Site icon Vistara News

Karnataka politics : ಸಿದ್ರಾಮಣ್ಣ ಕೆಲವೇ ದಿನಗಳಲ್ಲಿ ಜೈಲಿಗೆ ಹೋಗುವುದು ಗ್ಯಾರಂಟಿ ಎಂದ ನಳಿನ್‍ ಕುಮಾರ್ ಕಟೀಲ್

Nalin kumar kateel

#image_title

ಬೆಂಗಳೂರು: ʻʻಸಿದ್ದರಾಮಯ್ಯ ಅವರ ಕಾಲದಲ್ಲಿ ನಡೆದ ಅರ್ಕಾವತಿ ಹಗರಣಕ್ಕೆ ಸಂಬಂಧಿಸಿ ಜಸ್ಟಿಸ್ ಕೆಂಪಣ್ಣ ಆಯೋಗ ನೀಡಿದ ವರದಿಯನ್ನು ನಮ್ಮ ಮುಖ್ಯಮಂತ್ರಿಯವರು ಸದನದಲ್ಲಿ ಮಂಡಿಸಿದ್ದಾರೆ. ಸಿದ್ದರಾಮಯ್ಯ ಅವರು ಕೆಲವೇ ದಿನಗಳಲ್ಲಿ ಜೈಲಿಗೆ ಹೋಗಲಿದ್ದಾರೆʼʼ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ ಕುಮಾರ್ ಕಟೀಲ್ (Karnataka politics) ಅವರು ಹೇಳಿದರು.

ರಾಯಚೂರಿನ ಲಿಂಗಸುಗೂರಿನಲ್ಲಿ ಇಂದು ವಿಜಯ ಸಂಕಲ್ಪ ಯಾತ್ರೆ ಹಾಗೂ ಪೇಜ್ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದ ಅವರು, ʻʻಕರ್ನಾಟಕದಲ್ಲಿ ಅಭಿವೃದ್ಧಿಯ ಹರಿಹಾರ ಯಡಿಯೂರಪ್ಪನವರಿಗೆ ಬೇಡಿಕೆ- ಜನಬೆಂಬಲ ಇದೆ. ಸಿದ್ರಾಮಣ್ಣನಿಗೆ ಇಲ್ಲ. ಐದು ವರ್ಷ ಆಡಳಿತ ಮಾಡಿದ ಸಿದ್ರಾಮಣ್ಣನ ಅವಧಿಯಲ್ಲಿ 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಅವಧಿಯಲ್ಲಿ ಅಧಿಕಾರಿಗಳ ಆತ್ಮಹತ್ಯೆ ನಿರಂತರವಾಗಿತ್ತು. ಸಿದ್ರಾಮಣ್ಣನ ಕಾಲದಲ್ಲಿ ರೌಡಿರಾಜ್ಯ ಇತ್ತುʼʼ ಎಂದು ಆರೋಪಿಸಿದರು.

ʻʻ24 ಜನ ಹಿಂದೂ ಕಾರ್ಯಕರ್ತರ ಹತ್ಯೆ ಆಗಿತ್ತು. ಹಿಂದೂ- ಮುಸ್ಲಿಮರ ನಡುವೆ ಕಲಹಕ್ಕಾಗಿ ಟಿಪ್ಪು ಜಯಂತಿ ಆರಂಭಿಸಿದರು. ಗಲಭೆಗಳನ್ನು ಸೃಷ್ಟಿಸಿದರು. ಹಿಂದುಳಿದ ವರ್ಗಗಳನ್ನು, ಕುರುಬರನ್ನು ತುಳಿದರು. ಕನಕ ಜಯಂತಿಯನ್ನು ಯಡಿಯೂರಪ್ಪ ಮಾಡಿದರುʼʼ ಎಂದರು. ಸಿದ್ರಾಮಣ್ಣ ಸಮಾಜ ಒಡೆಯಲು ಮುಂದಾದರು ಎಂದರು.

