Site icon Vistara News

Karnataka Election | ದ.ಕನ್ನಡ ಹಿಂದುತ್ವದ ಫ್ಯಾಕ್ಟರಿ, ಕೋಮುವಾದದ ಬೀಜ ಹುಟ್ಟೋದೇ ಇಲ್ಲಿನ ಲ್ಯಾಬಲ್ಲಿ ಎಂದ ಸಿದ್ದರಾಮಯ್ಯ

siddaramaiah Mangalore

ಉಳ್ಳಾಲ (ಮಂಗಳೂರು): ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿಯ ಹಿಂದುತ್ವದ ಫ್ಯಾಕ್ಟರಿ, ಕೋಮುವಾದದ ಬೀಜ ಹುಟ್ಟಿದ್ದೇ ಇಲ್ಲಿನ ಲ್ಯಾಬ್‌ನಲ್ಲಿ ಎಂದು ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅರೋಪಿಸಿದರು. ಅವರು ಹರೇಕಳ ಕಡವಿನಬಳಿಯ ಯು.ಟಿ ಫರೀದ್ ವೇದಿಕೆಯಲ್ಲಿ ಜರಗಿದ ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ಬೃಹತ್ ಸಾರ್ವಜನಿಕ ಜನಜಾಗೃತಿ ಸಭೆಯನ್ನು (Karnataka Election) ಉದ್ದೇಶಿಸಿ ಮಾತನಾಡಿದರು.

ʻʻಬಿಜೆಪಿಯವರು ಅಧಿಕಾರಕ್ಕೆ ಬಂದ ನಂತರ ಭರವಸೆಗಳನ್ನು ಮರೆತು ಸಮಾಜ ಒಡೆಯುವ ಕೆಲಸಕ್ಕೆ ಮುಂದಾಗುತ್ತಾರೆ. ಬಹುತ್ವದ ದೇಶದಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕು ಎಂದು ಸಂವಿಧಾನ ಹೇಳುತ್ತದೆ. ಆದರೆ, ಇಲ್ಲಿ ಸಮಾನತೆಯನ್ನು ಅಳಿಸಿ ಹಾಕಲಾಗುತ್ತಿದೆ, ಒಗ್ಗಟ್ಟನ್ನು ಮುರಿಯಲಾಗುತ್ತಿದೆʼʼ ಎಂದು ಸಿದ್ದರಾಮಯ್ಯ ಹೇಳಿದರು.

ʻʻಬಿಜೆಪಿಯವರಿಗೆ ಅಸಮಾನತೆಯ ಸಮಾಜ ಬೇಕಿದೆ. ಜಾತಿ ವ್ಯವಸ್ಥೆಯನ್ನು ನಿರ್ಮಿಸಿ ಒಂದು ಜಾತಿಯವರನ್ನು ಇನ್ನೊಂದು ಜಾತಿಗೆ ಎತ್ತಿಕಟ್ಟುವುದು ಬೇಕಾಗಿದೆ. ಆರ್ಥಿಕತೆ, ಅಸಮಾನತೆಯಿದ್ದರೆ ದೌರ್ಜನ್ಯ ಮಾಡಲು ಸುಲಭವಾಗುತ್ತದೆʼʼ ಎಂದು ಹೇಳಿದರು ಸಿದ್ದರಾಮಯ್ಯ.

ʻʻಪರೇಶ್ ಮೇಸ್ತಾ ಸಾವಿನ ವಿಷಯದಲ್ಲಿ ದೊಡ್ಡ ಹಂಗಾಮಾವನ್ನೇ ಸೃಷ್ಟಿಸಲಾಯಿತು. ಇದು ಕಾಂಗ್ರೆಸ್ ನವರು ಮಾಡಿದ ಕೊಲೆ ಎಂದು ಬಿಂಬಿಸಲಾಯಿತು. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಿದ್ದೆ. ಕೊಲೆಯಲ್ಲ ಇದೊಂದು ಆಕಸ್ಮಿಕ ಸಾವು ಎಂದು ಸಿಬಿಐ ವರದಿ ನೀಡಿತು. ಇಂತಹ ಅನೇಕ ಕೊಲೆಗಳನ್ನು ಬೇರೆಯವರ ಮೇಲೆ ಎತ್ತಿಕಟ್ಟುವ ಕೆಲಸ ದ.ಕ ಜಿಲ್ಲೆಯಲ್ಲಿಯೂ ಆಗಿದೆʼʼ ಎಂದು ಹೇಳಿದರು ಸಿದ್ದರಾಮಯ್ಯ.

