Site icon Vistara News

Assembly Session: ಧಮ್‌, ತಾಕತ್ ಇದ್ದರೆ ಹೊಡೆದುಹಾಕಲಿ ನೋಡೋಣ: ಅಶ್ವತ್ಥನಾರಾಯಣ ಹೇಳಿಕೆಗೆ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ತಿರುಗೇಟು

assembly-session-siddarmaiah lashes out over ashwathnarayan statement

ವಿಧಾನಸಭೆ: ಟಿಪ್ಪೂ ಸುಲ್ತಾನನನ್ನು ಉರಿಗೌಡ ಹಾಗೂ ನಂಜೇಗೌಡ ಹೊಡೆದುಹಾಕಿದಂತೆ ಸಿದ್ದರಾಮಯ್ಯ ಅವರನ್ನೂ ಮಾಡಬೇಕು ಎಂದು ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಹೇಳಿಕೆಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಟೀಕಿಸಿದ್ದಾರೆ.

ಬಜೆಟ್‌ ಕುರಿತಾಗಿ ವಿಧಾನಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಎಸಿಬಿ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದ ಒಟ್ಟು 16 ರಾಜ್ಯಗಳಲ್ಲಿ ಇದೆ. ಎಸಿಬಿ ರಚನೆ ಮಾಡಿ ಲೋಕಾಯುಕ್ತದ ಅಧಿಕಾರ ಕಸಿಯಲಾಗಿದೆ ಎಂದು ಹೇಳುವುದು ಸರಿಯಲ್ಲ, ಅಡ್ವೊಕೇಟ್‌ ಜನರಲ್‌ ಅವರು ಎಸಿಬಿ ರಚನೆ ಮಾಡಿರುವುದು ಸರಿ ಎಂದು ಕೋರ್ಟ್‌ ನಲ್ಲಿ ಹೇಳಿದ್ದಾರೆ. ಇದಕ್ಕೆ ವಿರುದ್ಧವಾಗಿ ಸರ್ಕಾರ ಯಾಕೆ ಹೇಳಿಕೆ ಕೊಡಬೇಕು? ಕೋರ್ಟ್‌ ನಲ್ಲಿ ಒಂದು ಹೊರಗಡೆ ಒಂದು ಭಿನ್ನ ನಿಲುವು ಯಾಕೆ? ಸಿದ್ದರಾಮಯ್ಯ ಅವರು ತಮ್ಮ ಮೇಲಿನ ಆರೋಪಗಳಿಂದ ರಕ್ಷಣೆ ಪಡೆಯಲು ಉದ್ದೇಶಪೂರ್ವಕವಾಗಿ ಎಸಿಬಿ ರಚನೆ ಮಾಡಿ ಲೋಕಾಯುಕ್ತದ ಅಧಿಕಾರವನ್ನು ಕಿತ್ತುಕೊಂಡರು ಎಂದು ಜನರಿಗೆ ತಪ್ಪು ಮಾಹಿತಿ ನೀಡುವುದು ಯಾಕೆ? ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಯಾಕೆ ಇನ್ನು ಎಸಿಬಿಯನ್ನು ರದ್ದು ಮಾಡಿಲ್ಲ? ನನ್ನ ವಿರುದ್ಧ ಲೋಕಾಯುಕ್ತಕ್ಕೆ ನೀಡಿದ್ದ ಅನೇಕ ದೂರುಗಳು ಆಧಾರ ರಹಿತವಾದವು ಎಂದು ಲೋಕಾಯುಕ್ತದವರೇ ರದ್ದು ಮಾಡಿದ್ದಾರೆ ಎಂದರು.

