ತುಮಕೂರು: ನಮ್ಮ ದಿವ್ಯ ಪರಂಪರೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಶಿವಯೋಗಿ ಸಿದ್ದರಾಮೇಶ್ವರರು (Siddarameshwara Jayanti) ಬಸವಣ್ಣನವರಿಗೆ ನಿಕಟಪೂರ್ವವಾಗಿದ್ದವರು. ಅವರಿಗೆ ಕಾಯಕದಿಂದ ಜ್ಞಾನೋದಯವಾಗಿ, ಕೆರೆಗಳನ್ನು ನಿರ್ಮಿಸಿ ಕೃಷಿಗೆ ಒತ್ತು ನೀಡಿದರು. ವಿಚಾರ, ಆಚಾರದಲ್ಲಿ ಸಾಮ್ಯತೆ ಇದ್ದುದ್ದರಿಂದ ಬಸವಣ್ಣನವರ ಒಡನಾಟಕ್ಕೆ ಬಂದು, ಕಾಯಕ ಸಮಾಜ ನಿರ್ಮಾಣ ಮಾಡಿದರು, ಅದೇ ನೊಳಂಬ ಸಮಾಜ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ತಿಪಟೂರಿನ ಶ್ರೀ ಸಿದ್ದರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ನೊಳಂಬ ಲಿಂಗಾಯತ ಸಂಘದಿಂದ ಭಾನುವಾರ ಆಯೋಜಿಸಿದ್ದ ‘ಶ್ರೀ ಗುರು ಸಿದ್ದರಾಮೇಶ್ವರ ಅವರ 850ನೇ ಸುವರ್ಣ ಜಯಂತಿ ಮಹೋತ್ಸವ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು .
ನೊಳಂಬ ಸಮಾಜ ಕೃಷಿ ಆಧಾರಿತ ಸಮಾಜ. ನೊಳಂಬರ ಪರಿಶ್ರಮದಿಂದ ಕಲ್ಪತರು ನಾಡು ಹೆಸರುಬಂದಿದೆ. 21ನೇ ಶತಮಾನದಲ್ಲಿ ಕಾಯಕ ನಿಷ್ಠೆ ಬೇಕಿದೆ. ಶ್ರೀಮಂತರು ದೇಶವನ್ನು ಮುಂದೆ ತರಲು ಸಾಧ್ಯವಿಲ್ಲ. ಅದು ಕಾರ್ಮಿಕ, ಶ್ರಮಿಕ ವರ್ಗದಿಂದ ಮಾತ್ರ ಸಾಧ್ಯ. ಈ ಸಮಾಜ ಸಂಘಟಿತವಾಗಿ ಮುಂದೆ ಬರಬೇಕು. ಈ ಆಶೋತ್ತರಗಳು ದೇಶದ ಆಶೋತ್ತರಗಳಾಗುತ್ತಿವೆ ಎಂದು ಹೇಳಿದರು.
