ಕೋಲಾರ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಘೋಷಿಸಿರುವ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಪ್ರತಿಕ್ರಿಯಿಸಿದ್ದಾರೆ. ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಅವರ ರಾಜಕೀಯ ಜೀವನದ ಅಂತ್ಯವಾಗಲಿದೆ ಎಂದು ಬಿಜೆಪಿ ಅಭ್ಯರ್ಥಿ ವರ್ತೂರು ಪ್ರಕಾಶ್ ಹೇಳಿದ್ದರೆ, ಯಾರೇ ಅಭ್ಯರ್ಥಿಯಾದರೂ ನನಗೆ ಅಂಜಿಕೆಯಿಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಸಿ.ಎಂ.ಆರ್. ಶ್ರೀನಾಥ್ ಹೇಳುವ ಮೂಲಕ ಸ್ಪರ್ಧೆಗೆ ಆಹ್ವಾನ ನೀಡಿದ್ದಾರೆ.
ಕುರುಬ ಸಮುದಾಯದ ಅಭ್ಯರ್ಥಿಯನ್ನು ಮುಗಿಸಲು ಬಂದಿದ್ದಾರೆ
ತನಗೆ ಸಿದ್ದರಾಮಯ್ಯ ಪ್ರತಿಸ್ಪರ್ಧಿಯಲ್ಲ. ನನ್ನ ಪ್ರತಿಸ್ಪರ್ಧಿ ಜೆಡಿಎಸ್ ಆಗಿದೆ. ಅಹಿಂದ ಸಮುದಾಯವನ್ನು ಮುಗಿಸುವುದೇ ಸಿದ್ದರಾಮಯ್ಯ ಗುರಿಯಾಗಿದ್ದು, ರಾಜ್ಯದ ಎಲ್ಲ ಕುರುಬ ಸಮುದಾಯದವರನ್ನು ಮುಗಿಸಿ ಈಗ ನನ್ನನ್ನು ಮುಗಿಸಲು ಬಂದಿದ್ದಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ವರ್ತೂರ್ ಪ್ರಕಾಶ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ | Karnataka Election : ನಾನು ಕೋಲಾರದಿಂದಲೇ ಸ್ಪರ್ಧೆ ಮಾಡುವೆ: ಸಿದ್ದರಾಮಯ್ಯ ಘೋಷಣೆ
ಪುತ್ರ ವ್ಯಾಮೋಹದಿಂದ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಒಂದೇ ಸಮೂದಾಯದ ನನ್ನನ್ನು ಮುಗಿಸಲು ಬಂದಿದ್ದಾರೆ. ಅವರ ಹಿಂದೆದಿನ ರಾಜಕೀಯ ನಡೆ ನೋಡಿದರೆ ಅವರನ್ನು ರಾಜಕೀಯಕ್ಕೆ ತಂದ ದೇವೆಗೌಡರನ್ನೇ ತಿರಸ್ಕರಿಸಿ ಬಂದಿದ್ದಾರೆ. ಹತ್ತಿದ ಏಣಿಯನ್ನೇ ಒದೆಯುವ ಜಾಯಮಾನ ಅವರದ್ದ, ಸಿದ್ದರಾಮಯ್ಯ ರಾಜಕೀಯವಾಗಿ ಅಸ್ತಿತ್ವಕ್ಕೆ ಯಾರನ್ನು ಬೇಕಾದರೂ ಮುಗಿಸುತ್ತಾರೆ. ಆದರೆ ಕೋಲಾರ ಕ್ಷೇತ್ರದ ಸ್ಪರ್ಧೆ ಅವರ ರಾಜಕೀಯ ಭವಿಷ್ಯದ ಅಂತ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲು ಹೆದರಲ್ಲ
ಸಿದ್ದರಾಮಯ್ಯ ಆಗಿರಲಿ, ಯಾರೇ ಅಭ್ಯರ್ಥಿ ಆಗಲಿ ಶ್ರೀನಾಥ್ ಅವರೇ ಅಭ್ಯರ್ಥಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ನನಗೆ ಸಂಪೂರ್ಣ ಜನರ ಬೆಂಬಲವಿದೆ, ಸಿದ್ದರಾಮಯ್ಯ ವಿರುದ್ದ ಸ್ಪರ್ಧಿಸಲು ನನಗೆ ಅಂಜಿಕೆಯಿಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಹೇಳಿದ್ದಾರೆ.
