Site icon Vistara News

Siddaramaiah Vs BJP : ನಿಜವಾಗದ ಬಿಜೆಪಿ ಕನಸು; ಕೋರ್ಟ್‌ ತಡೆಯಿಂದ ಬಿಡುಗಡೆಯಾಗದ ಸಿದ್ದು ನಿಜಕನಸು!

townhall congress protest arrest

ಬೆಂಗಳೂರು: ಕಳೆದ ಎರಡು ದಿನಗಳಿಂದ ಭಾರಿ ಸುದ್ದಿಯಲ್ಲಿದ್ದ “ಸಿದ್ದು ನಿಜಕನಸುಗಳು” ಪುಸ್ತಕ ಬಿಡುಗಡೆ ಸಮಾರಂಭವು ಸಾಕಷ್ಟು ಗದ್ದಲ, ಪ್ರತಿಭಟನೆಗಳ ನಡುವೆ ಕೋರ್ಟ್‌ ತಡೆಯಾಜ್ಞೆಯಿಂದ ರದ್ದಾಗಿದೆ. ಈ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah Vs BJP) ಅವರ ಆಡಳಿತಾವಧಿ ಬಗ್ಗೆ ಬಿಜೆಪಿ ಸಿದ್ಧಪಡಿಸಿದ್ದ ಪುಸ್ತಕಕ್ಕೆ ಬಿಡುಗಡೆ ಭಾಗ್ಯ ಸಿಗದಂತಾಗಿದೆ. ಹೀಗಾಗಿ ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆಯ ಬಿಜೆಪಿ ಕನಸು ಈಡೇರಿಲ್ಲ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಕಾರ್ಯಕ್ರಮವನ್ನು ರದ್ದು ಮಾಡಲಾಗಿಲ್ಲ. ಮುಂದೂಡಲ್ಪಟ್ಟಿದೆ. ಈ ವಿಚಾರವನ್ನು ಕೋರ್ಟ್‌ ಮುಂದೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿಕೊಂಡಿದೆ.

ಟೌನ್‌ಹಾಲ್‌ನಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಬಿಜೆಪಿಯಿಂದ “ಸಿದ್ದು ನಿಜಕನಸುಗಳು” ಪುಸ್ತಕ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದ್ದರಿಂದ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಮಧ್ಯಾಹ್ನ ೨ ಗಂಟೆಗೇ ಟೌನ್‌ಹಾಲ್‌ ಮುಂದೆ ಜಮಾಯಿಸಿದ್ದು, “ಬಿಜೆಪಿ ಕಳ್ಳಮಾರ್ಗ”- ಸಂಪುಟ 1 ಕೃತಿ ಬಿಡುಗಡೆಗೆ ಮುಂದಾಗಿತ್ತು. ಅಲ್ಲದೆ, ಬಿಜೆಪಿ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ವಿರುದ್ಧದ ಪುಸ್ತಕ ಬಿಡುಗಡೆಗೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು. ಕೆಲ ಸಮಯ ಅಲ್ಲಿ ಹೈಡ್ರಾಮಾವೇ ನಡೆಯಿತು.

ಅತ್ತ ಟೌನ್‌ಹಾಲ್ ಒಳಗೆ ಬಿಜೆಪಿ ಮುಖಂಡರು ಕಾರ್ಯಕರ್ತರು ಸೇರಿದ್ದರೆ, ಇತ್ತ ಹೊರಗೆ ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಿಜೆಪಿ ನಾಯಕರ ವಿರುದ್ಧ ಪೋಸ್ಟರ್‌ ಹಿಡಿದು ಕಿಡಿಕಾರಿದರು. ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಪೊಲೀಸರು ಕಾಂಗ್ರೆಸ್‌ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು.