ಇದನ್ನೂ ಓದಿ | Minister Sunil Kumar | ಜನವರಿ-ಫೆಬ್ರವರಿಯಲ್ಲಿ ʼಕನ್ನಡ ಸಂಸ್ಕೃತಿ ಮೂಲ ಸಂಸ್ಕೃತಿʼ ವಿಶೇಷ ಅಭಿಯಾನ; ಸುನಿಲ್ ಕುಮಾರ್
ನೊಳಂಬ ಇತಿಹಾಸ ಅಧ್ಯಯನಕ್ಕೆ ಸಂಶೋಧನ ಕೇಂದ್ರ
ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ಪ್ರತಿ ತಾಲೂಕಿಗೆ ಕೆರೆ ಹೂಳು ತೆಗೆಯಲು 5 ಕೋಟಿ ರೂಪಾಯಿ ನೀಡಿದ್ದರು. ಸ್ವಂತ ಹಣ ಹಾಕಿ ನಿಮ್ಮ ಕ್ಷೇತ್ರದಲ್ಲಿ ಕೆರೆ ನಿರ್ಮಿಸುವಂತೆ ಯಡಿಯೂರಪ್ಪ ಕರೆ ನೀಡಿದ್ದರು. ನೊಳಂಬ ಇತಿಹಾಸ ಅಧ್ಯಯನ ಮಾಡಲು ಸಂಶೋಧನ ಕೇಂದ್ರ ಸ್ಥಾಪಿಸಲು ನನ್ನ ಸಮ್ಮತಿಯಿದೆ. ಅದಕ್ಕೆ ಅಗತ್ಯವಿರುವ ಹಣ ನೀಡಲು ಮಾರ್ಚ್ ಅಂತ್ಯದೊಳಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ತುಮಕೂರಿನಲ್ಲಿ ನೊಳಂಬೋತ್ಸವ ಪ್ರಾರಂಭಿಸೋಣ ಎಂದ ಅವರು, ನೊಳಂಬ ಸಮಾಜದ ಜತೆಗೆ ಸರ್ಕಾರ ಇರಲಿದೆ. ಮೊದಲ ಬಾರಿಗೆ ಯಡಿಯೂರಪ್ಪ ಸಿಎಂ ಆಗಿದ್ದಾಗ, ಹೊನ್ನವಳ್ಳಿ ಏತನೀರಾವರಿ ಯೋಜನೆಗೆ ಚಾಲನೆ ನೀಡಿದ್ದೆವು. ಶೀಘ್ರವೇ ಎತ್ತಿನಹೊಳೆ ಯೋಜನೆಯಿಂದ ನೀರು ಹರಿಸುತ್ತೇವೆ. ಈ ಭಾಗದ ಜನರು ಆಶೀರ್ವಾದ ಮಾಡಿರುವುದರಿಂದ ಆ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದರು.
ಸಿಎಂ ಭಾಷಣದ ಮಧ್ಯೆ ಕೊಬ್ಬರಿ ಕೊಬ್ಬರಿ ಎಂದು ಜನರು ಕೂಗಿದ್ದಕ್ಕೆ ಪ್ರತಿಕ್ರಿಯಿಸಿ, ಮೋದಿಯವರು ತೆಂಗಿಗೆ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಲು ಕ್ರಮ ಕೈಗೊಳ್ಳುತ್ತಾರೆ. ನಫೆಡ್ ಮೂಲಕ ಕಬ್ಬು ಹಾಗೂ ರಾಗಿಗೆ ಬೆಂಬಲ ಬೆಲೆ ನೀಡುತ್ತೇವೆ ಎಂದು ಹೇಳಿದರು.
ಸಿದ್ದರಾಮಶ್ವೇರರ ಕನಸನ್ನು ಬಿಜೆಪಿ ನನಸು ಮಾಡುತ್ತಿದೆ: ಸಚಿವ ಬಿ.ಸಿ.ನಾಗೇಶ್
ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಸಿದ್ದರಾಮೇಶ್ವರ ಜಯಂತಿಗೂ ಬಿಜೆಪಿಗೂ ನೇರ ಸಂಬಂಧ ಇಲ್ಲ. ಸಿದ್ದರಾಮಶ್ವೇರರು ಯಾವ ಕನಸ್ಸು ಕಂಡಿದ್ದರೋ, ಅದು ಪೂರ್ಣವಾಗೋ ಕೆಲಸ ಬಿಜೆಪಿ ಸರ್ಕಾರ ಮಾಡಿದೆ. ಇದನ್ನು ಹೇಳಲು ನನಗೆ ತುಂಬಾ ಸಂತೋಷವಾಗುತ್ತದೆ. ಈ ಹಿಂದೆ ತಿಪಟೂರಿನಲ್ಲಿ ಕುಡಿಯುವ ನೀರು ಕೊಡುವುದು ದೊಡ್ಡ ಸಾಹಸ ಆಗಿತ್ತು. ಯಡಿಯೂರಪ್ಪ ಸಿಎಂ ಆದಾಗ ತಿಪಟೂರಿನ ಸಮಸ್ಯೆ ಬಗ್ಗೆ ಹೇಳಿದ್ದೆ. ಆಗ ತಿಪಟೂರು, ಕುಣಿಗಲ್‌ಗೆ ನೀರಾವರಿ ಪ್ರಾಜೆಕ್ಟ್ ಮಾಡಲು ಸೂಚಿಸಿದ್ದರು. ಈಗ 180 ಕೋಟಿ ರೂಪಾಯಿ ವೆಚ್ಚದಲ್ಲಿ 93 ಕೆರೆ ತುಂಬಿಸುವ ಕೆಲಸ ಆಗುತ್ತಿದೆ ಎಂದರು.
