ಮೈಸೂರು: ವಿಧಾನಸಭೆ ಚುನಾವಣೆಯಲ್ಲಿ ತಮ್ಮನ್ನು ಆರಿಸಿದ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ವರುಣಾಗೆ ಆಗಮಿಸುತ್ತಿದ್ದಾರೆ. ಇಲ್ಲಿನ ಜನತೆ ಸಿಎಂ ಅವರಿಂದ ಭರ್ಜರಿಯ ಕೊಡುಗೆಯ ನಿರೀಕ್ಷೆಯಲ್ಲಿದ್ದಾರೆ.
ವರುಣಾ ಕ್ಷೇತ್ರ ಸಿದ್ದರಾಮಯ್ಯ ಪಾಲಿಗೆ ಅದೃಷ್ಟದ ಕ್ಷೇತ್ರವಾಗಿದೆ. ವರುಣ ಕ್ಷೇತ್ರದಿಂದ ಗೆದ್ದಾಗಲೆಲ್ಲ ದೊಡ್ಡ ದೊಡ್ಡ ಹುದ್ದೆಗೆ ಸಿದ್ದರಾಮಯ್ಯ ಹೋಗಿದ್ದಾರೆ. ಕಳೆದ 15 ವರ್ಷಗಳ ಹಿಂದೆ ಕ್ಷೇತ್ರ ಪುನರ್ ವಿಂಗಡಣೆ ನಂತರ ನಿರ್ಮಾಣಗೊಂಡ ಕ್ಷೇತ್ರವೇ ವರುಣ ಕ್ಷೇತ್ರ.
ಸಿದ್ದರಾಮಯ್ಯ ಅವರ ಹುಟ್ಟೂರು ಸಿದ್ದರಾಮನಹುಂಡಿ, ವರುಣ ಹೋಬಳಿಗೆ ಬರುವ ಕಾರಣಕ್ಕೆ ಸಿದ್ದರಾಮಯ್ಯ ಅವರು ಕ್ಷೇತ್ರ ಬದಲಾಯಿಸಿದ್ದರು. 2008ರಲ್ಲಿ ಚಾಮುಂಡೇಶ್ವರಿ ಬಿಟ್ಟು ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಮೂರು ಬಾರಿ ಕ್ಷೇತ್ರದ ಶಾಸಕರಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. 2008ರಲ್ಲಿ ಮೊದಲ ಬಾರಿ ಆಯ್ಕೆಯಾದಾಗ ವಿರೋಧ ಪಕ್ಷದ ನಾಯಕನಾಗಿದ್ದರು. 2013ರಲ್ಲಿ ಎರಡನೇ ಬಾರಿ ಗೆದ್ದಾಗ ಸಿಎಂ ಪಟ್ಟ ದೊರೆತಿತ್ತು. 2018ರಲ್ಲಿ ಪುತ್ರನಿಗೆ ಮೊದಲ ಅವಕಾಶದಲ್ಲೇ ಶಾಸಕ ಸ್ಥಾನವನ್ನು ವರುಣ ಕ್ಷೇತ್ರದ ಜನರು ಕರುಣಿಸಿದ್ದರು. ಸದ್ಯ ಮೂರನೇ ಬಾರಿ ಗೆದ್ದು ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಪಟ್ಟ ಏರಿದ್ದಾರೆ. ಅಪ್ಪ, ಮಗ ಇಬ್ಬರಿಗೂ ಲಕ್ಕಿ ಕ್ಷೇತ್ರವಾಗಿದೆ ವರುಣ.
ಹೀಗಾಗಿ, ಬಂಪರ್ ಕೊಡುಗೆ ನಿರೀಕ್ಷೆಯಲ್ಲಿಯೂ ವರುಣ ಕ್ಷೇತ್ರದ ಜನರು ಇದ್ದಾರೆ. ಚುನಾವಣೆ ವೇಳೆ, ವರುಣ ಕ್ಷೇತ್ರವನ್ನ ತಾಲೂಕು ಕೇಂದ್ರ ಮಾಡುವ ಭರವಸೆಯನ್ನು ಸಿದ್ದರಾಮಯ್ಯ ನೀಡಿದ್ದರು. ಇಂದೇ ವರುಣ ಕ್ಷೇತ್ರದಲ್ಲಿ ತಾಲೂಕು ಕೇಂದ್ರ ಘೋಷಣೆ ಮಾಡ್ತಾರಾ ಸಿಎಂ ಎಂಬ ಕುತೂಹಲ ಮೂಡಿದೆ.
ನಂಜನಗೂಡು, ಟಿ.ನರಸೀಪುರ ಹಾಗೂ ಮೈಸೂರು ತಾಲೂಕುಗಳಿಗೆ ವರುಣ ಕ್ಷೇತ್ರ ಹಂಚಿ ಹೋಗಿದೆ. ಇದನ್ನು ತಾಲೂಕು ಮಾಡಿದರೆ ವರುಣಾ ಕ್ಷೇತ್ರ ಸಿದ್ದರಾಮಯ್ಯ ಅವರಿಗೆ ಇನ್ನಷ್ಟು ಸುಭದ್ರವಾಗಬಹುದು. ಇಂದು ವರುಣ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸಲು ಆಗಮಿಸುತ್ತಿರುವ ಸಿಎಂ, ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮತದಾರರಿಗೆ ಕೃತಜ್ಞತೆ ಸಲ್ಲಿಸಿ ತಾಲೂಕು ಕೇಂದ್ರ ಘೋಷಣೆ ಮಾಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ: Siddaramaiah : ಮಾತು ತಪ್ಪಿದ ಸಿದ್ದರಾಮಯ್ಯ; ಜೀರೊ ಟ್ರಾಫಿಕ್ ಬೇಡ ಎಂದು ಹೇಳಿ ಸದ್ದಿಲ್ಲದೆ ಸವಾರಿ!