Site icon Vistara News

Siddaramaiah | ವಿಧಾನ ಸೌಧದ ಗೋಡೆಗಳೇ 40 ಪರ್ಸೆಂಟ್‌ ಎಂದು ಪಿಸುಗುಡುತ್ತಿವೆ: ಸಿದ್ದರಾಮಯ್ಯ

Siddaramaiah

ವಿಜಯನಗರ: ಬಿಜೆಪಿ ಸರ್ಕಾರಕ್ಕೆ ಪರ್ಸಂಟೇಜ್ ಕೊಡಬೇಕು ಎಂದು ವಿಧಾನ ಸೌಧದ ಗೋಡೆಗಳೇ ಪಿಸುಗುಡುತ್ತಿದೆ. ಕೆಲವರು ಮಂತ್ರಿಗಳ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಸರ್ಕಾರದ ವಿರುದ್ಧ 40 ಪರ್ಸೆಂಟ್‌ ಆರೋಪ ಮಾಡಿದ್ದಕ್ಕೆ ವಿಚಾರಣೆ ಮಾಡುವ ಬದಲಿಗೆ ಅವರನ್ನೇ ಬಂಧಿಸಿದ್ದಾರೆ. ಈ ಬಿಜೆಪಿ ಸುಳ್ಳಿನ ಫ್ಯಾಕ್ಟರಿಯಾಗಿದ್ದು, ರಾಜ್ಯ ಉಳಿಸಲು ಕಾಂಗ್ರೆಸ್ ಗೆಲ್ಲಿಸಬೇಕಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದರು.

ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಮಾಲವಿ ಜಲಾಶಯ ತುಂಬಿರುವ ಹಿನ್ನೆಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾರ್ಥಕ ನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಲಂಚ ಪಡೆದಿದ್ದಾರೆ ಎಂದು ಈಶ್ವರಪ್ಪ, ಎಂಟಿಬಿ ನಾಗರಾಜ್, ಲಿಂಬಾವಳಿ ಹೆಸರು ಉಲ್ಲೇಖಿಸಿ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ಕೊಟ್ಟಂತೆ, ಅರವಿಂದ ಲಿಂಬಾವಳಿ ಪ್ರಕರಣದಲ್ಲಿ ಅಗಬಾರದು, ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ | Suicide Case | ಅರವಿಂದ ಲಿಂಬಾವಳಿ ಬಂಧನಕ್ಕೆ ಪಟ್ಟು ಹಿಡಿದ ಕಾಂಗ್ರೆಸ್‌; ಕಾನೂನಿನ ಮುಂದೆ ಲಿಂಬಾವಳಿ ಬೇರೆಯಲ್ಲ ಎಂದ ಡಿ.ಕೆ. ಶಿವಕುಮಾರ್‌

ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬೊಮ್ಮಾಯಿ ಅವರೇ ರಾಜ್ಯದ ಅಭಿವೃದ್ಧಿಗೆ ಧೈರ್ಯವಿದ್ದರೆ ಕೇಂದ್ರದಿಂದ ಹಣ ತನ್ನಿ ನೋಡೋಣ, ಕೇಂದ್ರದ ನಾಯಕರ ಮುಂದೆ ನಿಮ್ಮ ಸಾಮರ್ಥ್ಯ ಎಲ್ಲಿ ಹೋಗಿದೆ? ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ದಮ್ಮಿದ್ರೆ, ತಾಕತ್ತಿದ್ರೇ ಬಡವರಿಗೆ ಒಂದು ಮನೆ ಕೊಡಿ ನೋಡೋಣ ಎಂದು ಕಿಡಿ ಕಾರಿದರು.

ಕಾಂಗ್ರೆಸ್‌ನವರ ದಮ್‌ ಬಗ್ಗೆ ಪ್ರಶ್ನೆ ಮಾಡುವ ಬೊಮ್ಮಾಯಿ ಅವರು ಮೋದಿ ಮುಂದೆ ನಾಯಿಯಂತೆ ಇರುತ್ತಾರೆ, ಗಡ ಗಡ ನಡುಗುತ್ತಾರೆ. ಮಹದಾಯಿ ಯೋಜನೆ ನಿರ್ಮಾಣಕ್ಕೆ ಯಡಿಯೂರಪ್ಪ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದರು. ಆದರೆ ನಿಮ್ಮ ಡಬಲ್ ಎಂಜಿನ್ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ. ರಾಜ್ಯದ ಎಲ್ಲ ಕೆರೆ ತುಂಬಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಮಾಲವಿ ಜಲಾಶಯಕ್ಕೆ ಶಾಶ್ವತ ನೀರು ಬಂದಿರುವ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿದ್ದೇವೆ. ೪೦ ವರ್ಷಗಳ ಹೋರಾಟಕ್ಕೆ ಅಂತ್ಯ ಹಾಡಿದ್ದೇವೆ. ಭೀಮಾನಾಯ್ಕ ಜೆಡಿಎಸ್ ಶಾಸಕರಾಗಿದ್ದಾಗಲೇ ಅನುದಾನ ಬಿಡುಗಡೆ ಮಾಡಿದ್ದೇವೆ. ಅಭಿವೃದ್ಧಿಗೆ ಪಕ್ಷ ಅಗತ್ಯವಿಲ್ಲ. ನಾನು ಸಿಎಂ ಅಗಿದ್ದಾಗ ಪಕ್ಷಾತೀತವಾಗಿ ಎಲ್ಲ ಕ್ಷೇತ್ರಕ್ಕೆ ಅನುದಾನ ನೀಡಿದ್ದೇನೆ. ಆದರೆ, ಮೂರೂವರೆ ವರ್ಷದಲ್ಲಿ ಬಿಜೆಪಿ ಸರ್ಕಾರ ಯಾವುದಾದರೂ ಒಂದು ಭರವಸೆ ಈಡೇರಿಸಿದೆಯೇ? ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ಶಾಸಕರಾದ ಭೀಮಾನಾಯ್ಕ್, ತುಕಾರಾಂ, ಜಮೀರ್ ಅಹಮ್ಮದ್, ಬೈರತಿ ಸುರೇಶ್, ರಾಘವೇಂದ್ರ ಹಿಟ್ನಾಳ್‌, ಮಾಜಿ ಸಂಸದ ಉಗ್ರಪ್ಪ, ಮಾಜಿ ಶಾಸಕ ಸೀರಾಜ್ ಶೇಕ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ವಿ. ಶಿವಯೋಗಿ ಮತ್ತಿತರರು ಭಾಗಿಯಾಗಿದ್ದರು.

ಇದನ್ನೂ ಓದಿ | Prajadhwani Yatre | ಬಸ್‌ ಯಾತ್ರೆಗೆ ಎರಡು ತಂಡ ಪ್ರಕಟಿಸಿದ ಕಾಂಗ್ರೆಸ್‌; ʼಪ್ರಜಾಧ್ವನಿ ಯಾತ್ರೆʼ ಎಂದು ನಾಮಕರಣ?

Exit mobile version