ಕೇಂದ್ರ ಸರ್ಕಾರ ತೆಂಗಿಗೆ ಒಂದೇ ವರ್ಷದಲ್ಲಿ ಕ್ವಿಂಟಾಲ್‌ಗೆ 1100 ರೂಪಾಯಿ ರಷ್ಟು ಬೆಂಬಲ ಬೆಲೆ ಹೆಚ್ಚಿಸಿದೆ. ಅಂದು ಸಿದ್ದರಾಮೇಶ್ವರರ ಕಾಯಕ ಸಂಸ್ಕೃತಿಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಅಳವಡಿಸಿಕೊಂಡಿದ್ದಾರೆ. ಎಲ್ಲೊ ಒಂದು ಕಡೆ ಸಿದ್ದರಾಮೇಶ್ವರರ ಆಶಯಕ್ಕೂ ನಮಗೂ ಸಂಬಂಧ ಇದೆ ಎಂದು ಹೇಳಿದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಗಳನ್ನು ನಡೆದಾಡುವ ದೇವರು ಎಂದು ಪೂಜಿಸುತ್ತೇವೆ. ಇದರ ಜತೆ ನಡೆದಾಡುವ ಸರ್ಕಾರವನ್ನು ತಂದ ಕೀರ್ತಿ ಯಡಿಯೂರಪ್ಪಗೆ ಸಲ್ಲುತ್ತದೆ. ಅವರು ಕೊಟ್ಟಿರುವ ಪ್ರತಿಯೊಂದು ಕಾರ್ಯಕ್ರಮ ಪ್ರತಿ ಮನೆಗೆ ತಲುಪಿದೆ. ಯಡಿಯೂರಪ್ಪ ಅವರಿಗೆ ಈಗ ಯಾವುದೇ ರಾಜಕೀಯ ಸ್ಥಾನಮಾನ ಇಲ್ಲ. ಅವರು ಈಗ ಮುಖ್ಯಮಂತ್ರಿ ಕೂಡ ಅಲ್ಲ. ಹಾಗಿದ್ದರೂ ಅವರಿಗೆ ಕೋಟ್ಯಂತರ ಜನರು ತಮ್ಮ ಮನಸ್ಸಿನಲ್ಲಿ ಶಾಶ್ವತ ಸ್ಥಾನವನ್ನು ಕೊಟ್ಟಿದ್ದಾರೆ ಎಂದರು.
