Site icon Vistara News

Hijab Row‌: ಮತ್ತೆ ವಿವಾದದ ಕಿಡಿ ಹಚ್ಚಿದ ಹಿಜಾಬ್; ಸಿಎಂ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ

CM Siddaramaiah

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್‌ ನಿಷೇಧ ವಾಪಸ್‌ (Hijab Row‌) ಪಡೆಯುವುದಾಗಿ ಹೇಳಿರುವ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಮತ್ತೆ ವಿವಾದದ ಕಿಡಿ ಹಚ್ಚಿದೆ. ಸಿಎಂ ಮಾತುಗಳಿಗೆ ಬಿಜೆಪಿ ತೀವ್ರ ಆಕ್ರೋಶ ಹೊರಹಾಕಿದ್ದು, ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಅವರ ಗ್ಯಾರಂಟಿ ಎಂದು ಕಿಡಿಕಾರಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ, ಶಾಲೆ – ಕಾಲೇಜುಗಳಲ್ಲಿ ಮಕ್ಕಳು ಸಮಾನತೆಯಿಂದ ಕೂಡಿರಬೇಕು ಎಂದೇ ಸಮವಸ್ತ್ರ ನೀತಿಯನ್ನು ಜಾರಿಗೊಳಿಸಲಾಗಿದೆ. ಇದನ್ನು ಸುಪ್ರೀಂ ಕೋರ್ಟ್ ಸಹ ಎತ್ತಿ ಹಿಡಿದಿದೆ. ಆದರೆ, ಶಾಲಾ ವಿದ್ಯಾರ್ಥಿಗಳ ಮನಸ್ಸಲ್ಲಿ ಸಮವಸ್ತ್ರ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಭೇದವನ್ನು ಹುಟ್ಟು ಹಾಕುತ್ತಿದ್ದಾರೆ ಆರೋಪಿಸಿದೆ.

ಪಿಎಫ್ಐ ಗೂಂಡಾಗಳು, ಅಲ್ಪಸಂಖ್ಯಾತರನ್ನು ಓಲೈಕೆ ಮಾಡಲು ವೋಟ್ ಬ್ಯಾಂಕ್‌ಗಾಗಿ ಸಿದ್ದರಾಮಯ್ಯ ಅವರು ಸಂವಿಧಾನವನ್ನೇ ತಿದ್ದುಪಡಿ ಮಾಡಲು ಹೊರಟಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ಹೊರಹಾಕಿದೆ.

ಇದನ್ನೂ ಓದಿ | ಭಾರತಾಂಬೆಯ ಮಹಾನ್ ಸುಪುತ್ರನ ದರ್ಶನ: ಮೋದಿ ಭೇಟಿ ಬಗ್ಗೆ ವಿಜಯೇಂದ್ರ ಸಂತಸ

ಶೀಘ್ರದಲ್ಲೇ ಹಿಜಾಬ್ ನಿಷೇಧ ವಾಪಸ್‌? ಸಿದ್ದರಾಮಯ್ಯ ಮಹತ್ವದ ಘೋಷಣೆ

ಮೈಸೂರು: ವಿರೋಧದ ನಡುವೆ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ವಾಪಸ್‌ (Hijab Row‌) ಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ. ಊಟ, ಉಡುಪು ಅವರವರ ಇಷ್ಟ. ಹೀಗಾಗಿ ಹಿಜಾಬ್ ನಿಷೇಧ ಆದೇಶ ವಾಪಸ್ ತೆಗೆದುಕೊಳ್ಳಲು ಹೇಳಿರುವುದಾಗಿ ಸಿಎಂ ತಿಳಿಸಿದ್ದಾರೆ.

ನಂಜನಗೂಡು ತಾಲೂಕಿ‌ನ ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಕವಲಂದೆ, ಅಂತರಸಂತೆ, ಜಯಪುರ ಪೊಲೀಸ್ ಠಾಣೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಪ್ರಧಾನಿ ಮೋದಿ ಅವರ ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಎನ್ನುವುದು ಬೋಗಸ್. ಬಟ್ಟೆ, ಉಡುಪು, ಜಾತಿ, ಆಧಾರದ ಮೇಲೆ ಜನರನ್ನು ವಿಭಜಿಸುವ, ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ನಾನು ಅದಕ್ಕೆಲ್ಲ ಅವಕಾಶ ಕೊಡಲ್ಲ. ಹಿಜಾಬ್ ನಿಷೇಧವನ್ನು (Hijab ban to be withdrawn) ವಾಪಸ್ ಪಡೆಯಲು ಹೇಳಿದೀನಿ ಎಂದು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version