Site icon Vistara News

Power Point with HPK : ಭಾಷಣದ ಉತ್ಸಾಹದಲ್ಲಿ ಸಿದ್ದರಾಮಯ್ಯ ನಂಗೂ-ನಿಂಗೂ ಫ್ರೀ ಅಂದ್ರು ಅಷ್ಟೆ: ಕೆ.ಜೆ. ಜಾರ್ಜ್

KJ George in Power Point With HPK

ಬೆಂಗಳೂರು: ಸಿದ್ದರಾಮಯ್ಯ (CM Siddramaiah) ಅವರು ಚುನಾವಣೆಗೆ ಮೊದಲು ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳು (Congress Guarantee scheme) ಎಲ್ಲರಿಗೂ ಫ್ರೀ ಎಂದು ಹೇಳಿರುವುದು ಭಾಷಣ ಮಾಡುವ ಉತ್ಸಾಹದಲ್ಲಿಯೇ ವಿನಃ ಅದನ್ನು ಎಲ್ಲರಿಗೂ ಎಂದು ಅರ್ಥೈಸಬಾರದು. ಅವರು ಹೇಳಿರುವುದು ಬಹುಪಾಲು ಜನರಿಗೆ ಉಚಿತ ಎಂಬ ಅರ್ಥದಲ್ಲಾಗಿದೆ ಎಂದು ಬೆಂಗಳೂರಿನ ಸರ್ವಜ್ಞ ನಗರ ಶಾಸಕ, ಇಂಧನ ಸಚಿವ ಕೆ.ಜೆ. ಜಾರ್ಜ್ (KJ George) ಅವರು ಪವರ್‌ ಪಾಯಿಂಟ್‌ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್‌ ಪಾಯಿಂಟ್‌ ವಿತ್‌ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ‌ ಇಂಧನ ಸಚಿವ ಕೆ.ಜೆ. ಜಾರ್ಜ್, ಇಂಧನ ಇಲಾಖೆಯಲ್ಲಿ 2.16 ಕೋಟಿ ಗ್ರಾಹಕರು ಇದ್ದಾರೆ. ಈಗ ನಮ್ಮ ಗೃಹ ಜ್ಯೋತಿ ಯೋಜನೆಯನ್ನು 2.14 ಕೋಟಿ ಜನರಿಗೆ ನೀಡುತ್ತಿದ್ದೇವೆ. ಅಂದರೆ ಕೇವಲ 2 ಲಕ್ಷ ಮಂದಿಯನ್ನು ಬಿಟ್ಟು ಬಹುತೇಕ ಎಲ್ಲರಿಗೂ ನಾವು ಉಚಿತವಾಗಿಯೇ ಯೋಜನೆಯನ್ನು ಕೊಟ್ಟಂತೆ ಆಯಿತು. ಈ ರೀತಿಯಲ್ಲಿ ಸಿದ್ದರಾಮಯ್ಯ ಅವರು ನನಗೂ ಫ್ರೀ, ನಿನಗೂ ಫ್ರೀ ಎಂದು ಮಾತನಾಡಿದ್ದರು ಎಂದು ಕೆ.ಜೆ. ಜಾರ್ಜ್‌ ಸಮರ್ಥನೆ ಮಾಡಿಕೊಂಡರು.

ಇದನ್ನೂ ಓದಿ: Power Point with HPK : ಸಿದ್ದರಾಮಯ್ಯ ಮೊದಲು ಭ್ರಷ್ಟಾಚಾರವನ್ನು ಮಟ್ಟ ಹಾಕಲಿ: ಬಸವರಾಜ ರಾಯರೆಡ್ಡಿ