ಇದನ್ನೂ ಓದಿ | Programme Code | ಕಾರ್ಯಕ್ರಮ ಪ್ರಸಾರ ಸಂಹಿತೆ ಪಾಲಿಸಲು ಟಿವಿ ಚಾನೆಲ್‌ಗಳಿಗೆ ಕೇಂದ್ರ ತಾಕೀತು

ಸಿದ್ದರಾಮಯ್ಯ ಅವರ ಬಗ್ಗೆ ಪುಸ್ತಕ ಬರೆಯುವ ಹಕ್ಕು ಬಿಜೆಪಿಗೆ ಇಲ್ಲ. ಅವರು ಬೇಕಿದ್ದರೆ ಸ್ಯಾಂಟ್ರೋ ರವಿ, ಸಿ.ಟಿ. ರವಿ ಬಗ್ಗೆ ಬರೆಯಬೇಕು. ಸ್ಯಾಂಟ್ರೋ ರವಿಯನ್ನು ಬಂಧಿಸಲು ಆಗಿಲ್ಲ. ತಲೆಹಿಡಿಯುವವರಿಗೆ ಬಿಜೆಪಿಯವರು ಬೆಂಬಲ ಕೊಡುತ್ತಿದ್ದಾರೆ. ಧೈರ್ಯ ಇದ್ದರೆ ಸ್ಯಾಂಟ್ರೋ ರವಿಯನ್ನು ಬಂಧನ ಮಾಡಲಿ. ಈ ಪುಸ್ತಕ ಬಿಡುಗಡೆಗೆ ನಾವು ಹೆದರುವುದಿಲ್ಲ ಎಂದು ಕೆಪಿಸಿಸಿ ಕಾರ್ಯದರ್ಶಿ ಮನೋಹರ್ ಹೇಳಿದರು.…

ಬಿಜೆಪಿ ನಾಯಕರಿಂದ ಚೀಪ್ ಟ್ರಿಕ್ಸ್: ಭವ್ಯ ನರಸಿಂಹಮೂರ್ತಿ
ಬಿಜೆಪಿ ಸಿದ್ಧಪಡಿಸಿರುವ ಸಿದ್ದು ನಿಜ ಕನಸುಗಳು ಪುಸ್ತಕದಲ್ಲಿ ಸುಳ್ಳುಗಳು ಇವೆ. ಈ ರೀತಿ ಬಿಜೆಪಿ ನಾಯಕರು ಏಕೆ ಮಾಡುತ್ತಿದ್ದಾರೆ? ರೋಹಿತ್ ಚಕ್ರತೀರ್ಥ ನಾಡಗೀತೆಗೆ ಅವಮಾನ ಮಾಡಿದ್ದಾರೆ. ಅಂಥವರನ್ನು ಕರೆಸಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಬಿಜೆಪಿಯ ಮೊದಲ ಅಸ್ತ್ರ ಕೋಮುವಾದವಾಗಿದೆ. ನಮ್ಮ ಸರ್ಕಾರ ಬಂದಾಗ ಅವರಿಗೆ ಉಳಿಗಾಳ ಇಲ್ಲ. ಬಿಜೆಪಿ ನಾಯಕರು ಚೀಪ್ ಟ್ರಿಕ್ಸ್ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತೆ ಭವ್ಯ ನರಸಿಂಹ ಮೂರ್ತಿ ಕಿಡಿಕಾರಿದರು.

ಕೋರ್ಟ್‌ ತಡೆಯಾಜ್ಞೆ- ಮತ್ತೆ ಗೊಂದಲ
ಇದೇ ವೇಳೆ ಬಿಜೆಪಿ ಬಿಡುಗಡೆ ಮಾಡಲು ಹೊರಟಿದ್ದ “ಸಿದ್ದು ನಿಜ ಕನಸುಗಳು” ಪುಸ್ತಕ ಬಿಡುಗಡೆಗೆ ತಡೆ ನೀಡುವಂತೆ ಕೋರಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಕೋರ್ಟ್ ಮೊರೆಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 59ನೇ ಎಸಿಎಂಎಂ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಪುಸ್ತಕ ಬಿಡುಗಡೆ, ಪುಸ್ತಕ ಪ್ರಸಾರಕ್ಕೆ ತಡೆ ನೀಡಿದೆ. ಈ ವಿಷಯ ತಿಳಿಯುತ್ತಿದ್ದಂತೆ ಕಾಂಗ್ರೆಸ್‌ ಕಾರ್ಯಕರ್ತರು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಒತ್ತಾಯಿಸಿದರು. ಅಲ್ಲದೆ, ಕೋರ್ಟ್‌ ತಡೆಯಾಜ್ಞೆ ವಿಚಾರ ಸೋಷಿಯಲ್‌ ಮೀಡಿಯಾಗಳಲ್ಲೂ ಹರಿದಾಡಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ, ಸೋಷಿಯಲ್‌ ಮೀಡಿಯಾದಲ್ಲಿ ಬರುವ ಸುದ್ದಿಗಳನ್ನೆಲ್ಲ ನಂಬಲು ಸಾಧ್ಯವಿಲ್ಲ. ನಮಗೆ ಅಧಿಕೃತವಾಗಿ ಆದೇಶ ಪ್ರತಿ ಲಭ್ಯವಾಗುವವರೆಗೂ ಕಾರ್ಯಕ್ರಮವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿಕೆ ನೀಡಿತ್ತು. ಇದು ಕಾಂಗ್ರೆಸ್‌ ನಾಯಕರನ್ನು ಮತ್ತಷ್ಟು ಕೆರಳಿಸಿತು.

