ಬೆಂಗಳೂರು: ʻʻಕೆ. ಶ್ರೀನಿವಾಸಗೌಡ ಕೋಲಾರ ಕ್ಷೇತ್ರ ತ್ಯಾಗ ಮಾಡಿದ್ದಾಗಿ ಹೇಳುತ್ತಿದ್ದಾರೆ. ಯಾವ ಕಾರಣಕ್ಕೆ ತ್ಯಾಗ ಮಾಡ್ತಿದ್ದಾರೆ? ಎಂಎಲ್‌ಸಿ ಮಾಡಿ, ಮಂತ್ರಿ ಮಾಡುತ್ತಾರೆ ಎಂದು ಶಾಸಕ (K Srinivasa Gowda) ಹೇಳಿಕೊಂಡಿದ್ದಾರೆ. 17 ಕೋಟಿ ರೂಪಾಯಿ ಸಾಲ ಮಾಡಿರುವುದನ್ನು ಸಿದ್ದರಾಮಯ್ಯ ತೀರಿಸುತ್ತೀರಾ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಪ್ರಶ್ನಿಸಿದ್ದಾರೆ.
ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ಆಡಿಯೊ ವೈರಲ್ ಬಗ್ಗೆ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಸಿದ್ದರಾಮಯ್ಯ ವರುಣಾದಲ್ಲಿ ಇದ್ದರು, ನಂತರ ಚಾಮುಂಡೇಶ್ವರಿಗೆ ಬಂದರು, ಬಳಿಕ ಬಾದಾಮಿಗೆ ಹೋಗಿ, ಈಗ ಕೋಲಾರಕ್ಕೆ ಬಂದಿದ್ದಾರೆ. ಅಲೆಮಾರಿ ಸಿದ್ದರಾಮಯ್ಯ ಎಲ್ಲೂ ಕೆಲಸ ಮಾಡಲಿಲ್ಲ, ಅಭಿವೃದ್ಧಿ ಮಾಡಲಿಲ್ಲ. ಹೀಗಾಗಿ ಕ್ಷೇತ್ರ ಬದಲಾಯಿಸುತ್ತಿದ್ದಾರೆ. ಕೊನೆಯ ಚುನಾವಣೆ ಎಂದು ಹೇಳಿ ಕೋಲಾರದಲ್ಲಿ ನಿಲ್ಲುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಗೆ ಕಿಡಿ
ಕಾಂಗ್ರೆಸ್ ಪಕ್ಷದ ಬಸ್ ಯಾತ್ರೆ ಆರಂಭವಾಗಿದೆ. ಈ ಬಸ್ ಯಾತ್ರೆ ಸುಳ್ಳು ಯಾತ್ರೆಗೆ ಸಾಕ್ಷಿಯಾಗಿದೆ. ಇದು ಭಯೋತ್ಪಾದಕರು, ಉಗ್ರರಿಗೆ ಸರ್ಟಿಫಿಕೇಟ್ ಕೊಡುವ ಯಾತ್ರೆಐಾಗಿದೆ. ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅದು ಭಯೋತ್ಪಾದನೆಯೇ ಅಲ್ಲ, ಅವರೆಲ್ಲರು ಅಮಾಯಕರು ಎಂದು ಡಿಕೆಶಿ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಇದು ಭಯೋತ್ಪಾದಕರನ್ನು ರಕ್ಷಣೆ ಮಾಡಲಿಕ್ಕೆ ಹೊರಟಿರುವ ಯಾತ್ರೆ, ಭಯೋತ್ಪಾದನೆಗೆ ಶಕ್ತಿ ಕೊಡುವುದೇ ಈ ಯಾತ್ರೆಯ ಉದ್ದೇಶ ಎಂದು ಕಿಡಿ ಕಾರಿದ್ದಾರೆ.