ಕೇಂದ್ರ ಗೃಹಸಚಿವ ಅಮಿತ್‌ ಶಾ ಪ್ರಸ್ತಾಪಿಸಿದ ವಿಚಾರದಲ್ಲಿ ಮಾತನಾಡಿ, ಅಬ್ಬಕ್ಕ ವರ್ಸಸ್‌ ಟಿಪ್ಪು ಸುಲ್ತಾನ್‌, ಗಾಂಧಿ ವರ್ಸಸ್‌ ಗೋಡ್ಸೆ ಇಂಥ ಭಾವನಾತ್ಮಕ ವಿಚಾರಗಳನ್ನು ಬಿಟ್ಟುಬಿಡಿ. ಅಭಿವೃದ್ಧಿ ವಿಚಾರಗಳ ಮೇಲೆ ಚರ್ಚೆ ಮಾಡೋಣ ಬನ್ನಿ. ಸಾರ್ವಜನಿಕವಾಗಿ ಅಭಿವೃದ್ಧಿ ವಿಷಯ ಚರ್ಚೆಯಾಗಲಿ. ಸಚಿವರೊಬ್ಬರು, ಟಿಪ್ಪು ಸುಲ್ತಾನ್ ನನ್ನು ಮೇಲೆ ಕಳಿಸಿದಂತೆ ಸಿದ್ದರಾಮಯ್ಯ ಅವರನ್ನು ಮೇಲೆ ಕಳಿಸಿ ಎಂದಿದ್ದಾರೆ. ಕೊಲೆ ಮಾಡು ಎಂದು ಯಾವುದಾದರೂ ಧರ್ಮ ಹೇಳುತ್ತದಾ? ಟಿಪ್ಪು ಮುಗಿಸಿದಂತೆ ಸಿದ್ದರಾಮಯ್ಯ ಅವರನ್ನು ಮುಗಿಸಿ ಎಂದರೆ ಇದು ಅವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ಇಂಥಾ ಬೆದರಿಕೆಗಳಿಗೆ ಹೆದರಿಕೊಂಡು ನನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುವವನು ನಾನಲ್ಲ. ನಾನು ನನ್ನ ಜೀವನದ ಕೊನೆಯವರೆಗೆ ಸಮಾಜದ ದುರ್ಬಲುರು, ಅವಕಾಶ ವಂಚಿತರು, ಬಡವರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ಸಮುದಾಯದ ಜನರ ಪರವಾಗಿಯೇ ಇರುತ್ತೇನೆ. ಧಮ್‌, ತಾಕತ್ ಇದ್ದರೆ ಹೊಡೆದುಹಾಕಲಿ ನೋಡೋಣ ಎಂದು ಆಕ್ರೋಶ ಹೊರಹಾಕಿದರು.

ಹಣಕಾಸಿನ ಪರಿಸ್ಥಿತಿ ಬಹಳ ಸದೃಢವಾಗಿದೆ ಎಂದು ಬಜೆಟ್‌ ನಲ್ಲಿ ಹೇಳಿದ್ದಾರೆ. ಆದರೆ ಇನ್ನೊಂದು ಕಡೆ ಆರ್ಥಿಕ ಇಲಾಖೆಯವರು, ನಾವು ಈಗಾಗಲೇ ವಿತ್ತೀಯ ಕೊರತೆ ಎದುರಿಸುತ್ತಿದ್ದೇವೆ, ಆ ಕಾರಣದಿಂದ ಗ್ರಾಂಟ್‌ ಇನ್‌ ಏಡ್‌ ಗೆ ಸೇರಿಸೋಕೆ ಆಗಲ್ಲ, ಹಣಕಾಸಿನ ಪರಿಸ್ಥಿತಿ ಬಹಳ ಕೆಟ್ಟು ಹೋಗಿದೆ ಎಂದು ಫೈಲ್‌ ಮೇಲೆ ಬರೆದ್ದಿದ್ದಾರೆ. ಕೊರೊನಾ, ಪ್ರವಾಹ ಬಂದ ಕಾರಣಕ್ಕೆ ನಮ್ಮ ಆರ್ಥಿಕ ಪರಿಸ್ಥಿತಿ ಹಾಳಾಗಿದೆ ಎಂದು ಕಾರಣ ಕೊಟ್ಟಿದ್ದಾರೆ. ಇಡೀ ಕೊರೊನಾ ನಿರ್ವಹಣೆಗೆ ಖರ್ಚು ಮಾಡಿರುವುದು 15 ರಿಂದ 16 ಸಾವಿರ ಕೋಟಿ ರೂ. ಪ್ರವಾಹಕ್ಕೆ ಖರ್ಚು ಮಾಡಿರುವುದು 6000 ಕೋಟಿ. ಪ್ರವಾಹದಿಂದ ಒಂದು ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ, ಸುಮಾರು 3 ಲಕ್ಷ ಮನೆಗಳು ಹಾನಿಗೊಳಗಾಗಿತ್ತು, ಇದಕ್ಕೆ ಒಂದು ಕಂತು ಪರಿಹಾರ ಕೊಟ್ಟರು, ನಂತರದ ಕಂತು ಕೊಟ್ಟೆ ಇಲ್ಲ. 2022ರಲ್ಲಿ ಪ್ರವಾಹ ಬಂದಾಗ 1944 ಕೋಟಿ ಪರಿಹಾರ ಕೇಳಿ ಕೇಂದ್ರ ಸರ್ಕಾರಕ್ಕೆ ಮನವಿ ಕೊಟ್ಟಿದ್ದಾರೆ, ಇವತ್ತಿನವರೆಗೆ ಒಂದು ರೂಪಾಯಿ ಪರಿಹಾರ ಬಂದಿಲ್ಲ. ಈ ಸರ್ಕಾರವನ್ನು ಅತ್ಯಂತ ದುರ್ಬಲ ಸರ್ಕಾರ ಎನ್ನದೆ ಏನನ್ನಬೇಕು?