ಇದನ್ನೂ ಓದಿ | Indian Cricket Team | ಭಾರತ ತಂಡದ ಶತಮಾನದ ಕ್ರಿಕೆಟರ್​​ ಯಾರು ಗೊತ್ತೇ? ಕಪಿಲ್ ದೇವ್​ ವಿವರಿಸುತ್ತಾರೆ?

ತಡೆಯಾಜ್ಞೆ ಪ್ರತಿ ಪ್ರದರ್ಶನ
ಪುಸ್ತಕ ಬಿಡುಗಡೆಗೆ ಕೋರ್ಟ್‌ ಆದೇಶ ನೀಡುತ್ತಿದ್ದಂತೆ ಅಲರ್ಟ್‌ ಆದ ಕಾಂಗ್ರೆಸ್‌ ಕಾರ್ಯಕರ್ತರು, ಕಾರ್ಯಕ್ರಮವನ್ನು ರದ್ದುಪಡಿಸುವಂತೆ ಆಗ್ರಹಿಸಿ ಪುರಭವನದ ಮುಂದೆ ಕೋರ್ಟ್‌ ಆದೇಶ ಪ್ರತಿಯನ್ನು ಪ್ರದರ್ಶಿಸಿ ಆಕ್ರೋಶವನ್ನು ಹೊರಹಾಕಿದರು. ಅಲ್ಲದೆ, ಮತ್ತೆ ಪ್ರತಿಭಟನೆಗೆ ಮುಂದಾದರು. ಈ ವೇಳೆ ಪೊಲೀಸರು ಕಾಂಗ್ರೆಸ್‌ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು. ಆದರೆ, ಪೊಲೀಸರು ವಶಕ್ಕೆ ಪಡೆದಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾವಣೆಗೊಳ್ಳುತ್ತಿದ್ದರು. ಪೊಲೀಸರ ದಾರಿ ತಪ್ಪಿಸಲು ಕಾಂಗ್ರೆಸ್‌ ತಂಡ ತಂಡವಾಗಿ ಪ್ರತಿಭಟನೆ ನಡೆಸುವ ತಂತ್ರ ಹೂಡಿದ್ದೇ ಇದಕ್ಕೆ ಕಾರಣವಾಗಿತ್ತು.

