರ್ಕರ್ ಭಿಕ್ಷೆ ಬೇಡಿದ್ದರು: ಕಾಂಗ್ರೆಸ್ ಶಾಸಕ ಯು.ಟಿ. ಖಾದರ್
ಬಿಜೆಪಿಯವರು ಟಿಪ್ಪು ಸುಲ್ತಾನನನ್ನು ಬಹಳ ವಿರೋಧ ಮಾಡುತ್ತಾರಲ್ಲವೇ? ಆದರೆ ಮಾಜಿ ಸಿಎಂ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹಾಗೂ ಉಮೇಶ್ ಕತ್ತಿ ಏನು ಹೇಳಿದ್ದಾರೆ ಎಂದು ತೋರಿಸಲೆ? ಆಗ ಯಾಕೆ ಇವರು ಪ್ರತಿಭಟನೆ ಮಾಡಲಿಲ್ಲ ಎಂದು ಪ್ರಶ್ನಿಸಿದ ಅವರು, ಜಗದೀಶ್ ಶೆಟ್ಟರ್, ʼಟಿಪ್ಪು ಎ ಕ್ರುಸೇಡರ್ʼ ಎಂಬ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ, ಆಗ ಇವರಿಗೆ ಟಿಪ್ಪು ಒಳ್ಳೆಯವರಾಗಿದ್ದರು. ಇದೇ ಯಡಿಯೂರಪ್ಪ ಕಾರ್ಯಕ್ರಮದಲ್ಲಿ ಟಿಪ್ಪು ಪೇಟಾ ಹಾಕಿಕೊಂಡು, ಖಡ್ಗ ಹಿಡಿದುಕೊಂಡಿದ್ದರಲ್ಲವೇ, ಆಗ ಬೊಪಯ್ಯ ಹಾಗೂ ಪ್ರಲ್ಹಾದ ಜೋಶಿ ಎಲ್ಲಿ ಹೋಗಿದ್ದರು? ಇವರೆಲ್ಲಾ ನಾಟಕ ಮಾಡುತ್ತಿದ್ದಾರೆ, ಬಿಜೆಪಿಯವರು ಎಂದರೆ ಡೋಂಗಿಗಳು ಎಂದು ಕಿಡಿ ಕಾರಿದರು.
ಇದಕ್ಕೂ ಮುನ್ನಾ ಕಾರ್ಯಕ್ರಮದಲ್ಲಿ ಶಾಸಕ, ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ದೇಶ ಕೆಲವು ದಿನಗಳಿಂದ ಮಲಗಿತ್ತು, ಈಗ ಎದ್ದಿದ್ದು, ಹೊಸ ಪರ್ವಕ್ಕೆ ಬಂದಿದೆ. ಇದಕ್ಕೆಲ್ಲಾ ಕಾರಣಕರ್ತರಾದ ಸಿದ್ದರಾಮಯ್ಯ ಅವರನ್ನು ಮಾಜಿ ಸಿಎಂ ಎಂದು ಹೇಳಲು ನನಗೆ ಇಷ್ಟವಿಲ್ಲ. ಸಂವಿಧಾನ ಬೇಡ ಎಂದು ಕೆಲವರು ಹೇಳುತ್ತಿದ್ದಾರೆ. ಬೇಡ ಎನ್ನುವವರು ಕದ್ದು ಮುಚ್ಚಿ ಮೊಟ್ಟೆ ಎಸೆಯುತ್ತಿದ್ದಾರೆ, ಬೇಕು ಎನ್ನುವವರು ಸಿದ್ದರಾಮಯ್ಯನವರ ಹಾಗೇ ನೇರವಾಗಿ ಬರುತ್ತಾರೆ ಎಂದರು.
ರಾಹುಕಾಲ, ಗುಳಿಕಾಲ, ಅಮವಾಸ್ಯೆ ಎನ್ನುವವವರು ಮಗು ಹುಟ್ಟಿದ್ರೆ ಕತ್ತು ಹಿಸುಕಿ ಸಾಯಿಸುತ್ತಾರಾ?, ಶೋಷಣೆ ವಿರುದ್ಧ ಮಾತನಾಡುವವರು ವಿವಾದಕ್ಕಿಡಾಗುತ್ತಾರೆ. ಈಗ ಸಿದ್ದರಾಮಯ್ಯ ಅವರು ಕೂಡ ವಿವಾದಿತ ವ್ಯಕ್ತಿಯಾಗಿದ್ದಾರೆ. ಯಾರು ಶೋಷಣೆ ವಿರುದ್ಧ ನಿಲ್ಲುತ್ತಾರೋ ಅವರು ಇತಿಹಾಸದಲ್ಲಿ ಇರುತ್ತಾರೆ, ಎಲ್ಲರಿಗೂ ಒಳ್ಳೆಯವರು ಅಗಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿಡುಮಾಮಿಡಿ ಮಹಾ ಸಂಸ್ಥಾನದ ಪೀಠಾಧಿಪತಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಮಾಜಿ ಸಚಿವ ಮಹದೇವಪ್ಪ, ಶಾಸಕ ಎನ್.ಎಚ್ ಶಿವಶಂಕರರೆಡ್ಡಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ಇದನ್ನೂ ಓದಿ | ಉತ್ಸವಗಳಿಂದ ಜನ ವೋಟು ಹಾಕುತ್ತಾರೆಂಬುವುದು ಭ್ರಮೆ: ಸಿದ್ದರಾಮಯ್ಯಗೆ ಕುಮಾರಸ್ವಾಮಿ ಗೇಲಿ