ಇದನ್ನೂ ಓದಿ: Karnataka Election 2023: ಒಬ್ಬ ಸಿದ್ದರಾಮಯ್ಯರನ್ನು ಹತ್ಯೆ ಮಾಡಿ ಕಾಂಗ್ರೆಸ್ಸನ್ನು ತಡೆಯೋಕೆ ಆಗಲ್ಲ, ತಾಕತ್ತಿದ್ದರೆ ಬಂದು ಕೊಲ್ಲಿ: ಸುರ್ಜೇವಾಲಾ

ನಾನು ಮುಖ್ಯಮಂತ್ರಿಯಾಗಿ ಮಂಡಿಸಿರುವ 6 ಬಜೆಟ್‌ ಗಳು ಪಾರದರ್ಶಕತೆ ಮತ್ತು ಉತ್ತರದಾಯಿತ್ವದಿಂದ ಕೂಡಿತ್ತು. ನಮ್ಮ ಸರ್ಕಾರದ ಕೊನೆಯ ಬಜೆಟ್‌ ನಲ್ಲಿ ನಾವು 5 ವರ್ಷಗಳಲ್ಲಿ ಏನು ಕೆಲಸ ಮಾಡಿದ್ದೇವೆ, ಯಾವೆಲ್ಲ ಭರವಸೆ ನೀಡಿದ್ದೆವು, ಎಷ್ಟು ಈಡೇರಿಸಿದ್ದೇವೆ, ಮುಂದೆ ಅಧಿಕಾರಕ್ಕೆ ಬಂದರೆ ಏನೆಲ್ಲ ಮಾಡುತ್ತೇವೆ ಎಂದು ಹೇಳಿದ್ದೆ. ಈ ಬಜೆಟ್‌ ನಲ್ಲಿ ಇಂಥಾ ಪಾರದರ್ಶಕತೆ ಇಲ್ಲ. ನಾನು ಮುಖ್ಯಮಂತ್ರಿಯಾಗಿರುವಾಗ ಅನ್ನಭಾಗ್ಯ ಯೋಜನೆಯಡಿ 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದೆ, ಈ ಸರಕಾರ ಅದನ್ನು 5 ಕೆ.ಜಿ ಗೆ ಇಳಿಸಿತು, ಯಾಕೆ ಎಂದು ಪ್ರಶ್ನೆ ಮಾಡಿದರೆ ದುಡ್ಡಿಲ್ಲ ಎಂದರು. ಈ ಅನ್ನಭಾಗ್ಯ ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ದರೆ ಗುಜರಾತ್‌, ಮಧ್ಯಪ್ರದೇಶ, ಅಸ್ಸಾಂನಲ್ಲಿ ಯಾಕಿಲ್ಲ? 3 ರೂ. ಗೆ ಅಕ್ಕಿ ನೀಡುವಂತೆ ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿದ್ದು ಮನಮೋಹನ್‌ ಸಿಂಗ್‌ ಅವರ ಸರ್ಕಾರ. ಮೋದಿ ಅಥವಾ ವಾಜಪೇಯಿ ಅವರಲ್ಲ.

ಸುನಿಲ್‌ ಕುಮಾರ್‌ ಅವರು ಈ ಬಜೆಟ್‌ ಅನ್ನು ತೆರಿಗೆ ಸಂಗ್ರಹದ ಅಮೃತ ಕಾಲದ ಬಜೆಟ್‌ ಎಂದು ಕರೆದಿದ್ದಾರೆ. ನನ್ನ ಪ್ರಕಾರ ಇದು ತೆರಿಗೆ ಸುಲಿಗೆಯ ಕತ್ತಲ ಕಾಲದ ಬಜೆಟ್‌. ಈ ಸರ್ಕಾರ ಪೆಟ್ರೋಲ್‌, ಡೀಸೆಲ್‌ ಮೇಲೆ ಸೆಸ್‌ ಜಾಸ್ತಿಮಾಡಿದೆ. ಅಕ್ಕಿ, ರಾಗಿ, ಗೋಧಿ, ಪೆನ್ನು, ಪೆನ್ಸಿಲ್‌, ಮಂಡಕ್ಕಿ, ಹಾಲು, ಮೊಸರು, ಹಸುಗಳು ತಿನ್ನುವ ಹಿಂಡಿ, ಬೂಸಾಗಳ ಮೇಲೆ 5 ರಿಂದ 18% ತೆರಿಗೆ ವಿಧಿಸಿದ್ದಾರೆ. 80% ತೆರಿಗೆಯನ್ನು ರಾಜ್ಯದ ಬಡವರು, ಕಾರ್ಮಿಕರು ಕಟ್ಟುತ್ತಿದ್ದಾರೆ ಎಂದು ಟೀಕಿಸಿದರು.

Exit mobile version