ನಮ್ಮಲ್ಲಿ ಶೇಕಡಾ 50ರಷ್ಟು ಮಹಿಳಾ ಜನಸಂಖ್ಯೆ ಇದೆ. ಆದರೆ, ಮಹಿಳೆಯರು ಶತಮಾನಗಳಿಂದ ಶೋಷಿತರಾಗಿದ್ದಾರೆ. ಅವರು ಮನೆಯಿಂದ ಹೊರಗಡೆ ಬರಲು, ಅವರಿಗೆ ಆರ್ಥಿಕವಾಗಿ ಶಕ್ತಿ ಕೊಡಬೇಕೆಂದರೆ ಅವರ ಬೆನ್ನಿಗೆ ನಾವು ನಿಲ್ಲಬೇಕು. ಅವರು ಕೂಡಾ ರಾಜ್ಯದ ಆರ್ಥಿಕ ಪ್ರಗತಿಗೆ ಶ್ರಮಿಸುವಂತಾಗಬೇಕು. ಮುಂಬರುವ ದಿನಗಳಲ್ಲಿ ನಮ್ಮ ರಾಜ್ಯ ಆರ್ಥಿಕವಾಗಿ ಸದೃಢವಾಗುತ್ತದೆ ಎಂಬುದನ್ನು ಎಲ್ಲರೂ ನೋಡುತ್ತಾರೆ ಎಂದು ಕೆ.ಜೆ. ಜಾರ್ಜ್‌ ಹೇಳಿದರು.

ನಮ್ಮ ಗ್ಯಾರಂಟಿ ಕಾರ್ಯಕ್ರಮಗಳು ನೇರವಾಗಿ ಜನರಿಗೆ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗಾಗಿ ರೂಪಿಸಲಾಗಿದೆ. ನಾವು ಈಗ ಅನುಷ್ಠಾನಕ್ಕೆ ತಂದಿರುವ ಉಚಿತ ಗ್ಯಾರಂಟಿ ಹಣವು ಎಲ್ಲಿಯೂ ಹೋಗುವುದಿಲ್ಲ. ಅವು ಪುನಃ ಮಾರುಕಟ್ಟೆಗೆ ಬರುತ್ತದೆ. ಇದರಿಂದ ಉದ್ಯೋಗ ಹಾಗೂ ಉತ್ಪಾದನೆ ಹೆಚ್ಚಾಗುತ್ತದೆ. ಇದರಿಂದ ತೆರಿಗೆ ಸಂಗ್ರಹದಲ್ಲೂ ಹೆಚ್ಚಳ ಆಗುತ್ತದೆ ಎಂದು ಕೆ.ಜೆ. ಜಾರ್ಜ್‌ ಹೇಳಿದರು.

ಕಾಂಗ್ರೆಸ್‌ ಗ್ಯಾರಂಟಿ ಯೋಜನೆಯು ನಮ್ಮ ಪಕ್ಷದ ಕಾರ್ಯಕ್ರಮವಾಗಿದೆ. ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರು ಸೇರಿದಂತೆ ಪ್ರಮುಖ ನಾಯಕರು ಈ ಗ್ಯಾರಂಟಿಯನ್ನು ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದರು. ಆದರೆ, ಇದನ್ನು ಘೋಷಣೆ ಮಾಡಿದ್ದು ಚುನಾವಣೆ ಗೆಲ್ಲಲು ಅಲ್ಲ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳಿಂದ ಜನರು ಕಂಗೆಟ್ಟಿದ್ದರು. ಹೀಗಾಗಿ ಜನಸಾಮಾನ್ಯರ ಕೈಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಯನ್ನು ತರುವ ಚಿಂತನೆಯನ್ನು ಅಂದು ಮಾಡಿದ್ದೆವು ಎಂದು ಕೆ.ಜೆ. ಜಾರ್ಜ್‌ ಹೇಳಿದರು.