ಗುಡಿಯಲ್ಲಿ ದೇವರು ಕಾಣೋದಕ್ಕಿಂತ ಮನುಷ್ಯನಲ್ಲಿ ದೇವರು ಕಾಣಬೇಕಿದೆ. ಕಾಣಿಕೆ ಹಾಕುತ್ತೇವೆ, ಅನ್ನದಾನ ಮಾಡುತ್ತೇವೆ. ಎಲ್ಲದಕ್ಕಿಂತ ಮಿಗಿಲಾದ ದಾನ ಯಾವುದಾದರೂ ಇದ್ದರೇ ಅದು ಮತ್ತೊಬ್ಬರಿಗೆ ಹಿಂಸೆಯನ್ನು ಕೊಡದೇ ಜೀವನ ಸಾಗಿಸುವುದು ಎಂದ ಅವರು, ಇವತ್ತು ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದರ ಬಗ್ಗೆ ನಾನು ಹೇಳಬೇಕಿಲ್ಲ. ಸಮಾಜವನ್ನು ಸರಿದಾರಿಯಲ್ಲಿ ಕರೆದುಕೊಂಡು ಹೋಗುವ ಜವಾಬ್ದಾರಿ ಈ ವೇದಿಕೆಯಲ್ಲಿರೋ ಹರಗುರುಚರಮೂರ್ತಿಗಳಲ್ಲಿ ಎಷ್ಟಿದೆಯೋ, ವೇದಿಕೆ ಮುಂದೆ ಇರೋ ಎಲ್ಲರಿಗೂ ಅಷ್ಟೆ ಜವಾಬ್ದಾರಿ ಇದೆ ಎಂದು ಹೇಳಿದರು.
ವೀರಶೈವ ಲಿಂಗಾಯಿತ ಸಮಾಜ ದೊಡ್ಡ ಆಲದಮರ ಇದ್ದ ಹಾಗೆ, ನಮ್ಮ ಸಮಾಜದ ನಡತೆ, ನಾಯಕರ ನಡತೆ ಅಷ್ಟೇ ಮುಖ್ಯ. ಈ ಶತಮಾನ ಯುವಕರಿಗೆ ಸೇರಿದ ಶತಮಾನ. ಇಂದಿನ ಯುವಕರು ದಾರಿ ತಪ್ಪಿ ಬೇರೆ ವ್ಯಸನಗಳಿಗೆ ತುತ್ತಾಗುತ್ತಿರುವುದು ನೋಡುತ್ತಿದ್ದೇನೆ. ಯುವಕರು ಸರಿ ದಾರಿಯಲ್ಲಿ ಹೋದಲ್ಲಿ ಮಾತ್ರ ದೇಶ ಮುನ್ನಡೆಯಲು ಸಾಧ್ಯ. ಯುವಕರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಮೋದಿ, ಬೊಮ್ಮಾಯಿ ಅವರು ಕೆಲಸ ಮಾಡುತ್ತಿದ್ದಾರೆ ಎಂದರು.
ನಾನು ರಾಜಕೀಯದಲ್ಲಿ ಅಂಬೆಗಾಲು ಇಡುತ್ತಿದ್ದೇನೆ. ಏನೇ ಸವಾಲು ಬಂದರೂ ಮೆಟ್ಟಿನಿಲ್ಲುವ ಶಕ್ತಿಯನ್ನು ಯಡಿಯೂರಪ್ಪ, ರಾಜ್ಯದ ಜನ ಕೊಟ್ಟಿದ್ದಾರೆ. ಯಡಿಯೂರಪ್ಪ ಅವರ ರಾಜಕೀಯ ಏಳು ಬೀಳುಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಏನೇ ಸಮಸ್ಯೆ ಬಂದರೂ, ಸೋಲಾದರೂ, ಸೋಲನ್ನೇ ಗೆಲುವಿನ ಮೆಟ್ಟಿಲು ಮಾಡಿಕೊಂಡು ನಾಡಿನ ಸೇವೆ ಮಾಡಲು ಸಿದ್ಧನಿದ್ದೇನೆ, ಅದಕ್ಕೆ ನಿಮ್ಮ ಆಶಿರ್ವಾದ ಇರಬೇಕು ಎಂದು ಜನರನ್ನು ಕೋರಿದರು.
ಇದನ್ನೂ ಓದಿ | Ramakrishna Hegde | ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರಾಮಕೃಷ್ಣ ಹೆಗಡೆ ಅಧ್ಯಯನ ಪೀಠ: ಸಿಎಂ ಬೊಮ್ಮಾಯಿ ಘೋಷಣೆ