ʻʻಈಗಿನ ಮುಖ್ಯಮಂತ್ರಿ ಏಳು ಕೋಟಿ ಕನ್ನಡಿಗರ ಮುಖ್ಯಮಂತ್ರಿಯಲ್ಲ, ಆರ್ ಎಸ್ ಎಸ್ ಮುಖ್ಯಮಂತ್ರಿ. ಇವರು ಕೊಲೆಯಾದ ಅಲ್ಪಸಂಖ್ಯಾತರ ಮನೆಗೇ ಹೋಗುವುದಿಲ್ಲ. ಜನರ ತೆರಿಗೆಯಿಂದ ಬರುವ ಆದಾಯವನ್ನು ಒಂದೇ ಕಡೆಗೆ ಪರಿಹಾರ ನೀಡಿ. ಆರ್ ಎಸ್ ಎಸ್ ನವರ ಕೈಗೊಂಬೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆʼʼ ಎಂದು ನೇರವಾಗಿ ದಾಳಿ ಮಾಡಿದರು ಸಿದ್ದರಾಮಯ್ಯ.

ನಳಿನ್‌ ಕುಮಾರ್‌ ಕಟೀಲ್‌ ಒಬ್ಬ ವಿದೂಷಕ
ʻʻಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್ ಒಬ್ಬ ವಿದೂಷಕ. ಯಕ್ಷಗಾನದಲ್ಲಿ ಎಲ್ಲಾ ಬಿಜೆಪಿ ವಿಚಾರಗಳನ್ನು ಪ್ರಚಾರಪಡಿಸಲು ಹೇಳುತ್ತಾನೆ. ಆರಾಧಿಸುವ ಕಲೆ ಯಕ್ಷಗಾನದಲ್ಲಿ ಕೋಮುವಾದವನ್ನು ಬಿತ್ತುವಾತ ಇವನುʼʼ ಎಂದು ಮೂದಲಿಸಿದರು.

ನೆಟ್ಟಾರು ಕೊಲೆ ಹಿಂದೆಯೂ ನಳಿನ್‌ ಇರಬಹುದು ಎಂದ ಹರಿಪ್ರಸಾದ್‌
ಮೇಲ್ಮನೆ ಸದಸ್ಯ ಬಿ.ಕೆ ಹರಿಪ್ರಸಾದ್ ಅವರು ಹಿಂದೂ ಕಾರ್ಯಕರ್ತ ನೆಟ್ಟಾರು ಪ್ರವೀಣ್‌ ಹತ್ಯೆಯಲ್ಲಿ ನಳಿನ್‌ ಕುಮಾರ್‌ ಕೈವಾಡ ಇರಬಹುದು ಎಂದು ಶಂಕಿಸಿದರು. ಪ್ರವೀಣ್‌ ನೆಟ್ಟಾರು ಕೊಲೆಯಲ್ಲಿ ಮಂಪರು ಪರೀಕ್ಷೆ ಮಾಡಿದಲ್ಲಿ ಸಂಸದರೇ ಸಿಕ್ಕಿ ಹಾಕಿಕೊಳ್ಳುವುದರಲ್ಲಿ ಸಂಶಯವಿಲ್ಲ ಎಂದರು.

ವಿಧಾನಪರಿಷತ್ ಸದಸ್ಯರಾದ ಹರೀಶ್ ಕುಮಾರ್ ವಿಧಾನಸಭೆ ಪ್ರತಿಪಕ್ಷ ಉಪನಾಯಕ ಯು.ಟಿ ಖಾದರ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಶಕುಂತಳಾ ಶೆಟ್ಟಿ, ಮಾಜಿ ಶಾಸಕರುಗಳಾದ ಜೆ.ಆರ್ ಲೋಬೊ, ಮೊಯ್ದೀನ್ ಬಾವಾ, ಕೋಡಿಜಾಲ್ ಇಬ್ರಾಹಿಂ, ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ, ಕಣಚೂರು ಮೋನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಪ್ರಶಾಂತ್ ಕಾಜವ, ಹಾಗೂ ಸದಾಶಿವ ಉಳ್ಳಾಲ್ , ಮೌರ್ಯ, ಯುವಕಾಂಗ್ರೆಸ್ ಮುಖಂಡ ಮಿಥುನ್ ರೈ, ಹರ್ಷರಾಜ್ ಮುದ್ಯ, ಇನಾಯತ್ ಆಲಿ, ಕೆಪಿಸಿಸಿ ಪ್ರ.ಕಾ ರಕ್ಷಿತ್ ಶಿವರಾಂ, ಶಶಿಧರ್ ಹೆಗ್ಡೆ, ಶಾಹುಲ್ ಹಮೀದ್, ಹರೇಕಳ ಗ್ರಾ.ಪಂ ಅಧ್ಯಕ್ಷ ಬದ್ರುದ್ದೀನ್, ಮಹಿಳಾ ಕಾಂಗ್ರೆಸ್ ನ ಶಾಲೆಟ್ ಪಿಂಟೋ, ರಾಕೇಶ್ ಮಲ್ಲಿ, ಅಶ್ವಿನ್ ಕುಮಾರ್ ರೈ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ | Karnataka Elections | ನಾಯಿಮರಿ ಅಸಾಂವಿಧಾನಿಕ ಪದವಾ? ಬಿಎಸ್‌ವೈಗೆ ರಾಜಾ ಹುಲಿ ಅನ್ನಲ್ವಾ?: ಸಿದ್ದರಾಮಯ್ಯ ಪ್ರಶ್ನೆ

Exit mobile version