ಬೆಂಗಳೂರು: ಸಿಎಂ ಆದ ಬಳಿಕ ಮೊದಲ ಬಾರಿಗೆ ಸಿದ್ದರಾಮಯ್ಯ ಅವರು, ಕೇಂದ್ರ ನಾಯಕರನ್ನು ಭೇಟಿ ಮಾಡಲು ಜೂನ್ 21ರಂದು ನವ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಅನ್ನಭಾಗ್ಯಕ್ಕೆ ಹೆಚ್ಚುವರಿ ಅಕ್ಕಿ ಪೂರೈಸಲು (Rice Politics) ಭಾರತದ ಆಹಾರ ನಿಗಮ (ಎಫ್‌ಸಿಐ) ನಿರಾಕರಿಸಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ಸಿದ್ದರಾಮಯ್ಯ ಅವರು, ಕೇಂದ್ರ ಸಚಿವರನ್ನು ಭೇಟಿಯಾಗಲು ಹೊರಟಿದ್ದಾರೆ ಎನ್ನಲಾಗಿದೆ.
ಬುಧವಾರ ಮಧ್ಯಾಹ್ನ ಗೃಹ ಸಚಿವ ಅಮಿತ್ ಶಾ ಅವರನ್ನು ಸಿಎಂ ಸಿದ್ದರಾಂಯ್ಯ ಭೇಟಿಯಾಗಲಿದ್ದಾರೆ. ಮೊದಲ ಬಾರಿಗೆ ಉಭಯ ನಾಯಕರು ಭೇಟಿಯಾಗುತ್ತಿರುವುದು ವಿಶೇಷ. ಚರ್ಷೆ ವೇಳೆ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಸಹಕಾರ ಕೋರಲಿದ್ದಾರೆ. ನಂತರ ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ.
ಮುಂದುವರೆದ ಅಕ್ಕಿ ಪಾಲಿಟಿಕ್ಸ್
ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನಿರಾಕರಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮೇಲೆ ಮತ್ತೊಮ್ಮೆ ಒತ್ತಡ ಹೇರಲು ರಾಜ್ಯ ಸರ್ಕಾರ ಮುಂದಾಗಿದೆ. ಇನ್ನು ಸಿಎಂ ಸೂಚನೆ ಮೇರೆಗೆ ರಾಜ್ಯ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದು, ಬುಧವಾರ ಕೇಂದ್ರ ಅಹಾರ ಸಚಿವ ಪಿಯೂಷ್ ಗೋಯಲ್ ಅವರ ಭೇಟಿಗೆ ಸಮಯಾವಕಾಶ ಕೇಳಿದ್ದಾರೆ. ಈ ವೇಳೆ ಕೆ.ಎಚ್ ಮುನಿಯಪ್ಪ, ರಾಜ್ಯಕ್ಕೆ ಅಕ್ಕಿ ಪೂರೈಕೆ ಮಾಡುವಂತೆ ಮನವಿ ಮಾಡಲಿದ್ದಾರೆ.
ಇದನ್ನೂ ಓದಿ | Fact Check Unit: ಫೇಕ್ ನ್ಯೂಸ್ ಮೂಲವನ್ನು ಬೇರು ಸಮೇತ ಕತ್ತರಿಸಿ: ಸಿದ್ದರಾಮಯ್ಯ
ನಾನೂ ದೆಹಲಿಗೆ ಹೋಗುವೆ ಎಂದ ಡಿಕೆಶಿ
ಬೆಂಗಳೂರು: ನಾನು ಹಳ್ಳಿಯಿಂದ ವಿಧಾನಸೌಧಕ್ಕೆ ಬಂದವನು. ನಾನು ಟೆಕ್ನಿಕಲ್ ಮನುಷ್ಯ ಅಲ್ಲ, ಸಂಬಂಧಪಟ್ಟ ಇಲಾಖೆಯವರನ್ನು ಕೇಳಿ. ಏನಾಗಿದೆ ಎಂಬುದನ್ನು ತಿಳಿದುಕೊಳ್ಳುವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳ ಸರ್ವರ್ ಹ್ಯಾಕ್ ಆಗಿದೆ ಎಂಬ ಎಂಬ ಸಚಿವ ಸತೀಶ್ ಜಾರಕಿಹೊಳಿ ಆರೋಪಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ.
ಅಕ್ಕಿ ವಿತರಣೆಗೆ ಸಂಬಂಧಿಸಿ ಕಾನೂನು ಸಲಹೆ ಪಡೆಯುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಜತೆಗೆ ಮಾತನಾಡಿ ಮುಂದೆ ನಿಮಗೆ ತಿಳಿಸುತ್ತೇನೆ ಎಂದರು. ಇದೇ ವೇಳೆ ದೆಹಲಿಗೆ ಹೋಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾಳೆ ಅಥವಾ ನಾಡಿದ್ದು ಹೋಗಲ್ಲ. ಆದರೆ, ದೆಹಲಿಗೆ ಹೋಗುತ್ತೇನೆ. ಎರಡು ಮೂರು ದಿನಗಳ ಬಳಿಕ ಹೋಗುತ್ತೇನೆ ಎಂದು ತಿಳಿಸಿದರು.