ದುರ್ಬಲ ಇದ್ದವರಿಗೆ ಮಾತ್ರವೇ ಗೃಹ ಜ್ಯೋತಿ

ಗೃಹ ಜ್ಯೋತಿ ಯೋಜನೆಯಡಿ 1.56 ಕೋಟಿ ಕುಟುಂಬದವರು ಈಗ ಯೋಜನೆಯ ಫಲಾನುಭವಿಗಳಾಗಿದ್ದಾರೆ. ನಮ್ಮ ರಾಜ್ಯದಲ್ಲಿ ತಿಂಗಳ ಸರಾಸರಿ ಯುನಿಟ್‌ ಬಳಕೆ 53 ಯೂನಿಟ್‌ ಅಷ್ಟೇ ಆಗಿದೆ. ಒಂದು ವರ್ಷದ ಸರಾಸರಿಯನ್ನು ಪಡೆದು 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುತ್ತಿದ್ದೇವೆ. ಈ ಸರಾಸರಿಗೆ 10 ಪರ್ಸೆಂಟ್‌ ಹೆಚ್ಚುವರಿ ವಿದ್ಯುತ್‌ ಅನ್ನು ಫ್ರೀ ಕೊಡಲಾಗುತ್ತಿದೆ. ಇದನ್ನು ಅತ್ಯುತ್ತಮವಾಗಿ ನಾವು ಅನುಷ್ಠಾನ ಮಾಡಿದ್ದೇವೆ. ನಾವು ಆರ್ಥಿಕವಾಗಿ ದುರ್ಬಲ ಇದ್ದವರಿಗೆ ಮಾತ್ರವೇ ಗೃಹ ಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಉಳ್ಳವರು 200 ಯುನಿಟ್‌ಗಿಂತ ಹೆಚ್ಚಿಗೆ ಬಳಸಿದರೆ ಅವರು ಪೂರ್ಣ ವಿದ್ಯುತ್‌ ಬಿಲ್‌ ಅನ್ನು ಕಟ್ಟಬೇಕು ಎಂದು ಕೆ.ಜೆ. ಜಾರ್ಜ್‌ ತಿಳಿಸಿದರು.

ಪರೋಕ್ಷ ತೆರಿಗೆಯನ್ನು ಕಟ್ಟುವವರು ಸಾಮಾನ್ಯ ಜನರಾಗಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಯಿಂದ ಯಾವುದೇ ಆರ್ಥಿಕ ಹೊರೆ ಆಗುತ್ತಿಲ್ಲ. ಸಾರಿಗೆ, ಇಂಧನ ಇಲಾಖೆಯಲ್ಲಿಯೂ ಯಾವುದೇ ಸಮಸ್ಯೆಯಾಗುತ್ತಿಲ್ಲ. ನಾವು ಆಯಾ ಇಲಾಖೆಗೆ ಸರ್ಕಾರದಿಂದ ಹಣ ಕಟ್ಟುತ್ತಿದ್ದೇವೆ. ಜನರು ಕಟ್ಟಿದ ತೆರಿಗೆಯ ಹಣವನ್ನು ಜನರಿಗೇ ಕೊಡುತ್ತಿದ್ದೇವೆ. ಇದರಿಂದ ಯಾವುದೇ ನಷ್ಟ ಆಗುವುದಿಲ್ಲ ಎಂದು ಕೆ.ಜೆ. ಜಾರ್ಜ್‌ ಹೇಳಿದರು.

ಗ್ಯಾರಂಟಿ ಯೋಜನೆ ಬರಲು ರಾಹುಲ್‌ ಗಾಂಧಿ ಕಾರಣ

ನಾನು ಯಾವುದೇ ಮುಖ್ಯಮಂತ್ರಿ ಬಳಿ ಹೋಗಿ ಇಂತಹ ಖಾತೆಯೇ ಬೇಕು ಎಂದು ಕೇಳಿಲ್ಲ. ನನಗೆ ಇಂಧನ ಖಾತೆ ಬರಲಿದೆ ಎಂದು ನನಗೆ ತಿಳಿದಿರಲಿಲ್ಲ. ಆದರೆ, ಗ್ಯಾರಂಟಿ ಯೋಜನೆ ಬರಲು ಕಾರಣ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ. ಅವರ ಭಾರತ್‌ ಜೋಡೋ ಯಾತ್ರೆಯಲ್ಲಿ ಜನರ ಸಮಸ್ಯೆಯನ್ನು ಅರಿತು ಈ ತೀರ್ಮಾನಕ್ಕೆ ಬಂದರು.