ಯಾತ್ರೆಯಲ್ಲಿ ನಮ್ಮ ಸರ್ಕಾರವನ್ನು 40 ಪರ್ಸೆಂಟ್ ಸರ್ಕಾರ ಎಂದು ಕಾಂಗ್ರೆಸ್ ಆರೋಪಿಸಿದೆ. ಗುತ್ತಿಗೆದಾರ ಕೆಂಪಣ್ಣ ಮೇಲೆ ನಾವು ಈಗಾಗಲೇ ಮಾನನಷ್ಟ ಮೊಕದ್ದಮೆ ಹೂಡಿದ್ದೇವೆ. ಅವರು ಭ್ರಷ್ಟಾಚಾರ ಸಂಬಂಧ ಸಾಕ್ಷ್ಯ ಎಲ್ಲಿ ಕೊಟ್ಟರು? ಇದು 40 ಪರ್ಸೆಂಟ್ ಬಿಜೆಪಿ ಎಂದು ಬ್ರ್ಯಾಂಡ್ ಮಾಡುವ ಸಂಚು ಆಗಿದೆ ಎಂದು ಆರೋಪಿಸಿದರು.
ಉಚಿತ ವಿದ್ಯುತ್ ಎಂದು ಈಗ ಹೊಸ ನಾಟಕ ಶುರು ಮಾಡಿದ್ದಾರೆ. ದೇಶದಲ್ಲಿ ಪೆಟ್ರೋಲ್, ಬೆಲೆ ಹೆಚ್ಚಾದಾಗ ನಾವು ಇಳಿಕೆ ಮಾಡಿದ್ದೇವೆ. ಆದರೆ ನಿಮ್ಮ ಕಾಲದಲ್ಲಿ ರಾಜ್ಯದಲ್ಲಿ ಕರೆಂಟೇ ಇರಲಿಲ್ಲ. ನಿಮ್ಮ ಸರ್ಕಾರ ಇದ್ದಾಗ ಕತ್ತಲಿನ ಸರ್ಕಾರ ಇತ್ತು. ಆದರೆ ನಾವು ಈಗ ಎಸ್ ಎಸ್‌ಟಿ ಜನಾಂಗಕ್ಕೆ ಉಚಿತ ವಿದ್ಯುತ್ ಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಆಡಿರೊ ವೈರಲ್ ಬಗ್ಗೆ ಸಿದ್ದರಾಮಯ್ಯ ಮೌನ
ಕೋಲಾರ ಶಾಸಕ ಕೆ. ಶ್ರೀನಿವಾಸಗೌಡ ಆಡಿಯೋ ವೈರಲ್ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಚಿಕ್ಕೋಡಿಯಲ್ಲಿ ಆಡಿಯೊ ವೈರಲ್ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಲು ಒಪ್ಪದ ಸಿದ್ದರಾಮಯ್ಯ, ಗೊತ್ತಿಲ್ಲ ಎನ್ನುತ್ತಾ ಮುಂದೆ ಸಾಗಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿ, ನನಗೆ ಈ ಬಗ್ಗೆ ಗೊತ್ತಿಲ್ಲ. ಎಂಎಲ್‌ಸಿ ಮಾಡಿ, ಸಚಿವ ಸ್ಥಾನ ನೀಡುವ ಬಗ್ಗೆ ಯಾರಿಗೂ ಭರವಸೆ ನೀಡಿಲ್ಲ, ಕೊಡುವ ಅವಶ್ಯಕತೆಯೂ ಇಲ್ಲ. ನಾನು ಅದನ್ನು ಪರಿಶೀಲಿಸಿ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | K Srinivasa Gowda | ಕೋಲಾರದಲ್ಲಿ ಸಿದ್ದರಾಮಯ್ಯ ಗೆದ್ರೂ ನಂದೇ ಹವಾ; ಶಾಸಕ ಕೆ.ಶ್ರೀನಿವಾಸಗೌಡ ಆಡಿಯೋ ವೈರಲ್