ಕಾರ್ಯಕ್ರಮ ರದ್ದಾಗಿಲ್ಲ, ಮುಂದಕ್ಕೆ ಹೋಗಿದೆ- ಚಲವಾದಿ ನಾರಾಯಣಸ್ವಾಮಿ
ಪುಸ್ತಕ ಬಿಡುಗಡೆಗೆ ಕೋರ್ಟ್‌ ಆದೇಶ ನೀಡಿರುವ ಪ್ರತಿ ಲಭ್ಯವಾಗುತ್ತಿದ್ದಂತೆ ಕಾರ್ಯಕ್ರಮವನ್ನು ರದ್ದು ಮಾಡಿರುವುದಾಗಿ ಬಿಜೆಪಿ ಘೋಷಣೆ ಮಾಡಿತು. ಈ ವೇಳೆ ಎಂಎಲ್‌ಸಿ ಚಲವಾದಿ ನಾರಾಯಣಸ್ವಾಮಿ ಮಾತನಾಡಿ, ಕೋರ್ಟ್ ಆದೇಶವನ್ನು ಗೌರವಿಸುತ್ತೇವೆ. ಈ ವಿಷಯವನ್ನು ಕೋರ್ಟ್‌ ಮುಂದೆ ತೆಗೆದುಕೊಂಡು ಹೋಗುತ್ತೇವೆ. ಆದರೆ, ಈಗ ಕಾರ್ಯಕ್ರಮವನ್ನು ರದ್ದು ಮಾಡಲಾಗಿಲ್ಲ, ಮುಂದೂಡಲಾಗಿದೆ ಅಷ್ಟೇ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಒಬ್ಬ ಪುಕ್ಕಲ- ರೋಹಿತ್‌ ಚಕ್ರತೀರ್ಥ
ಪುಸ್ತಕವು ಇನ್ನೂ ಬಿಡುಗಡೆಯೇ ಆಗಿಲ್ಲ, ಆಗಲೇ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ಗೆ ನಡುಕ ಶುರು ಆಗಿದೆ. ತಡೆಯಾಜ್ಞೆ ತೆರವು ಮಾಡಲು ನಾವೂ ಸಹ ಕಾನೂನು ಹೋರಾಟ ಮಾಡುತ್ತೇವೆ. ನಾನು ಕೂಡ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದೆ. ಸಿದ್ದರಾಮಯ್ಯ ಒಬ್ಬ ಪುಕ್ಕಲ ಎಂದು ಲೇಖಕ ರೋಹಿತ್‌ ಚಕ್ರತೀರ್ಥ ಹೇಳಿದರು.

ಇದನ್ನೂ ಓದಿ | Forced Conversion | ಬಲವಂತದ ಮತಾಂತರ ದೇಶಕ್ಕೆ ಅಪಾಯ, ಇದಕ್ಕೆ ರಾಜಕೀಯ ಬಣ್ಣ ಬೇಡ: ಸುಪ್ರೀಂ ಕೋರ್ಟ್

1 ಕೆಎಸ್‌ಆರ್‌ಪಿ ತುಕಡಿ, ೧೦೦ ಪೊಲೀಸರ ನಿಯೋಜನೆ
ಪ್ರತಿಭಟನೆಗೆ ಮುಂಚೆಯೇ ಟೌನ್‌ಹಾಲ್‌ಗೆ ಡಿಸಿಪಿ ಶ್ರೀನಿವಾಸ ಗೌಡ ಆಗಮಿಸಿದ್ದರು. ಸ್ಥಳದಲ್ಲಿ ೧ ಕೆಎಸ್‌ಆರ್‌ಪಿ ತುಕಡಿ ಹಾಗೂ ೧೦೦ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

ನಾನು ಹಿಂದುತ್ವ ವಿರೋಧಿ- ಸಿದ್ದರಾಮಯ್ಯ
ಪುಸ್ತಕ ಬಿಡುಗಡೆಗೆ ಕೋರ್ಟ್‌ ತಡೆಯಾಜ್ಞೆ ನೀಡಿರುವ ವಿಚಾರವಾಗಿ ವಿಸ್ತಾರ ನ್ಯೂಸ್‌ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಬಿಜೆಪಿಯವರು ನನ್ನನ್ನು ಟಾರ್ಗೆಟ್ ಮಾಡಿಕೊಂಡು ಆ ರೀತಿ ಮಾಡುತ್ತಿದ್ದಾರೆ. ನಾನು ಹಿಂದುಗಳ‌ ಮಿತ್ರ, ಹಿಂದು ಪ್ರೇಮಿಯಾಗಿದ್ದೇನೆ. ಆದರೆ, ಹಿಂದುತ್ವ ವಿರೋಧಿ ಎಂದು ಹೇಳಿದ್ದಾರೆ.

ಇದನ್ನೂ ಓದಿ | Social media post | ಜಾಲತಾಣದಲ್ಲಿ ಸಚಿವ ಸುನಿಲ್‌ ಕುಮಾರ್‌ ಅವಹೇಳನ: ಆರೋಪಿಗಳಿಗೆ ದಂಡ, ಕ್ಷಮೆ ಯಾಚನೆಗೆ ಸೂಚನೆ

Exit mobile version