ಸರ್ವಜ್ಞ ನಗರ ಮತದಾರರು ಭ್ರಷ್ಟರಲ್ಲ

ಸರ್ವಜ್ಞ ನಗರ ಮತದಾರರು ಭ್ರಷ್ಟರಲ್ಲ. ಅವರು ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಹೀಗಾಗಿ ನನ್ನ ಗೆಲುವು ಸುಲಭವಾಗಿದೆ. ನಾನು ರಾಜಕೀಯಕ್ಕೆ ಬರಲು ಯಾರೂ ಒತ್ತಾಯ ಮಾಡಿರಲಿಲ್ಲ. ನಾನು ಎಂಎಲ್‌ಎ, ಮಂತ್ರಿ ಆಗುತ್ತೇನೆ ಎಂದು ಅಂದುಕೊಂಡವನೂ ಅಲ್ಲ. ನನಗೆ ಈ ಎಲ್ಲವನ್ನೂ ಕಾಂಗ್ರೆಸ್‌ ಪಕ್ಷ ಕೊಟ್ಟಿದೆ. ಇಂದಿರಾ ಗಾಂಧಿಯವರ ಜನಪ್ರಿಯ ಕಾರ್ಯಕ್ರಮ ಮತ್ತು ಅವರ ನಾಯಕತ್ವವನ್ನು ಮೆಚ್ಚಿ ನಾನು ರಾಜಕೀಯಕ್ಕೆ ಬಂದೆ ಎಂದು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಕೆ.ಜೆ. ಜಾರ್ಜ್‌ ಹೇಳಿದರು.

ಇದನ್ನೂ ಓದಿ: Alcohol Price : ಸರ್ಕಾರಕ್ಕೆ ಸಿಗಲಿಲ್ಲ ಎಣ್ಣೆಯ ಗ್ಯಾರಂಟಿ ರೇಟು! ಎಣ್ಣೆಪ್ರಿಯರು ಕೊಟ್ರು ಎದುರೇಟು!

ನಾನು ಕೆಳ ಹಂತದಿಂದ ಬಂದವನು

ನಾನು 1969ರಿಂದ ಕಾಂಗ್ರೆಸ್‌ನಲ್ಲಿ ಕೆಳಹಂತದಿಂದ ಕೆಲಸ ಮಾಡಿಕೊಂಡು ಬಂದಿದ್ದೇನೆ. ವೀರೇಂದ್ರ ಪಾಟೀಲ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಅವರ ಜತೆಗೆ ಕೆಪಿಸಿಸಿ ಜನರಲ್‌ ಸೆಕ್ರಟರಿಯಾಗಿ ಕೆಲಸ ಮಾಡಿದ್ದೆ. ಅದಕ್ಕಿಂತ ಮೊದಲು ಆಲ್‌ ಇಂಡಿಯಾ ಯೂತ್‌ ಕಾಂಗ್ರೆಸ್‌ ಜನರಲ್‌ ಸೆಕ್ರೆಟರಿ ಆಗಿದ್ದೆ. ಕೊಡುಗು ಜಿಲ್ಲಾ ಹಾಗೂ ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷನಾಗಿ ದುಡಿದಿದ್ದೇನೆ. ನಾನು ನನ್ನ 40ನೇ ವರ್ಷಕ್ಕೆ ಮೊದಲ ಬಾರಿಗೆ ಸಚಿವನಾದೆ. ವೀರೇಂದ್ರ ಪಾಟೀಲ್‌ ಅವರು ನನ್ನನ್ನು ಮೊದಲ ಬಾರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಹಾಗೂ ಸಾರಿಗೆ ಇಲಾಖೆಯ ಜವಾಬ್ದಾರಿಯನ್ನು ಕೊಟ್ಟರು. ಕೆಲವೇ ದಿನಗಳಲ್ಲಿ ನನ್ನನ್ನು ಕೆಎಸ್‌ಆರ್‌ಟಿಸಿ ಚೇರ್ಮನ್‌ ಮಾಡಿದರು. ನಂತರ ನನ್ನನ್ನು ಕಲಬುರಗಿ ಜಿಲ್ಲೆಗೆ, ಮೈಸೂರಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದರು. ನಾನು ಯಾವತ್ತೂ ಅವರಿಗೆ ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು.

Exit mobile version