ಕ್ಷೇತ್ರದ ಜನರ ಅಭಿಪ್ರಾಯ ಕಲೆಹಾಕಿ, ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಒಂದೂವರೆ ತಿಂಗಳ ಹಿಂದೆಯೇ ಕುಮಾರಣ್ಣ ಘೋಷಣೆ ಮಾಡಿದ್ದಾರೆ. ಈಗಾಗಲೇ ಹಲವರು ವಲಸಿಗರು ಸ್ವಾರ್ಥಕ್ಕಾಗಿ ಶಾಸಕರಾಗಿದ್ದಾರೆ. ಆದರೆ ಕೋಲಾರದ ಜನ ಸ್ವಾಭಿಮಾನಿಗಳಾಗಿದ್ದು, ನನಗೆ ಬೆಂಬಲ ನೀಡುತ್ತಾರೆ ಎಂದು ತಿಳಿಸಿದ್ದಾರೆ.
ಐದು ವರ್ಷಗಳಿಂದ ಅವರ ರಾಜಕೀಯ ಹಾಗೂ ಭಾಷೆಯಿಂದ ಜನ ಬೇಸತ್ತಿದ್ದಾರೆ. ನಾನು ಸಾಮಾನ್ಯ ರೈತ ಕುಟುಂಬದಿಂದ ಬಂದಿದ್ದು, ಸ್ಥಳೀಯ ಸಮಸ್ಯೆಗಳ ಅರಿವು ನನಗೆ ಇದೆ. ಜಾತ್ಯತೀತವಾಗಿ ಇಲ್ಲಿಯ ನನ್ನನ್ನು ಜನ ಬೆಂಬಲಿಸುತ್ತಾರೆ. ಶಾಸಕ ಸ್ಥಳೀಯನಾಗಿರಬೇಕು ಎಂದು ಜನರು ನಿರ್ಧಾರ ಮಾಡಿದ್ದಾರೆ. ಕೆಲವರು ಸ್ವಾರ್ಥಕ್ಕಾಗಿ ಜೆಡಿಎಸ್‌ನಲ್ಲಿದ್ದ ಶಾಸಕ ಶ್ರೀನಿವಾಸಗೌಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
ಜೆಡಿಎಸ್ ಪಕ್ಷಕ್ಕೆ ಸಾಂಪ್ರದಾಯಕ ಮತಗಳಿವೆ. ನನ್ನ ನಡವಳಿಕೆಯಿಂದಲೂ ಜನ ಮತ ಹಾಕುತ್ತಾರೆ. ನಾವು ಸ್ವಾಭಿಮಾನಿ ನಡೆ ಅನುಸರಿಸಿದ್ದೇವೆ. ಕಾಂಗ್ರೆಸ್‌ನವರು ಮುಸ್ಲಿರನ್ನು ಮತ ಬ್ಯಾಂಕ್ ಮಾಡಿಕೊಂಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿ ಕಾಂಗ್ರೆಸ್‌ನ ಕೆ.ಎಚ್. ಮುನಿಯಪ್ಪ ಅವರನ್ನು ಸೋಲಿಸಿದ್ದಾರೆ. ಆದರೆ, ಈಗ ಮುಸ್ಲಿಂ ಸಮುದಾಯ ಎಚ್ಚೆತ್ತುಕೊಂಡಿದೆ.
ಇದನ್ನೂ ಓದಿ | Karnataka Election | ಸಿದ್ದರಾಮಯ್ಯ ಸ್ಪರ್ಧಾ ಅಖಾಡವಾಯ್ತು ಕೋಲಾರ; ಶುರುವಾಗಿದೆ ರಾಜಕೀಯ ಲೆಕ್ಕಾಚಾರ