ಬಿಜೆಪಿ ಗೆಲ್ಲಿಸಲು ಕರೆ ನೀಡಿದ ಸಿದ್ರಾಮಣ್ಣನಿಗೆ ಕೃತಜ್ಞತೆ

ʻʻಸಿದ್ದರಾಮಣ್ಣ ಕಾಂಗ್ರೆಸ್ ಕಾರ್ಯಕರ್ತರಿಗೆ ಬಿಜೆಪಿ ಗೆಲ್ಲಿಸಲು ಮತ್ತು ಕಾಂಗ್ರೆಸ್ ಸೋಲಿಸಲು ಕರೆ ನೀಡಿದ್ದಾರೆ. ಅವರಿಗೆ ಕೃತಜ್ಞತೆಗಳುʼʼ ಎಂದು ನಳಿನ್‍ಕುಮಾರ್ ಕಟೀಲ್ ಅವರು ಚಪ್ಪಾಳೆ, ಶಿಳ್ಳೆಗಳ ನಡುವೆ ಹೇಳಿದರು ʻʻವಿರೂಪಾಕ್ಷಪ್ಪ, ಪ್ರತಾಪಗೌಡರು ಬಿಜೆಪಿಗೆ ಹೋಗಿದ್ದಾರೆ. ಇನ್ನು ಕಾಂಗ್ರೆಸ್ ಖಾಲಿ ಎಂದು ಅವರಿಗೆ ಗೊತ್ತಾಗಿದೆ. ಅದಕ್ಕಾಗಿಯೇ ಅವರು ಕಾಂಗ್ರೆಸ್ ಸೋಲಿಸಿ, ಬಿಜೆಪಿ ಗೆಲ್ಲಿಸಲು ಹೇಳಿದ್ದಾರೆ. ಸಿದ್ರಾಮಣ್ಣ ಹೇಳಿದ್ದೆಲ್ಲ ನಡೆಯುತ್ತದೆ. ಆದ್ದರಿಂದ ಬಿಜೆಪಿ ಗೆಲುವು ಖಚಿತʼʼ ಎಂದು ಪ್ರಕಟಿಸಿದರು

ʻʻಸಿದ್ರಾಮಣ್ಣ ಆಡಳಿತ ಮಾಡುತ್ತಿದ್ದಾಗ ಜೈಲುಗಳಲ್ಲೂ ಮರ್ಡರ್, ಸಮಾಜದಲ್ಲೂ ಹತ್ಯೆ ನಿರಂತರವಾಗಿತ್ತು. ಅದು ಹಲ್ಲೆ, ಹತ್ಯೆಗಳ, ನರಮೇಧಗಳ ಕಾಲವಾಗಿತ್ತು. ಹಾಸ್ಟೆಲ್‍ನಲ್ಲಿ ಹಗರಣ, ಪಿಎಸ್‍ಐ ಹಗರಣ, ಶಿಕ್ಷಕರ ಹಗರಣ, ಅರ್ಕಾವತಿ ನುಂಗಿ ನೀರು ಕುಡಿದವರು ಸಿದ್ರಾಮಣ್ಣʼʼ ಎಂದು ಟೀಕಿಸಿದರು.

ʻʻರಾಜ್ಯದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಸಿದ್ದರಾಮಣ್ಣ, ಡಿ.ಕೆ.ಶಿವಕುಮಾರ್ ನಿರುದ್ಯೋಗಿಗಳಾಗಲಿದ್ದಾರೆ. ಎಲ್ಲೆಡೆ ಬಿಜೆಪಿ ಪರ ಅಲೆ ಇದೆ. ಮತ್ತೆ ಬಿಜೆಪಿ ಆಡಳಿತ ಬರಲಿದೆ ಎಂದು ಹುಲಿಯಾ ಕಾಡಿಗೆ ಹೋಗಲಿದೆ. ಬಂಡೆ ಒಡೆದು ಹೋಗಲಿದೆ. ಬಿಜೆಪಿಯ ಕಮಲ ಅರಳಲಿದೆʼʼ ಎಂದು ತಿಳಿಸಿದರು.

ʻʻರಾಯಚೂರು ಕಲ್ಯಾಣ ಕರ್ನಾಟಕದ ಅನ್ನದ ಬಟ್ಟಲು. ಚಿನ್ನದ ನಾಡಿದು. ಆದರೆ, 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ಚಿನ್ನದ ಬಟ್ಟಲನ್ನು ಕಬ್ಬಿಣದ, ಕಲ್ಲಿನ ಬಟ್ಟಲಾಗಿ ಮಾಡಿದೆ. ಇಲ್ಲಿ ಅಭಿವೃದ್ಧಿ ಮಾಡದೆ ಲೂಟಿ ಹೊಡೆಯುವ ಕಾರ್ಯ ಮಾಡಿದೆ ಎಂದು ಆರೋಪಿಸಿದರು. ಬಿಜೆಪಿ ಈ ಭಾಗದ ಅಭಿವೃದ್ಧಿಗೆ ಗರಿಷ್ಠ ಅನುದಾನ ನೀಡಿದೆʼʼ ಎಂದು ವಿವರಿಸಿದರು.

