Site icon Vistara News

Siddheshwar swameeji | ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಸ್ಥಿರ: ನಿನ್ನೆಯ ಹಾಗೇ ಇದೆ ಬದಲಾವಣೆ ಇಲ್ಲ ಎಂದ ವೈದ್ಯರು

siddheshwar swameeji

ವಿಜಯಪುರ: ನಡೆದಾಡುವ ದೇವರೆಂದೇ ಹೆಸರಾಗಿರುವ ಇಲ್ಲಿನ ಶ್ರೀ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ (Siddheshwar swameeji) ಆರೋಗ್ಯ ಕುರಿತಂತೆ ಸೋಮವಾರ ಬೆಳಗ್ಗೆ ೧೦.೩೦ರ ಹೊತ್ತಿಗೆ ಹೆಲ್ತ್‌ ಬುಲೆಟಿನ್‌ ಬಿಡುಗಡೆಯಾಗಿದ್ದು, ಶ್ರೀಗಳ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಲಾಗಿದೆ.

ಡಾ ಎಸ್.ಬಿ ಪಾಟೀಲ್ ಹಾಗೂ ಡಾ. ಮಲ್ಲಣ್ಣ ಮೂಲಿಮನಿಯವರು ಸಿದ್ದೇಶ್ವರ ಶ್ರೀಗಳ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಶ್ರೀಗಳ ಆರೋಗ್ಯ ಸ್ಥಿರವಾಗಿದೆ ಎಂದು ಡಾ ಎಸ್.ಬಿ ಪಾಟೀಲ್ ತಿಳಿಸಿದರು.

ʻʻಶ್ರೀಗಳು ಜಾಸ್ತಿ ಆಹಾರ ಸ್ವೀಕರಿಸುತ್ತಿಲ್ಲ. ಆಹಾರ ಸೇವನೆ ಕಡಿಮೆಯಾಗಿದೆ. ಗಂಜಿ, ನೀರು ಸೇರಿದಂತೆ ದ್ರವಾಹಾರ ನೀಡುತ್ತಿದ್ದೇವೆ. ಬೇರೆ ಹೆಚ್ಚಿನ ಚಿಕಿತ್ಸೆ ಕೊಡುವ ಅವಶ್ಯಕತೆ ಇಲ್ಲ. ಶ್ರೀಗಳು ಮಾತಾಡ್ತಿದ್ದಾರೆ, ಭಕ್ತರ ಜೊತೆ ಮಾತನಾಡಿದ್ದಾರೆ. ಭಕ್ತರು ಆತಂಕಪಡುವ ಅವಶ್ಯಕತೆ ಇಲ್ಲʼʼ ಎಂದು ವೈದ್ಯರು ತಿಳಿಸಿದ್ದಾರೆ.

ಶ್ರೀಗಳ ಆರೋಗ್ಯ ಸ್ಥಿತಿ ನಿನ್ನೆ ಹೇಗಿತ್ತೋ, ಇವತ್ತೂ ಹಾಗೆಯೇ ಇದೆ. ಯಾವುದೇ ಬದಲಾವಣೆ, ಕುಸಿತ ಕಂಡುಬಂದಿಲ್ಲ. ಹೀಗಾಗಿ ಯಾರೂ ವದಂತಿಗಳಿಗೆ ಕಿವಿಕೊಡಬೇಡಿ ಎಂದು ವೈದ್ಯರು ಮನವಿ ಮಾಡಿದ್ದಾರೆ.

ಮುಂದುವರಿದ ಜನಸಾಗರ
ಶ್ರೀಗಳ ಆರೋಗ್ಯ ಕಳೆದ ಕೆಲವು ದಿನಗಳಿಂದ ಸ್ಥಿರವಾಗಿಲ್ಲ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಮುಂದುವರಿದಿದೆ. ʻʻಸ್ವಾಮೀಜಿಯವರನ್ನು ನೋಡಲು ಬೆಳಗ್ಗೆಯೇ ಆಶ್ರಮಕ್ಕೆ ಬಂದಿದ್ದೇವೆ, ಇನ್ನೂ ‌ಪೊಲೀಸರು ಅವಕಾಶ ನೀಡುತ್ತಿಲ್ಲ. ಅವಕಾಶ ನೀಡಿದ್ರೆ ಶ್ರೀಗಳ ದರ್ಶನ ಪಡೆದುಕೊಂಡು ಹೋಗುತ್ತೇವೆ, ಇಲ್ಲವಾದ್ರೆ ಮತ್ತೇ ನಾಳೆಗೆ ಬರುತ್ತೇವೆʼʼ ಎಂದು ಭಕ್ತರು ಹೇಳುತ್ತಿದ್ದಾರೆ.

ಸಿದ್ದೇಶ್ವರ ಶ್ರೀಗಳ ಆರೋಗ್ಯ ಚೇತರಿಕೆಗೆ ಮಕ್ಕಳ ಪ್ರಾರ್ಥನೆ
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಮಾಣಿಕೇಶ್ವರಿ ದೇವಾಲಯದ ಮುಂದೆ ಅಲ್ಲಿನ ಶಾಲಾ ವಿದ್ಯಾರ್ಥಿಗಳು ಶ್ರೀಗಳ ಚೇತರಿಕೆಗಾಗಿ ಪ್ರಾರ್ಥನೆ ಸಲ್ಲಿಸಿದರು.

ಮುಖ್ಯೋಪಾಧ್ಯಾಯ ಚಿದಾನಂದ ಅವಟಿಯವರಿಂದ ದೀರ್ಘದಂಡ ಪ್ರಣಾಮ ಸಲ್ಲಿಕೆಯ ಜತೆಗೆ ೧೮೦೦ ಮಕ್ಕಳು ಹಾಗೂ ಶಿಕ್ಷಕರಿಂದ ಶ್ರೀಗಳ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥನೆ ನಡೆಯಿತು. ಮಾಣಿಕೇಶ್ವರಿ ದೇವಸ್ಥಾನದ ಮುಂದೆ ಕೈ ಮುಗಿದು ನಿಂತಿರುವ ೧೮೦೦ ಮಕ್ಕಳು ಓಂ ನಮ: ಶಿವಾಯ ಮಂತ್ರ ಪಠಣ ಮಾಡಿದರು. ಬಿಜ್ಜರಗಿ ಗ್ರಾಮ ಸಿದ್ದೇಶ್ವರ ಶ್ರೀಗಳ ಹುಟ್ಟೂರು ಕೂಡಾ ಆಗಿದೆ.

ಹಿರಿಯ ಕಾಂಗ್ರೆಸ್‌ ನಾಯಕರ ಆಗಮನ
ಜ್ಞಾನಯೋಗಾಶ್ರಮಕ್ಕೆ ಕಾಂಗ್ರೆಸ್ ನಾಯಕ ಎಂ.ಬಿ ಪಾಟೀಲ್, ಎಂ.ಎಲ್.ಸಿ ಪ್ರಕಾಶ್ ಹುಕ್ಕೇರಿ ಆಗಮಿಸಿದ್ದಾರೆ. ಆಶ್ರಮಕ್ಕೆ ನಿಜಗುಣಾನಂದ ಸ್ವಾಮೀಜಿ ಭೇಟಿ‌ ನೀಡಿ ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ವಿಚಾರಣೆ ನಡೆಸಿದರು.

ಇದನ್ನೂ ಓದಿ | Siddheshwar Swamiji | ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿರ, ಮಠದತ್ತ ಭಕ್ತರ ದಂಡು

Exit mobile version