Site icon Vistara News

ಸಿದ್ದರಾಮಯ್ಯ@75 | ದೇಗುಲದಲ್ಲಿ ಪೂಜೆ, ದರ್ಗಾದಲ್ಲಿ ಪ್ರಾರ್ಥನೆ; ಮದಕರಿ, ರಾಯಣ್ಣಗೆ ಸೆಲ್ಯೂಟ್‌

ಸsiddaramaiah temple

ದಾವಣಗೆರೆ: ೭೫ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು ಇಲ್ಲಿ ಆಯೋಜಿಸಿರುವ ಬೃಹತ್‌ ಸಿದ್ದರಾಮೋತ್ಸವಕ್ಕೆ ಪೂರ್ವಭಾವಿಯಾಗಿ ನಗರ ಪ್ರದಕ್ಷಿಣೆ ನಡೆಸಿದರು. ಮೊದಲು ನಗರದ ದುರ್ಗಾಂಬ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಅವರು, ಬಳಿಕ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲಿಂದ ರಾಯಣ್ಣ ಸರ್ಕಲ್‌ಗೆ ಬಂದು ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ನಮನ ಸಲ್ಲಿಸಿದರು.

ದುರ್ಗಾಂಬ ದೇವಾಲಯದಲ್ಲಿ ಭಕ್ತಿಯಿಂದ ನಮಸ್ಕರಿಸಿದ ಸಿದ್ದರಾಮಯ್ಯ, ಆರತಿಯನ್ನು ಸ್ವೀಕರಿಸಿದ ಬಳಿಕ ತಟ್ಟೆಗೆ ೨೦೦೦ ರೂ. ನೋಟು ಹಾಕಿದರು. ಅವರ ಜತೆಗೆ ಪುತ್ರ ಯತೀಂದ್ರ ಇದ್ದರು. ಅಲ್ಲಿನ ಅರ್ಚಕರು ಬೆಳ್ಳಿ ಲೇಪಿತ ಮೂರ್ತಿ ಕೊಟ್ಟು, ಕಂಬಳಿ ಹೊದಿಸಿ ಆಶೀರ್ವಾದ ಮಾಡಿದರು.

ದಾವಣಗೆರೆಯ ದರ್ಗಾದ ಮುಂದೆ ಸಿದ್ದರಾಮಯ್ಯ

ಅಲ್ಲಿಂದ ಅವರು ನಗರದ ದರ್ಗಾಕ್ಕೆ ಭೇಟಿ ನೀಡಿದಾಗ ಅಲ್ಲಿನ ಸ್ಥಳೀಯರು ಸ್ವಾಗತಿಸಿದರು. ದರ್ಗಾದ ಒಳಗೆ ಹೋಗಿ ಪ್ರಾರ್ಥನೆ ಸಲ್ಲಿಸಿದ ಅವರು ಎಲ್ಲರಿಗೂ ನಮಸ್ಕಾರ ಹೇಳಿ ಹೊರಟರು. ಅಲ್ಲಿಂದ ಮುಂದೆ ವಂಡದ ಸರ್ಕಲ್‌ಗೆ ಬಂದರು. ಅಲ್ಲಿ ಮದಕರಿ ನಾಯಕನ ಪ್ರತಿಮೆಗೆ ನಮಸ್ಕರಿಸಿದರು. ಈ ವೇಳೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಅಲ್ಲಿ ಜಮಾಯಿಸಿದ್ದರು. ಸಿದ್ದರಾಮಯ್ಯ ಅವರು ಬರುತ್ತಿದ್ದಂತೆಯೇ ಅಭಿಮಾನಿಗಳು ಹಾಡುಗಳನ್ನು ಹಾಕಿ ಸಂಭ್ರಮಿಸಿದರು. ಟಗರು ಬಂತು ಟಗರು ಎಂಬ ಹಾಡು ಹಾಕಿದ ಸಿದ್ದರಾಮಯ್ಯ ಅಭಿಮಾನಿಗಳು ಕುಣಿದಾಡಿದರು.

ಮುಂದೆ ರಾಯಣ್ಣ ಸರ್ಕಲ್ ಗೆ ಆಗಮಿಸಿದರು. ಅಲ್ಲಿ ರಾಯಣ್ಣನ ಪ್ರತಿಮೆಗ ಮಾಲಾರ್ಪಣೆಗೆ ವ್ಯವಸ್ಥೆ ಮಾಡಲಾಗಿತ್ತಾದರೂ ಸಮಯದ ಅಭಾವದಿಂದ ಅವರು ಮೇಲೆ ಹತ್ತದೆ ಕೈ ಮುಗಿದುನಮಸ್ಕರಿಸಿ ಮುಂದೆ ಸಾಗಿದರು.

ಸಿದ್ದರಾಮಯ್ಯ ಅವರು ಹೋದಲ್ಲೆಲ್ಲೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಮುತ್ತಿಕೊಂಡಿದ್ದು ಕಂಡುಬಂತು. ಹೆಚ್ಚಿನವರು ಸೆಲ್ಫಿಗೆ ಮನವಿ ಮಾಡಿದರು. ಆದರೆ, ಸಮಯದ ಅಭಾವದಿಂದ ಹೆಚ್ಚಿನವರಿಗೆ ಫೋಟೊ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಆದರೂ ಜನರ ಉತ್ಸಾಹ ಕಡಿಮೆಯಾಗಲಿಲ್ಲ.

Exit mobile version