ಸಿದ್ದರಾಮಯ್ಯರಿಗೆ ಎಲ್ಲೂ ಎಂಟ್ರಿಯೇ ಇಲ್ಲ

ಬಾದಾಮಿಯಿಂದ ಸಿದ್ರಾಮಣ್ಣನನ್ನು ಓಡಿಸಿದ್ದಾರೆ. ವರುಣಾಕ್ಕೆ ಬರಲು ಬಿಡುವುದಿಲ್ಲ. ಕೋಲಾರದಲ್ಲಿ ಜಾಗ ಇಲ್ಲ. ಮಾಜಿ ಮುಖ್ಯಮಂತ್ರಿಗೆ ಸೀಟೇ ಇಲ್ಲ ಎಂಬ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್‍ನಲ್ಲಿ ಅವರು ಅಲೆಮಾರಿಯಾಗಿದ್ದಾರೆ ಎಂದು ಟೀಕಿಸಿದರು. ಮಾಜಿ ಸಿಎಂಗೆ ಕ್ಷೇತ್ರ ಇಲ್ಲದ ಪರಿಸ್ಥಿತಿ ಇದೆ. ಸಿದ್ರಾಮಣ್ಣನಿಗೆ ಸೀಟಿಲ್ಲ. ಕಾಂಗ್ರೆಸ್ಸಿಗೆ ಓಟಿಲ್ಲ ಎಂದು ನಿರ್ಧರಿಸಿ ಎಂದು ಮನವಿ ಮಾಡಿದರು.

ʻʻಲೋಕಾಯುಕ್ತ ಮುಚ್ಚಿದ ಎಸಿಬಿ ತೆರೆದ ಸಿದ್ರಾಮಣ್ಣನ ಕಾಲ ಭ್ರಷ್ಟಾಚಾರಿಗಳ ಕಾಲ. ಅವರು ಸ್ಯಾಂಡ್ ಮಾಫಿಯ, ಲ್ಯಾಂಡ್ ಮಾಫಿಯ ಮತ್ತು ಡ್ರಗ್ ಮಾಫಿಯದಿಂದ ಬದುಕಿದ್ದರು ಎಂದು ಆಕ್ಷೇಪಿಸಿದರು. ಇವೆಲ್ಲವನ್ನೂ ಬಿಜೆಪಿ ಆಡಳಿತ ನಿಯಂತ್ರಿಸಿದೆʼʼ ಎಂದು ತಿಳಿಸಿದರು.

ಪಾಕಿಸ್ತಾನದ ಜನರಿಗೇ ಮೋದಿ ಬೇಕು ಅನಿಸಿದೆ

ಪಾಕಿಸ್ತಾನದ ಜನರು ತಮ್ಮ ದೇಶಕ್ಕೆ ನರೇಂದ್ರ ಮೋದಿಜಿ ಪ್ರಧಾನಿ ಆಗಲಿ ಎಂದು ಬಯಸುವಂತಾಗಿದೆ. ಭಾರತ ಎದ್ದು ನಿಂತಿದೆ. ದೇಶ ಜಗದ್ವಂದ್ಯ ಆಗುತ್ತಿದೆ ಎಂದ ಅವರು, ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಮೋದಿಜಿ ಜನಪ್ರಿಯತೆ ಹೆಚ್ಚಾಗಿದೆ. ಅವರ ಜನಪರ ಯೋಜನೆಗಳು, ರಾಜ್ಯದ ಬಿಜೆಪಿ ಸರಕಾರದ ಜನೋಪಯೋಗಿ ಯೋಜನೆಗಳನ್ನು ಗಮನಿಸಿ ಜನರು ಬಿಜೆಪಿಯನ್ನು ಮತ್ತೆ ಗೆಲ್ಲಿಸುವುದು ಖಚಿತ ಎಂದು ವಿಶ್ವಾಸದಿಂದ ನುಡಿದರು.

ಸಂಸದ ರಾಜಾ ಅಮರೇಶ ನಾಯಕ್, ಶಾಸಕ ಮಾನಪ್ಪ ವಜ್ಜಲ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಟೆಂಗಿನಕಾಯಿ, ಸಿದ್ದರಾಜು, ಮಾಜಿ ಸಂಸದ ವಿರೂಪಾಕ್ಷಪ್ಪ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಜನಪ್ರತಿನಿಧಿಗಳು, ಪಕ್ಷದ ರಾಜ್ಯ, ಜಿಲ್ಲಾ ಮತ್ತು ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

ಇದನ್ನೂ ಓದಿ : Bommai Vs Siddaramaiah : ಸಿದ್ದರಾಮಯ್ಯ ಕಟು ಸತ್ಯ ಎದುರಿಸುವ ಕಾಲ ಬಂದಿದೆ; ಸಿಎಂ ಬೊಮ್ಮಾಯಿ ಎಚ್ಚರಿಕೆ

Exit mobile version